ಬೆಂಗಳೂರು : ಉತ್ತಮ ಆರೋಗ್ಯ, (Health) ರೋಗಮುಕ್ತ ಜೀವನ ಮತ್ತು ಮಾನಸಿಕ-ದೈಹಿಕ ಸ್ವಾಸ್ಥ್ಯಕ್ಕಾಗಿ ಸಾರ್ವಜನಿಕರು ತಮ್ಮ ದಿನನಿತ್ಯದ ಜೀವನಶೈಲಿ ಹಾಗೂ ಆಹಾರ ಪದ್ಧತಿಯಲ್ಲಿ ಸೂಕ್ತ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಕೃಷಿ (Agriculture University) ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ. ವೈ. ಎನ್. ಶಿವಲಿಂಗಯ್ಯ (YN Shivalingaiah) ಅವರು ಹೇಳಿದರು.
ಬೆಂಗಳೂರಿನ ಜಿಕೆವಿಕೆಯ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶನಾಲಯ, ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ‘ರಾಷ್ಟ್ರೀಯ ಪೌಷ್ಟಿಕ ಸಪ್ತಾಹ-2026’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು ದಿನನಿತ್ಯದ ಆಹಾರದಲ್ಲಿ ಹಸಿರು ಎಲೆಗಳ ತರಕಾರಿ ಬಳಕೆಗೆ ಸಲಹೆ ನೀಡಿದರು.
“ಆಹಾರದಲ್ಲಿ ಹಸಿರು ಎಲೆಗಳ ತರಕಾರಿಗಳ ಬಳಕೆಯನ್ನು ಹೆಚ್ಚಿಸಬೇಕು. ಆಹಾರ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡುವುದರಿಂದ ಅವುಗಳ ಪೌಷ್ಟಿಕ ಗುಣಮಟ್ಟ ಹೆಚ್ಚುವುದಷ್ಟೇ ಅಲ್ಲದೆ, ರುಚಿ, ಆಕರ್ಷಣೆ ಹಾಗೂ ಗ್ರಾಹಕರ ಸ್ವೀಕಾರಾರ್ಹತೆಯೂ ಹೆಚ್ಚುತ್ತದೆ” ಎಂದರು.
ಇದೇ ಸಂದರ್ಭದಲ್ಲಿ, ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಬೇಕರಿ ತಂತ್ರಜ್ಞಾನಕ್ಕೆ ಸಂಬಂಧಿಸಿದ 14 ವಾರಗಳ ಕೋರ್ಸ್ನ 78ನೇ ತಂಡದ ಶಿಬಿರಾರ್ಥಿಗಳಿಗೆ ಅಧಿಕೃತವಾಗಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
“ಪೋಷಣೆಯ ಶಕ್ತಿಯನ್ನು ಅನ್ವೇಷಿಸಿ” ಎಂಬ ಮುಖ್ಯ ಧೈಯವಾಕ್ಯದೊಂದಿಗೆ ನಡೆದ ಈ ಪೌಷ್ಟಿಕ ಸಪ್ತಾಹದ ಅಂಗವಾಗಿ ಆಹಾರ ಮತ್ತು ಪೌಷ್ಟಿಕತೆಯ ಕುರಿತು ವಿಶೇಷ ಉಪನ್ಯಾಸಗಳನ್ನು ಆಯೋಜಿಸಲಾಗಿತ್ತು. ಸಮತೋಲನ ಆಹಾರದ ಅವಶ್ಯಕತೆ, ಸರಿಯಾದ ಪೌಷ್ಟಿಕಾಂಶಗಳ ಆಯ್ಕೆ ಮತ್ತು ಆರೋಗ್ಯಕರ ಆಹಾರ ಪದ್ಧತಿಯ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸಲಾಯಿತು.
ಭಾರತ ಸರ್ಕಾರದ ನಿರ್ಣಯದಂತೆ 2018 ರಿಂದ ಪ್ರತಿವರ್ಷ ಸೆಪ್ಟೆಂಬರ್ 1 ರಿಂದ 7 ರವರೆಗೆ ರಾಷ್ಟ್ರೀಯ ಪೌಷ್ಟಿಕ ಸಪ್ತಾಹವನ್ನು ಜಾಗೃತಿ ಅಭಿಯಾನವಾಗಿ ಆಚರಿಸಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆಯ ಸಂಯೋಜಕರು ಹಾಗೂ ಮುಖ್ಯಸ್ಥರಾದ ಡಾ. ಭಾರತಿ ಸಿ. ಮಿರಜಕರ, ರೈತ ತರಬೇತಿ ಸಂಸ್ಥೆಯ ಆಹಾರ ಮತ್ತು ಪೌಷ್ಟಿಕತೆ ವಿಭಾಗದ ಪ್ರಾಧ್ಯಾಪಕರಾದ ಡಾ. ಲತಾ ಆರ್. ಕುಲಕರ್ಣಿ ಸೇರಿದಂತೆ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
