ಬೆಂಗಳೂರು: ಕಿಡ್ನಿ ಕಾಯಿಲೆಯ ಪರಿಣಾಮಕಾರಿ ನಿರ್ವಹಣೆ, ಸೂಕ್ತ ಪೌಷ್ಟಿಕಾಂಶ ಮತ್ತು ಆರೋಗ್ಯಕರ ಜೀವನಶೈಲಿ ಅಭ್ಯಾಸಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮಿಷನ್ ರಸ್ತೆಯಲ್ಲಿರುವ ಎನ್‌ಯು ಹಾಸ್ಪಿಟಲ್ಸ್( NU Hospitals) ವತಿಯಿಂದ ಡಯಾಲಿಸಿಸ್ ರೋಗಿಗಳು(Dialysis patients) ಹಾಗೂ ಸ್ಥಳೀಯ ನಿವಾಸಿಗಳಿಗಾಗಿ ವಿಶೇಷ ಡಯಾಲಿಸಿಸ್ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ತಜ್ಞ ವೈದ್ಯರು ಭಾಗವಹಿಸಿ, ನಿಗದಿಪಡಿಸಿದ ಡಯಾಲಿಸಿಸ್ ವೇಳಾಪಟ್ಟಿಯನ್ನು ತಪ್ಪದೇ ಪಾಲಿಸುವುದು, ಕಿಡ್ನಿ ಆರೋಗ್ಯಕ್ಕೆ ಪೂರಕವಾದ ಸಮತೋಲಿತ ಆಹಾರ ಸೇವನೆ, ನಿಯಮಿತ ದೈಹಿಕ ಚಟುವಟಿಕೆಗಳು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರ ಮಹತ್ವ ಕುರಿತು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು. ಅಲ್ಲದೆ, ಡಯಾಲಿಸಿಸ್ ಆರೈಕೆಯ ಸಂದರ್ಭದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು, ನಿಖರವಾದ ಔಷಧ ಸೇವನೆ, ಸೋಂಕು ತಡೆಗಟ್ಟುವಿಕೆ ಮತ್ತು ನಿಯಮಿತ ವೈದ್ಯಕೀಯ ತಪಾಸಣೆಯ ಅಗತ್ಯತೆಗಳ ಬಗ್ಗೆ ರೋಗಿಗಳಿಗೆ ಸವಿಸ್ತಾರವಾಗಿ ಮಾರ್ಗದರ್ಶನ ನೀಡಲಾಯಿತು.

ಈ ಕಾರ್ಯಕ್ರಮವು ರೋಗಿಗಳಿಗೆ ಮತ್ತು ಅವರ ಆರೈಕೆದಾರರಿಗೆ ನೇರವಾಗಿ ತಜ್ಞ ವೈದ್ಯರೊಂದಿಗೆ ಸಂವಾದ ನಡೆಸಲು, ತಮ್ಮ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಮತ್ತು ಕಿಡ್ನಿ ಕಾಯಿಲೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಪ್ರಾಯೋಗಿಕ ಸಲಹೆಗಳನ್ನು ಪಡೆಯಲು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿತ್ತು. ಇಂತಹ ಜಾಗೃತಿ ಉಪಕ್ರಮಗಳು ರೋಗಿಗಳಿಗೆ ಅಗತ್ಯ ಜ್ಞಾನವನ್ನು ನೀಡುವ ಮೂಲಕ ಅವರ ಜೀವನದ ಗುಣಮಟ್ಟವನ್ನು ಸುಧಾರಿಸಲು ಮತ್ತು ಚಿಕಿತ್ಸೆಯಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಸಶಕ್ತಗೊಳಿಸುತ್ತವೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.

ಈ ಜಾಗೃತಿ ಕಾರ್ಯಕ್ರಮದ ನೇತೃತ್ವವನ್ನು ಎನ್‌ಯು ಹಾಸ್ಪಿಟಲ್ಸ್‌ನ ಗ್ರೂಪ್ ಮೆಡಿಕಲ್ ಡೈರೆಕ್ಟರ್ ಹಾಗೂ ನೆಫ್ರಾಲಜಿ ವಿಭಾಗದ ಹಿರಿಯ ಕನ್ಸಲ್ಟೆಂಟ್ ನೆಫ್ರಾಲಜಿಸ್ಟ್ ಮತ್ತು ಟ್ರಾನ್ಸ್‌ಪ್ಲಾಂಟ್ ಫಿಸಿಶಿಯನ್ ಆದ ಡಾ. ದಿಲೀಪ್ ರಂಗರಾಜನ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅವರೊಂದಿಗೆ ರಾಜಾಜಿನಗರದ ಎನ್ಯು ಹಾಸ್ಪಿಟಲ್ಸ್‌ನ ನೆಫ್ರಾಲಜಿ ವಿಭಾಗದ ಮುಖ್ಯಸ್ಥರು ಹಾಗೂ ಅಸೋಸಿಯೇಟ್ ಮೆಡಿಕಲ್ ಡೈರೆಕ್ಟರ್ ಆದ ಡಾ. ಪರಮನಬನ್ ಎಸ್., ಮಿಷನ್ ರಸ್ತೆ ಎನ್‌ಯು ಹಾಸ್ಪಿಟಲ್ಸ್‌ನ ಹಿರಿಯ ಕನ್ಸಲ್ಟೆಂಟ್ ನೆಫ್ರಾಲಜಿಸ್ಟ್ ಡಾ. ರವಿ ಪ್ರಕಾಶ್, ಅಸೋಸಿಯೇಟ್ ಮೆಡಿಕಲ್ ಡೈರೆಕ್ಟರ್ ಹಾಗೂ ಹಿರಿಯ ಕನ್ಸಲ್ಟೆಂಟ್ ಯುರಾಲಜಿಸ್ಟ್ ಡಾ. ಮನೀಶ್ ಸಿನ್ಹಾ, ಕನ್ಸಲ್ಟೆಂಟ್ ನೆಫ್ರಾಲಜಿಸ್ಟ್ ಡಾ. ಕಾರ್ತಿಕ್ ಉರಾಳ ಎಚ್.ಎ. ಮತ್ತು ಎನ್‌ಯು ಹಾಸ್ಪಿಟಲ್ಸ್‌ನ ಮುಖ್ಯ ಡಯಟಿಷಿಯನ್ ಶ್ರೀಮತಿ ಸುನೀತಾ ರಾವ್ ಉಪಸ್ಥಿತರಿದ್ದು, ರೋಗಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.

