Bengaluru : 2030ರ ವೇಳೆಗೆ ದೇಶದ ಜನಸಂಖ್ಯೆಯ ಅಗತ್ಯಕ್ಕೆ ತಕ್ಕಂತೆ 400 ಮಿಲಿಯನ್ ಟನ್ ಆಹಾರ ಬೆಳೆಯಬೇಕಾದ ಸವಾಲು ನಮ್ಮ ಮುಂದಿದೆ. ಇಲ್ಲದಿದ್ದರೆ ಆಹಾರಕ್ಕಾಗಿ ಇತರ ದೇಶಗಳ ಮೇಲೆ ಅವಲಂಬಿತರಾಗಬೇಕಾಗುತ್ತದೆ. ಆದ್ದರಿಂದ ಮಣ್ಣಿನ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ ವೈಜ್ಞಾನಿಕ ಕೃಷಿ ಕೈಗೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ (University of Agriculture) ವಿಸ್ತರಣಾ ನಿರ್ದೇಶಕರಾದ ಡಾ. ವೈ.ಎನ್. ಶಿವಲಿಂಗಯ್ಯ (Dr. YN Shivalingaiah) ಅವರು ತಿಳಿಸಿದರು.
ಇಂದು ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಿಬ್ಬಂದಿ ತರಬೇತಿ ಘಟಕ, ಮ್ಯಾನೇಜ್ ಹೈದರಾಬಾದ್ ಮತ್ತು ಕೃಷಿ ಇಲಾಖೆಯ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ 15 ದಿನಗಳ “ಸಮಗ್ರ ಪೋಷಕಾಂಶಗಳ ನಿರ್ವಹಣೆಯಲ್ಲಿ ಸರ್ಟಿಫಿಕೇಟ್ ಕೋರ್ಸ್”ನ ಉದ್ಘಾಟನಾ ಸಮಾರಂಭವನ್ನು ನೆರವೇರಿಸಿ ಮಾತನಾಡಿದ ಅವರು, 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ನಮಗೆ ಹಸಿವಿನಿಂದ ಮುಕ್ತಿ ಸಿಕ್ಕಿರಲಿಲ್ಲ. ತದನಂತರ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಹಸಿರು ಕ್ರಾಂತಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರಲಾಯಿತು. ಇದರ ಪರಿಣಾಮವಾಗಿ ದೇಶವಿಂದು 309 ಮಿಲಿಯನ್ ಟನ್ ಆಹಾರ ಉತ್ಪಾದಿಸಿ ಸ್ವಾವಲಂಬಿಯಾಗಿದೆ ಎಂದರು.
ಆದರೆ, ರಾಸಾಯನಿಕ ಗೊಬ್ಬರ, ಕೀಟನಾಶಕ ಹಾಗೂ ಕಳೆನಾಶಕಗಳ ಅತಿಯಾದ ಬಳಕೆಯಿಂದಾಗಿ ಮಣ್ಣಿನ ಮೇಲ್ಪದರ ಗಟ್ಟಿಯಾಗಿ, ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮಥ್ರ್ಯವನ್ನು ಮಣ್ಣು ಕಳೆದುಕೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸ್ಥಳೀಯ ಮಟ್ಟದ ಕೃಷಿ ಪರಿಕರ ಮಾರಾಟಗಾರರಿಗೆ ಸೂಕ್ತ ತರಬೇತಿ ನೀಡಿದಾಗ, ಅವರು ಕೃಷಿ ವಿಶ್ವವಿದ್ಯಾನಿಲಯ, ಕೃಷಿ ಇಲಾಖೆ ಹಾಗೂ ರೈತರ ನಡುವೆ ಅರೆ-ವಿಸ್ತರಣಾ ಕಾರ್ಯಕರ್ತರಾಗಿ ಉತ್ತಮ ಸೇವೆ ಸಲ್ಲಿಸಬಹುದು. ಕೇವಲ ಸರ್ಟಿಫಿಕೇಟ್ ಪಡೆಯುವುದμÉ್ಟೀ ಉದ್ದೇಶವಾಗದೇ ರೈತರ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುವುದು ಇವರ ಮೂಲ ಧ್ಯೇಯವಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ವೆಸ್ಟೀಜ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ನ ಶಾಖಾ ವ್ಯವಸ್ಥಾಪಕರಾದ ಕಿರಣ್ ಕುಮಾರ್ ಮತ್ತು ಕೃಷಿ ತಜ್ಞರಾದ ಮಾನಸ್ ಥೋಡ್ಕರ್ ಅವರು ಮಾತನಾಡಿ, ಮುಂಬರುವ ಪೀಳಿಗೆಗೆ ಕೃಷಿಯ ಮಹತ್ವವನ್ನು ಸಾರಲು ನಾವೆಲ್ಲರೂ ಸಾಮಾಜಿಕ ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ ಎಂದರು.
ಅಲ್ಲದೆ, ಕೇಂದ್ರ ಸರ್ಕಾರದ ಆದೇಶದಂತೆ ಕೃಷಿ ಪರಿಕರಗಳ ಉದ್ಯಮಿಗಳು ಪರವಾನಗಿ ಪಡೆಯಲು ಕೃಷಿ ಸಂಬಂಧಿತ ಕೋರ್ಸ್ಗಳಲ್ಲಿ ಸರ್ಟಿಫಿಕೇಟ್ ಹೊಂದುವುದು ಕಡ್ಡಾಯವಾಗಿದೆ. ಈ ತರಬೇತಿಯು ಉದ್ಯಮಿಗಳಿಗೆ ವೈಜ್ಞಾನಿಕ ಕೃಷಿ ಜ್ಞಾನವನ್ನು ನೀಡಲಿದ್ದು, ರೈತರಿಗೆ ಸರಿಯಾದ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಒದಗಿಸಲು ನೆರವಾಗುತ್ತದೆ. ಇದರಿಂದ ಅನಗತ್ಯ ರಾಸಾಯನಿಕಗಳ ಬಳಕೆ ಕಡಿಮೆಯಾಗುವುದರ ಜೊತೆಗೆ ರೈತರ ಹಣವೂ ಉಳಿತಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಕೆವಿಕೆ ಸಿಬ್ಬಂದಿ ತರಬೇತಿ ಘಟಕದ ಮುಖ್ಯಸ್ಥರು ಹಾಗೂ ತರಬೇತಿ ಸಂಯೋಜಕರಾದ ಡಾ. ಆರ್. ನಾರಾಯಣ ರೆಡ್ಡಿ ವಹಿಸಿದ್ದರು. ಸಮಾರಂಭದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ. ಕೆ. ಅಮರೇಶ್ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ. ಶ್ರುತಿಶ್ರೀ ಸಿ. ಉಪಸ್ಥಿತರಿದ್ದರು.

