ಕೆಲಸದ ಸ್ಥಳದಲ್ಲಿ ಸುರಕ್ಷತೆಯನ್ನು ಖಾತ್ರಿಪಡಿಸುವ ಮತ್ತು ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಸನ್ನದ್ಧರಾಗುವ ನಿಟ್ಟಿನಲ್ಲಿ, ಕಾರ್ಮಿಕ ರಾಜ್ಯ ವಿಮಾ ನಿಗಮದ ಬೊಮ್ಮಸಂದ್ರದ (Bommasandra) ಉಪ ಪ್ರಾದೇಶಿಕ ಕಚೇರಿಯಲ್ಲಿಂದು ಯಶಸ್ವಿಯಾಗಿ ಅಗ್ನಿ ಸುರಕ್ಷತಾ ಅಣಕು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಕಚೇರಿಯ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಇಎಸ್ಐಸಿ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಭದ್ರತಾ ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು, ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಪ್ರಕ್ರಿಯೆ ಮತ್ತು ಅಗ್ನಿಶಾಮಕ ಉಪಕರಣಗಳ ಸಮರ್ಪಕ ಬಳಕೆಯ ಬಗ್ಗೆ ಸಿಬ್ಬಂದಿಗೆ ವಿವರವಾದ ಜಾಗೃತಿ ಮೂಡಿಸಲಾಯಿತು.
ಈ ಅಣಕು ಪ್ರದರ್ಶನದಲ್ಲಿ ಬೆಂಕಿ ಅವಘಡ ಸಂಭವಿಸಿದಾಗ ಅಲಾರಾಂ ಮೊಳಗಿಸುವುದು ಮತ್ತು ಕಟ್ಟಡದಿಂದ ಸುರಕ್ಷಿತವಾಗಿ ಹೊರಬರುವ ಪ್ರಮಾಣಿತ ಕಾರ್ಯಾಚರಣಾ ವಿಧಾನ ಹಾಗೂ ಬೆಂಕಿ ನಂದಿಸುವ ಉಪಕರಣಗಳನ್ನು ಬಳಸುವುದು ಹೇಗೆ ಎಂಬುದನ್ನು ಪ್ರಾಯೋಗಿಕವಾಗಿ ಪ್ರದರ್ಶಿಸುವ ಜೊತೆಗೆ ಸಿಬ್ಬಂದಿಗೆ ತರಬೇತಿಯನ್ನು ನೀಡಲಾಯಿತು.
ನಿಯೋಜಿತ ಸುರಕ್ಷತಾ ಅಧಿಕಾರಿಗಳ ಮೇಲ್ವಿಚಾರಣೆ ಹಾಗೂ ತುರ್ತು ಸೇವಾ ವಿಭಾಗಗಳ ಸಮನ್ವಯದೊಂದಿಗೆ ಇಂತಹ ನಿಯಮಿತ ತರಬೇತಿಗಳ ಮೂಲಕ ಕಚೇರಿಯಲ್ಲಿ ಸುರಕ್ಷಿತ ವಾತಾವರಣವನ್ನು ಕಾಯ್ದುಕೊಳ್ಳಲು ಬೊಮ್ಮಸಂದ್ರದ ಇಎಸ್ಐಸಿ ಆಡಳಿತ ಮಂಡಳಿ ಬದ್ಧವಾಗಿದೆ ಎಂದು ಬೊಮ್ಮಸಂದ್ರ ಇಎಸ್ಐಸಿ ಉಪ ಪ್ರಾದೇಶಿಕ ಕಚೇರಿಯ ಪ್ರಕಟಣೆ ತಿಳಿಸಿದೆ.

