ತ್ರಿವಿಧ ದಾಸೋಹಿ ಶ್ರೀ ದೇಗುಲಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳು ಲಿಂಗೈಕ್ಯ 

ಶ್ರೀ ದೇಗುಲ ಮಠದ ಇಂದಿನ ಹಿರಿಯ ಶ್ರೀಗಳವರೇ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳು. ಶ್ರೀ ಇಮ್ಮಡಿ ಮಹಾಲಿಂಗ ಸ್ವಾಮಿಗಳ ಕರಕಮಲ ಸಂಜಾತರಾದ ಇವರದು ಎತ್ತರವಾದ ನಿಲುವು, ತುಂಬು ದೇಹ, ಎಣ್ಣೆಗೆಂಪು ಬಣ್ಣ, ಮುಖದಲ್ಲಿ ಸ್ನಿಗ್ಧವೂ-ಮುಗ್ಧವೂ ಆದ ಮಂದಹಾಸ, ಸವಿನುಡಿಗಳಿಂದ ಕೂಡಿದ ಸ್ನೇಹಮಯ ನಡವಳಿಕೆ. ಹಮ್ಮು-ಬಿಮ್ಮುಗಳಿಲ್ಲದ ನಿರಾಡಂಬರ ವ್ಯಕ್ತಿತ್ವ ಪ್ರತಿಯೊಬ್ಬರಲ್ಲೂ ಆತ್ಮೀಯ ಭಾವವನ್ನುಂಟುಮಾಡಿದರೆ, ಹಸನ್ಮುಖದಿಂದ ಭಕ್ತರನ್ನು ಬರಮಾಡಿಕೊಳ್ಳುವ ರೀತಿ ಆಗಂತುಕರನ್ನು ಪುಳಕಿತಗೊಳಿಸುತ್ತದೆ. ಶ್ರೀಗಳ ಮುಖಕಮಲದಿಂದ ಸೂಸುವ ಸಾತ್ವಿಕತೆಯನ್ನು ನೋಡಿದ ಎಂತಹ ನಾಸ್ತಿಕನಿಗೂ ಭಕ್ತಿಭಾವ ಉಂಟಾಗುತ್ತದೆ. ಇಂತಹ ಸಹಜ ನಡವಳಿಕೆಗಳಿಂದ ಶ್ರೀಗಳು ಕಾವಿಧಾರಿಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಇಂತಹ ವಿಶಿಷ್ಟ ವ್ಯಕ್ತಿತ್ವದಿಂದ ಕೂಡಿರುವ ಶ್ರೀಗಳು ಎಂತಹ ಅದ್ಭುತ ಕಾರ್ಯವೆಸಗಿದರೂ, ಅದರ ಬಗ್ಗೆ ಹೇಳಿಕೊಳ್ಳದೆ ಮೌನದಿಂದಿದ್ದು, ಎಲ್ಲವೂ ಗುರುಗಳ ಅನುಗ್ರಹ, ಭಕ್ತರ ಸಹಕಾರ ಎಂದು ವಿನಯದಿಂದ ಹೇಳುತ್ತಾರೆ.
ಶ್ರೀಗಳ ಬಾಲ್ಯ, ವಿದ್ಯಾಭ್ಯಾಸ  ಕಾವೇರಿ ನದಿಯ ದಡದಲ್ಲಿರುವ ಟಿ. ನರಸೀಪುರ ತಾಲ್ಲೂಕಿನ ಕುರುಬೂರು ಒಂದು ಪುಟ್ಟ ಗ್ರಾಮ. ಆ ಗ್ರಾಮದಲ್ಲಿ ಶ್ರೀ ವೀರಭದ್ರಪ್ಪ ಮತ್ತು ಶ್ರೀಮತಿ ತಾಯಮ್ಮ ಎಂಬ ಆಚಾರ ಸಂಪನ್ನರಾದ ದಂಪತಿಗಳಿದ್ದರು. ಈ ದಂಪತಿಗಳಿಗೆ ದಿನಾಂಕ 20.05.1943 ರಂದು ಶ್ರೀ ಶಿವರುದ್ರ ಸ್ವಾಮಿಗಳು ಸುಪುತ್ರರಾಗಿ ಜನಿಸಿದರು. ಈ ದಂಪತಿಗಳಿಗೆ ಒಟ್ಟು ನಾಲ್ವರು ಗಂಡು ಮಕ್ಕಳು, ಒಬ್ಬ ಮಗಳು ಇದ್ದರು. ಬಾಲಕ ಶಿವರುದ್ರ ಸ್ವಾಮಿಯ ಪ್ರಾಥಮಿಕ ವಿದ್ಯಾಭ್ಯಾಸ ಸ್ವಗ್ರಾಮದಲ್ಲಿಯೇ ನಡೆಯಿತು. ಚಾಮರಾಜನಗರ ತಾಲ್ಲೂಕಿನ ಮರಿಯಾಲದಲ್ಲಿ ಗುಲ್ಬರ್ಗದ ಕಡೆಯಿಂದ ಆಗಮಿಸಿದ್ದ ಶ್ರೀ ಮುರುಘ ರಾಜೇಂದ್ರ ಸ್ವಾಮಿಗಳೆಂಬುವರು ಒಂದು ಮಠವನ್ನು ಸ್ಥಾಪಿಸಿದ್ದರು. ಅವರು ದೇವನೂರು ಮಠದ ಶ್ರೀ ಗುರುಮಲ್ಲೇಶ್ವರ ಸ್ವಾಮಿಗಳವರ ಸಮಕಾಲೀನರು. ಶ್ರೀ ಮುರುಘ ರಾಜೇಂದ್ರ ಸ್ವಾಮಿಗಳವರ ಉತ್ತರಾಧಿಕಾರಿಗಳಾಗಿದ್ದ ಶ್ರೀ ಮಹಾಂತ ಸ್ವಾಮಿಗಳು ಮತ್ತು ಅವರ ಉತ್ತರಾಧಿಕಾರಿಗಳಾಗಿದ್ದ ಶ್ರೀ ಸದಾಶಿವ ಸ್ವಾಮಿಗಳು ಕ್ರಮವಾಗಿ ಶಿವರುದ್ರ ಸ್ವಾಮಿಗಳ ದೊಡ್ಡಪ್ಪ ಮತ್ತು ಸಹೋದರರಾಗಿದ್ದವರು.

ಈ ಪೂರ್ವಾಶ್ರಮದ ಸಂಬಂಧದ ಕಾರಣದಿಂದ ಪ್ರಾಥಮಿಕ ಶಿಕ್ಷಣದ ನಂತರ ಮರಿಯಾಲ ಮಠದಲ್ಲಿದ್ದುಕೊಂಡು ಮಾಧ್ಯಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಚಾಮರಾಜನಗರದಲ್ಲಿ ಪೂರೈಸಿದರು. ನಂತರ ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಪಿ.ಯು.ಸಿ. ತರಗತಿಗೆ ಸೇರಿದರು. ಅವರ ಅಶನ-ವಸತಿಗಳಿಗೆ ಶ್ರೀ ಸುತ್ತೂರು ಮಠದಲ್ಲಿ ಆಶ್ರಯ ದೊರಕಿತು. ಮುಂದೆ ಮಹಾರಾಜಾ ಕಾಲೇಜಿಗೆ ಸೇರಿ ಬಿ.ಎಸ್ಸಿ ಪದವಿ ಪಡೆದರು. ಅಲ್ಲಿ ಅರ್ಥಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರಗಳನ್ನು ವಿಶೇಷವಾಗಿ ಅಧ್ಯಯನ ಮಾಡಿದರು. ಪದವಿ ತರಗತಿಯ ಹಂತದಲ್ಲಿ ತುಂಬುನೇರಳೆ ಸಾಹುಕಾರ್ ಸಿದ್ಧಲಿಂಗಯ್ಯನವರ ಉಚಿತ ವಿದ್ಯಾರ್ಥಿನಿಲಯದ ಆಶ್ರಯ ಪಡೆದರು.
ಮಠಗಳ ಸಂಪರ್ಕ ಶ್ರೀ ಶಿವರುದ್ರ ಸ್ವಾಮಿಗಳು ಮಾಧ್ಯಮಿಕ ಶಾಲಾ ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ಮರಿಯಾಲ ಮಠದಲ್ಲಿದ್ದರು. ಅಲ್ಲಿಯೇ ಅವರಿಗೆ ಧಾರ್ಮಿಕ ಶಿಕ್ಷಣವೂ, ವೇದ-ಆಗಮ ಪೂಜಾದಿಗಳ ಬಗ್ಗೆ ತರಬೇತಿಯೂ ದೊರೆಯಿತು. ಜೊತೆಗೆಅವರು ನೆಲ್ಲಿಗೆರೆಯ ಮಠ, ದೇವನೂರು ಮಠ, ಸುತ್ತೂರು ಮಠ, ಮಲ್ಲನಮೂಲೆ ಮಠ ಮೊದಲಾದ ಮಠಗಳಲ್ಲಿಜರುಗುತ್ತಿದ್ದ ಕಾರ್ಯಕ್ರಮಗಳಲ್ಲಿ ಆಗಿಂದಾಗ್ಗೆ ಭಾಗವಹಿಸುವ ರೂಢಿಯಿತ್ತು. ಮಠಗಳ ಪರಿಸರದ ಸಂಪರ್ಕದಲ್ಲಿದ್ದಅವರಿಗೆ ವಿದ್ಯಾರ್ಥಿ ದಿಶೆಯಿಂದಲೇ ಗುರು-ಲಿಂಗ-ಜಂಗಮ ಸೇವೆಯ ಬಗ್ಗೆ ಆಸಕ್ತಿ, ನಿಷ್ಠೆ, ನೇಮ, ಕಠಿಣಶ್ರಮ, ಸರಳ ಜೀವನಗಳ ಅಭ್ಯಾಸವಾಯಿತು.

ಸರ್ಕಾರಿ ನೌಕರಿ ಬಿ. ಎಸ್ಸಿ. ಪದವಿ ಪರೀಕ್ಷೆಯನ್ನು ಪೂರೈಸಿಕೊಂಡು ರಜೆಯಲ್ಲಿ ತಮ್ಮ ಹುಟ್ಟೂರಿಗೆ ಹಿಂದಿರುಗಿದ ಶಿವರುದ್ರಸ್ವಾಮಿಗಳು ತಮ್ಮ ಕುಟುಂಬದವರೊಡನೆ ಕೃಷಿ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡರು. 1965 ರಲ್ಲಿ ಅವರ ತಂದೆಯವರಾದ ಶ್ರೀ ವೀರಭದ್ರಪ್ಪನವರು ಲಿಂಗೈಕ್ಯರಾದರು. ತದನಂತರ ಅವರಿಗೆ ನ್ಯಾಯಾಲಯದಲ್ಲಿ (ಲ್ಯಾಂಡ್ಟ್ರಿಬ್ಯುನಲ್) ದ್ವಿತೀಯ ದರ್ಜೆ ಗುಮಾಸ್ತನ ನೌಕರಿ ದೊರಕಿತು. 1968 ರಿಂದ ಎರಡು ವರ್ಷಗಳ ಕಾಲ ಸರ್ಕಾರಿ ನೌಕರಿಯಲ್ಲಿದ್ದಾಗಲೇ ಬಾಡಿಗೆ ರೂಂ ಮಾಡಿಕೊಂಡು, ಸ್ವಯಂಪಾಕ ಮಾಡಿಕೊಳ್ಳುತ್ತಿದ್ದರು. ಸರಳ ಜೀವನಕ್ಕೆ ಒಗ್ಗಿ ಹೋಗಿದ್ದ ಅವರು ಹೆಚ್ಚಿನದೇನನ್ನೂ ಬಯಸಲಿಲ್ಲ. ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವ ಅಭ್ಯಾಸ ಅವರಿಗೆ ಕರಗತವಾಯಿತು. ಸರಳ ಜೀವನ, ಉದಾತ್ತ ಚಿಂತನ ಅವರ ಧ್ಯೇಯವಾಯಿತು.
ಮರಿಯಾಲ ಮಠದ ಉತ್ತರಾಧಿಕಾರಿ
ಮರಿಯಾಲ ಮಠಾಧ್ಯಕ್ಷರಾಗಿದ್ದ ಇವರ ಅಣ್ಣಂದಿರಾದ ಶ್ರೀ ಸದಾಶಿವ ಸ್ವಾಮಿಗಳು ತಮ್ಮ ಸಹೋದರ ಶ್ರೀ ಶಿವರುದ್ರ ಸ್ವಾಮಿಗಳ ಆಧ್ಯಾತ್ಮಿಕ ಜೀವನದ ಬಗ್ಗೆ ಇದ್ದ ಒಲವನ್ನು ಬಲ್ಲವರಾಗಿದ್ದರು. ಆದ್ದರಿಂದ ಶಿವರುದ್ರ ಸ್ವಾಮಿಯೇ ತಮ್ಮ ಉತ್ತರಾಧಿಕಾರಿಯೆಂದು ಉಯಿಲು ಬರೆದು 19.01.1970 ರಲ್ಲಿ ಲಿಂಗೈಕ್ಯರಾದರು. ಶ್ರೀ ಶಿವರುದ್ರಸ್ವಾಮಿಗಳು ಹಿರಿಯ ಶ್ರೀಗಳ ಉಯಿಲಿನಂತೆ ಅವರ ಉತ್ತರಾಧಿಕಾರಿಗಳಾದರು. ಆದರೆ ಅಲ್ಲಿನ ಪರಿಸ್ಥಿತಿ ಅನುಕೂಲಕರವಾಗಿರಲಿಲ್ಲ. ಅನೇಕ ತಕರಾರು ಸಂಘರ್ಷಗಳನ್ನು ಎದುರಿಸಬೇಕಾಯಿತು. ಸಂಘರ್ಷ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿತು. ನ್ಯಾಯಾಲಯದಲ್ಲಿ ಶಿವರುದ್ರ ಸ್ವಾಮಿಗಳಿಗೆ ಜಯ ಲಭಿಸಿದರೂ ಅವರು ಅಲ್ಲಿಗೆ ಹೋಗಲಿಲ್ಲ.
ಶ್ರೀ ಶಿವರುದ್ರ ಸ್ವಾಮಿಗಳು ಕೆಲವು ದಿನಗಳ ಕಾಲ ಕುಣಿಗಲ್ ತಾಲ್ಲೂಕಿನ ಶ್ರೀ ಅಂಕನಹಳ್ಳಿ ಗವಿಮಠದಲ್ಲಿದ್ದು, ಅಲ್ಲಿನ ಮಠಾಧ್ಯಕ್ಷರಾಗಿದ್ದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳವರ ಕೃಪೆಗೆ ಪಾತ್ರರಾದರು. ಅನಂತರ ಶ್ರೀ ಸಿದ್ಧಗಂಗಾ ಕ್ಷೇತ್ರಕ್ಕೆ ಹೋಗಿ ಪರಮಪೂಜ್ಯ ಡಾ|| ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಅನುಗ್ರಹ ಪಡೆದು ಆಶ್ರಮ ಜೀವನದ ಪರಿಚಯ ಹಾಗೂ ಸೇವಾ ಕ್ಷೇತ್ರದ ಪರಿಚಯ ಮಾಡಿಕೊಂಡರು.

ನೆಲ್ಲಿಗೆರೆ ಮಠಾಧ್ಯಕ್ಷರಾಗಿ ಆಯ್ಕೆ
ಮಳವಳ್ಳಿ ತಾಲ್ಲೂಕು ನೆಲ್ಲಿಗೆರೆಯಲ್ಲಿ ಭಕ್ತರೊಬ್ಬರು ಮಠವೊಂದನ್ನು ಸ್ಥಾಪಿಸಲು ಬಯಸಿ, ಒಂದು ಮನೆ ಹಾಗೂ ಜಮೀನನ್ನು ಮರಿಯಾಲ ಮಠದ ಸದಾಶಿವ ಸ್ವಾಮಿಗಳೇ ದಾನವಾಗಿ ಕೊಟ್ಟಿದ್ದರು. ನೆಲ್ಲಿಗೆರೆಯ ಸದ್ಭಕ್ತರು, ಶ್ರೀ ದೇಗುಲ ಮಠ ಹಾಗೂ ಶ್ರೀ ಸಿದ್ಧಗಂಗಾ ಮಠಾಧ್ಯಕ್ಷರುಗಳ ಸಲಹೆಯಂತೆ ಶ್ರೀ ಶಿವರುದ್ರ ಸ್ವಾಮಿಗಳು ಆ ಮಠಕ್ಕೆ ನಿಯೋಜಿತರಾದರು.
ಶ್ರೀ ಶಿವರುದ್ರ ಸ್ವಾಮಿಗಳು ಆ ಮಠದ ಅಧಿಕಾರವನ್ನು ವಹಿಸಿಕೊಂಡಾಗ ಮಠವು ಶಿಥಿಲಾವಸ್ಥೆಯಲ್ಲಿತ್ತು. ಆ ಪ್ರದೇಶದ ಜನ ಸಂಸ್ಕಾರವಿಲ್ಲದಂತವರಾಗಿದ್ದರು. ಸುತ್ತೆಲ್ಲಾ ಅವಿದ್ಯಾವಂತರೇ ತುಂಬಿಕೊಂಡಿದ್ದರು. ವಿದ್ಯೆಯಿಲ್ಲದೆ ಬೆಳೆಯುತ್ತಿದ್ದ ಆ ಭಾಗದ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಸಾಮಾಜಿಕ ಪರಿವರ್ತನೆ ತರುವ ಸಂಕಲ್ಪ ತೊಟ್ಟರು. ಹಿರಿಯರನ್ನು ಒಪ್ಪಿಸಿ, ಅನೇಕ ಮಕ್ಕಳನ್ನು ತಾವೇ ಬಸ್ ಚಾರ್ಜು ಕೊಟ್ಟು ಸಿದ್ಧಗಂಗಾ ಮಠ, ಸುತ್ತೂರು ಮಠಗಳಿಗೆ ಕಳುಹಿಸಿ ಓದಿಸಿದರು. ಒಂದು ರೀತಿಯಲ್ಲಿ ಪೂಜ್ಯರು ಆ ಪ್ರದೇಶದ ಜನಜೀವನವನ್ನು ಹಸನುಗೊಳಿಸಿದರು. ಸ್ವಾಮಿಗಳ ಇಂತಹ ಸತ್ಕಾರ್ಯಗಳನ್ನು ಗಮನಿಸಿದ ಜನಗಳು ಇವರು ತಮ್ಮ ಉದ್ದಾರಕ್ಕಾಗಿ ಬಂದ ದೈವವೆಂದೇ ಬಗೆದರು. ಪೂಜ್ಯರು ಶಿಥಿಲವಾಗಿದ್ದ ಮಠವನ್ನು ಕಟ್ಟಬೇಕೆಂದು ನಿರ್ಧರಿಸಿದಾಗ ಜನರೆಲ್ಲಾ ಒಗ್ಗೂಡಿ ತನು ಮನ ಧನಗಳನ್ನು ನೀಡಿ ಕೆಲಸವನ್ನು ಪೂರೈಸಿದರು. ಮಠಕ್ಕೆ ಯಾವುದೇ ರೀತಿಯ ಆದಾಯವೂ ಇಲ್ಲದಿರುವಾಗ ಅಂತಹ ದೊಡ್ಡ ಕೆಲಸವು ನೆರವೇರಿದ ರೀತಿ ಪೂಜ್ಯರ ಜನಪ್ರಿಯತೆಗೆ ಸಾಕ್ಷಿಯಾಯಿತು. ಭಕ್ತರ ಸಹಕಾರದಿಂದ ಶ್ರೀಮಠದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಅನೇಕ ಜನಹಿತ ಕಾರ್ಯಗಳನ್ನು ನೆರವೇರಿಸಿದರು. ಶ್ರೀಮಠದಲ್ಲಿ ಅನೇಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ನಾಡಿನ ಅನೇಕ ಮಠಾಧಿಪತಿಗಳನ್ನು, ವಿದ್ವಾಂಸರನ್ನು, ಗಣ್ಯರನ್ನು ಬರಮಾಡಿಕೊಂಡು ಶ್ರೀಮಠದ ಚಟುವಟಿಕೆಗಳ ಕಡೆ ಎಲ್ಲರ ಗಮನ ಸೆಳೆದರು. ಅದರಲ್ಲೂ ವರ್ಷಕ್ಕೊಮ್ಮೆ ನಡೆಸುತ್ತಿದ್ದ ಹಿರಿಯ ಗುರುಗಳಾಗಿದ್ದ ಮರಿಯಾಲ ಮಠದ ಶ್ರೀ ಶ್ರೀ ಮುರುಘರಾಜೇಂದ್ರ ಸ್ವಾಮಿಗಳವರ ಆರಾಧನಾ ಮಹೋತ್ಸವ ಒಂದು ಅರ್ಥಪೂರ್ಣ ಕಾರ್ಯಕ್ರಮವಾಗಿ ಜನಪ್ರಿಯವಾಯಿತು. ಈ ಎಲ್ಲ ಕಾರ್ಯಕ್ರಮಗಳಿಗೆ ಸಿದ್ಧಗಂಗೆ, ದೇಗುಲ ಮಠದ ಪೂಜ್ಯರುಗಳು ಆಗಮಿಸುತ್ತಿದ್ದರು. ಸಮಾರಂಭದ ವ್ಯವಸ್ಥೆ, ಶ್ರೀಗಳ ಸಂಘಟನಾ ಶಕ್ತಿ, ಜನಾನುರಾಗಗಳ ಬಗ್ಗೆ ಇವರು ಸಂತೋಷಪಡುತ್ತಿದ್ದುದಲ್ಲದೆ, ಇಂತಹ ಸಮರ್ಥ ಸಂಘಟಕರಿಗೆ ಒಂದು ದೊಡ್ಡಮಠ ಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು.
 ಶ್ರೀ ದೇಗುಲ ಮಠದ ಕರೆ
1976 ರಲ್ಲಿ ಶ್ರೀ ದೇಗುಲ ಮಠಾಧ್ಯಕ್ಷರಾಗಿದ್ದ ಶ್ರೀ ಇಮ್ಮಡಿ ಮಹಾಲಿಂಗ ಸ್ವಾಮಿಗಳು ಅನಾರೋಗ್ಯದಿಂದ ಬಳಲಿದರು. ತಮ್ಮ ಅಂತಿಮ ದಿನಗಳು ಸಮೀಪಿಸಿದವೆಂದೇ ಭಾವಿಸಿದ ಶ್ರೀಗಳು ಸೂಕ್ತ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಶ್ರೀ ಸಿದ್ಧಗಂಗೆಯ ಡಾ|| ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳೊಡನೆ ಸಮಾಲೋಚನೆ ನಡೆಸಿದರು. ನೆಲ್ಲಿಗೆರೆ ಮಠಾಧ್ಯಕ್ಷರ ಪ್ರಸ್ತಾಪ ಬಂದು, ಅವರ ತಾಳ್ಮೆ, ಆಚಾರ ಸಂಪನ್ನತೆ ಹಾಗೂ ಕರ್ತವ್ಯಗಳನ್ನು ಮೆಚ್ಚಿಕೊಂಡಿದ್ದ ಉಭಯ ಶ್ರೀಗಳು ಶ್ರೀ ಶಿವರುದ್ರ ಸ್ವಾಮಿಗಳನ್ನು ಶ್ರೀ ಸಿದ್ಧಗಂಗಾ ಮಠಕ್ಕೆ ಕರೆಸಿಕೊಂಡರು. ಅಲ್ಲಿ ಸಿದ್ಧಗಂಗೆಯ ಪರಮಪೂಜ್ಯರು “ಸ್ವಾಮಿಗಳೇ, ಶ್ರೀ ದೇಗುಲ ಮಠದ ಉತ್ತರಾಧಿಕಾರಿಯಾಗಲು ಒಪ್ಪಿ, ಕರ್ಪೂರ ಹಚ್ಚಿ ಗುರುಗಳಿಗೆ ನಮಸ್ಕಾರ ಹಾಕಿ ಎಂದರು. ಅದರಂತೆ ಶ್ರೀ ಶಿವರುದ್ರಸ್ವಾಮಿಗಳು ಸಾಷ್ಟಾಂಗದ ಮೂಲಕ ತಮ್ಮ ಒಪ್ಪಿಗೆಯನ್ನಿತ್ತರು.
ಶ್ರೀ ದೇಗುಲ ಮಠದ ಉತ್ತರಾಧಿಕಾರಿಯಾಗಿ ನಿಯೋಜಿತರಾದ ಶ್ರೀ ಶಿವರುದ್ರ ಸ್ವಾಮಿಗಳು ಶ್ರೀಮಠದ ಸತ್ಸಂಪ್ರದಾಯಗಳಿಗೆ ಚ್ಯುತಿಬರದಂತೆ ಸಂದರ್ಭೋಚಿತವಾಗಿ ಆಗಬೇಕಾಗಿರುವ ಕೆಲಸಗಳನ್ನು ನಿರ್ವಹಿಸುವುದು ತಮ್ಮ ಹೆಗ್ಗುರಿ. ಈ ಮಹಾಕಾರ್ಯಕ್ಕೆ ಶ್ರೀಗುರುವಿನ ಆಶೀರ್ವಾದ, ಸಮಾಜ-ಸರ್ಕಾರದ ಪ್ರೋತ್ಸಾಹ ಅಗತ್ಯವಾಗಿದೆ. ಅದನ್ನು ಪಡೆಯುವ ವಿಶ್ವಾಸ ತಮಗಿರುವುದಾಗಿ ತಿಳಿಸಿದರು.
ದಿನಾಂಕ 12.02.1977 ರಂದು ಶ್ರೀ ಶಿವರುದ್ರಸ್ವಾಮಿಗಳಿಗೆ ಚರಮೂರ್ತಿ “ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳು ಎಂಬ ನೂತನ ಅಭಿಧಾನದೊಡನೆ ಶ್ರೀ ದೇಗುಲ ಮಠದ ನಿರಂಜನ ಪಟ್ಟಾಧಿಕಾರ ಮಹೋತ್ಸವ ವೈಭವದಿಂದ ಜರುಗಿತು. ಶ್ರೀ ಸಿದ್ಧಗಂಗಾ ಮಠಾಧ್ಯಕ್ಷರಾದ ಡಾ|| ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ನೂರಾರು ಮಠಾಧಿಪತಿಗಳು, ಮಂತ್ರಿಗಳು, ಶಾಸಕರು, ಗಣ್ಯರು, ವಿದ್ವಾಂಸರುಗಳು, ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು.
ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳು ಶ್ರೀ ದೇಗುಲ ಮಠದ ಉತ್ತರಾಧಿಕಾರಿಗಳಾಗುತ್ತಿದ್ದಂತೆಯೇ ಶ್ರೀ ಇಮ್ಮಡಿ ಮಹಾಲಿಂಗ ಸ್ವಾಮಿಗಳವರ ಆರೋಗ್ಯ ಆಶ್ಚರ್ಯಕರವಾದ ರೀತಿಯಲ್ಲಿ ಸುಧಾರಿಸಿತು. ಮತ್ತೆ ಅವರಲ್ಲಿ ನವಚೇತನ ತುಂಬಿತು. ಕಿರಿಯ ಶ್ರೀಗಳಿಗೆ ತಮ್ಮ ಗುರುಗಳ ಸೇವಾವಕಾಶ ಮತ್ತು ಮಾರ್ಗದರ್ಶನಗಳು ಲಭ್ಯವಾದವು. ಗುರುಗಳು ಶ್ರೀಮಠದ ಸಂಪ್ರದಾಯ, ಗುರುಪರಂಪರೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಶ್ರೀಮಠದ ಸೇವಾಕರ್ತರನ್ನು ,ಶಿಷ್ಯರನ್ನು, ಭಕ್ತ ಸಮೂಹವನ್ನು ಪರಿಚಯಿಸಿದರು. ಶ್ರೀಮಠದ ಕಾರ್ಯ ಯೋಜನೆಗಳನ್ನು ಪರಸ್ಪರ ಚರ್ಚಿಸುತ್ತಿದ್ದರು. ಪರಸ್ಪರ ಸಲಹೆಗಳನ್ನು ಪುರಸ್ಕರಿಸುತ್ತಿದ್ದರು. ಆ ಕಾರಣದಿಂದ ಶ್ರೀಮಠದ ಚಟುವಟಿಕೆಗಳು ವಿಸ್ತೃತಗೊಂಡವು.
ಶ್ರೀ ಇಮ್ಮಡಿ ಮಹಾಲಿಂಗ ಸ್ವಾಮಿಗಳು ಪ್ರಾರಂಭಿಸಿದ್ದ ಎಲ್ಲ ಕಾರ್ಯಗಳು, ಅನ್ನದಾನ, ವಿದ್ಯಾದಾನ, ಧಾರ್ಮಿಕ ಪ್ರಚಾರ, ಸಾಮಾಜಿಕ ಚಟುವಟಿಕೆಗಳು, ಕೃಷಿ ಕ್ಷೇತ್ರದ ವಿಸ್ತರಣೆ ಇತ್ಯಾದಿಗಳು ಅಧಿಕಗೊಂಡವು. ಶ್ರೀಮಠದಲ್ಲಿ ಒಂದು ಅನಾಥಾಲಯ (1977), ಸಂಸ್ತೃತ ಪಾಠಶಾಲೆ (1979), ಐ.ಟಿ.ಐ. ತರಬೇತಿ ಕಾಲೇಜು (1992), ಮದ್ದೂರು ತಾಲ್ಲೂಕು ಕೆಸ್ತೂರು ಗ್ರಾಮದಲ್ಲಿ ಬಾಲಕಿಯರ ಪ್ರೌಢಶಾಲೆ (1990), ಕನಕಪುರ ತಾಲ್ಲೂಕು ಹಣಸನಹಳ್ಳಿಯಲ್ಲಿ ಪ್ರೌಢಶಾಲೆ (1988), ಪದವಿಪೂರ್ವ ಕಾಲೇಜು (1991), ವಿದ್ಯಾರ್ಥಿನಿಲಯ (1993), ಮಳವಳ್ಳಿ ತಾಲ್ಲೂಕು ಉಪ್ಪನಹಳ್ಳಿಯಲ್ಲಿ ಪ್ರೌಢಶಾಲೆ (1994), ತಿರುಮಕೂಡ್ಲು ನರಸೀಪುರ ತಾಲ್ಲೂಕು ಕುರುಬೂರು ಗ್ರಾಮದಲ್ಲಿ ಪ್ರೌಢಶಾಲೆ (1999) ಗಳು ಆರಂಭವಾದವು. ಹೀಗೆ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳವರು ಶ್ರೀಮಠದಲ್ಲಿ ಮಾತ್ರವಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲಿಯೂ ಶಾಲಾ ಕಾಲೇಜುಗಳನ್ನು ತೆರೆದು ಗ್ರಾಮೀಣ ಬಡಮಕ್ಕಳ, ಅದರಲ್ಲೂ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟರು.
 ಪೂಜ್ಯ ಶ್ರೀಗಳು ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲದೆ ಕೃಷಿಕ್ಷೇತ್ರದಲ್ಲೂ ಹಲವಾರು ಸುಧಾರಣೆಗಳನ್ನು ತಂದರು. ಆಧುನಿಕ ಕೃಷಿ ಪದ್ಧತಿಯನ್ನು ಜಾರಿಗೊಳಿಸಿ ಟ್ರಾಕ್ಟರ್ ಮೊದಲಾದ ಯಾಂತ್ರೀಕೃತ ಸಲಕರಣೆಗಳನ್ನು ಖರೀದಿಸಿದರು. ಶ್ರೀಮಠವು ಸಾಂಪ್ರದಾಯಿಕ ವ್ಯವಸಾಯದಿಂದಲೇ ಸಾಕಷ್ಟು ಪ್ರಗತಿಯನ್ನು ಸಾಧಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ಅರಿಶಿಣ, ಶುಂಠಿ, ಬಾಳೆ ಮೊದಲಾದ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಕೃಷಿಯಲ್ಲಿ ಆಧುನಿಕ ಪದ್ಧತಿಯನ್ನು ಅಳವಡಿಸಿಕೊಂಡ ಪರಿಣಾಮವಾಗಿ ಒಂದು ವರ್ಷ 250 ಕ್ವಿಂಟಲ್ ಅರಿಶಿಣವನ್ನು ಬೆಳೆದು ದಾಖಲೆ ಸ್ಥಾಪಿಸಿದ ಕಾರಣದಿಂದ ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯು ಪುರಸ್ಕಾರ ನೀಡಿ ಗೌರವಿಸಿದೆ. ಶ್ರೀಮಠದಲ್ಲಿ ಹೈನುಗಾರಿಕೆಯನ್ನೂ ಹೆಚ್ಚಿಸಲಾಗಿದೆ. ಒಟ್ಟಿನಲ್ಲಿ ಶ್ರೀಮಠದ ದಾಸೋಹದ ಖರ್ಚಿಗೆ ಮಠದ ಆದಾಯವನ್ನು ಹೆಚ್ಚಿಸುವ ಹಲವು ಯೋಜನೆಗಳನ್ನು ಶ್ರೀಗಳು ಕೈಗೆತ್ತಿಕೊಂಡರು.
ಮಠಗಳೊಡನೆ ಸೌಹಾರ್ದ ಸಂಬಂಧ
ಪರಮಪೂಜ್ಯ ನಿರ್ವಾಣ ಮಹಾಸ್ವಾಮಿಗಳು ಚಿಕ್ಕಂದಿನಿಂದಲೂ ಮಠಗಳೊಡನೆ ಸಂಬಂಧವನ್ನು ಹೊಂದಿದ್ದವರು. ಹೀಗಾಗಿ ಮಠಗಳ ಪರಿಸರದಲ್ಲಿ ಬೆಳೆದು ಮರಿಯಾಲ ಮಠ, ನೆಲ್ಲಿಗೆರೆ ಮಠ ಮತ್ತು ಕಳೆದ ನಲವತ್ತು ವರ್ಷಗಳಿಂದ ಶ್ರೀ ದೇಗುಲ ಮಠಗಳ ಅಧ್ಯಕ್ಷರಾಗಿ ನೂರಾರು ಮಠಗಳ ಸಂಪರ್ಕವನ್ನು ಹೊಂದಿದ್ದಾರೆ. ಗುರುವರ್ಗದ ಮಠವಿರಲಿ, ವಿರಕ್ತವರ್ಗದ ಮಠವಿರಲಿ, ದೊಡ್ಡಮಠವಿರಲಿ, ಚಿಕ್ಕಮಠವಿರಲಿ ಯಾವುದೇ ತಾರತಮ್ಯವನ್ನು ಮಾಡದೆ ಎಲ್ಲ ಮಠಗಳಿಗೆ ಭೇಟಿ ಕೊಡುತ್ತಾ ಮಠಾಧಿಪತಿಗಳ ಜೊತೆ ಸೌಹಾರ್ದ ಸಂಬಂಧವನ್ನು ಹೊಂದಿರುವುದು ಶ್ರೀಗಳ ಹೃದಯ ವೈಶಾಲ್ಯದ ದ್ಯೋತಕವಾಗಿದೆ. ಮಠಗಳ ಉದ್ದೇಶ ಮಾನವಕಲ್ಯಾಣ ಎಂಬುದನ್ನು ಮನಗಂಡಿರುವ ಶ್ರೀಗಳು ಅವಶ್ಯವಾದಲ್ಲಿ ನೆರವಾಗುವುದು, ಯಾವುದೇ ಮಠದಲ್ಲಿ ಸಮಸ್ಯೆಗಳುಂಟಾದಲ್ಲಿ ಅದನ್ನು ಬಗೆಹರಿಸಲು ಶಕ್ತ್ಯಯನುಸಾರ ಶ್ರಮಿಸಿದ್ದಾರೆ. ಹೀಗಾಗಿ ಎಲ್ಲ ಮಠಾಧಿಪತಿಗಳೂ ಇವರನ್ನು ಮಾತೃಹೃದಯ ಶ್ರೀಗಳೆಂದೇ ಆದರಿಸುತ್ತಾರೆ. ತಮ್ಮ ಮಠದಂತೆಯೇ ಎಲ್ಲ ಮಠಗಳು ಬೆಳೆಯಬೇಕು, ಜನಕಲ್ಯಾಣ ಮಣಿಹ ನಿರಂತರವಾಗಿ ನಡೆಯಬೇಕೆಂಬುದು ಅವರ ಆಶಯವಾಗಿದೆ.
ದೇಶ-ವಿದೇಶ ಪ್ರವಾಸ
ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳವರು ತಮ್ಮ ಒತ್ತಡದ ಕಾರ್ಯಭಾರದ ನಡುವೆಯೂ ದೇಶ-ವಿದೇಶಗಳ ಪ್ರವಾಸವನ್ನು ಮಾಡುವ ಮೂಲಕ ತಮ್ಮ ಲೋಕಾನುಭವವನ್ನು ವಿಸ್ತರಿಸಿಕೊಂಡಿದ್ದಾರೆ. ಶ್ರೀ ಸುತ್ತೂರು ವೀರಸಿಂಹಾಸನದ ಜಗದ್ಗುರುಗಳಾದ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಆಯೋಜಿಸಿದ್ದ ಅಮೆರಿಕ, ಯೂರೋಪು ಮೊದಲಾದ ಐರೋಪ್ಯ ರಾಷ್ರ್ಟಗಳ ಪ್ರವಾಸ ಮಾಡಿದ್ದಾರೆ. ತಾವು ಸಂದರ್ಶಿಸಿದ ರಾಷ್ರ್ಟಗಳ ಜನತೆಯ ಶಿಸ್ತು, ಕಾರ್ಯತತ್ಪರತೆ, ಸಮಯಪಾಲನೆ, ಕಷ್ಟ ಸಹಿಷ್ಣುತೆ, ದೇಶಪ್ರೇಮಗಳು ಶ್ರೀಗಳವರಿಗೆ ಬಹಳ ಮೆಚ್ಚುಗೆಯಾದವು. ನಮ್ಮ ಜನತೆಯೂ ಇಂತಹ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ದೇಶದ ಹಿರಿಮೆ ಇನ್ನೂ ಹೆಚ್ಚುತ್ತದೆ ಎಂದು ಅಭಿಪ್ರಾಯಪಡುತ್ತಾರೆ.
ಇದಲ್ಲದೆ ಸುಮಾರು ಒಂದು ದಶಕದ ಹಿಂದೆ ಶ್ರೀ ಸುತ್ತೂರು ಶ್ರೀಗಳು ಆಯೋಜಿಸಿದ್ದ `ಭಾರತ ದರ್ಶನ ಯಾತ್ರೆಯಲ್ಲಿ ಸುಮಾರು 1500 ಮಠಾಧಿಪತಿಗಳೊಡನೆ ಎರಡು ವಾರಗಳ ಪ್ರವಾಸವನ್ನು ಕೈಗೊಂಡು ಕಾಶಿ, ಮಥುರಾ, ಕೇದಾರ, ಪ್ರಯಾಗ, ಹರಿದ್ವಾರ, ಋಷಿಕೇಶ, ಆಗ್ರಾ, ದೆಹಲಿ, ಜೈಪುರ, ಮುಂಬಯಿ ಮೊದಲಾದ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿದ್ದಾರೆ.
ಅನನ್ಯ ವ್ಯಕ್ತಿತ್ವ
ಶ್ರೀಗಳು ಮಾತೃಹೃದಯಿಗಳು, ಸದಾ ಹಸನ್ಮುಖಿಗಳಾಗಿದ್ದು ಮೋಹ, ಅಹಂಕಾರ, ಭಯ, ಅಪೇಕ್ಷೆಗಳಿಂದ ಮುಕ್ತರಾಗಿ ಮಮತೆಯ ಸಾಕಾರಮೂರ್ತಿಗಳಾಗಿದ್ದಾರೆ. ಇಂತಹ ಸಾತ್ವಿಕ ಗುಣಗಳ ಕಾರಣದಿಂದಲೇ ಶ್ರೀ ದೇಗುಲ ಮಠಕ್ಕೆ ಬರುವ ಭಕ್ತರಿಗೆ ತಮ್ಮ ತೌರಿಗೆ ಬರುವ ಹೆಣ್ಣುಮಕ್ಕಳಂತಹ ಸಂಭ್ರಮ-ಸಡಗರ. ಶ್ರೀಮಠಕ್ಕೆ ಆಗಮಿಸುವ ಭಕ್ತರು ಯಥಾಶಕ್ತಿ ತನುಮನಧನಾದಿಗಳನ್ನು ಪರಮಪೂಜ್ಯರಿಗೆ ಭಕ್ತಿಯಿಂದ ಸಮರ್ಪಿಸಿ ಕೃತಾರ್ಥರಾದರೆ, ಮಾತೃಹೃದಯಿಗಳಾದ ಪೂಜ್ಯರು ಅವರಿಗೆ ಪ್ರೀತಿಯಿಂದ ಉಪಚಾರ ಮಾಡಿ, ಆಶೀರ್ವದಿಸಿ ಅವರನ್ನು ಕೃತಾರ್ಥರನ್ನಾಗಿಸುತ್ತಾರೆ.
ಪೂಜ್ಯರು ಭಕ್ತರ ಬಿನ್ನಹದ ಮೇರೆಗೆ ಅವರ ಮನೆಗಳಿಗೆ ಶಿವಪೂಜೆಗೆ ಅಥವಾ ಗ್ರಾಮಗಳಲ್ಲಿ ಆಯೋಜಿಸುವ ಸಾಂಸೃತಿಕ, ಧಾರ್ಮಿಕ ಸಮಾರಂಭಗಳಲ್ಲಿ ಆಶೀರ್ವಚನವನ್ನು ಅನುಗ್ರಹಿಸಲು ದಯಮಾಡಿಸುವುದುಂಟು. ಇದಲ್ಲದೆ ಶ್ರೀಮಠದ ದಾಸೋಹದ ವ್ಯವಸ್ಥೆಯು ನಿರಂತರವಾಗಿ ಸಾಗಲು ಸುಗ್ಗಿಯ ಕಾಲದಲ್ಲಿ ಬೇರೆ ಬೇರೆ ಗ್ರಾಮಗಳಿಗೆ ಭಿಕ್ಷೆಗಾಗಿ ಹೋಗುವ ಕಾರ್ಯ ಬೇರೆ. ಜೊತೆಗೆ ಶ್ರೀಮಠದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಉಸ್ತುವಾರಿ. ಹೀಗೆ ಶ್ರೀಗಳ ಕಾರ್ಯಭಾರ ಬಹಳ ಹೆಚ್ಚಾಗಿ ಭಕ್ತರ ಬಿನ್ನಹಗಳನ್ನು ಪೂರೈಸಲು ಅಸಾಧ್ಯವಾದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಅಂತಹ ಸಂದರ್ಭದಲ್ಲಿ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಲು ಅನಿವಾರ್ಯವಾಗಿ ಉತ್ತರಾಧಿಕಾರಿಯ ಅವಶ್ಯಕತೆ ಕಂಡುಬಂದಿತು.
ಉತ್ತರಾಧಿಕಾರಿಯ ಆಯ್ಕೆ
ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳವರ ಕಾರ್ಯಬಾಹುಳ್ಯದ ಕಾರಣದಿಂದ ಉತ್ತರಾಧಿಕಾರಿಯ ಅನ್ವೇಷಣೆ ಆರಂಭವಾಯಿತು. ಶ್ರೀ ಸಿದ್ಧಗಂಗಾ ಮಠಾಧ್ಯಕ್ಷರಾದ ಪರಮಪೂಜ್ಯ ಡಾ|| ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳೊಡನೆ ಈ ಬಗ್ಗೆ ಸಮಾಲೋಚಿಸಿದರು. ಪೂಜ್ಯರು ಕೂಡಲೇ ತಮ್ಮ ಮಠದಲ್ಲಿಯೇ ಅಧ್ಯಯನ ಮಾಡುತ್ತಾ, ತಮ್ಮ ಸೇವೆಯನ್ನೂ ಮಾಡುತ್ತಿರುವ ಕೆಂಬೆಳಲು ಗ್ರಾಮದ ಶ್ರೀ ರೇಣುಕೇಶ್ ಅವರ ಹೆಸರನ್ನು ಸೂಚಿಸಿದರು. ಶ್ರೀ ರೇಣುಕೇಶ್ ಅವರು ಶ್ರೀ ದೇಗುಲ ಮಠದಲ್ಲಿಯೇ ಪ್ರೌಢಶಾಲಾ ಶಿಕ್ಷಣವನ್ನು ಪೂರೈಸಿದ್ದು, ಶ್ರೀ ಸಿದ್ಧಗಂಗೆಯಲ್ಲಿ ತಮ್ಮ ಹೆಚ್ಚಿನ ಅಧ್ಯಯನವನ್ನು ಮುಂದುವರೆಸಲು ಹೋದ ನಂತರವೂ ಆಗಿಂದಾಗ್ಗೆ ಶ್ರೀ ದೇಗುಲ ಮಠಕ್ಕೆ ಭೇಟಿ ಕೊಡುತ್ತಿದ್ದು, ಪರಮಪೂಜ್ಯ ನಿರ್ವಾಣ ಸ್ವಾಮಿಗಳವರ ದರ್ಶನಾಶೀರ್ವಾದಗಳನ್ನು ಪಡೆದು ಬರುತ್ತಿದ್ದರು. ಹೀಗಾಗಿ ಸಿದ್ಧಗಂಗಾ ಶ್ರೀಗಳು ಸೂಚಿಸಿದ ಅಭ್ಯರ್ಥಿಯು ಇವರಿಗೂ ಸಹ ಸಮ್ಮತಿಯಾಯಿತು. ದಿನಾಂಕ 23.03.1998 ರಂದು ಜರುಗಿದ ಚರಪಟ್ಟಾಧಿಕಾರ ಮಹೋತ್ಸವವು ವೈಭವೋಪೇತವಾಗಿ ಜರುಗಿ, ಶ್ರೀ ರೇಣುಕೇಶ್ ಅವರು “ಶ್ರೀ ಮುಮ್ಮಡಿ ಮಹಾಲಿಂಗ ಸ್ವಾಮಿಗಳು  ಎಂಬ ನೂತನಾಭಿಧಾನದಿಂದ ಶ್ರೀ ದೇಗುಲ ಮಠದ ಉತ್ತರಾಧಿಕಾರಿಗಳಾದರು.
ಪರಮಪೂಜ್ಯ ಶ್ರೀ ನಿರ್ವಾಣ ಸ್ವಾಮಿಗಳವರಿಗೆ ಸಮರ್ಥ ಉತ್ತರಾಧಿಕಾರಿ ದೊರೆತ ಕಾರಣದಿಂದ ಶ್ರೀಮಠದ ಚಟುವಟಿಕೆಗಳನ್ನು ವಿಸ್ತರಿಸಿದರು. ಶ್ರೀಮಠದಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಕ್ರಮಗಳು ಅಧಿಕಗೊಂಡವು. ಶ್ರೀಮಠದ ಗದ್ದುಗೆಗಳಿಗೆ ನಿತ್ಯ ರುದ್ರಾಭಿಷೇಕ ಯೋಜನೆ ಆರಂಭವಾಯಿತು. ಇದಕ್ಕಾಗಿ ಭಕ್ತರನ್ನು ಸಂಘಟಿಸುವ ಕಾರ್ಯ ಮುಂದುವರೆಯಿತು. ಪ್ರತಿ ಅಮಾವಾಸ್ಯೆ, ಪೌರ್ಣಮಿಗಳಂದು ವಿಶೇಷ ಪೂಜೆ. ಕೊನೆಯ ಕಾರ್ತಿಕ ಮಾಸದ ಅಮಾವಾಸ್ಯೆಯಂದು ಲಕ್ಷದೀಪೋತ್ಸವ, ಸರ್ವಧರ್ಮ ಸಮ್ಮೇಳನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾದವು. ಮೈಸೂರಿನಲ್ಲಿ ಒಂದು ಪ್ರೌಢಶಾಲೆ ಮತ್ತು ಕಾನ್ವೆಂಟ್ (2001), ಒಂದು ಪದವಿ ಪೂರ್ವ ಕಾಲೇಜು (2006), ಶ್ರೀಮಠದಲ್ಲಿ ನರ್ಸಿಂಗ್ ಕಾಲೇಜು (2004), ಬಿ.ಇಡಿ. ಕಾಲೇಜು (2004), ಡಿ.ಇಡಿ. ಕಾಲೇಜು (2004), ನರ್ಸಿಂಗ್ ಸ್ಕೂಲ್ (2005), ಪಬ್ಲಿಕ್ ಸ್ಕೂಲ್ (2005), ಪದವಿಪೂರ್ವ ಕಾಲೇಜು (2009)ಗಳು ಆರಂಭವಾದವು. ಶ್ರೀಮಠದಲ್ಲಿ ಭಕ್ತರ ನೆರವಿನಿಂದ ಸುಸಜ್ಜಿತವಾದ ಪ್ರಸಾದ ನಿಲಯ, ಅತಿಥಿಗೃಹ, ಸಾಮೂಹಿಕ ಭವನ, ಶ್ರೀಮಠದ ಮುಖ್ಯ ಕಟ್ಟಡದ ಜೀರ್ಣೋದ್ಧಾರ, ಹೊಸ ಗದ್ದುಗೆಗಳ ನಿರ್ಮಾಣ -ಹೀಗೆ ಹತ್ತು ಹಲವು ಹೊಸ ಕಟ್ಟಡಗಳು ತಲೆಎತ್ತಿದವು. ಕನಕಪುರದ ಸಮೀಪವಿರುವ ಶಿವನಹಳ್ಳಿಯಲ್ಲಿರುವ ಶ್ರೀಮಠದ ಸುಮಾರು ಹತ್ತು ಎಕರೆ ಪ್ರದೇಶದಲ್ಲಿ ಸುವ್ಯವಸ್ಥಿತವಾದ ಐದು ಅಂತಸ್ತುಗಳ ಕಟ್ಟಡ ನಿರ್ಮಾಣವಾಗಿದೆ.
ಹೊಸ ಶಾಖಾಮಠ
ಶ್ರೀ ದೇಗುಲ ಮಠದ ಕಾರ್ಯವ್ಯಾಪ್ತಿಯು ಕನಕಪುರ ತಾಲ್ಲೂಕು ಮಾತ್ರವಲ್ಲದೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ರಾಮನಗರ ಜಿಲ್ಲೆ, ಮೈಸೂರು, ಕೊಳ್ಳೇಗಾಲ, ಚಾಮರಾಜನಗರಗಳವರೆಗೆ ವಿಸ್ತರಿಸಿದ ಕಾರಣದಿಂದ ಭಕ್ತರ ಬಿನ್ನಹ ಕಾರ್ಯಗಳನ್ನು, ಧಾರ್ಮಿಕ ಅನುಷ್ಠಾನಗಳನ್ನು ಪೂರೈಸುವುದು ಬಹಳ ಕಷ್ಟವಾಗಿ ಪರಿಣಮಿಸಿತು. ಅಂತಹ ಸಂದರ್ಭದಲ್ಲಿ ಮಳವಳ್ಳಿ ತಾಲ್ಲೂಕು ಹೆಬ್ಬಣಿ ಗ್ರಾಮದಲ್ಲಿ 2001ರಲ್ಲಿ `ಶ್ರೀ ನಿರ್ವಾಣೇಶ್ವರ ವಿರಕ್ತ ಮಠವನ್ನು ಆರಂಭಿಸಿದರು. ಆ ಶಾಖಾಮಠಕ್ಕೆ ಪರಮಪೂಜ್ಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳವರು ಶ್ರೀ ಶಂಭುಲಿಂಗಸ್ವಾಮಿ ಎಂಬ ವಟುವಿಗೆ ವಿರಕ್ತಾಶ್ರಮ ಚರಪಟ್ಟಾಧಿಕಾರವನ್ನು ಅನುಗ್ರಹಿಸಿದರು. ದಾನಿಗಳಾದ ಶ್ರೀ ಹೆಚ್.ಬಿ. ಗುರುಮಲ್ಲಪ್ಪನವರು ಆ ಶಾಖಾಮಠಕ್ಕೆ ಅಗತ್ಯವಾದ ಭೂದಾನವನ್ನು ಮಾಡಿದ್ದಲ್ಲದೆ, ಕಟ್ಟಡವನ್ನು ಕಟ್ಟಿಸಿಕೊಟ್ಟಿರುತ್ತಾರೆ. ಆ ವಟುವು ಶ್ರೀ ದೇಗುಲ ಮಠದಲ್ಲಿದ್ದುಕೊಂಡು ಧಾರ್ಮಿಕ ಶಿಕ್ಷಣವನ್ನು ಪಡೆಯುತ್ತಾ, ಮಳವಳ್ಳಿ ತಾಲ್ಲೂಕಿನ ಭಕ್ತರ ಬಿನ್ನಹಾದಿಗಳನ್ನು ಪೂರೈಸುತ್ತಿದ್ದಾರೆ.
ರಜತ ಮಹೋತ್ಸವ
ಪರಮಪೂಜ್ಯ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳವರು 25 ವರ್ಷಗಳಿಗೂ ಹೆಚ್ಚುಕಾಲ ಶ್ರೀ ದೇಗುಲ ಮಠದ ಪುರೋಭಿವೃದ್ಧಿಗೆ ಹಾಗೂ ಸಮಾಜೋನ್ನತಿಗೆ ಹಗಲಿರುಳು ಶ್ರಮಿಸಿದ್ದರ ದ್ಯೋತಕವಾಗಿ, ಅವರಿಗೆ ಕೃತಜ್ಞತಾಪೂರ್ವಕ ಅಭಿನಂದನೆಗಳನ್ನು ಸಲ್ಲಿಸಬೇಕೆಂದು ಬಯಸಿದ ಭಕ್ತರು ಶ್ರೀಗಳ ಪಟ್ಟಾಧಿಕಾರದ ರಜತ ಮಹೋತ್ಸವವನ್ನು ಅಭೂತಪೂರ್ವ ರೀತಿಯಲ್ಲಿ ಆಚರಿಸಿ ಸಂಭ್ರಮಿಸಿದರು. ರಜತ ಮಹೋತ್ಸವ ಸಮಾರಂಭವು ದಿನಾಂಕ 16.04.2005 ಮತ್ತು 17.04.2005 ರಂದು ಎರಡು ದಿನಗಳ ಕಾಲ ಶ್ರೀಮಠದಲ್ಲಿ ಶ್ರೀ ಸಿದ್ಧಗಂಗಾ ಮಠಾಧ್ಯಕ್ಷರಾದ ಪರಮಪೂಜ್ಯ ಡಾ|| ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಜರುಗಿತು. ಸಮಾರಂಭದ ಮೊದಲನೆಯ ದಿನ (16.04.2005) ಬೆಳಿಗ್ಗೆ `ದೇಗುಲ ಸದ್ಭಾವ ಯಾತ್ರೆ ಜರುಗಿದರೆ, ಸಾಯಂಕಾಲ ಶ್ರೀಮಠದ ಲಿಂಗೈಕ್ಯ ಶ್ರೀ ಇಮ್ಮಡಿ ನಿರ್ವಾಣ ಸ್ವಾಮಿಗಳು ಹಾಗೂ ಲಿಂ. ಶ್ರೀ ಇಮ್ಮಡಿ ಮಹಾಲಿಂಗ ಸ್ವಾಮಿಗಳವರ ಸಂಸ್ಮರಣೋತ್ಸವ ಕಾರ್ಯಕ್ರಮ ನಡೆಯಿತು. ಶ್ರೀ ಆದಿಚುಂಚನಗಿರಿ ಸಂಸ್ಥಾನ ಮಠದ ಜಗದ್ಗುರು ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ, ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಆನಂದಪುರಂ, ಶ್ರೀ ಬೆಕ್ಕಿನ ಕಲ್ಮಠ, ಶಿವಮೊಗ್ಗ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾಜಿ ಕೇಂದ್ರ ಸಚಿವರಾದ ಶ್ರೀ ಎಂ. ರಾಜಶೇಖರ ಮೂರ್ತಿ ಅವರು ಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭದಲ್ಲಿ ಶ್ರೀ ದೇಗುಲ ಮಠದಲ್ಲಿ ನೂತನವಾಗಿ ಆರಂಭವಾಗಿದ್ದ ಐ.ಟಿ.ಐ. ಕಾಲೇಜು, ನರ್ಸಿಂಗ್ ಕಾಲೇಜು, ಬಿ.ಇಡಿ. ಕಾಲೇಜು, ಡಿ.ಇಡಿ. ಕಾಲೇಜು, ನರ್ಸಿಂಗ್ ಸ್ಕೂಲ್‌ಗಳನ್ನು ಕರ್ನಾಟಕ ಸರ್ಕಾರದ ಮಾನ್ಯ ಸಚಿವರುಗಳಾಗಿದ್ದ ಶ್ರೀ ಪಿ.ಜಿ.ಆರ್. ಸಿಂಧ್ಯಾ, ಶ್ರೀ ಡಿ.ಕೆ. ಶಿವಕುಮಾರ್ (ಶಾಸಕರು ಮತ್ತು ಮಾಜಿ ಸಚಿವರು), ಶ್ರೀ ಡಿ. ಮಂಜುನಾಥ್, ಶ್ರೀ ರಾಮಲಿಂಗಾರೆಡ್ಡಿ, ಶ್ರೀ ಬಸವರಾಜ ಹೊರಟ್ಟಿ, ಶ್ರೀಮತಿ ತೇಜಸ್ವಿನಿ ರಮೇಶ್ (ಲೋಕಸಭಾ ಸದಸ್ಯರು) ಉದ್ಘಾಟಿಸಿದರು. ಸಮಾರಂಭದಲ್ಲಿ ನೂರಾರು ಮಠಾಧಿಪತಿಗಳು, ಶಾಸಕರು, ಗಣ್ಯರು, ಲಕ್ಷಾಂತರ ಭಕ್ತಾದಿಗಳು ಭಾಗವಹಿಸಿದ್ದರು.
ದಿನಾಂಕ 17.04.2005 ನೇ ಭಾನುವಾರ ಬೆಳಿಗ್ಗೆ 7.30 ಕ್ಕೆ ಲಿಂ. ಶ್ರೀ ಇಮ್ಮಡಿ ಮಹಾಲಿಂಗ ಸ್ವಾಮಿಗಳವರ ಗದ್ದುಗೆಯ ನೂತನ ಗೋಪುರದ ಕಳಸಾರೋಹಣವನ್ನು ಶ್ರೀ ಸಿದ್ಧಗಂಗಾ ಮಠಾಧ್ಯಕ್ಷರಾದ ಪರಮಪೂಜ್ಯ ಡಾ|| ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರು ನೆರವೇರಿಸುವುದರೊಂದಿಗೆ ಕಾರ್ಯಕ್ರಮವು ಆರಂಭವಾಯಿತು. ಅದೇ ದಿನ ಬೆಳಿಗ್ಗೆ 10.30 ಕ್ಕೆ ಶ್ರೀಗಳ ಪಟ್ಟಾಧಿಕಾರದ ರಜತ ಮಹೋತ್ಸವ ಸಮಾರಂಭವು ಶ್ರೀ ಸುತ್ತೂರು ವೀರಸಿಂಹಾಸನ ಮಠದ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಸಮ್ಮುಖದಲ್ಲಿ ವಿಶೇಷವಾಗಿ ನಿರ್ಮಿಸಲಾಗಿದ್ದ ಬೃಹತ್ ಮಂಟಪದಲ್ಲಿ ಜರುಗಿತು. ಕೇಂದ್ರ ಕೃಷಿ ಸಚಿವರಾದ ಶ್ರೀ ಶರದ್ ಪವಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಸನ್ಮಾನ್ಯ ಶ್ರೀ ಎನ್. ಧರ್ಮಸಿಂಗ್, ಉಪಮುಖ್ಯಮಂತ್ರಿಗಳಾಗಿದ್ದ ಶ್ರೀ ಸಿದ್ಧರಾಮಯ್ಯ, ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಹೆಚ್.ಡಿ. ದೇವೇಗೌಡ, ಕೇಂದ್ರ ಸಚಿವರಾದ ಶ್ರೀ ಎಂ.ವಿ. ರಾಜಶೇಖರನ್, ರಾಜ್ಯಸಭೆಯ ಉಪಸಭಾಪತಿಗಳಾದ ಶ್ರೀ ಕೆ. ರೆಹಮಾನ್‌ಖಾನ್, ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀ ವಿ. ಸೋಮಣ್ಣ, ಕರ್ನಾಟಕ ಸರ್ಕಾರದ ಸಚಿವರಾಗಿದ್ದ ಶ್ರೀ ಸಿ. ಚೆನ್ನಿಗಪ್ಪ, ಮಾಜಿ ಸಚಿವರಾದ ಶ್ರೀ ಹೆಚ್.ಎಂ. ರೇವಣ್ಣ, ಶಾಸಕರಾದ ಶ್ರೀ ಶಾಮನೂರು ಶಿವಶಂಕರಪ್ಪ ಮೊದಲಾದ ಗಣ್ಯರು, ಡಾ|| ಎಂ.ಎಂ. ಕಲಬುರ್ಗಿ, ಶ್ರೀ ಗೊ.ರು. ಚನ್ನಬಸಪ್ಪ, ಶ್ರೀ ಎನ್. ಬಸವಾರಾಧ್ಯ ಮೊದಲಾದ ನೂರಾರು ವಿದ್ವಾಂಸರು ಪಾಲ್ಗೊಂಡು ಶ್ರೀಗಳವರಿಗೆ ತಮ್ಮ ನುಡಿನಮನ ಸಮರ್ಪಿಸಿದರು. ಲಕ್ಷಾಂತರ ಜನ ಪಾಲ್ಗೊಂಡಿದ್ದ ಈ ಸಮಾರಂಭ ಅಭೂತಪೂರ್ವವಾಗಿತ್ತು. ಈ ಸಮಾರಂಭದಲ್ಲಿ ಪರಮಪೂಜ್ಯ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳವರಿಗೆ `ನಿರ್ವಾಣಶ್ರೀ ಎಂಬ ಅಭಿನಂದನ ಗ್ರಂಥವನ್ನು ಸಮರ್ಪಿಸಲಾಯಿತು ಮತ್ತು `ದೇಗುಲ ಸಂಪದʼ ಎಂಬ ರಜತ ಮಹೋತ್ಸವ ಸ್ಮರಣ ಸಂಚಿಕೆಯನ್ನು ಆ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಈ ಮುಖ್ಯ ಸಮಾರಂಭದ ನಂತರ ಬಿಜಾಪುರದ ಶ್ರೀ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು, ಶ್ರೀ ಮರಳೇ ಗವಿಮಠದ ಪೂಜ್ಯ ಶ್ರೀ ಕಾಲಾಗ್ನಿ ರುದ್ರಮುನಿ ಸ್ವಾಮಿಗಳು, ಮೈಸೂರಿನ ಕುಂದೂರು ಮಠಾಧ್ಯಕ್ಷರಾದ ಡಾ|| ಇಮ್ಮಡಿ ಶಿವಬಸವ ಸ್ವಾಮಿಗಳು, ಇವರುಗಳ ಸಮ್ಮುಖದಲ್ಲಿ ಸರ್ವಧರ್ಮ ಸಮ್ಮೇಳನವು ಆಯೋಜಿತವಾಗಿತ್ತು. ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾಗಿದ್ದ ಸನ್ಮಾನ್ಯಶ್ರೀ ಟಿ. ಎನ್. ಚತುರ್ವೇದಿ ಅವರು ಸಮ್ಮೇಳನವನ್ನು ಉದ್ಘಾಟಿಸಿದರು. ಧರ್ಮಚಿಂತನೆಯಲ್ಲಿ ರೆ. ಫಾದರ್ ಮೋಹನ್ (ಕ್ರೆಸ್ತಧರ್ಮ), ಶ್ರೀ ಹೆಚ್.ಎಂ. ಮುಜೀಬ್ ಅಹಮದ್ (ಇಸ್ಲಾಂಧರ್ಮ) ಮತ್ತು ಡಾ|| ಸಾ.ಶಿ. ಮರುಳಯ್ಯ (ವೀರಶೈವ ಧರ್ಮ) ಭಾಗವಹಿಸಿದ್ದರೆ, ಕರ್ನಾಟಕ ಸರ್ಕಾರದ ಕಂದಾಯ ಮತ್ತು ಮುಜರಾಯಿ ಸಚಿವರಾಗಿದ್ದ ಶ್ರೀ ಎಂ.ಪಿ. ಪ್ರಕಾಶ್ ಅವರು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿದ್ದ ಶ್ರೀ ಬಿ .ಎಸ್. ಯಡಿಯೂರಪ್ಪ, ಸಚಿವರುಗಳಾಗಿದ್ದ ಶ್ರೀ ಅಂಜನಮೂರ್ತಿ, ಶ್ರೀಮತಿ ಭಾಗೀರಥಿ ಮರುಳಸಿದ್ಧನಗೌಡ, ಶಾಸಕರುಗಳಾಗಿದ್ದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿದ್ದರು.
ಸಂಜೆ 7-00 ಗಂಟೆಗೆ ಕೃತಜ್ಞತಾ ಸಮಾರಂಭವು ಶ್ರೀ ಸುತ್ತೂರು ವೀರಸಿಂಹಾಸನ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಸಮ್ಮುಖದಲ್ಲಿ ಜರುಗಿ, ಪೂಜ್ಯ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಈ ಸಮಾರಂಭದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಶ್ರೀಮಠದ ಗುರುಕುಲದಲ್ಲಿದ್ದ ಹಿರಿಯ ವಿದ್ಯಾರ್ಥಿಗಳಿಗೆ, ಶ್ರೀ ದೇಗುಲ ಮಠದ ಅಭಿವೃದ್ಧಿಗೆ ನೆರವಾದ ಮಹಾದಾನಿಗಳಿಗೆ ಹಾಗೂ ಕನಕಪುರ ತಾಲ್ಲೂಕಿನಲ್ಲಿ ಜನಿಸಿ, ಅಖಿಲ ಭಾರತ ಸೇವಾ ಪದವಿ ಗಳಿಸಿ ಸೇವೆ ಸಲ್ಲಿಸುತ್ತಿರುವ 17 ಜನ ಅಧಿಕಾರಿಗಳಿಗೆ ಶ್ರೀಮಠದಿಂದ ಸನ್ಮಾನಪೂರ್ವಕ ಆಶೀರ್ವಾದವನ್ನು ಅನುಗ್ರಹಿಸಲಾಯಿತು.
ಎರಡು ದಿನಗಳ ಕಾಲ ಜರುಗಿದ ಅಭೂತಪೂರ್ವ ಸಮಾರಂಭದಲ್ಲಿ ಪ್ರತಿದಿನ ಸಂಜೆ ನಾಡಿನ ಹೆಸರಾಂತ ಸಂಗೀತ, ನೃತ್ಯ ಕಲಾವಿದರಿಂದ ಸಂಗೀತ, ನೃತ್ಯ ಕಾರ್ಯಕ್ರಮಗಳು ಆಯೋಜಿತವಾಗಿದ್ದಲ್ಲದೆ, ದಿನಾಂಕ 16.04.2005 ರಂದು ಬೆಂಗಳೂರಿನ ಅಭಿನಯ ಕಲಾವಿದರಿಂದ `ಅಮರಜ್ಯೋತಿ ಅಕ್ಕಮಹಾದೇವಿʼ, ದಿನಾಂಕ 17.04.2005 ರಂದು ಶ್ರೀ ಸಿದ್ಧಗಂಗಾ ಮಠದ ಕಲಾವಿದರಿಂದ `ಶ್ರೀ ಜಗಜ್ಯೋತಿ ಬಸವೇಶ್ವರʼ ನಾಟಕಗಳು ಆಯೋಜಿತವಾಗಿ, ಜನರ ಮನಸೂರೆಗೊಂಡವು. ಶ್ರೀಗಳ ಪಟ್ಟಾಧಿಕಾರ ರಜತ ಮಹೋತ್ಸವದ ನಿಮಿತ್ತ `ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನʼ ವೂ ಏರ್ಪಾಟಾಗಿದ್ದು, ಗ್ರಾಮೀಣ ಕೃಷಿಕರಿಂದ ಮೊದಲ್ಗೊಂಡು ವಿದ್ವಾಂಸರವರೆಗೆ ಎಲ್ಲ ಸ್ತರದ ಜನರಿಗೆ ಉಪಯೋಗವಾಗುವಂತಹ ಅಭೂತಪೂರ್ವ ಸಾಂಸ್ಕೃತಿಕ, ಸಾಹಿತ್ಯಿಕ ಉತ್ಸವ ಇದಾಗಿತ್ತು ಎಂದರೆ ಅತಿಶಯೋಕ್ತಿಯಾಗಲಾರದು.
ಪಟ್ಟಾಧಿಕಾರ ರಜತೋತ್ಸವ ಆಚರಿಸಿಕೊಂಡ ಶ್ರೀಗಳು ತಮ್ಮ ಉತ್ತರಾಧಿಕಾರಿಗಳಾದ ಶ್ರೀ ಮುಮ್ಮಡಿ ಮಹಾಲಿಂಗ ಸ್ವಾಮಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತಾ, ಭಕ್ತರ ಅಭೀಷ್ಟಗಳನ್ನು ಪೂರೈಸುತ್ತಾ, ಸಮಾಜಮುಖಿಯಾದ ಹತ್ತು ಹಲವು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಶ್ರೀಮಠದ ಪುರೋಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ ಕಿರಿಯ ಶ್ರೀಗಳು ಕ್ಯಾನ್ಸರ್ ರೋಗಪೀಡಿತರಾಗಿ ಸಾವು-ಬದುಕಿನ ನಡುವೆ ಹೋರಾಡಿ ದಿನಾಂಕ 21-05-2017 ರಂದು ಲಿಂಗೈಕ್ಯರಾದರು. ಶ್ರೀಮಠದ ಪರಂಪರೆಯನ್ನು ಮುಂದುವರಿಸಲು ಮತ್ತೋರ್ವ ಉತ್ತರಾಧಿಕಾರಿಯ ಅನ್ವೇಷಣೆಯ ಜವಾಬ್ದಾರಿ ಪರಮಪೂಜ್ಯ ಡಾ. ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳಿಗೆ ಬಂದೊದಗಿತು. ಸುತ್ತೂರು, ಸಿದ್ಧಗಂಗೆ ಹಾಗೂ ಇತರ ಮಠಾಧಿಪತಿಗಳ ಸೂಚನೆಯಂತೆ ಹುಣಸೂರು ತಾಲ್ಲೂಕು ಮಾದಹಳ್ಳಿಮಠದ ಕುಟ್ಟವಾಡಿಯ ಉಕ್ಕಿನಕಂತೆ ಶಾಖಾಮಠದ ಅಧಿಪತಿಗಳಾಗಿದ್ದ ಶ್ರೀ ಶ್ರೀ ಕೀರ್ತಿಪ್ರಭುಸ್ವಾಮಿಗಳು ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಆಯ್ದು ಶ್ರೀ ಶ್ರೀ ಚೆನ್ನಬಸವಸ್ವಾಮಿಗಳು ಎಂಬ ನೂತನ ಅಭಿಧಾನದಿಂದ, ನವೆಂಬರ್ 17, 18, 2018 ರಂದು ನಿರಂಜನ ಚರಪಟ್ಟಾಧಿಕಾರ ಮಹೋತ್ಸವವನ್ನು ನೆರವೇರಿಸಿದರು .
ಗೌರವ ಡಾಕ್ಟೊರೇಟ್ ಪದವಿ : ಪರಮಪೂಜ್ಯ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳವರದ್ದು ಮಗುವಿನಂತಹ ಮುಗ್ಧ ಮನಸ್ಸು. ಹಿತಮಿತ ಭಾಷಿಗಳಾದ ಶ್ರೀಗಳು ಅವಿಶ್ರಾಂತವಾಗಿ ದೇಗುಲಮಠದ ತ್ರಿವಿಧ ದಾಸೋಹಗಳಿಗೆ ತಮ್ಮನ್ನು ಕಾಯಾ-ವಾಚಾ-ಮನಸಾ ಸಮರ್ಪಿಸಿಕೊಂಡು ಗ್ರಾಮೀಣ ಪ್ರದೇಶದ ಬಡಮಕ್ಕಳಿಗೆ ಜ್ಞಾನಾನ್ನ ದಾಸೋಹಗಳನ್ನು ನೀಡಿ, ಅವರ ಜೀವನವನ್ನು ಹಸನುಗೊಳಿಸುವ ಕಾರ್ಯದಲ್ಲಿ ಪ್ರವೃತ್ತರಾಗಿದ್ದಾರೆ. ಇದಲ್ಲದೆ ಅವರನ್ನು ಸಂಸ್ಕಾರವಂತರನ್ನಾಗಿ ಮಾಡಿ ಸಮಾಜಕ್ಕೆ ಅರ್ಪಿಸಿದ್ದಾರೆ, ಅರ್ಪಿಸುತ್ತಿದ್ದಾರೆ ಮತ್ತು ಶ್ರೀಮಠಕ್ಕೆ ಆಗಮಿಸುವ ಭಕ್ತರ ಅಭೀಷ್ಟೆಗಳನ್ನು ಪೂರೈಸುತ್ತಾ ಅವರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತಿದ್ದಾರೆ. ಶ್ರೀಗಳು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಮಾಜಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿದ `ಇಂಡಿಯನ್ ವರ್ಚುಯಲ್ ಅಕಾಡೆಮಿ ಫಾರ್ ಪೀಸ್ ಅಂಡ್ ಫೌಂಡೇಶನ್ ʼಸಂಸ್ಥೆಯು ಪೂಜ್ಯರಿಗೆ 2017 ರಲ್ಲಿ ಗೌರವ ಡಾಕ್ಟೊರೇಟ್ ಪದವಿ ಪ್ರದಾನ ಮಾಡಿ ಗೌರವಿಸಿತು. ಯಾವುದೇ ಪ್ರಶಸ್ತಿ- ಪುರಸ್ಕಾರಗಳನ್ನು ಆಶಿಸದ ಶ್ರೀಗಳು ಗೌರವ ಡಾಕ್ಟೊರೇಟ್ ಪ್ರಾಪ್ತಿಯಿಂದ ಹಿಗ್ಗಲೂ ಇಲ್ಲ, ಕುಗ್ಗಲೂ ಇಲ್ಲ. ಶ್ರೀಗಳ ಈ ಭಾವನೆ ಸ್ಥಿತಪ್ರಜ್ಞನ ಸ್ಥಿತಿಯನ್ನು ಸ್ಮರಿಸುವಂತಿತ್ತು. ಆದರೆ ಶ್ರೀಗಳಿಗೆ ಗೌರವ ಡಾಕ್ಟೊರೇಟ್ ಪ್ರಾಪ್ತವಾದದ್ದು, ಶ್ರೀಮಠದ ಭಕ್ತರಿಗೆ, ಶ್ರೀಮಠದ ಎಲ್ಲ ಹಿರಿಯ-ಕಿರಿಯ ವಿದ್ಯಾರ್ಥಿಗಳಿಗೆ ಅಪಾರ ಸಂತಸವನ್ನುಂಟುಮಾಡಿತು. ಈ ಸಂತಸವನ್ನು ಇಮ್ಮಡಿಗೊಳಿಸಿಕೊಳ್ಳಲು ಶ್ರೀದೇಗುಲಮಠದ ಆಶ್ರಯದಲ್ಲಿ ನಡೆಯುತ್ತಿರುವ ಎಲ್ಲ ಶಿಕ್ಷಣ ಸಂಸ್ಥೆಗಳ ನೌಕರರು ಶ್ರೀಮಠದಲ್ಲಿ ಹಾಗೂ ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಹಲವು ಭಾಗಗಳಲ್ಲಿ ಭಕ್ತರು ಅಭಿನಂದನಾ ಸಮಾರಂಭಗಳನ್ನು ಆಯೋಜಿಸುವ ಮೂಲಕ ತಮ್ಮ ಭಕ್ತಿ ಮತ್ತು ಸಂತಸವನ್ನು ವ್ಯಕ್ತಪಡಿಸಿದರು. ಶ್ರೀಮಠದಲ್ಲಿ ಜರುಗಿದ ಅಭಿನಂದನಾ ಸಮಾರಂಭದಲ್ಲಿ ಲೇಖಕನೂ ಭಾಗವಹಿಸಿ, ಶ್ರೀಗಳಿಗೆ ಅಭಿನಂದನಾ ನುಡಿಗಳನ್ನು ಸಮರ್ಪಿಸಿದ ಪ್ರಸಂಗ ಅವಿಸ್ಮರಣೀಯವಾದುದು.
-ಡಾ. ಸಿ. ಶಿವಕುಮಾರಸ್ವಾಮಿ, ಬೆಂಗಳೂರು

Hot this week

ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಜುಲೈ 1 ರಂದು ಪತ್ರಿಕಾ ದಿನಾಚರಣೆ ಹಾಗೂ ವಿಚಾರ ಸಂಕಿರಣ

ಬೆಂಗಳೂರು, ಜೂನ್ 29 (ಕರ್ನಾಟಕ ವಾರ್ತೆ) :ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ...

ಶ್ರೀ ಕೃಷ್ಣ ರುಕ್ಷ್ಮಿಣಿ ಕಾನೂನು ಮಹಾವಿದ್ಯಾಲಯದಲ್ಲಿ ಮೌಲ್ಯೋತ್ಸವ

ಬೆಂಗಳೂರು: ಚಿಕ್ಕಜಾಲದ ಚೊಕ್ಕನಹಳ್ಳಿಯಲ್ಲಿರುವ ಶ್ರೀ ರೇವಣ ಸಿದ್ದೇಶ್ವರ ಎಜುಕೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ...

ಸಂಗೀತಾಸಕ್ತರನ್ನು ರಂಜಿಸಿದ “ನಾದ ನಮನ” ಸಂಗೀತ ಸಂಜೆ

ಬೆಂಗಳೂರು, ಜೂ.27: ಸಾಕಿ ಚಾರಿಟೇಬಲ್ ಟ್ರಸ್ಟ್(Saki Charitable Trust) ನಿಂದ ನಗರದ...

ಎಪಿಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿ ಸಿ.ಎ ಡಾ. ವಿಷ್ಣು ಭರತ್ ಆಲಂಪಳ್ಳಿ ಪುನರಾಯ್ಕೆ

ಬೆಂಗಳೂರು,ಜೂ.29: ನಗರದ 91 ವರ್ಷಗಳ ಹಳೆಯ ಎಪಿಎಸ್ ಶಿಕ್ಷಣ ಸಂಸ್ಥೆಗಳಿಗೆ ನೂತನ...

Topics

ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಜುಲೈ 1 ರಂದು ಪತ್ರಿಕಾ ದಿನಾಚರಣೆ ಹಾಗೂ ವಿಚಾರ ಸಂಕಿರಣ

ಬೆಂಗಳೂರು, ಜೂನ್ 29 (ಕರ್ನಾಟಕ ವಾರ್ತೆ) :ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ...

ಶ್ರೀ ಕೃಷ್ಣ ರುಕ್ಷ್ಮಿಣಿ ಕಾನೂನು ಮಹಾವಿದ್ಯಾಲಯದಲ್ಲಿ ಮೌಲ್ಯೋತ್ಸವ

ಬೆಂಗಳೂರು: ಚಿಕ್ಕಜಾಲದ ಚೊಕ್ಕನಹಳ್ಳಿಯಲ್ಲಿರುವ ಶ್ರೀ ರೇವಣ ಸಿದ್ದೇಶ್ವರ ಎಜುಕೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ...

ಸಂಗೀತಾಸಕ್ತರನ್ನು ರಂಜಿಸಿದ “ನಾದ ನಮನ” ಸಂಗೀತ ಸಂಜೆ

ಬೆಂಗಳೂರು, ಜೂ.27: ಸಾಕಿ ಚಾರಿಟೇಬಲ್ ಟ್ರಸ್ಟ್(Saki Charitable Trust) ನಿಂದ ನಗರದ...

ಎಪಿಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿ ಸಿ.ಎ ಡಾ. ವಿಷ್ಣು ಭರತ್ ಆಲಂಪಳ್ಳಿ ಪುನರಾಯ್ಕೆ

ಬೆಂಗಳೂರು,ಜೂ.29: ನಗರದ 91 ವರ್ಷಗಳ ಹಳೆಯ ಎಪಿಎಸ್ ಶಿಕ್ಷಣ ಸಂಸ್ಥೆಗಳಿಗೆ ನೂತನ...

ಶ್ರೀರಾಮ ಮಂದಿರದ ಹುಂಡಿ ಹಣ ದುರುಪಯೋಗ; ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಿ !

ಅಯೋಧ್ಯೆಯ ಶ್ರೀರಾಮ ಮಂದಿರವು ಕೇವಲ ಒಂದು ಧಾರ್ಮಿಕ ಸ್ಥಳವಲ್ಲ, ಅದು ಜಗತ್ತಿನಾದ್ಯಂತ...

ರೋಟರಿ ಜಿಲ್ಲೆ 3191ರ ಜಿಲ್ಲಾ ಗವರ್ನರ್ ಆಗಿ ಡಾ. ಅನಿಲ್ ಗುಪ್ತ ಪದಗ್ರಹಣ (Dr. Anil Gupta sworn in as District Governor of Rotary District 3191)

ಬೆಂಗಳೂರು, ಜೂ29: ಉದ್ಯಮಿ ಹಾಗೂ ದೀರ್ಘಕಾಲದ ರೋಟೇರಿಯನ್ ಡಾ. ಅನಿಲ್ ಗುಪ್ತ...

ಶ್ರೀರಾಮಮಂದಿರದ ಹುಂಡಿ ಹಣ ದುರುಪಯೋಗ; ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಿ !

ಅಯೋಧ್ಯೆಯ ಶ್ರೀರಾಮ ಮಂದಿರವು(Ayodhya Sree Ram Temple) ಕೇವಲ ಒಂದು ಧಾರ್ಮಿಕ...

Related Articles