

ಬೆಂಗಳೂರು : “ ಸಮಾಜದ ಅಭಿವೃದ್ಧಿ, ರಾಷ್ಟ್ರ ನಿರ್ಮಾಣ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಸಂರಕ್ಷಣೆಯಲ್ಲಿ ಸಾಮಾಜಿಕ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಸರ್ಕಾರ ನೀತಿಗಳನ್ನು ರೂಪಿಸಬಹುದು ಹಾಗೂ ಸಂಪನ್ಮೂಲಗಳನ್ನು ಒದಗಿಸಬಹುದು. ಆದರೆ ಸಮಾಜದಲ್ಲಿ ಜಾಗೃತಿ, ಮೌಲ್ಯಗಳು ಹಾಗೂ ಜನರ ಭಾಗವಹಿಸುವಿಕೆಯನ್ನು ಬೆಳೆಸುವ ಕಾರ್ಯವನ್ನು ಸಾಮಾಜಿಕ ಸಂಸ್ಥೆಗಳೇ ಮಾಡಬೇಕಾಗಿದೆ” ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ(Hon’ble Governor of Karnataka, Thaawarchand Gehlot, ) ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ಅವರು ಭಾನುವಾರ ಬೆಂಗಳೂರಿನ ಅರಮನೆ ಮೈದಾನದ ಗ್ರ್ಯಾಂಡ್ ಕ್ಯಾಸಲ್‌ನಲ್ಲಿ ಅಖಿಲ ಭಾರತ ಜಂಗೀಡ್ ಬ್ರಾಹ್ಮಣ ಮಹಾಸಭಾ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸಾಮಾಜಿಕ ವಿಚಾರ ಸಂಕಿರಣ ಮತ್ತು ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
“ಭಾರತೀಯ ನಾಗರಿಕತೆಯು ತನ್ನ ಸಾಂಸ್ಕೃತಿಕ ಮೌಲ್ಯಗಳು, ಜ್ಞಾನ ಪರಂಪರೆ ಹಾಗೂ ಸಾಮಾಜಿಕ ಸಾಮರಸ್ಯದ ಆಧಾರದ ಮೇಲೆ ವಿಶ್ವಕ್ಕೆ ದಾರಿದೀಪವಾಗಿದೆ. ‘ಒಟ್ಟಾಗಿ ನಡೆಯೋಣ, ಒಟ್ಟಾಗಿ ಯೋಚಿಸೋಣ ಹಾಗೂ ಸಮಾಜ ಮತ್ತು ರಾಷ್ಟ್ರದ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸೋಣ’ ಎಂಬ ಭಾರತೀಯ ಪರಂಪರೆಯ ಸಂದೇಶವೇ ಸಾಮಾಜಿಕ ಸಂಘಟನೆಯ ಆತ್ಮವಾಗಿದೆ” ಎಂದು ಹೇಳಿದರು.
“ಜಂಗೀಡ್ ಬ್ರಾಹ್ಮಣ ಸಮುದಾಯವು ಭಾರತೀಯ ಕರಕುಶಲ ಕಲೆ, ವಾಸ್ತುಶಿಲ್ಪ, ಶಿಲ್ಪಕಲೆ ಹಾಗೂ ಸಾಂಸ್ಕೃತಿಕ ಪರಂಪರೆಯ ನಿರ್ಮಾಣದಲ್ಲಿ ಅಮೂಲ್ಯ ಕೊಡುಗೆ ನೀಡಿದೆ. ಈ ಶ್ರೀಮಂತ ಪರಂಪರೆಯನ್ನು ಆಧುನಿಕ ವಿಜ್ಞಾನ, ಡಿಜಿಟಲ್ ತಂತ್ರಜ್ಞಾನ, ಸಂಶೋಧನೆ ಹಾಗೂ ನವೀನತೆಯೊಂದಿಗೆ ಸಂಯೋಜಿಸುವ ಅಗತ್ಯವಿದೆ” ಎಂದರು.
ಮಹಿಳಾ ಸಬಲೀಕರಣವಿಲ್ಲದೆ ಯಾವುದೇ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ರಾಜ್ಯಪಾಲರು, ಮಹಿಳೆಯರಿಗೆ ಶಿಕ್ಷಣ, ಸುರಕ್ಷತೆ ಹಾಗೂ ಸಮಾನ ಅವಕಾಶಗಳನ್ನು ಕಲ್ಪಿಸುವ ಜೊತೆಗೆ ಸಾಮಾಜಿಕ ಸಂಸ್ಥೆಗಳಲ್ಲಿ ಅವರ ಪ್ರಾತಿನಿಧ್ಯವನ್ನು ಹೆಚ್ಚಿಸಬೇಕು. ಕೇಂದ್ರ ಸರ್ಕಾರದ “ಬೇಟಿ ಬಚಾವೋ, ಬೇಟಿ ಪಡಾವೋ” ಯೋಜನೆಯ ಉದ್ದೇಶಗಳನ್ನು ಸಮಾಜದ ಪ್ರತಿಯೊಂದು ಹಂತದಲ್ಲೂ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಕರೆ ನೀಡಿದರು.
ಜಂಗೀಡ್ ಬ್ರಾಹ್ಮಣ ಸಮುದಾಯ ಸೇರಿದಂತೆ ಸಾಂಪ್ರದಾಯಿಕ ಕುಶಲಕರ್ಮಿಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಆರಂಭಿಸಿರುವ “ಪಿಎಂ ವಿಶ್ವಕರ್ಮ ಯೋಜನೆ”ಯ ಸದುಪಯೋಗವನ್ನು ಪಡೆದು ಕೌಶಲ್ಯಾಭಿವೃದ್ಧಿ, ಆಧುನಿಕ ತಂತ್ರಜ್ಞಾನ, ಡಿಜಿಟಲ್ ವ್ಯವಹಾರ ಹಾಗೂ ಉದ್ಯಮಶೀಲತೆಯಲ್ಲಿ ಮುನ್ನಡೆಯಬೇಕು. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ ಸಂಕಲ್ಪವನ್ನು ಉಲ್ಲೇಖಿಸಿದ ಅವರು, ಯುವಜನರು ಉದ್ಯೋಗ ಅರಸುವವರಾಗಿಯೇ ಉಳಿಯದೆ ಉದ್ಯೋಗ ಸೃಷ್ಟಿಸುವವರಾಗಬೇಕು. ಕೌಶಲ್ಯಾಭಿವೃದ್ಧಿ, ನವೋದ್ಯಮ, ಕೃತಕ ಬುದ್ಧಿಮತ್ತೆ, ಡಿಜಿಟಲ್ ತಂತ್ರಜ್ಞಾನ ಹಾಗೂ ಉದ್ಯಮಶೀಲತೆ ನವಭಾರತದ ಪ್ರಮುಖ ಶಕ್ತಿಗಳಾಗಿವೆ ಎಂದರು.
ತಾಂತ್ರಿಕ ಪ್ರಗತಿಯು ನೈತಿಕ ಮೌಲ್ಯಗಳೊಂದಿಗೆ ಸಾಗಿದಾಗ ಮಾತ್ರ ಅದು ಅರ್ಥಪೂರ್ಣವಾಗುತ್ತದೆ. ಮೌಲ್ಯಗಳಿಲ್ಲದ ಅಭಿವೃದ್ಧಿ ಶಾಶ್ವತವಾಗಿರುವುದಿಲ್ಲ ಎಂದು ತಿಳಿಸಿದ ಅವರು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ನೀಡುವಲ್ಲಿ ಸಮಾಜವು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ರಾಷ್ಟ್ರೀಯ ಹಾಗೂ ಸಾಂಸ್ಕೃತಿಕ ಜವಾಬ್ದಾರಿಯಾಗಿದೆ ಎಂದು ತಿಳಿಸಿದ ರಾಜ್ಯಪಾಲರು, ಜಲ ಸಂರಕ್ಷಣೆ, ಮರ ನೆಡುವುದು, ಪ್ಲಾಸ್ಟಿಕ್ ಮುಕ್ತ ಜೀವನ ಹಾಗೂ ಸ್ವಚ್ಛತೆಯನ್ನು ಸಾಮಾಜಿಕ ಚಳವಳಿಯನ್ನಾಗಿ ರೂಪಿಸುವ ಅಗತ್ಯವಿದೆ ಎಂದರು.
ಅಖಿಲ ಭಾರತ ಜಂಗೀಡ್ ಬ್ರಾಹ್ಮಣ ಮಹಾಸಭೆಯು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ತರಬೇತಿ, ಪರಿಸರ ಸಂರಕ್ಷಣೆ, ಜಲ ಸಂರಕ್ಷಣೆ ಹಾಗೂ ಭಾರತೀಯ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಕರಕುಶಲ ವಸ್ತುಗಳ ಸಂರಕ್ಷಣೆಗೆ ರಾಷ್ಟ್ರೀಯ ಮಟ್ಟದ ವಿಶೇಷ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾಲುದಾರನಾಗಬೇಕೆಂದು ಅವರು ಆಶಯ ವ್ಯಕ್ತಪಡಿಸಿದರು.
ಭಾರತದ ನಿಜವಾದ ಶಕ್ತಿ ಅದರ ವೈವಿಧ್ಯತೆಯಲ್ಲಿದ್ದು, ಹಲವು ಭಾಷೆಗಳು, ಹಲವು ಸಂಪ್ರದಾಯಗಳು ಹಾಗೂ ಹಲವು ನಂಬಿಕೆಗಳಿದ್ದರೂ ಒಂದೇ ರಾಷ್ಟ್ರ ಮತ್ತು ಒಂದೇ ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ಒಂದಾಗಿದ್ದೇವೆ. “ವಸುಧೈವ ಕುಟುಂಬಕಂ” ಎಂಬ ಭಾರತೀಯ ಸಂದೇಶವು ಇಂದು ವಿಶ್ವಕ್ಕೆ ಸಾಮರಸ್ಯ, ಸಹಬಾಳ್ವೆ ಹಾಗೂ ಮಾನವೀಯತೆಯ ದಾರಿಯನ್ನು ತೋರಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ, ಶಿಕ್ಷಣ, ಉದ್ಯಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಸಮಾಜ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಅವರು ನೀಡಿರುವ ಕೊಡುಗೆಯನ್ನು ರಾಜ್ಯಪಾಲರು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ಜಂಗೀಡ್ ಬ್ರಾಹ್ಮಣ ಮಹಾಸಭಾದ ಮುಖ್ಯ ಪೋಷಕರಾದ ಭನ್ವರ್ ಲಾಲ್ ಕುಲ್ರಿಯಾ, ರಾಷ್ಟ್ರೀಯ ಅಧ್ಯಕ್ಷ ರಾಂಪಾಲ್ ಶರ್ಮಾ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಮಹಾಸಭೆಯ ಪದಾಧಿಕಾರಿಗಳು, ಪ್ರತಿನಿಧಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
