ಯುಕೆಪಿ ನಿವೇಶನ ಅಕ್ರಮ: ತಪ್ಪಿತಸ್ಥರನ್ನು ಮುಲಾಜಿಲ್ಲದೆ ಜೈಲಿಗಟ್ಟಿ – ಸಚಿವ ಚಲುವರಾಯಸ್ವಾಮಿ ಖಡಕ್ ಎಚ್ಚರಿಕೆ*

ಕೋಲ್ಹಾರ ಪುನರ್ವಸತಿ ಕೇಂದ್ರದ 1,117 ಅಕ್ರಮ ನಿವೇಶನ – ಅಕ್ಟೋಬರ್ ಅಂತ್ಯದೊಳಗೆ ಇತ್ಯರ್ಥಕ್ಕೆ ಗಡುವು, ಸಿಐಡಿ ತನಿಖೆ ಚುರುಕುಗೊಳಿಸಲು ಸೂಚನೆ
 
ಬೆಂಗಳೂರು: ಯುಕೆಪಿ (ಕೃಷ್ಣಾ ಮೇಲ್ದಂಡೆ ಯೋಜನೆ) ಹಂತ-1 ಮತ್ತು 2ರಲ್ಲಿ ಮುಳುಗಡೆ ಸಂತ್ರಸ್ತರಿಗೆ ಹಂಚಿಕೆ ಮಾಡಿರುವ ನಿವೇಶನಗಳಲ್ಲಿ ನಡೆದಿರುವ ಅಕ್ರಮಗಳಲ್ಲಿ ಭಾಗಿಯಾಗಿರುವವರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ. ಸಿಐಡಿ (ಹಿಂದಿನ ಸಿಒಡಿ) ತನಿಖೆಯನ್ನು ವೇಗಗೊಳಿಸಿ, ಅಕ್ರಮಕ್ಕೆ ಸಹಕರಿಸಿದವರನ್ನು ಮುಲಾಜಿಲ್ಲದೆ ಜೈಲಿಗಟ್ಟಿ ಎಂದು ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ(N.Chaluvarayaswamy) ಖಡಕ್ ಸೂಚನೆ ನೀಡಿದರು.
 
ವಿಕಾಸಸೌಧದ ಕೊಠಡಿ ಸಂಖ್ಯೆ 317ರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-1 ಮತ್ತು 2ರಲ್ಲಿ ನಿರ್ಮಿಸಿ ಹಸ್ತಾಂತರಿಸಿರುವ ಕೋಲ್ಹಾರ ಪುನರ್ವಸತಿ ಕೇಂದ್ರಕ್ಕೆ ಸಂಬಂಧಿಸಿದಂತೆ ಮಂಗಳವಾರ ನಡೆದ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಹಲವು ನಿರ್ದೇಶನ ನೀಡಿದರು.
 
ಒಬ್ಬರಿಗೆ ಎರಡೆರಡು-ಮೂರು ನಿವೇಶನ ಹಂಚಿಕೆ ಮಾಡಿರುವುದು, ನಕಲಿ ದಾಖಲೆ ಸೃಷ್ಟಿಸಿ ಅನರ್ಹರಿಗೆ ನಿವೇಶನ ನೀಡಿರುವ ಪ್ರಕರಣಗಳನ್ನು ಕಾನೂನಿನ ಮೂಲಕವೇ ಎದುರಿಸಬೇಕು. ತಪ್ಪು ಮಾಡಿದವರ ಮೇಲೆ ಎಫ್‌ಐಆರ್ ದಾಖಲಿಸಿ. ಏನೇನು ಪರಿಶೀಲನೆ ಮಾಡಿಸಬೇಕೋ ಮಾಡಿಸಿ, ನನಗೆ ಅದೆಲ್ಲ ಮುಖ್ಯವಲ್ಲ, ಸ್ಪಷ್ಟ ಪರಿಹಾರ ಬೇಕು. ತನಿಖಾ ಸಂಸ್ಥೆಗಳು ಯಾವ ಮಾನದಂಡದಲ್ಲಿ ತನಿಖೆ ನಡೆಸುತ್ತಿವೆ ಎಂಬ ಮಾಹಿತಿ ಒದಗಿಸಬೇಕು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
 
ಪ್ರತಿಯೊಂದಕ್ಕೂ ಉತ್ತರದಾಯಿತ್ವ (ಅಕೌಂಟೆಬಿಲಿಟಿ) ಇರಬೇಕು. ಅಕ್ಟೋಬರ್ ಅಂತ್ಯದೊಳಗೆ ತಾಂತ್ರಿಕ ಸಮಸ್ಯೆಗಳು ಇತ್ಯರ್ಥವಾಗಬೇಕು. ಮುಂದಿನ ಸಭೆಯ ವೇಳೆಗೆ ಗೊಂದಲಗಳಿಲ್ಲದೆ ಸಮಸ್ಯೆಗಳು ಬಗೆಹರಿದಿರಬೇಕು. ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಸಂಬಂಧ ಅಭಿವೃದ್ಧಿಪಡಿಸಿದ ಬಡಾವಣೆಗಳ (ಲೇಔಟ್) ನಕ್ಷೆ ನೀಡಿ, ಅಲ್ಲಿನ ಸೌಲಭ್ಯಗಳ ಕುರಿತು 3 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
 
ಇ-ಆಸ್ತಿ ಸೃಜಿಸಲು ಅಡ್ಡಿಯಾಗಿರುವ ತಾಂತ್ರಿಕ ಸಮಸ್ಯೆಗಳ ಕುರಿತು ಲಿಖಿತ ಮಾಹಿತಿ ಸಲ್ಲಿಸಿ. 15 ದಿನಗಳಲ್ಲಿ ಈ ಸಂಬಂಧ ಬೋರ್ಡ್ ರಚನೆಗೊಳ್ಳಲಿದ್ದು, ಅದರ ಮುಂದೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
 
ನಿವೇಶನಗಳ ಹಕ್ಕುಪತ್ರದೊಂದಿಗೆ (ಆರ್.ಸಿ) ಅಭಿವೃದ್ಧಿಪಡಿಸಿದ ಲೇಔಟ್ ಅನ್ನೇ ನೀಡಬೇಕು. ಪ್ರಸ್ತುತ ತಾಲೂಕು ಕೇಂದ್ರವಾಗಿರುವ ಕೋಲ್ಹಾರದಲ್ಲಿ ಅತಿ ಹೆಚ್ಚು ಆರ್.ಸಿ.ಗಳಿವೆ. ಹೀಗಾಗಿ ಗ್ರಾಮ ಪಂಚಾಯಿತಿ ಮತ್ತು ಪಟ್ಟಣ ಪಂಚಾಯಿತಿಗೆ ಸ್ಪಷ್ಟ ನಿರ್ದೇಶನ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
 
ತಾಲೂಕು ಪಂಚಾಯಿತಿ ಇಒ ಅವರನ್ನು ಪ್ರತ್ಯೇಕವಾಗಿ ತರಾಟೆಗೆ ತೆಗೆದುಕೊಂಡ ಸಚಿವರು, “ಇಂತಹ ಸಮಸ್ಯೆಗಳನ್ನು ಪರಿಹರಿಸಲು ಇಷ್ಟು ವರ್ಷ ಬೇಕಿತ್ತಾ? ಪ್ರಾದೇಶಿಕ ಆಯುಕ್ತರೊಂದಿಗೆ ಸಮನ್ವಯ ಸಾಧಿಸಿ ಕೂಡಲೇ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ. ತಿಂಗಳೊಳಗೆ ಸಮಸ್ಯೆ ಇತ್ಯರ್ಥವಾಗದಿದ್ದರೆ ನಿಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
 
ವಿಡಿಯೋ ಕರೆ ಮೂಲಕ ಸೂಚನೆ
 
ಸಭೆಯ ಮಧ್ಯೆಯೇ ವಿಡಿಯೋ ಕರೆ ಮೂಲಕ ಪ್ರಾದೇಶಿಕ ಆಯುಕ್ತೆ ಜಾನಕಿ ಅವರೊಂದಿಗೆ ಮಾತನಾಡಿದ ಸಚಿವರು, “ತಕ್ಷಣವೇ ಸಿಐಡಿ ಜೊತೆ ಮಾತನಾಡಿ ಲಿಖಿತ ಪತ್ರ ಬರೆಯಿರಿ. ಈವರೆಗಿನ ತನಿಖೆಯ ಪ್ರಗತಿ ಪರಿಶೀಲಿಸಿ. ಅಕ್ರಮ ಎಸಗಿದವರು ಮತ್ತು ಅವರಿಗೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ. ಅನಧಿಕೃತವಾಗಿ ನಿವೇಶನ ಪಡೆದುಕೊಂಡಿರುವವರಿಂದ ಆದಷ್ಟು ಬೇಗ ಜಾಗ ತೆರವುಗೊಳಿಸಿ” ಎಂದು ನಿರ್ದೇಶಿಸಿದರು.
 
“ನಾರಾಯಣಪುರ ವ್ಯಾಪ್ತಿಯಲ್ಲಿನ ಅರ್ಹರಿಗೆ ಕೋಲ್ಹಾರದಲ್ಲಿ ನಿವೇಶನ ನೀಡಿದರೆ ಹೇಗೆ?” ಎಂದು ಕೆಂಡಾಮಂಡಲಗೊಂಡ ಸಚಿವರು, “ಕಳೆದ 15 ವರ್ಷಗಳಿಂದ ಇಂತಹ ಸಮಸ್ಯೆಗಳನ್ನು ಜೀವಂತವಾಗಿಟ್ಟಿದ್ದೀರಿ. ಅಕ್ಟೋಬರ್ ಅಂತ್ಯದೊಳಗೆ ಯಾವುದೇ ದೂರನ್ನು ಹೊತ್ತು ಶಾಸಕ ಶಿವಾನಂದ ಪಾಟೀಲ್ ಅವರು ನನ್ನ ಬಳಿ ಬರುವಂತಾಗಬಾರದು. ಅಪ್ಪಿತಪ್ಪಿ ಶಾಸಕರು ಇದೇ ಸಮಸ್ಯೆಗಳನ್ನು ಹಿಡಿದುಕೊಂಡು ಬಂದರೆ ಅಧಿಕಾರಿಗಳೇ ನೇರ ಹೊಣೆ ಹೊರಬೇಕಾಗುತ್ತದೆ ಹಾಗೂ ಮನೆಗೆ ಹೋಗಬೇಕಾಗುತ್ತದೆ” ಎಂದು ಎಚ್ಚರಿಸಿದರು.
 
ಬೋರ್ಡ್ ಸಭೆ ಕಡ್ಡಾಯ
 
ಮುಂದಿನ ಒಂದು ತಿಂಗಳೊಳಗೆ ಇಲಾಖೆ ವ್ಯಾಪ್ತಿಯ ನಾಲ್ಕು ನಿಗಮಗಳ ಮಂಡಳಿ (ಬೋರ್ಡ್) ಅಸ್ತಿತ್ವಕ್ಕೆ ಬರಲಿದೆ. ಪ್ರತಿ 3 ತಿಂಗಳಿಗೊಮ್ಮೆ ಕಡ್ಡಾಯವಾಗಿ ಬೋರ್ಡ್ ಸಭೆ ನಡೆಸಬೇಕು ಎಂದು ಸೂಚಿಸಿದರು.
 
ಸಭೆಯಲ್ಲಿ ಶಾಸಕ ಶಿವಾನಂದ ಪಾಟೀಲ್, ನೀರಾವರಿ ಇಲಾಖೆ ಕಾರ್ಯದರ್ಶಿ ಕುಲಕರ್ಣಿ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
 
ಏನಿದು ವಿವಾದ?
 
ಈ ಯೋಜನೆಯಡಿ ಒಟ್ಟು 176 ಗ್ರಾಮಗಳು ಮುಳುಗಡೆಯಾಗಿದ್ದವು. ನಾರಾಯಣಪುರ ಜಲಾಶಯದ ಹಿನ್ನೀರಿನಲ್ಲಿ 40 ಗ್ರಾಮಗಳು ಮತ್ತು ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ 136 ಗ್ರಾಮಗಳು ಮುಳುಗಡೆಯಾಗಿದ್ದವು. 3,435 ಸಂತ್ರಸ್ತ ಕುಟುಂಬಗಳಿಗಾಗಿ 5,664 ನಿವೇಶನಗಳ ಪುನರ್ವಸತಿ ಕೇಂದ್ರವನ್ನು 1995ರಲ್ಲಿ ರಚಿಸಲಾಗಿತ್ತು.
 
ಆದರೆ ಇದರಲ್ಲಿ 1,117 ನಿವೇಶನಗಳು ಕಾನೂನುಬಾಹಿರವಾಗಿ ಹಂಚಿಕೆಯಾಗಿದ್ದವು. ಮಧ್ಯವರ್ತಿಗಳು ನಕಲಿ ದಾಖಲೆ ಸೃಷ್ಟಿಸಿ ಅನರ್ಹರಿಗೆ ನಿವೇಶನ ನೀಡಿದ್ದರು. 123 ನಿವೇಶನಗಳು ಇಬ್ಬಿಬ್ಬರಿಗೆ (ಡಬಲ್) ಹಂಚಿಕೆಯಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2016ರಲ್ಲಿ ಸಿಒಡಿ ತನಿಖೆ ನಡೆದು 8 ಮಂದಿ ಅಧಿಕಾರಿಗಳ ಮೇಲೆ ಚಾರ್ಜ್ ಶೀಟ್ ಸಹ ಸಲ್ಲಿಕೆಯಾಗಿತ್ತು. ಇದರಲ್ಲಿ ಎಸ್.ಎಲ್.ಒ ಮತ್ತು ಆರ್.ಒ ಹಂತದ ಅಧಿಕಾರಿಗಳೂ ಅಕ್ರಮ ಎಸಗಿದ್ದರು. ಆದರೆ ತನಿಖೆ ಇಂದಿಗೂ ಪೂರ್ಣಗೊಂಡಿಲ್ಲ.
 

 

Hot this week

ವಿಧಾನಸೌಧದ ಮೆಟ್ಟಿಲುಗಳ ಮೇಲೆ ‘ಉರ್ದು ಉತ್ಸವ’ ಕನ್ನಡಕ್ಕೆ ಮಾಡುವ ದ್ರೋಹ

‘ವಿಶ್ವ ಉರ್ದು ದಿನ’(World Urdu Day) ವೆಂದು (ಕವಿ ಮತ್ತು ತತ್ವಜ್ಞಾನಿ ಅಲ್ಲಮ...

ಕರಡು ಮತದಾರರ ಪಟ್ಟಿಯಲ್ಲಿ ಕಾಣೆಯಾದ ಹೆಸರುಗಳು: ಚುನಾವಣಾ ಆಯೋಗದಿಂದ ವಿಶೇಷ ಪರಿಶೀಲನೆ

ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಬಳಿಕ ಮತದಾರರ ಪಟ್ಟಿಯಿಂದ...

‘ಒಂದು ದೇಶ, ಒಂದು ಚುನಾವಣೆ’: ಸುಪ್ರೀಂ ಕೋರ್ಟ್‌ನೊಂದಿಗೆ ನಿಗದಿಯಾಗಿದ್ದ ಸಭೆ ರದ್ದು

ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಉದ್ದೇಶದ...

ಪಶುವೈದ್ಯರ ನೇಮಕಾತಿ ಪ್ರಶ್ನೆಪತ್ರಿಕೆ ಸೋರಿಕೆ

ಪಶುವೈದ್ಯರ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ಮುಂದುವರಿದಂತೆ,...

Topics

ವಿಧಾನಸೌಧದ ಮೆಟ್ಟಿಲುಗಳ ಮೇಲೆ ‘ಉರ್ದು ಉತ್ಸವ’ ಕನ್ನಡಕ್ಕೆ ಮಾಡುವ ದ್ರೋಹ

‘ವಿಶ್ವ ಉರ್ದು ದಿನ’(World Urdu Day) ವೆಂದು (ಕವಿ ಮತ್ತು ತತ್ವಜ್ಞಾನಿ ಅಲ್ಲಮ...

ಕರಡು ಮತದಾರರ ಪಟ್ಟಿಯಲ್ಲಿ ಕಾಣೆಯಾದ ಹೆಸರುಗಳು: ಚುನಾವಣಾ ಆಯೋಗದಿಂದ ವಿಶೇಷ ಪರಿಶೀಲನೆ

ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಬಳಿಕ ಮತದಾರರ ಪಟ್ಟಿಯಿಂದ...

‘ಒಂದು ದೇಶ, ಒಂದು ಚುನಾವಣೆ’: ಸುಪ್ರೀಂ ಕೋರ್ಟ್‌ನೊಂದಿಗೆ ನಿಗದಿಯಾಗಿದ್ದ ಸಭೆ ರದ್ದು

ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಉದ್ದೇಶದ...

ಪಶುವೈದ್ಯರ ನೇಮಕಾತಿ ಪ್ರಶ್ನೆಪತ್ರಿಕೆ ಸೋರಿಕೆ

ಪಶುವೈದ್ಯರ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ಮುಂದುವರಿದಂತೆ,...

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಗಾಂಧಿ ಜಯಂತಿ ಆಚರಣೆ

ಬೆಂಗಳೂರು: 157 ನೇ ಗಾಂಧಿ ಜಯಂತಿ(Gandhi Jayanthi) ಅಂಗವಾಗಿ ವಾರ್ತಾ ಮತ್ತು...

Related Articles