ಅಪಾರ ಜೀವವೈವಿಧ್ಯದ ನೆಲೆ ಪಶ್ಚಿಮಘಟ್ಟ. ದೇಶದ ಶೇಕಡ 40ರಷ್ಟು ಭೂಪ್ರದೇಶಕ್ಕೆ ನೀರುಣಿಸುವ ಅನೇಕ ನದಿಗಳಿಗೆ ಅದುವೇ ಮೂಲ. ಮುಂಗಾರು ಮಾರುತಗಳನ್ನು ತಡೆದು ಮಳೆ ಸುರಿಯಲು ಕಾರಣವಾಗುವುದು ಅದರ ಪ್ರಮುಖ ಕಾಯಕ. 2012ರಿಂದಲೇ ಈ ಪಶ್ಚಿಮಘಟ್ಟ ವಿಶ್ವಪರಂಪರೆಯ ತಾಣವೆಂಬ ಗೌರವ ಪಡೆದಿದೆ. ಇಲ್ಲಿನ ಹೆಚ್ಚಿನ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಸಾವಿರಾರು ಪ್ರಭೇದದ ವನ್ಯ ಸಂಕುಲಗಳ ಮನೆಯಿದು. 325ಕ್ಕೂ ಹೆಚ್ಚು ಅಳಿವಿನಂಚಿನ ಪ್ರಾಣಿಗಳು, ಅಪಾರ ಪ್ರಮಾಣದ ಪಕ್ಷಿವೈವಿಧ್ಯದ ವಾಸಸ್ಥಾನ. ವಿನಾಶದಂಚಿನಲ್ಲಿರುವ ಪುನುಗಿನ ಬೆಕ್ಕು, ಸಿಂಗಳೀಕದಂಥ 139 ಸಸ್ತನಿಗಳು ಇಲ್ಲಿವೆ. ಕರ್ನಾಟಕದ ಪಶ್ಚಿಮಘಟ್ಟವು 5 ಸಾವಿರಕ್ಕೂ ಹೆಚ್ಚು ಆನೆಗಳು, ದೇಶದ ವ್ಯಾಘ್ರಗಳ ಸಂಖ್ಯೆಯ ಶೇಕಡ 10ರಷ್ಟು ಹುಲಿಗಳಿಗೆ ಆಶ್ರಯ ನೀಡಿದೆ. ಬಹುದೊಡ್ಡ ಸಂಖ್ಯೆಯ ಕೀಟವೈವಿಧ್ಯ, ಗಿಡಮೂಲಿಕೆಗಳು ಇಲ್ಲಿವೆ.
ಇಂಥ ಪಶ್ಚಿಮಘಟ್ಟದ ಒಡಲು ದುರ್ಬಲಗೊಳಿಸುವ, ಲಕ್ಷಾಂತರ ಮರಗಳನ್ನು ನಾಶಮಾಡುವ ಹಾಗೂ ಆಮೂಲಕ ಪರಿಸರ ಸಮತೋಲನವನ್ನೇ ಅಲುಗಾಡಿಸುವ ಕೆಲಸ ಆಗುತ್ತಲೇ ಇದೆ. ಈ ಪರಿಸರವು ಜೀವಿಗಳ ಬದುಕಿಗೇನೆಲ್ಲ ಕೊಟ್ಟಿದೆ ಎಂಬುದನ್ನು ಅರ್ಥಮಾಡಿಕೊಳ್ಳಲಾರದ ಆಡಳಿತಗಾರರ ‘ಜಾಣನಿಲುವು’ ಮನುಕುಲದ ಭವಿಷ್ಯಕ್ಕೇ ಅಪಾಯ ತಂದೊಡ್ಡುತ್ತಿದೆ. ಇದೇ ಪಶ್ಚಿಮಘಟ್ಟದಲ್ಲಿ ಎತ್ತಿನ ಹೊಳೆ ತಿರುವು ಯೋಜನೆ ಹತ್ತಾರು ವರ್ಷಗಳಿಂದ ಕುಂಟುತ್ತಿದೆ. ₹6 ಸಾವಿರ ಕೋಟಿಯಿಂದ ಶುರುವಾದ ವೆಚ್ಚ ₹20 ಸಾವಿರ ಕೋಟಿಗೆ ತಲುಪಿದೆ. ‘ಇದೊಂದು ವಿಫಲ ನೀರಾವರಿ ಯೋಜನೆ, ಪುನಃ ನದಿತಿರುವು ಯೋಜನೆ ಕೈಗೊಳ್ಳುವ ಹುಚ್ಚು ಸಾಹಸ ಮಾಡಬೇಡಿ’ ಎಂದು ಸರ್ಕಾರಕ್ಕೆ ವಿಜ್ಞಾನಿಗಳು ಸಲಹೆ ನೀಡಿದ್ದಾರೆ ಕೂಡ.
ನೆನಪಿಡಿ, ಉತ್ತರಕನ್ನಡ ಜಿಲ್ಲೆಯೊಂದರಲ್ಲಿಯೇ 20ಕ್ಕೂ ಹೆಚ್ಚು ಬೃಹತ್ ಯೋಜನೆಗಳನ್ನು ತರುವ ಪ್ರಸ್ತಾಪವಿದೆ. ಅವೇನಾದರೂ ಜಾರಿಯಾದರೆ- ಈಗಾಗಲೇ ನೆಲ ಕುಸಿಯತೊಡಗಿರುವ, ಕೈಗಾ ಪರಮಾಣು ಸ್ಥಾವರವಿರುವ- ಜಿಲ್ಲೆಯೇ ನೆಲಸಮವಾಗುವ ಹಂತ ತಲುಪಬಹುದು!. 2014ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ನೀಡಿರುವ ವರದಿಯು ‘ಉತ್ತರಕನ್ನಡದ ಪರಿಸರ ಧಾರಣಾ ಸಾಮರ್ಥ್ಯ ಮುಗಿದಿದೆ, ಹೊಸ ಬೃಹತ್ ಅರಣ್ಯ ನಾಶದ ಯೋಜನೆಗಳು ಬೇಡವೇ ಬೇಡ’ ಎಂದು ಉಲ್ಲೇಖಿಸಿದೆ. ಇದೆಲ್ಲದರ ನಡುವೆಯೂ ಆಡಳಿತಗಾರರ ಬೇಜವಾಬ್ದಾರಿಗೆೆ ಸಾಕ್ಷಿಯೆಂಬಂತೆ ಎರಡು ಜೀವನದಿಗಳ ಸರಾಗ ಹರಿವನ್ನು ತಿರುಗಿಸುವ ನಿಸರ್ಗವಿರೋಧಿ ಪ್ರಯತ್ನ ಅಲ್ಲಿ ಆರಂಭವಾಗಿದೆ.
ನೀರಿಲ್ಲದ ನೀರಾವರಿ ಯೋಜನೆ!
ಹಾವೇರಿ ಜಿಲ್ಲೆಗೆ ಉತ್ತರಕನ್ನಡದ ಯಲ್ಲಾಪುರದ ಬೇಡ್ತಿ ನದಿಯಿಂದ ಹಾಗೂ ಶಿರಸಿ ತಾಲೂಕು ಪಟ್ಟಣದ ಹೊಳೆ, ಶಾಲ್ಮಲಾ ನದಿಯಿಂದ ಕಾಲುವೆ ಮೂಲಕ ನೀರು ಸಾಗಿಸುವ ಬೃಹತ್ ಯೋಜನೆಯೇ ಬೇಡ್ತಿ-ವರದಾ ನದಿತಿರುವು ಯೋಜನೆ. ಯೋಜನೆಯ ವೆಚ್ಚ ಸದ್ಯ 15000 ಕೋಟಿ ರೂ. ಮಾತ್ರ! 25 ವರ್ಷಗಳಿಂದ ಮೂರು ಬಾರಿ ಈ ಯೋಜನೆ ಜಾರಿಗೆ ಸರ್ಕಾರ ಮುಂದಾಗಿತ್ತು. ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ತೀವ್ರಜನಾಂದೋಲನ ನಡೆದಿದ್ದರಿಂದ ಯೋಜನೆಗೆ ತಡೆ ಬಿದ್ದಿತ್ತು. ಜಿಲ್ಲೆಯ ಪರಿಸರ ಧಾರಣಾ ಸಾಮರ್ಥ್ಯದ ಅಧ್ಯಯನ ಆಗದೆ ಹೊಸ ಯೋಜನೆ ಪ್ರಸ್ತಾಪ ಬೇಡವೆಂದು 2003-2004ರಲ್ಲೇ ವಾದಿಸಲಾಗಿತ್ತು. ಇದನ್ನು ಒಪ್ಪಿ 2004ರಲ್ಲಿ ಬೇಡ್ತಿ-ವರದಾ ಯೋಜನೆ ಸ್ಥಗಿತಗೊಂಡಿತ್ತು. ಗಮನಾರ್ಹ ಸಂಗತಿಯೆಂದರೆ 2021ರಲ್ಲಿ ಸರ್ಕಾರವೇ ರಚಿಸಿದ್ದ ಭೂಕುಸಿತ ಅಧ್ಯಯನ ಸಮಿತಿ ಉತ್ತರಕನ್ನಡ ಜಿಲ್ಲೆಯ ಬೇಡ್ತಿ-ಶಾಲ್ಮಲಾ ಕಣಿವೆಗಳನ್ನು ಸೂಕ್ಷ್ಮಭೂಕುಸಿತ ಸಂಭಾವ್ಯಪ್ರದೇಶಗಳು ಎಂದು ಗುರುತಿಸಿದೆ. ಈ ನಾಲ್ಕು ವರ್ಷಗಳಲ್ಲಿ ಇಲ್ಲಿ ಭಾರೀ ಭೂಕುಸಿತಗಳು ಘಟಿಸಿವೆ.
ಆದರೆ ತಜ್ಞರು ಹಾಗೂ ಪರಿಸರ ಪ್ರಿಯರ ಪ್ರಕಾರ ‘ಇದು ಅವೈಜ್ಞಾನಿಕ ಪರಿಸರನಾಶಿ ಯೋಜನೆ. ಸ್ಪಷ್ಟವಾಗಿ ನೀರಿಲ್ಲದ ನೀರಾವರಿ ಯೋಜನೆ’. ಏಕೆಂದರೆ ಬೇಡ್ತಿ ನದಿ ನೀರನ್ನು ಈಗಾಗಲೇ ಯಲ್ಲಾಪುರ, ಶಿರಸಿ, ಅಂಕೋಲಾ ತಾಲೂಕುಗಳ 15 ಲಕ್ಷ ರೈತರು ಅವಲಂಬಿಸಿದ್ದ್ದಾರೆ. ಸುಮಾರು 15 ಲಕ್ಷ ಜನರಿರುವ 190 ಹಳ್ಳಿಗಳು, 40,000 ಪಂಪ್‌ಸೆಟ್ಟುಗಳು ಬೇಡ್ತಿ ಕಣಿವೆ ನೀರನ್ನು ನಂಬಿಕೊಂಡಿವೆ.
ಇದೀಗ ಶಿರಸಿ, ಯಲ್ಲಾಪುರ, ಮುಂಡಗೋಡು ತಾಲೂಕಿನ ‘ಬಹುಗ್ರಾಮ ಕುಡಿಯುವ ನೀರು ಯೋಜನೆ’ಗೆ ಬೇಡ್ತಿ ನೀರನ್ನೇ ಒಯ್ಯುವ ಯೋಜನೆ ಮುಕ್ತಾಯ ಹಂತದಲ್ಲಿದೆ. ಯಲ್ಲಾಪುರ ಪಟ್ಟಣಕ್ಕೆ ಬೇಡ್ತಿಯಿಂದ ಹಲವು ಕೋಟಿ ರೂಪಾಯಿ ವೆಚ್ಚದಲ್ಲಿ ನೀರು ಪೂರೈಸುವ ಯೋಜನೆ ಹಮ್ಮಿಕೊಳ್ಳಾಯಿತು. ಆದರೆ, ನದಿಯಲ್ಲಿ ನೀರಿರದೆ, ಒಂದು ಹನಿ ನೀರೂ ಯಲ್ಲಾಪುರ ತಲುಪಲಿಲ್ಲ! ಇವೆಲ್ಲವುಗಳ ಜೊತೆ ಕಿರು ನೀರಾವರಿ ಇಲಾಖೆ ಶಾಲ್ಮಲಾ, ಪಟ್ಟಣದ ಹೊಳೆ ಸೇರಿ ಬೇಡ್ತಿ ಕಣಿವೆಯ ಹಳ್ಳಗಳಿಗೆ 15 ಸ್ಥಳಗಳಲ್ಲಿ ಕಿರು ನೀರಾವರಿ ಯೋಜನೆ, ಬಾಂದಾರ ಕಿಂಡಿ ಅಣೆಕಟ್ಟೆ ನಿರ್ಮಾಣ ಮಾಡಿದೆ. ಸೀ ಬರ್ಡ್ ನೌಕಾನೆಲೆ ಮತ್ತು ಕಾರವಾರಕ್ಕೆ 20 ವರ್ಷಗಳಿಂದ ಬೇಡ್ತಿ (ಗಂಗಾವಳಿ) ನದಿಯಿಂದ ನೀರು ಸರಬರಾಜಾಗುತ್ತಿದೆ. ಆದ್ದರಿಂದ ಹಾವೇರಿಗೆ ಒಯ್ಯಲು ಬೇಡ್ತಿಯಲ್ಲಿ ನೀರೇ ಇರುವುದಿಲ್ಲ. ಹೀಗಾಗಿ ರಾಜ್ಯ ನೀರಾವರಿ ಇಲಾಖೆ ಹಾಗೂ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯವರು ನೀಡಿರುವ, 20 ಟಿ.ಎಂ.ಸಿ ನೀರು ಬೇಡ್ತಿ-ವರದಾ ಯೋಜನೆಗೆ ಲಭ್ಯವಾಗಲಿದೆ ಎನ್ನುವ ಅಂಕಿಅಂಶವೇ ವಾಸ್ತವಕ್ಕೆ ದೂರವಾಗಿದೆ’. ಆದರೂ ಹಾವೇರಿ ಜಿಲ್ಲೆಗೆ ಬೇಡ್ತಿಯಿಂದ ನೀರು ಕೊಡುವ ಹುಚ್ಚು ಸಾಹಸಕ್ಕೆ ಹಾವೇರಿಯ ಕೆಲ ರಾಜಕಾರಣಿಗಳು ಕೇಂದ್ರ ಸರ್ಕಾರಕ್ಕೆ ದುಂಬಾಲು ಬಿದ್ದಿದ್ದಾರೆ.
ಸಮುದ್ರಕ್ಕೆ ನೀರು ವ್ಯರ್ಥವಲ್ಲ!
ಸಮುದ್ರಕ್ಕೆ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ ಎಂದು ಹಲವರು ಉದ್ಘರಿಸುತ್ತಾರೆ. ಅದು ಸತ್ಯವಲ್ಲ. ವಾಸ್ತವವೆಂದರೆ ಸಮುದ್ರಕ್ಕೆ ಸಿಹಿ ನೀರು, ಫಲವತ್ತಾದ ನೀರು ಬರಬೇಕು. ಅದಿಲ್ಲವಾದರೆ ಮೀನು ಉತ್ಪಾದನೆ ಇರುವುದಿಲ್ಲ. ಅಲ್ಲಿನ ಪಾರಿಸಾರಿಕ ಸ್ಥಿತಿ ಹದಗೆಡುತ್ತದೆ. ಕರಾವಳಿ ಪ್ರದೇಶದ ಮೀನುಗಾರರು, ರೈತರು, ಜನತೆ ಬೇಡ್ತಿ-ಗಂಗಾವಳಿ ನದಿ ನೀರಿನ ಹರಿವನ್ನೇ ಅವಲಂಬಿಸಿದ್ದಾರೆ. ಅಂಕೋಲಾ-ಕುಮಟಾ ತಾಲೂಕಿನ ರೈತರಿಗೆ ಬೇಸಿಗೆಯಲ್ಲಿ ಸಿಹಿನೀರು ಸಿಗುವುದಿಲ್ಲ. ಉಪ್ಪುನೀರು ನದಿಯಲ್ಲಿ ಮೇಲಕ್ಕೆ ಏರುತ್ತ ಹೋಗುತ್ತದೆ.
1000 ಎಕರೆ ಬೆಟ್ಟ–ಅರಣ್ಯ ನಾಶ
ಬೇಡ್ತಿ-ವರದಾ ಯೋಜನೆ ಜಾರಿಯಿಂದ ನೀರಾವರಿ ಕಾಲುವೆ, ರಸ್ತೆ ಕಾಮಗಾರಿ, ವಿದ್ಯುತ್ ಮಾರ್ಗಗಳಿಂದ ಬೆಟ್ಟ-ಅರಣ್ಯ, ಗುಡ್ಡ, ಕಣಿವೆ ಪ್ರದೇಶದ ಕನಿಷ್ಠ 1000 ಎಕರೆ ಕಾಡು ನಿರ್ನಾಮವಾಗುತ್ತದೆ. ವನ್ಯಜೀವಿಗಳು ಅತಂತ್ರವಾಗುತ್ತವೆ. ವನ್ಯಜೀವಿ-ಮಾನವ ಸಂಘರ್ಷ ಇನ್ನೂ ಗಂಭೀರ ಸ್ಥಿತಿ ತಲುಪಲಿದೆ.
ಅಘನಾಶಿನಿ–ವೇದಾವತಿ ಯೋಜನೆ
ಬೇಡ್ತಿ-ಅಘನಾಶಿನಿ ಬೃಹತ್ ಜಲವಿದ್ಯುತ್ ಯೋಜನೆಗಳ ಸಂದರ್ಭದಲ್ಲಿ 1980-90ರ ದಶಕದಲ್ಲಿ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಹೆಗ್ಗರಣಿ-ಗೋಳಿಮಕ್ಕಿ ಸನಿಹದ ಬಾಳೆಕೊಪ್ಪದಲ್ಲಿ ಅಘನಾಶಿನಿ ನದಿಗೆ ಬೃಹತ್ ಅಣೆಕಟ್ಟು ನಿರ್ಮಿಸಲು ಸ್ಥಳ ಗುರುತಿಸಲಾಗಿತ್ತು. ವ್ಯಾಪಕ ಜನಾಕ್ರೋಶದ ನಂತರ ಯೋಜನೆಯನ್ನು ಕೆಪಿಸಿ ಕೈಬಿಟ್ಟಿತ್ತು. 2017ರ ಹೊತ್ತಿಗೆ ಅಘನಾಶಿನಿ ವರದಾ ನದಿತಿರುವು ಯೋಜನೆ ಪ್ರಸ್ತಾಪವಾಯಿತು. ಶಿರಸಿಯಲ್ಲಿ ನಡೆದ ‘ಪಶ್ಚಿಮ ಘಟ್ಟ ಉಳಿಸಿ’ ಸಮ್ಮೇಳನದಲ್ಲಿ ಪೇಜಾವರ ಶ್ರೀಗಳ ಸಮ್ಮುಖದಲ್ಲಿ ಸ್ವರ್ಣವಲ್ಲೀ ಶ್ರೀಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. 2021-22 ರಲ್ಲಿ ಬೇಡ್ತಿ-ವರದಾ ಯೋಜನೆ ಜೊತೆ ಅಘನಾಶಿನಿ ಯೋಜನೆಗೂ ತಡೆಬಿದ್ದಿತ್ತು. ಇದೀಗ 2025ರಲ್ಲಿ ಅಘನಾಶಿನಿ ತಿರುವು ಯೋಜನೆಗೆ ಸಿದ್ಧತೆಗಳು ನಡೆದಿವೆ.
ಅಘನಾಶಿನಿ ನದಿಯನ್ನು ಚಿತ್ರದುರ್ಗ ಜಿಲ್ಲೆಯ ವೇದಾವತಿ ನದಿಗೆ ಜೋಡಿಸುವ ಯೋಜನೆ ಇದಾಗಿದೆ. ಇದು ರಾಜ್ಯ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಆಲೋಚನೆ. ಅಘನಾಶಿನಿ ನದಿಗೆ ಸಿದ್ದಾಪುರ ತಾಲೂಕಿನ ಬಾಳೆಕೊಪ್ಪ ಬಳಿ ಅಣೆಕಟ್ಟೆ ಕಟ್ಟಿ, ಅಲ್ಲಿಂದ ನೀರು ಪಂಪ್‌ಮಾಡಿ ಗೋಳಿಮಕ್ಕಿ, ಹಾರ್ಸಿಕಟ್ಟಾ, ಸಿದ್ದಾಪುರ, ಸಾಗರ, ಶಿವಮೊಗ್ಗ, ತರೀಕೆರೆ, ಅಜ್ಜಂಪುರ ಮಾರ್ಗವಾಗಿ ಹಿರಿಯೂರು ತಾಲೂಕಿನಲ್ಲಿರುವ ವಾಣಿವಿಲಾಸ ಜಲಾಶಯಕ್ಕೆ ನೀರು ತುಂಬಿಸುವುದು ಉದ್ದೇಶ. 35 ಟಿಎಂಸಿ ನೀರನ್ನು ಅಘನಾಶಿನಿಯಿಂದ ಎತ್ತಿ ಸಾಗಿಸುವ ಗುರಿ ಈ ಯೋಜನೆಯದು. ಹಾಗೆ ನೋಡಿದರೆ ಎತ್ತಿನಹೊಳೆ ಯೋಜನೆಗಿಂತಲೂ ಬೃಹತ್ತಾದ ಯೋಜನೆ. ಈಗಾಗಲೇ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ಕಾರ್ಯಸಾಧ್ಯತಾ ವರದಿಯನ್ನೂ ತಯಾರಿಸಿದೆ.
23000 ಕೋಟಿ ರೂ. ವೆಚ್ಚ
ಅಘನಾಶಿನಿ-ವೇದಾವತಿ ಯೋಜನೆಗೆ 23000 ಕೋಟಿ ರೂ. ವೆಚ್ಚವಾಗಲಿದೆ. 194 ಕಿ.ಮೀ. ಉದ್ದ ಪೈಪ್‌ಲೈನ್ ಹಾಕಲಾಗುತ್ತದೆ. ಹೈದರಾಬಾದ್ ಕಚೇರಿಗೆ ಈಗಾಗಲೇ ವರದಿ ರವಾನೆಯಾಗಿದ್ದು, ಅಲ್ಲಿಂದ ದೆಹಲಿಯ ಕೇಂದ್ರ ಕಚೇರಿಗೆ ಹಸ್ತಾಂತರವಾಗಲಿದೆ.
ದುಷ್ಪರಿಣಾಮಗಳೇನು?
ಅಘನಾಶಿನಿ ಕಣಿವೆ ವನ್ಯಜೀವಿ ಸಂರಕ್ಷಿತ ಪ್ರದೇಶ ಎಂದು 2012ರಲ್ಲೇ ಘೋಷಣೆಯಾಗಿದೆ. ಅಲ್ಲದೆ ಇದು ಭೂಕುಸಿತ ಸೂಕ್ಷ್ಮ ಪ್ರದೇಶ ಕೂಡ. ಶಿರಸಿ ಅರಣ್ಯ ವಿಭಾಗ, ಸಾಗರ ಅರಣ್ಯ ವಿಭಾಗಗಳ ವ್ಯಾಪ್ತಿಯ ಅಂದಾಜು 500 ಎಕರೆ ಅರಣ್ಯದ 1.20 ಲಕ್ಷ ಗಿಡ-ಮರಗಳು ಈ ಯೋಜನೆಗೆ ಬಲಿಯಾಗಲಿವೆ. ವ್ಯಾಪಕ ಭೂಕುಸಿತಕ್ಕೆ ಕಾರಣವಾಗಲಿದೆ. ಮಾತ್ರವಲ್ಲ, ಶಿರಸಿ, ಕುಮಟಾ ಪಟ್ಟಣಕ್ಕೆ, ಕುಮಟಾ ತಾಲೂಕಿನ ಬಹುಗ್ರಾಮ ಯೋಜನೆಗೆ ಹಾಗೂ ಒಂದು ಲಕ್ಷ ರೈತರ ಪಂಪ್‌ಸೆಟ್‌ಗಳಿಗೆ ನೀರು ಒದಗಿಸುವ ಅಘನಾಶಿನಿಯ ಕಾಯಕಕ್ಕೆ ನದಿ ತಿರುವು ಕಂಟಕ ತರುತ್ತಿದೆ ಎಂದು ವೃಕ್ಷ ಆಂದೋಲನದ ತಜ್ಞರ ತಂಡ ಎಚ್ಚರಿಸಿದೆ. ಕುಮಟಾ ಕರಾವಳಿ ಮೀನುಗಾರರು ಮತ್ತು ರೈತರ ಬದುಕು ಅಘನಾಶಿನಿ ನದೀ ನೀರನ್ನೇ ಅವಲಂಬಿಸಿದೆ.
ಒಟ್ಟಾರೆ, ಈ ಯೋಜನೆಗಳು ಬಯಲುಸೀಮೆಗೆ ತಾತ್ಕಾಲಿಕ ನೀರಿನ ಪರಿಹಾರ ನೀಡಬಹುದು. ಆದರೆ ದೀರ್ಘಾವಧಿಯಲ್ಲಿ ಇಲ್ಲಿನ ಪಶ್ಚಿಮಘಟ್ಟದ ಪರಿಸರ ನಾಶವಾಗಿ ನೀರು ಲಭ್ಯವಾಗದೆ ಅಲ್ಲಿಗೂ ಇಲ್ಲ, ಇಲ್ಲಿಗೂ ಇಲ್ಲ ಎಂಬಂತಾಗುತ್ತದೆ. ಹಾಗಾಗಿ, ಯೋಜನೆಯನ್ನು ಕೈಬಿಡಬೇಕು ಎನ್ನುತ್ತಾರೆ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅನಂತ ಅಶೀಸರ.
ಪ್ರಕೃತಿ ಮೇಲೆ ಪ್ರಹಾರ
- ನದಿ ತಿರುವಿಗಾಗಿ ಮರಗಳನ್ನು ಕಡಿಯುವುದರಿಂದ ಜೀವವೈವಿಧ್ಯ ನಾಶವಾಗುತ್ತದೆ.
- ನದಿಗಳ ನೈಸರ್ಗಿಕ ಹರಿವು ಬದಲಾಗುವುದರಿಂದ ಭೂಗರ್ಭಜಲದ ಮಟ್ಟ, ನದಿ ತೀರದ ಪರಿಸರ ಮತ್ತು ಜಲಚರಗಳ ಜೀವಚಕ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
- ಮೇಲ್ಮಣ್ಣಿನ ನಾಶದಿಂದ ಭೂಕುಸಿತ ಮತ್ತು ಪ್ರವಾಹದ ಅಪಾಯ ಹೆಚ್ಚಾಗುತ್ತದೆ. ಕರಾವಳಿ ಪ್ರದೇಶದಲ್ಲಿ ನೀರಿನ ಕೊರತೆಯಾಗಿ ಜನಜೀವನ, ಕೃಷಿ ಹಾಗೂ ಮೀನುಗಾರಿಕೆ ಸಂಕಷ್ಟ ಎದುರಿಸಬೇಕಾಗುತ್ತದೆ.
- ಹಲವು ಗ್ರಾಮ-ಕುಟುಂಬಗಳು ಜಮೀನು ಕಳೆದುಕೊಳ್ಳಬೇಕಾಗುತ್ತದೆ.
- ಹಲವು ಸಮುದಾಯಗಳ ಮತ್ತು ವನವಾಸಿಗಳ ಗ್ರಾಮೀಣ ಸಂಸ್ಕೃತಿ -ಆಚರಣೆ, ಪಾರಂಪರಿಕ ಕಸುಬು-ಕೌಶಲ, ಜೀವನಮೂಲಗಳು ನಾಶವಾಗುತ್ತವೆ.
- ಅನಿವಾರ್ಯವಾಗಿ ಸ್ಥಳೀಯರು ಮತ್ತು ಸರ್ಕಾರದ ಸಂಘರ್ಷ ಹೆಚ್ಚಾಗಲಿದೆ.
- ಯೋಜನೆ ನಿರ್ಮಾಣ ಮತ್ತು ನಿರ್ವಹಣೆಗೆ ಅಪಾರ ಹಣ ಖರ್ಚಾಗುತ್ತದೆ, ಆದರೆ ಫಲಿತಾಂಶ ಮಾತ್ರ ತೀರಾ ವ್ಯತಿರಿಕ್ತವಾಗಿರುತ್ತದೆ.
- ಕೃಷಿ ಮತ್ತು ಮೀನುಗಾರಿಕೆಗೆ ಹಾನಿ, ನದಿಯ ಸ್ವಾಭಾವಿಕ ನೀರಿನ ಪೂರೈಕೆ ಕಡಿಮೆಯಾಗಿ ಇದನ್ನಾಧರಿಸಿರುವ ಕೃಷಿ ಇಳುವರಿ ಕುಸಿಯಲಿದೆ. ಹೀಗಾಗಿ ಹತ್ತಾರು ಸಾವಿರ ಕೃಷಿ ಮೀನುಗಾರಿಕೆ, ವನವಾಸಿ, ಕೃಷಿಕೂಲಿಕಾರರ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಲಿವೆ.
- ಇಲ್ಲಿ ಹಾನಿಯಾದ ಅಮೂಲ್ಯ ಹಾಗೂ ಸೂಕ್ಷ್ಮ ಪರಿಸರವನ್ನು ಪುನಃ ಸ್ಥಾಪಿಸಲು ಅಸಾಧ್ಯ.
- ಸಾಂಪ್ರದಾಯಿಕ ಕಾಡುಗಳ ನಾಶದಿಂದ ಅಲ್ಲಿರುವ ಕೃಷಿಕರಿಗೆ ವನ್ಯಜೀವಿಗಳೊಂದಿಗಿನ ಸಂಘರ್ಷ ಇನ್ನಷ್ಟು ಹೆಚ್ಚಲಿದೆ.
- ಉತ್ತರ ಕನ್ನಡದಲ್ಲಿ ಕಂದಾಯ ಭೂಮಿಯ ಪ್ರಮಾಣವು, ಕಡಿಮೆ ಇರುವುದರಿಂದ ಇಂತಹ ಯೋಜನೆಗಳು ಬಂದು ಅಳಿದುಳಿದ ಕಂದಾಯ ಭೂಮಿ ಕೂಡ ಇದಕ್ಕೆ ಹೋಗಲಿದೆ. ಇದರಿಂದ ಭವಿಷ್ಯದಲ್ಲಿ ಉತ್ತರ ಕನ್ನಡ ಜನಸಾಮಾನ್ಯರ ಮೂಲಭೂತ ಸೌಕರ್ಯಕ್ಕೆ ಯಾವುದೇ ಕಾಮಗಾರಿ, ಸವಲತ್ತು ನೀಡಲು ಕೂಡ ಕಂದಾಯ ಭೂಮಿ ಇಲ್ಲದಂತಾಗುತ್ತದೆ.
ನದಿ ತಿರುವು ಯೋಜನೆಗಳನ್ನು ಏಕೆ ಕೈಬಿಡಬೇಕು?
- ಹೆಚ್ಚುವರಿ ನೀರಿನ ಲಭ್ಯತೆ ಇರದಿರುವುದು
ಬೇಡ್ತಿ-ಅಘನಾಶಿನಿ ನದಿಗಳಲ್ಲಿ ಕೇವಲ ಜುಲೈನಿಂದ ಸೆಪ್ಟೆಂಬರ್ ತಿಂಗಳ ಮಳೆಗಾಲದ ಅವಧಿಯಲ್ಲಿ ಮಾತ್ರ ಮಳೆನೀರಿನ ಪ್ರವಾಹ ಇರುತ್ತದೆ. ಉಳಿದ ಒಂಬತ್ತು ತಿಂಗಳುಗಳಲ್ಲಿನ ನೀರಿನ ಹರಿವು ತೀರಾ ಕಡಿಮೆ. ಹೀಗಾಗಿ, ಹೆಚ್ಚುವರಿ ನೀರಿದೆ ಎಂಬ ಲೆಕ್ಕವೇ ತಪ್ಪು. ಏಪ್ರಿಲ್-ಮೇ ತಿಂಗಳ ಅವಧಿಯಲ್ಲಿ ಉತ್ತರ ಕನ್ನಡದ ನದಿ ತೊರೆಗಳ ಅನೇಕ ಹಳ್ಳಿಗಳು ಈಗಾಗಲೇ ತೀವ್ರ ನೀರಿನ ಬರ ಎದುರಿಸುತ್ತಿರುವುದು ಇಲ್ಲಿ ಉಲ್ಲೇಖನೀಯ.
- ಸಹಜವಾದ ಪರಿಸರ ಹರಿವು ನಾಶವಾಗುವುದು
ಬೇಡ್ತಿ ಹಾಗೂ ಅಘನಾಶಿನಿ ನದಿಗಳು ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಹಾಗೂ ಕೆಳಗಿನ ಪ್ರದೇಶಗಳ ಜನವಸತಿ, ಕೃಷಿಭೂಮಿ, ಕಾಡು, ಗೋಮಾಳ, ಕೆರೆಗಳು ಇವೆಲ್ಲಕ್ಕೂ ನಿರಂತರ ನೀರು ಒದಗಿಸುವ ಜಲಮೂಲವಾಗಿವೆ. ಈ ಯೋಜನೆಗಳಿಂದ ಈ ನದಿಗಳಲ್ಲಿ ಹರಿಯಬೇಕಾದ ಕನಿಷ್ಠ ಸಹಜವಾದ ಪರಿಸರ ಹರಿವು (Ecological Flow) ಕಡಿಮೆಯಾಗಿ, ಹಳ್ಳ-ತೊರೆ-ಕೆರೆಗಳ ಅಂತರ್ಜಲ ಮರುಪೂರಣ ಕುಸಿಯುತ್ತದೆ. ಆ ಮೂಲಕ ನದಿ ಕಣಿವೆ ಪ್ರದೇಶಗಳಲ್ಲಿ ಗಂಭೀರ ನೀರಿನ ಕೊರತೆ ಉಂಟಾಗುವುದು.
- ಪಶ್ಚಿಮಘಟ್ಟ ಜೀವವೈವಿಧ್ಯ ನಾಶ ಹಾಗೂ ವನ್ಯಜೀವಿ–ಮಾನವ ಸಂಘರ್ಷದ ಹೆಚ್ಚಳ
ದಕ್ಷಿಣ ಭಾರತದ ಪರಿಸರ ಸುರಕ್ಷತೆ ಹಾಗೂ ಜಲಮೂಲ ತಾಣವಾದ ಪಶ್ಚಿಮಘಟ್ಟದ ಹೃದಯಭಾಗದಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ ಹಾಗೂ ಅಘನಾಶಿನಿ ನದಿ ತೊರೆಗಳಲ್ಲಿ ಸುರಂಗಗಳು, ಕಾಲುವೆಗಳು, ಅಣೆಕಟ್ಟು ಇತ್ಯಾದಿಗಳ ಕಾಮಗಾರಿಗಳಾದರೆ ಇಲ್ಲಿನ ಅನನ್ಯ ಕಾಡು-ಗೋಮಾಳ-ಕೃಷಿಭೂಮಿ ಪ್ರದೇಶಗಳು ನಾಶವಾಗಿ ಅತ್ಯಮೂಲ್ಯ ಜೀವವೈವಿಧ್ಯ ನಾಶವಾಗುತ್ತದೆ. ಅರಣ್ಯ ಛಿದ್ರೀಕರಣಗೊಂಡು ವನ್ಯಜೀವಿ ಆವಾಸತಾಣಗಳು ಮತ್ತಷ್ಟು ನಾಶವಾಗಿ, ವನ್ಯಜೀವಿ-ಮಾನವ ಸಂಘರ್ಷ ಹೆಚ್ಚುತ್ತದೆ.
- ಭೂಕುಸಿತದ ಅಪಾಯ ಹೆಚ್ಚಳ
ಬೃಹತ್ ಯೋಜನೆಗಳ ಕಾಮಗಾರಿಗಳಿಂದ ಮಲೆನಾಡಿನ ಇಳಿಜಾರಿನ ಗುಡ್ಡ-ಕಣಿವೆಗಳ ಕಾಡು ಛಿದ್ರವಾಗಿ, ಅತ್ಯಮೂಲ್ಯ ಮೇಲ್ಮಣ್ಣು ನಾಶವಾಗಿ, ಮಳೆಗಾಲದಲ್ಲಿ ಭಾರಿ ಭೂಕುಸಿತದ ಸಾಧ್ಯತೆಗಳು ಹೆಚ್ಚುತ್ತವೆ.
- ಕರಾವಳಿ ಪರಿಸರದ ನಾಶ
ಯೋಜನೆಗಳಿಂದ ಈ ನದಿಗಳಲ್ಲಿ ನೀರಿನ ಹರಿವು ಕಡಿಮೆಯಾದಾಗ, ಅಂಕೋಲಾ ತಾಲೂಕಿನ ಗಂಗಾವಳಿ (ಬೇಡ್ತಿ ನದಿಯ ಕೆಳಹರಿವಿನ ಪ್ರದೇಶ) ಹಾಗೂ ಕುಮಟಾ ತಾಲೂಕಿನ ಅಘನಾಶಿನಿ ನದಿ ತೊರೆಗಳ ಅಳಿವೆಗಳಿಗೆ ನೀರಿನ ಕೊರತೆಯಾಗಿ, ಅಲ್ಲಿನ ಕಾಂಡ್ಲಾ ಕಾಡು ನಾಶವಾಗುತ್ತದೆ. ಆ ಮೂಲಕ ಜಲಚರಗಳ ವಂಶಾಭಿವೃದ್ಧಿಗೆ ತೀವ್ರ ವಿನಾಶವಾಗುತ್ತದೆ. ಇದರಿಂದ ಈಗಾಗಲೇ ತಲೆದೋರಿರುವ ಕರಾವಳಿಯ ಮತ್ಸ್ಯ ಕ್ಷಾಮ ಇನ್ನಷ್ಟು ಬಿಗಡಾಯಿಸಿ, ಮೀನುಗಾರರ ಜೀವನೋಪಾಯ ಮಾಯವಾಗುತ್ತದೆ.
ಅಘನಾಶಿನಿ ಅಳಿವೆಯನ್ನು ಜಾಗತಿಕ ಪ್ರಾಮುಖ್ಯತೆಯ “ರಾಮಸರ್ ತಾಣ” ಎಂದು ಕೇಂದ್ರ ಹಾಗೂ ರಾಜ್ಯ ಪರಿಸರ ಇಲಾಖೆಗಳು ಈಗಾಗಲೇ ಗುರುತಿಸಿರುವುದು ಇಲ್ಲಿ ಉಲ್ಲೇಖನೀಯ.
- ಕರಾವಳಿಯ ಒಳಪ್ರದೇಶಗಳಿಗೆ ಉಪ್ಪುನೀರು ನುಗ್ಗುವುದು
ನದಿಯ ಹರಿವು ಕಡಿಮೆಯಾದಾಗ ಸಮುದ್ರದ ಉಪ್ಪುನೀರು ನದಿಗಳ ಮೂಲಕ ಕರಾವಳಿಯ ಒಳಪ್ರದೇಶಗಳಿಗೆ ನುಗ್ಗತೊಡಗುತ್ತದೆ. ಆಗ ಗದ್ದೆ-ತೋಟಗಳ ಹಾಗೂ ಬಾವಿ-ಕೆರೆಗಳಂತಹ ಕುಡಿಯುವ ನೀರಿನ ಮೂಲಗಳಲ್ಲೂ ಉಪ್ಪಿನ ಪ್ರಮಾಣ ಅತಿಯಾಗಿ ಹೆಚ್ಚುತ್ತದೆ. ಇದರಿಂದ ಭೂಮಿ ಫಲವತ್ತತೆ ನಾಶವಾಗಿ ಬೇಸಾಯ ಕಷ್ಟವಾಗುತ್ತದೆ. ಕುಡಿಯುವ ನೀರಿನ ಕೊರತೆ ಮತ್ತಷ್ಟು ಗಂಭೀರವಾಗುತ್ತದೆ.
- ಮಣ್ಣು / ಪೋಷಕಾಂಶ ಸಾಗಣೆಯ ನಾಶವಾಗುವುದು
ನದಿ ಪ್ರವಾಹವು ಮಣ್ಣು, ಪೋಷಕಾಂಶ ಮತ್ತು ಜೈವಿಕ ವಸ್ತುಗಳನ್ನು ಸಾಗಿಸಿ ಕರಾವಳಿಯ ಅಳಿವೆ, ದಿನೇ ಮತ್ತು ಕಡಲತೀರದ ಫಲವತ್ತತೆಯನ್ನು ಹೆಚ್ಚಿಸುತ್ತದೆ. ನದಿ ತಿರುವು ಯೋಜನೆಗಳಿಂದ ನದಿಯ ಸಹಜ ಪ್ರವಾಹ ಕಡಿಮೆಯಾಗಿ, ಕರಾವಳಿ ಪ್ರದೇಶಕ್ಕೆ ತಲುಪಬೇಕಾದ ಪೋಷಕಾಂಶಗಳ ಪ್ರಮಾಣ ಕಡಿಮೆಯಾಗಿ, ಫಲವತ್ತತೆ ಕುಸಿಯುತ್ತದೆ. ಇದರಿಂದ ಉತ್ತರ ಕನ್ನಡದ ಕರಾವಳಿ ಮೀನುಗಾರಿಕೆ ಹಾಗೂ ಕೃಷಿಯ ಇಳುವರಿ ಕುಸಿಯುತ್ತದೆ.
- ಹೊಳೆ ತುಂಬುವ ಸಮಸ್ಯೆ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಳ
ಘಟ್ಟ ಪ್ರದೇಶದ ಮೇಲ್ಮಣ್ಣು ಬಹು ಸೂಕ್ಷ್ಮವಾಗಿದ್ದು, ಇದರ ಸ್ವರೂಪದಿಂದಾಗಿ ಕಾಲುವೆಗಳು ಹಾಗೂ ಜಲಾಶಯಗಳಲ್ಲಿ ಹೊಳೆ ವೇಗವಾಗಿ ತುಂಬುತ್ತದೆ. ಆಗ ನಿರಂತರ ಹೊಳೆ ತೆಗೆಯುವ (Dredging) ಕಾಮಗಾರಿಗಳಿಗೆ ಹಣ ವ್ಯಯಿಸುವ ಅನಿವಾರ್ಯತೆ ಎದುರಾಗುತ್ತದೆ.
- ಸ್ಥಳೀಯ ಜೀವನೋಪಾಯಕ್ಕೆ ನೇರ ಹೊಡೆತ
ಬೇಡ್ತಿ-ಅಘನಾಶಿನಿ ನದಿ ತೊರೆಗಳ ಲಕ್ಷಾಂತರ ಬೇಸಾಯಗಾರರು, ಸಣ್ಣ ರೈತರು, ಗೌಳಿ, ಸಿದ್ಧಿ, ಒಕ್ಕಲಿಗ, ಕುರ್ಬಿ, ಸಾಲಕಿಕ ತೇರನ ವನವಾಸಿಗಳು, ಮೀನುಗಾರರು – ಇವರ ಎಲ್ಲರ ಜೀವನೋಪಾಯಕ್ಕೆ ಭಂಗ ಬರಲಿದೆ.
ಕೃಷಿ ಹಾಗೂ ಮೀನುಗಾರಿಕೆಯ ಇಳುವರಿ, ಅರಣ್ಯ ಕಿರುಉತ್ಪನ್ನಗಳ ಸಂಗ್ರಹಣೆ, ಚಿಪ್ಪು-ಮೀನು ಇತ್ಯಾದಿ ಜಲಚರ ಸಂಕುಲಗಳ ಇಳುವರಿ – ಎಲ್ಲವೂ ಕುಸಿದು, ನೈಸರ್ಗಿಕ ಸಂಪನ್ಮೂಲ ಆಧಾರಿತ ಜೀವನೋಪಾಯಗಳು ನಾಶವಾಗಿ, ಗ್ರಾಮೀಣ ಜನರ ಬದುಕು ಮತ್ತಷ್ಟು ದುಸ್ತರವಾಗುತ್ತದೆ.
- ಉತ್ತರ ಕರ್ನಾಟಕಕ್ಕೆ ಸುಸ್ಥಿರ ನೀರಾವರಿ ಪದ್ಧತಿಗಳೂ ಬೇಕಿವೆ
ಉತ್ತರ ಕರ್ನಾಟಕದ ಒಳನಾಡಿನ ಹೆಚ್ಚಿನ ಮಣ್ಣಿಗೆ ನೀರು ಹಿಡಿದಿಡುವ ಸಾಮರ್ಥ್ಯ ಹೆಚ್ಚು. ಅಲ್ಲಿನ ಸುರಿಯುವಷ್ಟೇ ಮಳೆ ಹಾಗೂ ಸ್ಥಳೀಯ ಕೆರೆಗಳನ್ನು ಬಳಸಿಕೊಂಡು ಜಲಾನಯನ ಅಭಿವೃದ್ಧಿ ತತ್ವದಡಿ ಯಶಸ್ವಿಯಾಗಿ ನೀರಾವರಿ ಮಾಡುತ್ತಿರುವ ರೈತರು ಸಾವಿರಾರು ಸಂಖ್ಯೆಯಲ್ಲಿದ್ದಾರೆ.
ಆದರೆ, ನೀರಾವರಿ ಕಾಲುವೆಗಳಲ್ಲಿ ಭಾರಿ ಪ್ರಮಾಣದ ನೀರು ಹರಿಸಿ ನೀರಾವರಿ ಮಾಡುತ್ತಿರುವ ಕೃಷಿ ಪ್ರದೇಶಗಳಲ್ಲಿ ಮಾತ್ರ ಭೂಮಿ ಜೌಳಾಗಿ, ಕ್ಷಾರಗೊಂಡು ಫಲವತ್ತತೆ ಕುಸಿದು, ಬೇಸಾಯ ದುಸ್ತರವಾಗುತ್ತಿರುವ ವಿದ್ಯಮಾನವನ್ನು ಹಲವು ಕಡೆ ಈಗಾಗಲೇ ತಜ್ಞರು ದಾಖಲಿಸಿದ್ದಾರೆ.
ಹೀಗಾಗಿ, ನದಿ ತಿರುವು ಯೋಜನೆಗಳು ಬಯಲುನಾಡಿನ ನೀರಾವರಿಗಾಗಲಿ ಅಥವಾ ರೈತರಿಗಾಗಲಿ ನೈಜ ಸಹಾಯ ಮಾಡುವುದಿಲ್ಲ ಎಂಬ ಅಂಶವನ್ನು ಮನಗಾಣಬೇಕು.
- ಮಲೆನಾಡಿನ ತೋಟಗಾರಿಕಾ ಬೆಳೆಗಳಿಗೆ ಸುಸ್ಥಿರ ನೀರಾವರಿ
ಮಲೆನಾಡಿನ ಬಹುಪಾಲು ತೋಟಗಾರಿಕಾ ಪ್ರದೇಶಗಳಿಗೆ ಈಗಲೂ ಸರಿಯಾದ ನೀರಾವರಿ ಸೌಲಭ್ಯವಿಲ್ಲ. ಸ್ಥಳೀಯ ತೊರೆಗಳನ್ನೇ ಬಳಸಿಕೊಂಡು ಜಲಾನಯನ ಅಭಿವೃದ್ಧಿ ತತ್ವದಡಿ ಇಲ್ಲಿನ ರೈತರಿಗೆ “ಸುಸ್ಥಿರ ನೀರಾವರಿ ಯೋಜನೆ” ರೂಪಿಸಬೇಕು.
ಈ ನಿಟ್ಟಿನಲ್ಲಿ ಯಾವುದೇ ದೊಡ್ಡ ಕಾಮಗಾರಿಗಳಿಲ್ಲದೆ, ಸ್ಥಳೀಯ ತೊರೆಗಳ ನೀರನ್ನೇ ಮಿತವಾಗಿ ಬಳಸುವ ಪರಿಸರಸ್ನೇಹಿ ನೀರಾವರಿ ಯೋಜನೆಗಳು ರೂಪುಗೊಳ್ಳಬೇಕು.
ಸರ್ಕಾರಗಳು ಕೈಗೊಂಡಿರುವ ಪ್ರಮುಖ ಆಡಳಿತಾತ್ಮಕ ಹಂತಗಳು
- ಆರಂಭಿಕ ಪ್ರಸ್ತಾವ (1992): ಉತ್ತರ ಕರ್ನಾಟಕದ ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಸಲುವಾಗಿ ಅಂದಿನ ಸರ್ಕಾರವು 1992 ರಲ್ಲಿ ಈ ಯೋಜನೆಗೆ ಪ್ರಾಥಮಿಕ ಚಾಲನೆ ನೀಡಿತು.
- ಕಾರ್ಯಪಡೆ ರಚನೆ (2002): ಕೇಂದ್ರ ಸರ್ಕಾರದ ರಾಷ್ಟ್ರೀಯ ನದಿ ಜೋಡಣೆ ಯೋಜನೆಯ (NPP) ಭಾಗವಾಗಿ, ಈ ನದಿಗಳ ಒಡಲನ್ನು ಜೋಡಿಸಲು ಕ್ರಿಯಾ ಯೋಜನೆ ರೂಪಿಸಲು ವಿಶೇಷ ಕಾರ್ಯಪಡೆ (Task Force) ಯನ್ನು ರಚಿಸಲಾಯಿತು.
- ಪೂರ್ವ ಕಾರ್ಯಸಾಧ್ಯತಾ ವರದಿ (ಆಗಸ್ಟ್ 2021): ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯು (NWDA) ಯೋಜನೆಯ ಮೊದಲ “ಪೂರ್ವ ಕಾರ್ಯಸಾಧ್ಯತಾ ವರದಿ”ಯನ್ನು (Pre-Feasibility Report) ಸಲ್ಲಿಸಿತು. ಇದರಲ್ಲಿ ಬೇಡ್ತಿ ಜಲಾನಯನ ಪ್ರದೇಶದಿಂದ ತುಂಗಭದ್ರಾ ಉಪ-ಜಲಾನಯನ ಪ್ರದೇಶಕ್ಕೆ 242 MCM ನೀರನ್ನು ವರ್ಗಾಯಿಸುವ ಪ್ರಸ್ತಾಪ ಮಾಡಲಾಗಿತ್ತು.
- ಕರಡು ವಿಸ್ತೃತ ಯೋಜನಾ ವರದಿ ಸಲ್ಲಿಕೆ (ಫೆಬ್ರವರಿ 2022): NWDA ಸಂಸ್ಥೆಯು ಬೇಡ್ತಿ-ಧರ್ಮಾ-ವರದಾ ಜೋಡಣೆಯ ಕರಡು ವಿಸ್ತೃತ ಯೋಜನಾ ವರದಿಯನ್ನು (DPR) ಪರಿಶೀಲನೆ ಮತ್ತು ಸಲಹೆಗಳಿಗಾಗಿ ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿತು.
- ಹೊಸ “ಪರ್ಯಾಯ ಅಧ್ಯಯನ ಮತ್ತು ತಿದ್ದುಪಡಿ ವರದಿ (ಆಗಸ್ಟ್ 2025): ಪರಿಸರ ಕಾಳಜಿ ಹಾಗೂ ತಾಂತ್ರಿಕ ಕಾರಣ ಆಧರಿಸಿ ರಾಜ್ಯ ಸರ್ಕಾರದ ಸೂಚನೆಯಂತೆ ಮಾರ್ಪಾಡುಗಳನ್ನು ಮಾಡಿ, ‘ಬೇಡ್ತಿ-ಹಿರೇವಡ್ಡಟ್ಟಿ ಲಿಂಕ್ ಯೋಜನೆ’ ಎಂಬ ಹೆಸರಿನಲ್ಲಿ ಪರ್ಯಾಯ ಮಾರ್ಗಗಳನ್ನೊಳಗೊಂಡ ಈ “ಹೊಸ ಪೂರ್ವ ಕಾರ್ಯಸಾಧ್ಯತಾ ವರದಿ”ಯನ್ನು (PFR) ಸಿದ್ಧಪಡಿಸಲಾಯಿತು. ಮೂರು ಆಣೆಕಟ್ಟು ಕಟ್ಟಿ 52 ಟಿ.ಎಮ್.ಸಿ ನೀರು ಸಾಗಿಸುವ ಪ್ರಸ್ತವನೆ ಇದಾಗಿದೆ.
- ರಾಜ್ಯ ಸರ್ಕಾರದ ತಾತ್ವಿಕ ಅನುಮೋದನೆ (ಡಿಸೆಂಬರ್ 2025): ಕರ್ನಾಟಕ ಸರ್ಕಾರವು ಕೇಂದ್ರದ ಜಲಶಕ್ತಿ ಸಚಿವಾಲಯದ ಈ ಹೊಸ ಪ್ರಸ್ತಾವನೆಗೆ ತಾತ್ವಿಕ ಒಪ್ಪಿಗೆ (In-principle approval) ನೀಡಿದೆ. ಸುಮಾರು ರೂ.10,000 ಕೋಟಿ ವೆಚ್ಚದ ಈ ಯೋಜನೆಗೆ ಕೇಂದ್ರ ಸರ್ಕಾರವು ಶೇ. 90 ರಷ್ಟು (ರೂ.9,000 ಕೋಟಿ) ಹಣಕಾಸಿನ ನೆರವು ನೀಡಲು ಸಮ್ಮತಿಸಿದೆ.
- ಅಂತಿಮ ಡಿಪಿಆರ್ (DPR) ಸಿದ್ಧತೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಹಮತಿಯಂತೆ, ಪ್ರಸ್ತುತ “ಅಂತಿಮ ವಿಸ್ತೃತ ಯೋಜನಾ ವರದಿ” (DPR) ತಯಾರಿಸಲು ಅದೇಶವಾಗಿದ್ದು, ಅದನ್ನು ತ್ವರಿತವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸ್ಥಳಮಟ್ಟದ ಸರ್ವೇ, ಡ್ರೋಣ್ ಸರ್ವೇ, ಗಡಿ ಗುರುತಿಸುವದು ಇತ್ಯಾದಿ ಕಾರ್ಯ ಈಗ ಸಾಗಿದೆ.
