ನಾಗರೀಕ ಸಮಾಜವನ್ನು ಬೆಚ್ಚಿ ಬೀಳಿಸಿದ ನಕಲಿ ಔಷಧ ಹಾಗು ಲೂಟಿಕೋರ ಮಾಫಿಯಾ ದಂಧೆ – CPIM ಖಂಡನೆ – ಮಾಫಿಯಾ ನಿಗ್ರಹದ ಕ್ರಮಕ್ಕೆ ಆಗ್ರಹ
ಈಚೆಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಬಳಿಯ ಕುರುಬರಕೇರನಹಳ್ಳಿಯ ಫಾರಂ ಹೌಸ್ ನಲ್ಲಿ(Kurubarakeranahalli Farm House) ನಕಲಿ ಔಷಧಿ ದಂಧೆಯ ಅಂತರ ರಾರ್ಷ್ಟ್ರೀಯ ಜಾಲವನ್ನು ಆಹಾರ ಮತ್ತು ಔಷದಿ ನಿಯಂತ್ರಣ ಇಲಾಖೆ ಅಧಿಕಾರಿಗಳು(FDA) ಮತ್ತು ಪೋಲೀಸರು ಬೇಧಿಸಿದ್ದಾರೆ. ಅದರ ಕಿಂಗ್ ಪಿನ್ ಪ್ರಶಾಂತ್ ರಂಜನ್ ಬಾಬು(King Pin Prashanth Ranjan Baabu) ರವರನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಪೋಲೀಸರು ಈ ದಾಳಿಯಲ್ಲಿ ಸುಮಾರು 5.5 ಕೋಟಿ ರೂ. ಮೌಲ್ಯದ ನಕಲಿ ಔಷದಿಗಳು ಮತ್ತು ಅದರ ತಯಾರಿಯ ಸಾಧನಗಳನ್ನು ವಶ ಪಡಿಸಿಕೊಂಡಿದ್ದಾರೆ.
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಕರ್ನಾಟಕ ರಾಜ್ಯ ಸಮಿತಿ ನಾಗರೀಕರ ಜೀವಕ್ಕೆ ಅಪಾಯಕಾರಿಯಾದ ನಕಲಿ ಔಷಧಿ ದಂದೆಯನ್ನು ಬಹಿರಂಗ ಪಡಿಸಿ, ಅದರ ಜಾಲವನ್ನು ಬೇಧಿಸಿದ ಪೋಲೀಸರ ಮತ್ತು ಅಧಿಕಾರಿಗಳ ಕ್ರಮವನ್ನು ಶ್ಲಾಘಿಸುತ್ತದೆ.
ಈ ಫಾರಂ ಹೌಸ್ ನಲ್ಲಿ ಅವಧಿ ಮುಗಿದ ಔಷಧಿಗಳ ಲೇಬಲ್ ಬದಲಾಯಿಸಿ ಮರು ಪ್ಯಾಕಿಂಗ್ ಮಾಡಿ ಬೆಂಗಳೂರು ನಗರ ಒಂದರಲ್ಲಿಯೆ 90 ಪ್ರತಿಷ್ಟಿತ ಆಸ್ಪತ್ರೆಗಳು ಮತ್ತು ಕ್ಲಿನಿಕ್ ಗಳಿಗೆ ಆಭಾಧಿತವಾಗಿ ಹಲವು ವರ್ಷಗಳಿಂದ ಶೇ.50 ರ ಬೆಲೆಗೆ ಮಾರಾಟ ಮಾಡಿದೆ. ಇವುಗಳಲ್ಲಿ ಕ್ಯಾನ್ಸರ್ ಔಷಧಿಗಳು, ICU ನಲ್ಲಿ ಬಳಸುವ ಇಂಜೆಕ್ಷನ್ ಗಳು, ಜೀವ ರಕ್ಷಕ ಔಷಧಿಗಳು ಸೇರಿವೆ. ಅವುಗಳನ್ನು ಈ ಪ್ರತಿಷ್ಟಿತ ಕ್ಲಿನಿಕ್ ಗಳು ಮತ್ತು ಆಸ್ಪತ್ರೆಗಳು ರೋಗಿಗಳಿಗೆ ಉಣಬಡಿಸಿವೆ.
ಇದೀಗ FDA 26 ಸಂಸ್ಥೆಗಳ ಪೈಕಿ ಈಗಾಗಲೆ 16 ಸಂಸ್ಥೆಗಳ/ಕ್ಲಿನಿಕ್ ಗಳ ಲೈಸೆನ್ಸ ರದ್ದು ಪಡಿಸಿ ಕ್ರಮವಹಿಸಿದೆ ಎನ್ನಲಾಗಿದೆ ಮತ್ತು ಕರ್ತವ್ಯ ಲೋಪದ ಮೇಲೆ ಚಾಮರಾಜ ಪೇಟೆಯ ಸಹಾಯಕ ಔಷಧ ನಿಯಂತ್ರಕ ಓಂಕಾರೇಶ್ವರರನ್ನು ಅಮಾನತುಗೊಳಿಸಲಾಗಿದೆ.
ನಾಗರೀಕರ ಜೀವದ ಜೊತೆ ಚೆಲ್ಲಾಟವಾಡಿದ ಅತ್ಯಂತ ದುಷ್ಠ ಪ್ರಕರಣವಿದಾಗಿದ್ದು, ನಕಲಿ ಔಷದಿ ಮಾರಾಟಗಾರ ಸಂಸ್ಥೆಗಳ ಮಾಲೀಕರನ್ನು ಈ ಕೂಡಲೆ ಬಂಧಿಸಬೇಕು. ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಅವರ ಮೇಲೆ ನಾಗರೀಕರ ಕೊಲೆಯತ್ನದ ಕ್ರಿಮಿನಲ್ ಕೇಸ್ ದಾಖಲಿಸಬೇಕು. ನಾಗರೀಕರಿಗಾದ ಹಾನಿಯನ್ನು ಭರಿಸುವಂತೆ ಕ್ರಮ ವಹಿಸಬೇಕು. ನಕಲಿ ಔಷಧಿ ಮಾರಾಟ ಮಾಡಿದ ಬಳಸಿದ ಎಲ್ಲ ಕ್ಲಿನಿಕ್ ಹಾಗು ಆಸ್ಪತ್ರೆಗಳನ್ನು ತಕ್ಷಣವೆ ಮುಚ್ಚಬೇಕು.
ತನಿಖೆಯನ್ನು ರಾಜ್ಯದಾದ್ಯಂತ ಸರಕಾರಿ ಆಸ್ಪತ್ರೆಗಳು ಸೇರಿದಂತೆ ಔಷದಿ ವಿತರಣೆಯ ಜಾಲಕ್ಕೂ ವಿಸ್ತರಿಸಬೇಕೆಂದು ಹಾಗು ಇದರ ಹಿಂದಿರುವ ಎಲ್ಲ ಕರಾಳ ಮುಖಗಳನ್ನು ಹೊರಗೆಳೆದು ಶಿಕ್ಷಿಸಲು ಅಗತ್ಯ ಕ್ರಮ ವಹಿಸಬೇಕೆಂದು ಮುಖ್ಯಮಂತ್ರಿಗಳನ್ನು ಸಿಪಿಐ(ಎಂ) ಆಗ್ರಹಿಸುತ್ತದೆ.
ಇದೇ ಸಂದರ್ಭದಲ್ಲಿ FDA ಮತ್ತೊಂದು ಔಷಧಿ ಮಾಫಿಯಾವನ್ನು ಬೇಧಿಸಿ ಸಾರ್ವಜನಿಕರ ಗಮನ ಸೆಳೆದಿದೆ. ಈ ಮಾಫಿಯಾವು ಔಷಧಿಗಳ ತಯಾರಿಕೆಯ ವಾಸ್ತವಿಕ ಬೆಲೆಗಳಿಗಿಂತ 10 ರಿಂದ 50 ಪಟ್ಟು ಹೆಚ್ಚು ಗರಿಷ್ಠ ಮಾರಾಟ ಬೆಲೆ ನಿಗದಿಸಿ ಲೂಟಿ ಮಾಡುತ್ತಿರುವುದು ಬಯಲಾಗಿದೆ.
ಉದಾಹರಣೆಗೆ, ಕೇವಲ 86 ರೂ. ಬೆಲೆಯ ಸಾಮಾನ್ಯ ವಿಟಮಿನ್ /ಆಂಟಿಬಯೋಟಿಕ್ ಮಾತ್ರೆಯ ಗರಿಷ್ಟ ಮಾರಾಟದ ಬೆಲೆ ರೂ. 4528 ಎಂದು ಮುದ್ರಿಸಲಾಗುತ್ತದೆ.
ಕ್ಯಾನ್ಸರ್ / ಹೆಪಟೈಟಿಸ್ ಬಿ ಗೆ ಬಳಸುವ Biwtas – 400 mg ಮಾತ್ರೆಯ ಬೆಲೆ 5,859 ರೂ ಗಳಾಗಿದ್ದರೆ ಅದರ ಗರಿಷ್ಠ ಮಾರಾಟದ ಬೆಲೆ 62,690 ರೂ ಎಂದು ನಮೂದಿಸಲಾಗುತ್ತಿದೆ.
ಕಾಯ್ದೆಯು MRP ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿಗೆ ಮಾರಾಟ ಮಾಡಿದರೆ ದಂಡ ಹಾಗು ಶಿಕ್ಷೆ ವಿಧಿಸುತ್ತದೆ. ಆದರೆ ಗರಿಷ್ಟ ಮಾರಾಟ ಬೆಲೆಯನ್ನು ಹೆಚ್ಚಿಗೆ ಮುದ್ರಿಸಿದರೆ ಶಿಕ್ಷೆಯೇ ಇಲ್ಲ! ಇದೆಂತಹ ವಿಪರ್ಯಾಸ? ಆಯುಸ್ಮಾನ್ ಭಾರತ್ ನಂತಹ ಸರಕಾರಿ ಔಷದಿ ಖರೀದಿಯಲ್ಲೂ ಈ ತರಹದ ಗರಿಷ್ಠ ಮಾರಾಟ ಬೆಲೆಯ ಲೂಟಿ ಅಡಗಿರುವುದು ಬಹಿರಂಗಗೊಂಡಿದೆ.
ಸುಪ್ರಿಂ ಕೋರ್ಟ್ ಈ ಕುರಿತು “ಇದು ಲೂಟಿಯಲ್ಲ ನರಮೇಧ” ಎಂದು ವ್ಯಾಖ್ಯಾನಿಸಿದೆ.
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ರಾಜ್ಯ ಸಮಿತಿಯು ನರಮೇಧಕ್ಕೆ ಸಮನಾದ ಗರಿಷ್ಠ ಮಾರಾಟ ಬೆಲೆಯ ಈ ಲೂಟಿಕೋರ ದಂಧೆಯನ್ನು ಅತ್ಯಂತ ಕಟುವಾಗಿ ಖಂಡಿಸುತ್ತದೆ. ಈ ದಂಧೆಯಲ್ಲಡಗಿರುವ ಉನ್ನತ ಜಾಲವನ್ನು ಬೇಧಿಸಲು ನ್ಯಾಯಾಂಗ ಸುಪರ್ಧಿಯ ಉನ್ನತ ತನಿಖಾ ಸಂಸ್ಥೆಯನ್ನು ನೇಮಿಸುವಂತೆ, ಅಕ್ರಮದಿಂದ ಲೂಟಿಗೈದ ಎಲ್ಲ ಆಸ್ಪತ್ರೆಗಳ ಲೈಸನ್ಸ್ ಗಳನ್ನು ರದ್ದು ಪಡಿಸಬೇಕು. ಅವುಗಳ ಮಾಲೀಕರನ್ನು ಬಂಧಿಸಬೇಕು. ಸಂತ್ರಸ್ಥರಿಗೆ ಪರಿಹಾರವನ್ನು ಒದಗಿಸಬೇಕೆಂದು ಕೇಂದ್ರ ಹಾಗು ರಾಜ್ಯ ಸರಕಾರಗಳನ್ನು ಆಗ್ರಹಿಸುತ್ತದೆ.

