ಬೆಂಗಳೂರು: ಮುಂದಿನ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತಹ ಕೆಲಸವನ್ನು(Hot Work) ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟುಗೂಡಿ ಮಾಡಬೇಕು ಎಂಬ ನಿರ್ಧಾರ ಇವತ್ತು ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(B.Y.Vijayendra) ಅವರು ತಿಳಿಸಿದ್ದಾರೆ.
ಅವರು ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಎಲ್ಲ ಪ್ರಮುಖರ ಸಭೆ ಇಂದು ನಡೆದಿದೆ. ನಾನು ನಮ್ಮ ವಿಪಕ್ಷ ನಾಯಕರು, ಪಕ್ಷದ ಇತರ ಮುಖಂಡರು, ಜೆಡಿಎಸ್ ವತಿಯಿಂದ ಮಾನ್ಯ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಬೋಜೇಗೌಡರು, ಎರಡು ಪಕ್ಷದ ಪ್ರಮುಖ ಶಾಸಕರು ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು ಎಂದು ವಿವರಿಸಿದರು.
ಬೆಳಗಾವಿಯಲ್ಲಿ ಎರಡನೇ ತಾರೀಕಿನಿಂದ ಪ್ರಾರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಯಾವ ಯಾವ ವಿಚಾರಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಚರ್ಚಿಸಿದ್ದೇವೆ. ಬರಗಾಲ ತೀವ್ರವಾಗಿದ್ದು, ರಾಜ್ಯ ಸರ್ಕಾರದಿಂದ ಯಾವುದೇ ರೀತಿ ತಯಾರಿ ಇಲ್ಲ ಎಂದು ಟೀಕಿಸಿದರು.
₹5,000 ಕೊಡುತ್ತೇವೆ ಅಂತ ಹೇಳಿ ಘೋಷಣೆ ಮಾಡಿ, ನಾಮಕಾವಾಸ್ತೆಗೆ 45,000 ರೈತರಿಗೆ ಹಣ ಅಧರ್ಂಬರ್ಧ ಬಿಡುಗಡೆ ಮಾಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಚಾಳಿಯನ್ನು ಮುಂದುವರಿಸಿದ್ದಾರೆ. ರೈತರಿಗೆ ಪರಿಹಾರ ಕೊಡುವುದಕ್ಕೂ ಸಾಧ್ಯ ಆಗಿಲ್ಲ. ಕುಡಿಯುವ ನೀರಿನ ಹಾಹಾಕಾರ ಇದೆ, ರಾಜ್ಯ ಸರ್ಕಾರದಿಂದ ಯಾವುದೇ ರೀತಿ ತಯಾರಿ ಕೂಡ ಇಲ್ಲ ಎಂದು ಟೀಕಿಸಿದರು.
ಮತ್ತೊಂದು ಕಡೆ ಬೆಲೆ ಏರಿಕೆಯಿಂದ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ, ಕಾಂಗ್ರೆಸ್ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಆಶಾ ಕಾರ್ಯಕರ್ತರ ಬವಣೆ- ಇವೆಲ್ಲವನ್ನು ಸದನದಲ್ಲಿ ಅಧಿವೇಶನದಲ್ಲಿ ಚರ್ಚೆಗೆ ತೆಗೆದುಕೊಳ್ಳಬೇಕು. ಈ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತಹ ಕೆಲಸವನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಿಗೆ ಮಾಡಬೇಕು ಅನ್ನುವ ನಿರ್ಧಾರ ಇವತ್ತು ಆಗಿದೆ ಎಂದು ವಿವರ ನೀಡಿದರು.

