ಬೆಂಗಳೂರು: ಬಿಜೆಪಿ(BJP) ಮತ್ತು ಸಾರ್ವಜನಿಕರು ಇದೇ 15ರಿಂದ 5 ದಿನಗಳ ಕಾಲ ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಮೂಲಕ ತಹಸೀಲ್ದಾರ್, ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ. ಈ ಮೂಲಕ ವಂದೇ ಮಾತರಂ ಗೀತೆ ಮೊಟಕುಗೊಳಿಸಿದ್ದರ ವಿರುದ್ಧ ರಾಜ್ಯ ಸರಕಾರದ ವಿರುದ್ಧ ಒತ್ತಡ ಹೇರಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B Y Vijayendra) ಅವರು ಹೇಳಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರ ನೀಡಿದರು. ರಾಜ್ಯ ಸರಕಾರವು ತನ್ನ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕೆಂಬ ಆಗ್ರಹವನ್ನು ಮುಂದಿಡಲಿದ್ದೇವೆ ಎಂದು ತಿಳಿಸಿದರು.
ಮೊನ್ನೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಸಚಿವಸಂಪುಟ ಸಭೆಯಲ್ಲಿ ಒಂದು ಮಹತ್ವದ ತೀರ್ಮಾನ ಮಾಡಿದ್ದಾರೆ. ವಂದೇ ಮಾತರಂ ಕುರಿತಂತೆ ನಿರ್ಧಾರ ಮಾಡಿದ್ದಾರೆ. ವಂದೇ ಮಾತರಂ ಒಂದು ಕೇವಲ ಗೀತೆಯಲ್ಲ; ಕೋಟ್ಯಂತರ ಭಾರತೀಯರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೊತ್ತಿಸಿದ ಗೀತೆ ಅದು. ಅದು ಜನರಲ್ಲಿ ದೇಶಭಕ್ತಿಯ ಭಾವನೆ ಮೂಡಿÀಸಿದೆ. ಎಲ್ಲ ಆರು ಚರಣಗಳನ್ನು ಹಾಡುವಂತೆ ಕೇಂದ್ರ ಸರಕಾರ ತೀರ್ಮಾನಿಸಿದೆ. ಆದರೆ, ಇಲ್ಲಿನ ಸರಕಾರ, ಮುಖ್ಯಮಂತ್ರಿಗಳು ಕೇವಲ ಎರಡು ಚರಣಗಳನ್ನು ಹಾಡಿದರೆ ಸಾಕೆಂದು ತೀರ್ಮಾನಿಸಿದ್ದು, ದುರ್ದೈವ. ಅಲ್ಪಸಂಖ್ಯಾತರನ್ನು ಓಲೈಸುವ ನಿಟ್ಟಿನಲ್ಲಿ ಈ ರೀತಿ ನಿರ್ಧಾರ ಮಾಡಿದ್ದಾರೆ ಎಂದು ಆಕ್ಷೇಪಿಸಿದರು. ಆರು ಚರಣ ಹಾಡುವ ಜಮ್ಮು ಕಾಶ್ಮೀರದ ಮುಖ್ಯಮಂತ್ರಿಗಳಿಂದ ಡಿ.ಕೆ.ಶಿವಕುಮಾರ್ ಅವರು ಪಾಠ ಕಲಿಯಲಿ ಎಂದು ಕಿವಿಮಾತು ಹೇಳಿದರು.
ಕಾಂಗ್ರೆಸ್ ಒಳಗಡೆ ಕತ್ತಿ ಮಸೆಯುವ ಕೆಲಸ :
ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿ, ಸತೀಶ್ ಜಾರಕಿಹೊಳಿ ಅವರ ಬಗ್ಗೆ ಮಾಹಿತಿ ಇರುವ ಕಾಂಗ್ರೆಸ್ ಪಕ್ಷದವರೇ ಇ.ಡಿಗೆ ಮಾಹಿತಿ ಕೊಟ್ಟು, ಸಿಲುಕಿಸಿರಬಹುದೆಂಬ ಚರ್ಚೆ ನಡೆದಿದೆ. ಇ.ಡಿ. ಗೆ ದೂರು ಕೊಟ್ಟವರ ವಿವರ ಪತ್ತೆ ಹಚ್ಚಬೇಕಿದೆ ಎಂದು ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾರೆ. ಸತೀಶ್ ಜಾರಕಿಹೊಳಿ ಅವರು ಕೂಡ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳು. ಕಾಂಗ್ರೆಸ್ ಒಳಗಡೆ ಕತ್ತಿ ಮಸೆಯುವ ಕೆಲಸ ಆಗಿದೆಯೇ ಎಂದು ಸಂಶಯ ವ್ಯಕ್ತಪಡಿಸಿದರು.
ಇ.ಡಿ. ದಾಳಿ ಹಿಂದೆ ಬಿಜೆಪಿ ಪಾತ್ರ ಏನೂ ಇಲ್ಲ. ಕಾಂಗ್ರೆಸ್ ಆಂತರಿಕ ಕಚ್ಚಾಟ, ಸಿಎಂ ಗಾದಿಗಾಗಿ ಕಾದಾಟದಿಂದ ಪಿತೂರಿ, ಷಡ್ಯಂತ್ರ ನಡೆಯುತ್ತಿದೆಯೇ ಎಂಬ ಚರ್ಚೆಗಳೂ ನಡೆದಿವೆ ಎಂದು ವಿವರಿಸಿದರು. ಸಿಎಂ ಸ್ಥಾನದ ವಿಚಾರದಲ್ಲಿ ಮುಳ್ಳಾಗಬಹುದೆಂಬ ಕಾರಣಕ್ಕೆ ಮಾಹಿತಿ ನೀಡಿದ ಬಗ್ಗೆ ಮಾಹಿತಿ ಬರುತ್ತಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್.ಎಸ್.ನಂದೀಶ್ ರೆಡ್ಡಿ, ಪ್ರೀತಂ ಗೌಡ, ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಅವರು ಉಪಸ್ಥಿತರಿದ್ದರು.

