ಬೆಂಗಳೂರು: ರಾಷ್ಟ್ರೀಯ ದಾಳಿಂಬೆ ತಾಂತ್ರಿಕ ಸಮಾವೇಶವನ್ನು(National Pomegranate Technical Conference) ಅಕ್ಟೋಬರ್ 03 ರಂದು ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಬೆಳಿಗ್ಗೆ 9.00 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷರಾದ ಡಾ. ಎ. ಬಿ. ಪಾಟೀಲ(Dr.A.B.Patil) ಅವರು ತಿಳಿಸಿದರು.
ಇಂದು ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ರಾಷ್ಟ್ರೀಯ ದಾಳಿಂಬೆ ತಾಂತ್ರಿಕ ಸಮಾವೇಶದ ಆಯೋಜನೆ ಕುರಿತು ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಕೃಷಿ ತಂತ್ರಜ್ಞರ ಸಂಸ್ಥೆ, ಐಸಿಎಆರ್-ಎಟಿಎಆರ್‍ಐ, ಅಪೆಡಾ ಸಂಸ್ಥೆ, ಕಪೆಕ್ ಸಂಸ್ಥೆ, ಜೈನ್ ಇರಿಗೇಷನ್ ತೋಟಗಾರಿಕೆ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ, ಇವರ ಸಹಯೋಗದೊಂದಿಗೆ ಈ ಸಂಸ್ಥೆಯಲ್ಲಿ ಪ್ರಥಮ ಬಾರಿಗೆ ತೋಟಗಾರಿಕೆ ಬೆಳೆ ಆಧಾರಿತ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದರು.
ಈಗಾಗಲೇ ನಮ್ಮ ರಾಜ್ಯದಿಂದ ಅಲ್ಲದೆ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ರಾಜಸ್ಥಾನ ರಾಜ್ಯಗಳಿಂದ ಸುಮಾರು 200 ರೈತರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ. 25 ಮಳಿಗೆಗಳನ್ನು ಹಾಕಲಾಗುವುದು. ಇದೇ ಸಂದರ್ಭದಲ್ಲಿ “ಕರ್ನಾಟಕ ದಾಳಿಂಬೆ ರತ್ನ” ಪ್ರಶಸ್ತಿ, “ಕರ್ನಾಟಕ ದಾಳಿಂಬೆ ಸಂಪದ 2026” ಸ್ಮರಣ ಸಂಚಿಕೆ ಹಾಗೂ ಆಧುನಿಕ ತಂತ್ರಜ್ಞಾನವನ್ನು ಬಳಸಿ ‘Pomegranate digital App’ ನ್ನು ಬಿಡುಗಡೆ ಮಾಡಲಾಗುವುದು ಎಂದರು.
ನಮ್ಮ ರಾಜ್ಯದ ದಾಳಿಂಬೆ ಬೆಳೆಗಾರರಿಗೆ ಮಾರುಕಟ್ಟೆ ಒದಗಿಸುವುದರ ಜೊತೆಗೆ ಯಾವ ರೀತಿಯಾಗಿ ರಫ್ತು ಮಾಡಬೇಕು, ರಫ್ತು ಮಾಡಲಿಕ್ಕೆ ಏನೆಲ್ಲಾ ಮಾನದಂಡಗಳಿವೆ, ಅಪೆಡಾ ಸಂಸ್ಥೆಯಲ್ಲಿ ಏನೆಲ್ಲಾ ಯೋಜನೆಗಳಿವೆ ಎಂಬ ಬಗ್ಗೆಯು ಮಾರ್ಗದರ್ಶನ ನೀಡಲಾಗುವುದು. ಈ ಮೊದಲು ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಕೊಪ್ಪಳ, ವಿಜಯನಗರ, ಬಳ್ಳಾರಿ, ಚಿತ್ರದುರ್ಗ ಈ ಭಾಗಗಳಲ್ಲಿ ಹೆಚ್ಚಿನ ದಾಳಿಂಬೆ ಬೆಳೆಯಲಾಗುತ್ತಿತ್ತು. ಆದರೆ 10 – 15 ವರ್ಷಗಳ ನಂತರ ಅಲ್ಲಿ ಅಂಗಮಾರಿ ರೋಗ ಮತ್ತು ತೊಗಟೆಯ ಕಸಿಕೊಳೆ ರೋಗಗಳ ಕಾರಣಗಳಿಂದ 10 – 15 ವರ್ಷಗಳ ಗಿಡಗಳನ್ನು ರೈತರು ತೆಗೆದುಹಾಕಿದರು. ತದನಂತರ ಚಿತ್ರದುರ್ಗದ ಸೇರಿದಂತೆ, ಯಲಹಂಕ, ದೇವನಹಳ್ಳಿ, ಬೆಂಗಳೂರು ಗ್ರಾಮೀಣ ಮತ್ತು ಚಿಕ್ಕಬಳ್ಳಾಪುರ, ಕೋಲಾರ ಈ ಭಾಗದಲ್ಲಿ ಹೆಚ್ಚಾಗಿ ದಾಳಿಂಬೆ ಬೆಳೆಯುತ್ತಿದ್ದಾರೆ.
ದಾಳಿಂಬೆಯು ಎಲ್ಲಾ ರೋಗಗಳಿಗೆ ರಾಮಬಾಣವಾಗಿದೆ. ಅಲ್ಲದೆ ಹವಾಮಾನ ಸ್ನೇಹಿ ಬೆಳೆಯಾಗಿದ್ದು, ಬರ ಪ್ರದೇಶಗಳಳ್ಲಿ ಉತ್ತಮ ಆದಾಯ ನೀಡುವ ಬೆಳೆ ಆಗಿದೆ. ಆದರೆ ರೈತರು ಕೀಟ-ರೋಗ ಸಮಸ್ಯೆಗಳು, ಪೋಷಕಾಂಶಗಳ ನಿರ್ವಹಣೆ, ಮಾರ್ಗದರ್ಶನದ ಕೊರತೆ ಮತ್ತು ಮಾರುಕಟ್ಟೆ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಪರಿಹಾರ ಕಂಡುಕೊಳ್ಳಲು ಹಾಗೂ ಈ ಬೆಳೆಯನ್ನು ಪ್ರೋತ್ಸಾಹಿಸಲು ಒಂದು ದಿನದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ನಿವೃತ್ತ ಹೆಚ್ಚುವರಿ ತೋಟಗಾರಿಕೆ ನಿರ್ದೇಶಕರಾದ ಡಾ. ಹಿತ್ತಲ ಮನಿ, ಕೃಷಿ ತಂತ್ರಜ್ಞರ ಸಂಸ್ಥೆಯ ಸದಸ್ಯರಾದ ಡಾ. ಪ್ರಭಾಕರ ಶೆಟ್ಟಿ, ದಾಳಿಂಬೆ ಬೆಳೆಗಾರರ ಸಂಸ್ಥೆಯ ಅಧ್ಯಕ್ಷರಾದ ಮುನೇಗೌಡ ಉಪಸ್ಥಿತರಿದ್ದರು.

