Bellary : ಭಾರೀ ಕೈಗಾರಿಕೆಗಳ ಸ್ಥಾಪನೆಯ ಉದ್ದೇಶಕ್ಕೆಂದು ಬಳ್ಳಾರಿ ಜಿಲ್ಲೆಯ ಕುಡಿತಿನಿ (Kudithini) ಪ್ರದೇಶದ ಏಳು ಗ್ರಾಮಗಳ 12,875.09 ಎಕರೆ ಸ್ವಾಧೀನ ಪಡಿಸಿಕೊಂಡಿರುವ ಭೂಮಿಗೆ ನ್ಯಾಯಯುತ (Land Acquisition) ಭೂಬೆಲೆ ನಿಗದಿ ಮಾಡದೇ ವಂಚಿಸಿರುವುದನ್ನು ಹಾಗೂ 16 ವರ್ಷಗಳು ಕಳೆದರೂ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿ ಮಾಡದಿರುವುದರಿಂದ ತಮ್ಮ ಭೂಮಿಯನ್ನು ವಾಪಾಸು ಮಾಡಬೇಕೆಂದು ಈ ಭಾಗದ ರೈತರು ಹಾಗೂ ವಿವಿಧ ಜನ ಸಂಘಟನೆಗಳು ಕರ್ನಾಟಕ ಸರ್ಕಾರದ ನಿರ್ಲಕ್ಷ್ಯದ ಧೋರಣೆಯನ್ನು ಖಂಡಿಸಿ ಇದೇ 2026 ಜೂನ್ 18 ರಂದು ಬಳ್ಳಾರಿ ಜಿಲ್ಲೆಯ (Bellary Bundh) ಸಂಪೂರ್ಣ ಬಂದ್ ಸ್ವರೂಪದ ಹರತಾಳ ನಡೆಸಲು ಕರೆ ನೀಡಿವೆ.
ಜಿಲ್ಲೆಯ ಎಲ್ಲಾ ತಾಲೂಕುಗಳು ಸಂಪೂರ್ಣ ಬಂದ್ ಹರತಾಳ ನಡೆಸಲಿವೆ.

ಕಳೆದ 13 ವರ್ಷಗಳಿಂದಲೂ ವಿವಿಧ ರೀತಿಯ ಹೋರಾಟಗಳನ್ನು ಮಾಡಿರುವ ಕುಡಿತಿನಿ ಪ್ರದೇಶದ ಭೂ ಸಂತ್ರಸ್ತರ ಹೋರಾಟ ಸಮಿತಿ 2022 ಡಿಸೆಂಬರ್ 18 ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ- ಕೆ.ಐ.ಡಿ.ಬಿ.ಯು ಬಲವಂತವಾಗಿ 800 ಎಕರೆ ಭೂಮಿಯನ್ನು ಜಿಂದಾಲ್ಗೆ ಪರಭಾರೆ ಮಾಡಿದ್ದನ್ನು ವಿರೋಧಿಸಿ ಸರದಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿ, ಇಂದಿಗೆ 1276 ದಿನಗಳಾಗುತ್ತಿವೆ.

ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರ ಸಮ್ಮುಖದಲ್ಲಿ ಎರಡು ಬಾರಿ ಉನ್ನತ ಮಟ್ಟದ ಸಭೆ ನಡೆದು ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಲಾಗಿತ್ತು. ಈ ನಡುವೆ ಮಿತ್ತಲ್ ಕಂಪನಿಗೆ ಸ್ವಾಧೀನ ಪಡಿಸಿದ ಭೂಮಿಗೆ ಬೆಲೆ ಕಡಿಮೆ ನಿಗದಿಯಾಗಿ ಮೋಸ ಮಾಡಿದ್ದು ಇದನ್ನು ಪ್ರಶ್ನಿಸಿ ಕೇಸ್ ಸುಪ್ರಿಂ ಕೋರ್ಟ್ ರೈತರ ಪರವಾದ ತೀರ್ಪು ನೀಡಿ ಎಕರೆಗೆ ಒಟ್ಟು 1 ಕೋಟಿ 23 ಲಕ್ಷ ರೂ.ಗಳಿಂದ ಒಂದೂವರೆ ಕೋಟಿ ರೂ.ಗಳವರೆಗೆ ಪರಿಹಾರ ನೀಡಿದೆ.
ಸ್ವಾಧೀನ ಪಡಿಸಿಕೊಂಡ ಜಮೀನಿಗೆ ನ್ಯಾಯಯುತ ಬೆಲೆ ನೀಡಬೇಕು, ಘೋಷಿತ ಉದ್ದೇಶಕ್ಕೆ ಬಳಸದೇ ಅನ್ಯ ಉದ್ದೇಶಕ್ಕೆ ಬಳಸಕೂಡದು, ನ್ಯಾಯಯುತ ಪರಿಹಾರ ನೀಡದಿದ್ದಲ್ಲಿ ತಮ್ಮ ಭೂಮಿ ವಾಪಾಸು ಕೊಡಬೇಕು ಎಂದು ಆಗ್ರಹ ಪಡಿಸಲಾಗಿದೆ.
ಆದ್ದರಿಂದ ಸರ್ಕಾರ ರೈತರೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಲು ಸಭೆ ನಿಗದಿ ಮಾಡಬೇಕೆಂದು ಒತ್ತಾಯಿಸಲಾಗಿದೆ.

