ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಕರ್ನಾಟಕ ವರ್ಕಿಂಗ್
ಡಿಜಿಟಲ್ ಅಂಡ್ ಸೋಶಿಯಲ್ ಮೀಡಿಯಾ ಅಸೋಸಿಯೇಷನ್ ಆಗ್ರಹ
ಬೆಂಗಳೂರು : ಭಕ್ತರ ಧಾರ್ಮಿಕ (Devotees) ಭಾವನೆಗಳಿಗೆ ಧಕ್ಕೆ ತರುವ, ಸಾಮಾಜಿಕ ಶಾಂತಿ ಕದಡುವ ಹಾಗೂ ಜನರನ್ನು ದಿಕ್ಕುತಪ್ಪಿಸುವಂತಹ ಆಕ್ಷೇಪಾರ್ಹ ಮತ್ತು ಮಾನಹಾನಿಕರ ವಿಷಯಗಳನ್ನು ಸಾಮಾಜಿಕ ಜಾಲತಾಣ (social media) ಗಳಲ್ಲಿ ಪ್ರಸಾರ ಮಾಡುವುದಕ್ಕೆ ಕಡಿವಾಣ ಹಾಕಬೇಕು ಎಂದು ಕರ್ನಾಟಕ ವರ್ಕಿಂಗ್ ಡಿಜಿಟಲ್ ಅಂಡ್ ಸೋಶಿಯಲ್ ಮೀಡಿಯಾ ಅಸೋಸಿಯೇಷನ್ (Working Digital & Social Media) ಆಗ್ರಹಿಸಿದೆ.
ಶ್ರೀ ಸಾಯಿಬಾಬಾ (Sri Saibaba)ಹಾಗೂ ಸಾಯಿಬಾಬಾ ಸಂಸ್ಥಾನದ ವಿರುದ್ಧ ಆಕ್ಷೇಪಾರ್ಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಉಚ್ಚ ನ್ಯಾಯಾಲಯ ನೀಡಿರುವ ನಿರ್ದೇಶನವನ್ನು ಸಂಬಂಧಪಟ್ಟವರು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಂತಹ ವಿಷಯಗಳ ಪ್ರಸಾರದಿಂದ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವುದಲ್ಲದೆ, ಸಮಾಜದಲ್ಲಿ ಅನಗತ್ಯ ಗೊಂದಲ, ಅಶಾಂತಿ ಮತ್ತು ವೈಮನಸ್ಸು ಸೃಷ್ಟಿಯಾಗುವ ಸಾಧ್ಯತೆಯಿದೆ.
ಈ ಹಿನ್ನೆಲೆಯಲ್ಲಿ ಆಕ್ಷೇಪಾರ್ಹ ವಿಡಿಯೋ ಹಾಗೂ ವಿಷಯಗಳನ್ನು ತಕ್ಷಣವೇ ಪರಿಶೀಲಿಸಿ, ಕಾನೂನುಬಾಹಿರ ಅಥವಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆರವುಗೊಳಿಸಬೇಕು. ಇಂತಹ ವಿಷಯಗಳನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಿ, ಪ್ರಸಾರ ಮಾಡಿ ಸಾಮಾಜಿಕ ಶಾಂತಿಗೆ ಧಕ್ಕೆ ತರುವ ಕಿಡಿಗೇಡಿಗಳ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಈ ಕುರಿತು ಯೂಟ್ಯೂಬ್, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಗ್ರಿವನ್ಸ್ ಅಪೀಲ್ ಕಮಿಟಿ (GAC)ಗೆ ಮನವಿ ಸಲ್ಲಿಸಿ, ದೆಹಲಿ ಉಚ್ಚ ನ್ಯಾಯಾಲಯದ ನಿರ್ದೇಶನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಕರ್ನಾಟಕ ವರ್ಕಿಂಗ್ ಡಿಜಿಟಲ್ ಅಂಡ್ ಸೋಶಿಯಲ್ ಮೀಡಿಯಾ ಅಸೋಸಿಯೇಷನ್ ರಾಜ್ಯ ಅಧ್ಯಕ್ಷ ಮಾರುತಿ ಬನ್ನವಗೋಳ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ನಟರಾಜ ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ವೇದಿಕೆಗಳಾಗಿದ್ದು, ಅದನ್ನು ದುರುಪಯೋಗಪಡಿಸಿಕೊಂಡು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ, ಸುಳ್ಳು ಅಥವಾ ದಾರಿತಪ್ಪಿಸುವ ಮಾಹಿತಿಗಳನ್ನು ಹರಡುವುದು ಸಮಾಜದ ಸ್ವಾಸ್ಥ್ಯಕ್ಕೆ ಅಪಾಯಕಾರಿ. ಆದ್ದರಿಂದ ಇಂತಹ ವಿಷಯಗಳ ವಿರುದ್ಧ ತ್ವರಿತವಾಗಿ ಕ್ರಮ ಕೈಗೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಜವಾಬ್ದಾರಿಯುತ ಮತ್ತು ಶಾಂತಿಯುತ ವಾತಾವರಣ ನಿರ್ಮಿಸಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹಾಗೂ ಸಾಮಾಜಿಕ ಶಾಂತಿ ಕದಡುವ ಯಾವುದೇ ರೀತಿಯ ವಿಷಯಗಳ ಪ್ರಸಾರಕ್ಕೆ ಅವಕಾಶ ನೀಡಬಾರದು. ದೆಹಲಿ ಉಚ್ಚ ನ್ಯಾಯಾಲಯದ ನಿರ್ದೇಶನವನ್ನು ಗೌರವಿಸಿ, ಆಕ್ಷೇಪಾರ್ಹ ವಿಷಯಗಳನ್ನು ತಕ್ಷಣ ತೆರವುಗೊಳಿಸುವುದರ ಜೊತೆಗೆ, ಅವುಗಳನ್ನು ಸೃಷ್ಟಿಸಿ ಪ್ರಸಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾರುತಿ ಬನ್ನವಗೋಳ ಮತ್ತು ಎನ್. ನಟರಾಜ ಆಗ್ರಹಿಸಿದ್ದಾರೆ.

