ಬೆಂಗಳೂರು: ರೈತರ ಸಮಸ್ಯೆ, ಬರಗಾಲ ಸಮಸ್ಯೆಗೆ ಕೇವಲ ಸರ್ಕಾರ ಕ್ರಮ ವಹಿಸುವುದಲ್ಲ, ಮೂರು ಪಕ್ಷಗಳ ಸದಸ್ಯರು ಜೊತೆಗೂಡಿ ಯೋಚನೆ ಮಾಡಬೇಕಿದೆ. ನಮ್ಮ ರೈತರು ತೊಂದರೆಯಲ್ಲಿದ್ದಾರೆ, ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಯೋಚಿಸಬೇಕೆ ಹೊರತು ಈ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ಮುಧೋಳ ಶಾಸಕ ಆರ್.ಬಿ.ತಿಮ್ಮಾಪುರ(Mudola MLA R.B.Thimmapura) ವಿಧಾನಸಭೆಯಲ್ಲಿ ಮನವಿ ಮಾಡಿದರು.
ಇಂದು ಗುರುವಾರ ವಿಧಾನಸಭೆಯ ವಿಶೇಷ ಅಧಿವೇಶನದ ಬರಗಾಲ ಕುರಿತು ಚರ್ಚೆಯ ವಿಷಯದಲ್ಲಿ ಮಾತನಾಡಿದ ಶಾಸಕರು ಕಳೆದ ಮೂರು ದಿನದಿಂದ ಬರಗಾಲ ಕುರಿತು ಚರ್ಚೆ ನಡೆಯುತ್ತಿದೆ. ಆದರೆ ರೈತನ ಸಮಸ್ಯೆಗೆ ಯಾವ ಕ್ರಮ ವಹಿಸಬೇಕು. 224 ಶಾಸಕರು ಇದ್ದೇವೆ. ಎಲ್ಲರೂ ರೈತರ ಪರವಾಗಿ ನಿಲ್ಲುತ್ತೇವೆ ಎಂಬ ಮಾತೇ ಕೇಳಿ ಬಂದಿಲ್ಲ.
ಬರಗಾಲ ಸಮಸ್ಯೆ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನೇಕ ಸಭೆಗಳನ್ನು ಮಾಡಿದ್ದಾರೆ. ರೈತರ ಪರವಾಗಿ ಸರ್ಕಾರ ಏನೇನು ಕ್ರಮ ಕೈಗೊಂಡಿದೆ ಎಂಬುದರ ಬಗ್ಗೆ ಮುಖ್ಯಮಂತ್ರಿಗಳು ಸದನದಲ್ಲಿ ತಿಳಿಸಿದ್ದಾರೆ. ಬರಪೀಡಿತ ಪ್ರದೇಶ ಎಂದು ಘೋಷಿಸಲು ಇರುವ ತೊಂದರೆಗಳನ್ನು ಸರಿ ಮಾಡದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕ ಯಾವ ರೀತಿಯ ಸಮಸ್ಯೆ ಎದುರಿಸುತ್ತದೆ ಎಂದು ಯೋಚಿಸಬೇಕಿದೆ ಎಂದರು.
ಬಡವರ ಪರವಾದ-ರೈತರ ಪರವಾದ ಸರ್ಕಾರ:
ಮುಖ್ಯವಾಗಿ ಬರಗಾಲ ಘೋಷಣೆ ಮಾಡುವಲ್ಲಿ ಇರುವ ಮಾರ್ಗಸೂಚಿಗಳಲ್ಲಿ ಬದಲಾವಣೆ ಮಾಡಲು ಪಕ್ಷಾತೀತ ಹೋರಾಟ ಮಾಡದಿದ್ದಲ್ಲಿ ರೈತ ಉಳಿಯುವುದಿಲ್ಲ. ಇದು ಕೇವಲ ಬರದ ವಿಷಯವಲ್ಲ. ದೇಶದ ರೈತನ ಪರಿಸ್ಥಿತಿಯ ವಿಷಯ. ಸರ್ಕಾರದ ಗ್ಯಾರಂಟಿಗಳು ಇವತ್ತು ಇಲ್ಲದೇ ಇದ್ದರೆ ರೈತನ ಪರಿಸ್ಥಿತಿ ಏನಾಗುತ್ತಿತ್ತು ಒಮ್ಮೆ ಯೋಚನೆ ಮಾಡಿ, ಬೆಳೆ ಇಲ್ಲದಿದ್ದರೂ ರೈತನ ಹೊಟ್ಟೆ ತುಂಬುತ್ತಿದೆ. ಕರೆಂಟ್, ಸಾರಿಗೆ, ಗೃಹಲಕ್ಷ್ಮಿ ಹಣದಿಂದ ರಾಜ್ಯದ ಜನರಿಗೆ ಸಹಾಯವಾಗುತ್ತಿದೆ, ರಾಜ್ಯ ಸರ್ಕಾರ ಬಡವರ ಪರವಾಗಿ, ರೈತರ ಪರವಾಗಿ ನಿಂತಿದೆ. ದುಡಿಮೆ ಇಲ್ಲದಿದ್ದರೂ ಬದುಕು ನಡೆಸಲಿಕ್ಕೆ ಅವಕಾಶ ಮಾಡಿಕೊಟ್ಟ ಸರ್ಕಾರ ಎಂದರು.
ಕೇಂದ್ರದ ತಾರತಮ್ಯ:
ಬರಗಾಲ ಘೋಷಣೆ ಮಾರ್ಗಸೂಚಿ ಸಡಿಲಕೆ ಸಂಬಂಧ ಕೇಂದ್ರಕ್ಕೆ ಪತ್ರ ಬರೆದಿದ್ದರೂ ಉತ್ತರ ಬಂದಿಲ್ಲ. ಪ್ರಧಾನಿಗಳಾಗಲಿ, ಮಂತ್ರಿಗಳಾಗಲಿ, ಸಂಸದರಾಗಲಿ ಈ ಕುರಿತು ಬಾಯಿ ಬಿಟ್ಟು ಮಾತನಾಡಿಲ್ಲ, ಇದರಲ್ಲಿ ಕೇಂದ್ರ ಸರ್ಕಾರದ ಜವಬ್ದಾರಿ ಇಲ್ಲವೇ. ವಿರೋಧ ಪಕ್ಷದವರು ನಾವು ರೈತರ ಪರವಾಗಿ ನಿಲ್ಲುತ್ತೇವೆ ಎಂದು ಒಂದು ಮಾತನಾಡಿಲ್ಲ. ರಾಜ್ಯ ಸರ್ಕಾರವನ್ನು ಟೀಕೆ ಮಾಡುವ ಕೆಲಸದಲ್ಲಿ ಮಾತ್ರ ನಿರತರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಜನತೆ ವಿರೋಧ ಪಕ್ಷ, ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂದು ನೋಡುತ್ತಿದ್ದಾರೆ. ಬೆಳೆ ವಿಮೆ, ರಾಜ್ಯದ ಪಾಲಿನ ಜಿ.ಎಸ್.ಟಿ ಸಂಬಂಧಪಟ್ಟಂತೆ ರಾಜ್ಯದ ಪಾಲು ಕೇಂದ್ರ ಸರ್ಕಾರ ಕೊಟ್ಟಿಲ್ಲ. ಈ ರೀತಿಯ ತಾರತಮ್ಯ ನಿಲ್ಲಿಸದೇ ಇದ್ದರೆ ಪರಿಸ್ಥಿತಿ ಏನಾಗುತ್ತದೆ ಎಂದು ಯೋಚಿಸಬೇಕಿದೆ. ರೈತರ ತೊಂದರೆಗೆ ಒಕ್ಕೊರಲಾಗಿ ಸ್ಪಂದಿಸಬೇಕಿದೆ ಎಂದು ಶಾಸಕರು ವಿಧಾನಸಭೆಯಲ್ಲಿ ಮನವಿ ಮಾಡಿದರು.
ಮುಖ್ಯಮಂತ್ರಿಗಳು ಜಿಲ್ಲಾ ಭೇಟಿ- ಬರ ಸಮಸ್ಯೆಗೆ ಸ್ಪಂದಿಸಿದ ಮುಖ್ಯಮಂತ್ರಿಗಳು- ಶಾಸಕ ಶ್ರೀನಿವಾಸಯ್ಯ

