ನವದೆಹಲಿ: ದೇಶದ ಬಹುನಿರೀಕ್ಷಿತ 2027ರ ಜನಗಣತಿಯ(Census) ಎರಡನೇ ಹಂತವಾದ ಜನಸಂಖ್ಯೆ ಗಣತಿಗೆ ಕೇಂದ್ರ ಸರ್ಕಾರ(Central Government) ಅಧಿಕೃತ ದಿನಾಂಕ ಪ್ರಕಟಿಸಿದೆ. ಅದರಂತೆ, 2027ರ ಜನವರಿ 25ರಿಂದ ಫೆಬ್ರವರಿ 28ರವರೆಗೆ ದೇಶದ ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನಸಂಖ್ಯೆ ಗಣತಿ ನಡೆಯಲಿದೆ. ಈ ಕುರಿತು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಜನವರಿ 10ರಿಂದ ಸ್ವಯಂ ಗಣತಿಗೆ ಅವಕಾಶ
ಜನಗಣತಿ ಪ್ರಕ್ರಿಯೆಯನ್ನು ಸುಲಭಗೊಳಿಸುವ ಉದ್ದೇಶದಿಂದ ಜನವರಿ 10ರಿಂದ ಜನವರಿ 24ರವರೆಗೆ ಸ್ವಯಂ ಗಣತಿ (Self Enumeration) ನಡೆಸಲು ಅವಕಾಶ ಕಲ್ಪಿಸಲಾಗಿದೆ. ಈ ಅವಧಿಯಲ್ಲಿ ಸಾರ್ವಜನಿಕರು ತಮ್ಮ ಕುಟುಂಬದ ಮಾಹಿತಿಯನ್ನು ಸ್ವತಃ ದಾಖಲಿಸಿಕೊಳ್ಳಬಹುದು. ನಂತರ ಜನವರಿ 25ರಿಂದ ಫೆಬ್ರವರಿ 28ರವರೆಗೆ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಜನಸಂಖ್ಯೆ ಗಣತಿ ಕಾರ್ಯ ನಡೆಸಲಿದ್ದಾರೆ.
ಮಾರ್ಚ್ 1ರಿಂದ ಮರುಪರಿಶೀಲನೆ
ಜನಗಣತಿ ಕಾರ್ಯ ಪೂರ್ಣಗೊಂಡ ಬಳಿಕ ಯಾವುದೇ ಮಾಹಿತಿ ಬಿಟ್ಟುಹೋಗಿದ್ದರೆ ಅಥವಾ ದಾಖಲೆಗಳಲ್ಲಿ ವ್ಯತ್ಯಾಸಗಳಿದ್ದರೆ ಅವುಗಳನ್ನು ಸರಿಪಡಿಸಲು ಮಾರ್ಚ್ 1ರಿಂದ ಮಾರ್ಚ್ 5ರವರೆಗೆ ಮರುಪರಿಶೀಲನಾ ಸುತ್ತು (Revisional Round) ನಡೆಯಲಿದೆ. 2027ರ ಮಾರ್ಚ್ 1ರ ಮಧ್ಯರಾತ್ರಿ 12 ಗಂಟೆಯನ್ನು ಜನಗಣತಿಯ ಉಲ್ಲೇಖ ದಿನಾಂಕ (Reference Date) ಎಂದು ನಿಗದಿಪಡಿಸಲಾಗಿದೆ.
ಕೆಲವು ರಾಜ್ಯಗಳಿಗೆ ವಿನಾಯಿತಿ
ಈ ವೇಳಾಪಟ್ಟಿಯು ಮಣಿಪುರ (ಮುಂದಿನ ಆದೇಶದವರೆಗೆ), ಗೋವಾ, ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ ಹಾಗೂ ಲಡಾಖ್ಗೆ ಅನ್ವಯಿಸುವುದಿಲ್ಲ. ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರದ ಹಿಮಾವೃತ ಪ್ರದೇಶಗಳಿಗೂ ಪ್ರತ್ಯೇಕ ವೇಳಾಪಟ್ಟಿ ಇರಲಿದೆ. ಚುನಾವಣೆಗಳು ಮತ್ತು ಹವಾಮಾನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಈ ಪ್ರದೇಶಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಎರಡು ಹಂತಗಳಲ್ಲಿ ಜನಗಣತಿ
2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ ಮನೆಗಳ ಪಟ್ಟಿ ಮತ್ತು ವಸತಿ ಗಣತಿ ಕಾರ್ಯವನ್ನು 2026ರ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ ನಡೆಸಲಾಗಿದೆ. ಈ ಹಂತದಲ್ಲಿ ಮನೆಗಳ ಸ್ಥಿತಿ, ಕುಡಿಯುವ ನೀರು, ವಿದ್ಯುತ್, ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತದೆ.
ಎರಡನೇ ಹಂತದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜನಸಂಖ್ಯಾ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ವಲಸೆ ಮತ್ತು ಫಲವತ್ತತೆ ಸಂಬಂಧಿತ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಈ ಬಾರಿ ಜಾತಿ ಗಣತಿಯನ್ನೂ ಎರಡನೇ ಹಂತದಲ್ಲಿ ಸೇರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ದೇಶದ ಜನಸಂಖ್ಯೆಯ ನಿಖರ ಮಾಹಿತಿ ಪಡೆಯಲು ಮತ್ತು ಭವಿಷ್ಯದ ಅಭಿವೃದ್ಧಿ ಯೋಜನೆಗಳು, ಸರ್ಕಾರಿ ಸೌಲಭ್ಯಗಳು ಹಾಗೂ ನೀತಿ ನಿರ್ಧಾರಗಳನ್ನು ರೂಪಿಸಲು 2027ರ ಜನಗಣತಿ ಮಹತ್ವದ ಪಾತ್ರ ವಹಿಸಲಿದೆ.
ರಾಜ್ಯಗಳಿಗೆ ಹೆಚ್ಚುವರಿ ಮಾರಾಟ ತೆರಿಗೆ ವಿಧಿಸುವ ಅಧಿಕಾರಕ್ಕೆ ಸುಪ್ರೀಂ ಕೋರ್ಟ್ ಅಸ್ತು: 1974ರ ತೀರ್ಪು ಮಾನ್ಯ

