ಬೆಂಗಳೂರು: 71ನೇ ಕನ್ನಡ ರಾಜ್ಯೋತ್ಸವದ(71st Kannada Rajyotsava) ಸಂಭ್ರಮದ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿ ದಿನನಿತ್ಯ ಉತ್ತರಹಳ್ಳಿಯಿಂದ ವಿಧಾನಸೌಧಕ್ಕೆ ಸಂಚರಿಸುವ ಬಿಎಂಟಿಸಿ(BMTC) ಬಸ್ ಪ್ರಯಾಣಿಕರು, ಬಸ್ಸಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ತಾಯಿ ಭುವನೇಶ್ವರಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿದರು.
ಬೆಳಿಗ್ಗೆ ಎಂದಿನಂತೆ ತಮ್ಮ ಕಚೇರಿ ಹಾಗೂ ದೈನಂದಿನ ಕೆಲಸಗಳಿಗೆ ತೆರಳಲು ವಿಧಾನಸೌಧದ ಬಸ್ ನಿಲ್ದಾಣದಲ್ಲಿ ಸೇರಿದ್ದ ಪ್ರಯಾಣಿಕರು, ಕನ್ನಡ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ತಾವು ಪ್ರತಿದಿನ ಪ್ರಯಾಣಿಸುವ ಬಿಎಂಟಿಸಿ ಬಸ್ಸನ್ನು ಹೂವಿನ ಹಾರ, ಮಾವಿನ ತೋರಣ ಹಾಗೂ ಕನ್ನಡದ ಬಾವುಟಗಳಿಂದ ಸುಂದರವಾಗಿ ಅಲಂಕರಿಸಿದ್ದರು.
ತಾವು ಪ್ರತಿದಿನ ಸಂಚರಿಸುವ ಪ್ರಯಾಣಿಕರು, ಬಸ್ ಚಾಲಕ ಮತ್ತು ನಿರ್ವಾಹಕರೊಂದಿಗೆ ಸೇರಿ ಆಸಕ್ತಿಯಿಂದ ಬಸ್ಸಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಸಿಹಿ ಹಂಚುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಮೂಲಕ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಸಿಬ್ಬಂದಿ ರಾಮಚಂದ್ರ ಉಕ್ಕಲಿ, ಬಿಎಂಟಿಸಿ ನಿರ್ವಾಹಕ ಕೃಷ್ಣಪ್ಪ ಹೆಚ್, ವಾಹನ ಚಾಲಕರಾದ ನಾಗರಾಜ.ಎಂ, ಕೃಷಿ ಇಲಾಖೆಯ ಸಿಬ್ಬಂದಿಗಳಾದ ಭಾಗ್ಯ, ಸವಿತಾ, ಗೀತಾ, ಶಕುಂತಲಾ, ಗೀತಾ, ನಂದಿನಿ, ರಶ್ಮಿ, ಸರಸ್ವತಿ, ಗುರು, ಪ್ರವೀಣಕುಮಾರ್, ಕಾವ್ಯಾ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

