ಬೆಂಗಳೂರು: ಗುಜರಾತಿನ ಆನಂದ್‍ನಲ್ಲಿರುವ ‘ಕೃಷಿ ಹವಾಮಾನ ಶಾಸ್ತ್ರಜ್ಞರ ಸಂಘ’ (Association of Agrometeorologists) ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಜಂಟಿ ಆಶ್ರಯದಲ್ಲಿ “ಡಿಜಿಟಲ್ ಕೃಷಿಗಾಗಿ ಕೃಷಿ ಹವಾಮಾನ ಬುದ್ಧಿಮತ್ತೆ” (Agrometeorological Intelligence for Digital Agriculture) ಕುರಿತ ಅಂತರರಾಷ್ಟ್ರೀಯ ಸಮ್ಮೇಳನ INAGMET-2026 ನವೆಂಬರ್ 26 ರಿಂದ 28, 2026ರವರೆಗೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಜಿಕೆವಿಕೆ ಆವರಣದಲ್ಲಿ ನಡೆಯಲಿದೆ.
ಡಿಜಿಟಲ್ ತಂತ್ರಜ್ಞಾನ ಮತ್ತು ಬುದ್ಧಿಮತ್ತೆ ಆಧಾರಿತ ಪರಿಹಾರಗಳ ಮೂಲಕ ಕೃಷಿ ಕ್ಷೇತ್ರವನ್ನು ಪರಿವರ್ತಿಸುವಲ್ಲಿ ಕೃಷಿ ಹವಾಮಾನಶಾಸ್ತ್ರದ ಪಾತ್ರದ ಕುರಿತು ಚರ್ಚಿಸಲು ದೇಶ-ವಿದೇಶಗಳ ವಿಜ್ಞಾನಿಗಳು, ಸಂಶೋಧಕರು, ಶಿಕ್ಷಣ ತಜ್ಞರು, ನೀತಿ ನಿರೂಪಕರು, ಕೃಷಿ ವೃತ್ತಿಪರರು ಮತ್ತು ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸುವುದು ಮುಖ್ಯ ಉದ್ದೇಶವಾಗಿದೆ.
ಕೃಷಿಯಲ್ಲಿ ನಿಖರ ನಿರ್ಧಾರಗಳನ್ನು ಕೈಗೊಳ್ಳಲು ಹವಾಮಾನ ಮತ್ತು ವಾಯುಗುಣ ಮಾಹಿತಿ, ಕೃತಕ ಬುದ್ಧಿಮತ್ತೆ (ಎಐ), ಡಿಜಿಟಲ್ ತಂತ್ರಜ್ಞಾನಗಳು ಮತ್ತು ಆಧುನಿಕ ಕೃಷಿ ಸಾಧನಗಳ ಸಮನ್ವಯ, ಬೆಳೆ ಯೋಜನೆ, ಹವಾಮಾನ ಆಧಾರಿತ ಕೃಷಿ ಸಲಹಾ ಸೇವೆಗಳು, ಹವಾಮಾನ-ಸ್ನೇಹಿ ಹಾಗೂ ನಿಖರ ಕೃಷಿ ಮತ್ತು ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸುವ ತಂತ್ರಗಳ ಕುರಿತು ಚರ್ಚೆ ನಡೆಯಲಿದೆ.
ಹವಾಮಾನ ಸಂಬಂಧಿತ ಬೆಳೆ ನಷ್ಟವನ್ನು ತಗ್ಗಿಸಲು, ಒಳಹರಿವು ಬಳಕೆಯ ದಕ್ಷತೆಯನ್ನು ಸುಧಾರಿಸಲು ಮತ್ತು ಕೃಷಿ ಲಾಭದಾಯಕತೆಯನ್ನು ಹೆಚ್ಚಿಸಲು-ವಿಶೇಷವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ-ಕೃಷಿ ಹವಾಮಾನ ಮಾಹಿತಿಯ ಲಭ್ಯತೆ, ವಿಶ್ವಾಸಾರ್ಹತೆ ಮತ್ತು ಪ್ರಾಯೋಗಿಕ ಬಳಕೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.
ಈ ಸಮ್ಮೇಳನವು ಸಂಶೋಧನೆ, ತಾಂತ್ರಿಕ ನಾವೀನ್ಯತೆ, ಸಾಂಸ್ಥಿಕ ವ್ಯವಸ್ಥೆ ಮತ್ತು ರೈತ ಸಮುದಾಯಗಳ ನಡುವಿನ ಸಂಪರ್ಕ ಬಲಪಡಿಸಿ, ಹವಾಮಾನ-ಸ್ಥಿತಿಸ್ಥಾಪಕ ಮತ್ತು ಸುಸ್ಥಿರ ಕೃಷಿ ಉತ್ಪಾದನಾ ವ್ಯವಸ್ಥೆಗಳನ್ನು ರೂಪಿಸಲು ಅನುಕೂಲವಾಗಲಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶನಾಲಯದ ಕೃಷಿ ಮಾಹಿತಿ ಘಟಕದ ಹಿರಿಯ ವಾರ್ತಾತಜ್ಞರು ಮತ್ತು ಮುಖ್ಯಸ್ಥರಾದ ಡಾ. ಕೆ.ಪಿ. ರಘುಪ್ರಸಾದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

