ಬೆಂಗಳೂರು : “ಪುಸ್ತಕಗಳು ಕೇವಲ ಜ್ಞಾನಾರ್ಜನೆಯ ಮಾಧ್ಯಮಗಳಲ್ಲ; ಅವು ನಮ್ಮ ಆಲೋಚನೆಗಳಿಗೆ ದಿಕ್ಕು ನೀಡುತ್ತವೆ, ಮಾನವೀಯ ಸಂವೇದನೆಗಳನ್ನು ಶ್ರೀಮಂತಗೊಳಿಸುತ್ತವೆ(Enrich) ಹಾಗೂ ಸಮಾಜಕ್ಕೆ ಸರಿಯಾದ ಮಾರ್ಗದರ್ಶನ(Guidance) ನೀಡುತ್ತವೆ” ಎಂದು ಗೌರವಾನ್ವಿತ ರಾಜ್ಯಪಾಲರಾದ ಡಾ.ಸುಧಾ ಯಾದವ್(Dr.Sudha Yadav) ಹೇಳಿದರು.

ನಗರದ ಜಯನಗರದ ಚಂದ್ರ ಗುಪ್ತ ಮೌರ್ಯ ಮೈದಾನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವೀರಲೋಕ ಪ್ರಕಾಶನದ 6ನೇ ಪುಸ್ತಕ ಸಂತೆಯನ್ನು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಕನ್ನಡ ಭಾಷೆಯ ಸಾಹಿತ್ಯಿಕ ಇತಿಹಾಸ ಸಾವಿರ ವರ್ಷಗಳಿಗೂ ಹೆಚ್ಚಿನದು. ಕವಿರಾಜಮಾರ್ಗದ ಸಾಹಿತ್ಯಿಕ ಪರಂಪರೆಯಿಂದ ಹಿಡಿದು ಭಗವಾನ್ ಬಸವೇಶ್ವರರ ಕ್ರಾಂತಿಕಾರಿ ವಚನಗಳವರೆಗೆ, ಪಂಪ, ರನ್ನ, ಪೊನ್ನರಂತಹ ಮಹಾನ್ ಕವಿಗಳಿಂದ ಹಿಡಿದು ಆಧುನಿಕ ಯುಗದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳವರೆಗೆ ಕನ್ನಡ ಸಾಹಿತ್ಯವು ಸಮಾಜಕ್ಕೆ ಸದಾ ಹೊಸ ಚಿಂತನೆ ಮತ್ತು ದಿಕ್ಕನ್ನು ನೀಡಿದೆ” ಎಂದು ಅವರು ಹೇಳಿದರು.
ವೀರಲೋಕ ಪ್ರಕಾಶನವು ಕಳೆದ ನಾಲ್ಕು ವರ್ಷಗಳಲ್ಲಿ 200ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ, ಲಕ್ಷಾಂತರ ಓದುಗರಿಗೆ ಸಾಹಿತ್ಯವನ್ನು ತಲುಪಿಸಿರುವುದು ಶ್ಲಾಘನೀಯ ಸಾಧನೆಯಾಗಿದೆ. ಪುಸ್ತಕಗಳು ಕೇವಲ ಗ್ರಂಥಾಲಯಗಳು ಮತ್ತು ದೊಡ್ಡ ಪುಸ್ತಕ ಮಳಿಗೆಗಳಿಗೆ ಸೀಮಿತವಾಗದೆ, ಜನರ ದೈನಂದಿನ ಬದುಕಿನ ಭಾಗವಾಗಬೇಕು ಎಂದು ರಾಜ್ಯಪಾಲರು ಹೇಳಿದರು.
ಉತ್ತರ ಕರ್ನಾಟಕದ ಲೇಖಕರನ್ನು ಪ್ರೋತ್ಸಾಹಿಸಲು ‘ಉತ್ತರ ಪರ್ವ’, ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ‘ದೇಸಿ ಜಗಲಿ ಕಥೆ’, ಯುವ ಕಥೆಗಾರರಿಗೆ ಅವಕಾಶ ನೀಡಲು ‘ಕಥಾ ಸಂಕ್ರಾಂತಿ’ ಹಾಗೂ ‘ಸಾಹಿತ್ಯ ಯುಗಾದಿ’ಯಂತಹ ಕಾರ್ಯಕ್ರಮಗಳು ಸಾಹಿತ್ಯ ಲೋಕಕ್ಕೆ ಹೊಸ ಚೈತನ್ಯ ನೀಡುತ್ತಿವೆ. ಪುಸ್ತಕ ಸಂತೆಯ ಹಿಂದಿನ ಐದು ಆವೃತ್ತಿಗಳ ಮೂಲಕ 10 ಲಕ್ಷಕ್ಕೂ ಹೆಚ್ಚು ಓದುಗರನ್ನು ತಲುಪಿರುವುದು ಹಾಗೂ ಮೂರು ಲಕ್ಷಕ್ಕೂ ಹೆಚ್ಚು ಪುಸ್ತಕಗಳು ಮಾರಾಟವಾಗಿರುವುದು ಮಹತ್ವದ ಸಾಧನೆಯಾಗಿದೆ ಎಂದು ರಾಜ್ಯಪಾಲರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಬಹುಪಾಲು ಸಮಯ ಮೊಬೈಲ್ ಫೋನ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಕಳೆಯುತ್ತಿದ್ದರೂ, ಪುಸ್ತಕಗಳತ್ತ ಜನರು ಆಕರ್ಷಿತರಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಡಿಜಿಟಲ್ ಮಾಧ್ಯಮಗಳು ನಮಗೆ ಮಾಹಿತಿಯನ್ನು ಒದಗಿಸಬಹುದು. ಆದರೆ ಪುಸ್ತಕಗಳು ಆ ಮಾಹಿತಿಯನ್ನು ಅರ್ಥಮಾಡಿಕೊಳ್ಳಲು, ಅದರ ಬಗ್ಗೆ ಚಿಂತಿಸಲು ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆ ನೀಡುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರತಿಯೊಂದು ಮನೆಯಲ್ಲೂ ಒಂದು ಪುಟ್ಟ ಗ್ರಂಥಾಲಯ ಇರಬೇಕು. ಮಕ್ಕಳಲ್ಲಿ ಬಾಲ್ಯದಿಂದಲೇ ಓದುವ ಹವ್ಯಾಸ ಬೆಳೆಸಬೇಕು. ಮಕ್ಕಳನ್ನು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತಗೊಳಿಸದೆ ಸಾಹಿತ್ಯ, ಇತಿಹಾಸ, ವಿಜ್ಞಾನ, ಜೀವನ ಚರಿತ್ರೆಗಳು ಹಾಗೂ ಮಹಾನ್ ವ್ಯಕ್ತಿಗಳ ವಿಚಾರಗಳ ಪರಿಚಯ ಮಾಡಿಸಬೇಕು ಎಂದು ಪೋಷಕರು ಮತ್ತು ಶಿಕ್ಷಕರಿಗೆ ಕರೆ ನೀಡಿದರು.
ಪುಸ್ತಕ ಮೇಳಗಳ ಈ ಸುಂದರ ಪರಂಪರೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ ದೇಶದ ಪ್ರತಿಯೊಂದು ರಾಜ್ಯದಲ್ಲಿಯೂ ನಡೆಯಬೇಕು. ಸ್ಥಳೀಯ ಭಾಷೆಗಳ ಸಾಹಿತ್ಯ, ಲೇಖಕರು ಮತ್ತು ಪ್ರಕಾಶಕರಿಗೆ ಪ್ರೋತ್ಸಾಹ ದೊರೆಯಬೇಕು. ಭಾರತದ ಬಹುದೊಡ್ಡ ಶಕ್ತಿ ಅದರ ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯಾಗಿದೆ. ಕನ್ನಡದ ಶ್ರೇಷ್ಠ ಸಾಹಿತ್ಯ ಕೃತಿಗಳು ಇತರ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ದೇಶದ ಮೂಲೆಮೂಲೆಗೂ ತಲುಪಬೇಕು. ಅದೇ ರೀತಿ ಇತರ ಭಾಷೆಗಳ ಉತ್ತಮ ಸಾಹಿತ್ಯ ಕೃತಿಗಳು ಕನ್ನಡದಲ್ಲಿಯೂ ಲಭ್ಯವಾಗಬೇಕು. ಇಂತಹ ಪ್ರಯತ್ನಗಳು ಪ್ರಾದೇಶಿಕ ಸಾಹಿತ್ಯಿಕ ಗುರುತನ್ನು ಬಲಪಡಿಸುವುದರ ಜೊತೆಗೆ ರಾಷ್ಟ್ರೀಯ ಏಕತೆ ಮತ್ತು ಸಾಂಸ್ಕೃತಿಕ ಸಾಮರಸ್ಯವನ್ನು ಉತ್ತೇಜಿಸುತ್ತವೆ ಎಂದು ರಾಜ್ಯಪಾಲರು ತಿಳಿಸಿದರು.
ಕರ್ನಾಟಕ ರಾಜ್ಯ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಆರ್.ಮಂಜುನಾಥ್ ತೊಘಲಕ್ ದರ್ಬಾರ್

