ಕರ್ನಾಟಕದಲ್ಲಿ ಬರ ನಿರ್ವಹಣೆ ಮತ್ತು ಹವಾಮಾನ ಸ್ಥಿತಿಸ್ಥಾಪಕ ಕೃಷಿಗಾಗಿ ‘ಸುಖರಕ್ಷಕ್ AI 2.0’ ತಂತ್ರಜ್ಞಾನ ಪರಿಚಯಿಸಿದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಾಗೂ ಕೋಲಂಬೊದ ಅಂತರರಾಷ್ಟ್ರೀಯ ಜಲ ನಿರ್ವಹಣಾ ಸಂಸ್ಥೆ
ಬೆಂಗಳೂರು: ಕರ್ನಾಟಕದಲ್ಲಿ ಬರ ನಿರ್ವಹಣೆ, ಬರಪೂರ್ವ ಸಿದ್ಧತೆ ಮತ್ತು ಹವಾಮಾನ ವೈಪರೀತ್ಯಗಳನ್ನು ಎದುರಿಸುವ ಕೃಷಿ ಪದ್ಧತಿಗಳನ್ನು(Farming method) ಬಲಪಡಿಸುವ ಉದ್ದೇಶದಿಂದ, ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಶ್ರೀಲಂಕಾದ ಕೊಲಂಬೊದಲ್ಲಿರುವ( Colombo) ಅಂತರರಾಷ್ಟ್ರೀಯ ಜಲ ನಿರ್ವಹಣಾ ಸಂಸ್ಥೆ (IWMI) ಸಹಯೋಗದಲ್ಲಿ ಎರಡು ದಿನಗಳ ರಾಜ್ಯಮಟ್ಟದ ಕಾರ್ಯಾಗಾರ ಹಾಗೂ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬರ ನಿರ್ವಹಣೆಯನ್ನು ಬಲಪಡಿಸಲು ನೆರವಾಗುವ ನವೀನ ಡಿಜಿಟಲ್ ನಿರ್ಧಾರ ಬೆಂಬಲ ವ್ಯವಸ್ಥೆಯಾದ ‘ಸುಖರಕ್ಷಕ್ AI 2.0’ ಅನ್ನು ಲೋಕಾರ್ಪಣೆಗೊಳಿಸಿ ಪರಿಚಯಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ಆಯುಕ್ತರಾದ ಡಾ. ಸತೀಶ ಬಿ.ಸಿ., ಐಎಎಸ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಾಗಾರದಲ್ಲಿ ವಿವಿಧ ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ವಿಜ್ಞಾನ ಕೇಂದ್ರಗಳು (KVK), ಕೃಷಿ ಇಲಾಖೆ ಹಾಗೂ ಸ್ವಯಂಸೇವಾ ಸಂಸ್ಥೆಗಳ 80ಕ್ಕೂ ಹೆಚ್ಚು ವಿಜ್ಞಾನಿಗಳು ಮತ್ತು ತಜ್ಞರು ಪಾಲ್ಗೊಂಡಿದ್ದರು.
ಸುಖರಕ್ಷಕ್ AI ಕಾರ್ಯಾಚರಣೆ:
IWMI ತಂಡದ ಮುಖ್ಯಸ್ಥರಾದ ಡಾ. ಗಿರಿರಾಜ್ ಅಮರನಾಥ್ ಅವರು ‘ಸುಖರಕ್ಷಕ್ AI’ ವ್ಯವಸ್ಥೆಯ ಪ್ರಾತ್ಯಕ್ಷಿಕೆ ನೀಡಿದರು. ಈ ತಂತ್ರಜ್ಞಾನವು ಉಪಗ್ರಹ ವೀಕ್ಷಣೆಗಳು ಮತ್ತು ಹವಾಮಾನ ಮಾಹಿತಿಯನ್ನು ಕೃಷಿ ತುರ್ತು ಯೋಜನೆಗಳೊಂದಿಗೆ ಸಮನ್ವಯಗೊಳಿಸಿ, ನಿರ್ದಿಷ್ಟ ಬೆಳೆ ಹಾಗೂ ಕ್ಷೇತ್ರಮಟ್ಟಕ್ಕೆ ಅನುಗುಣವಾದ ಸಲಹೆಗಳನ್ನು ಒದಗಿಸುತ್ತದೆ.
ರೈತರ ಕ್ಷೇತ್ರಮಟ್ಟದ ಅನುಭವ:
ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಗಳ ಸುಮಾರು 100 ರೈತರೊಂದಿಗೆ ರಾಗಿ, ಅಲಸಂದೆ ಮತ್ತು ಮೇವಿನ ಬೆಳೆಗಳ ಮೇಲೆ ಈ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲಾಯಿತು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ರೈತರು ಬದಲಾಗುತ್ತಿರುವ ಹವಾಮಾನದಲ್ಲಿ ಈ ತಂತ್ರಜ್ಞಾನವು ಕೃಷಿ ನಿರ್ಧಾರ ತಳೆಯಲು ಹೇಗೆ ಸಹಕಾರಿಯಾಗಿದೆ ಎಂಬುದರ ಅನುಭವ ಹಂಚಿಕೊಂಡರು.
ಎಲ್ ನಿನೊ (ENSO) ಮೇಲ್ವಿಚಾರಣೆ:
ಜಾಗತಿಕ ಎಲ್ ನಿನೊ-ದಕ್ಷಿಣೀಯ ಸ್ಥಾನಪಲ್ಲಟ ಮೇಲ್ವಿಚಾರಣಾ ಸಾಧನವನ್ನು ಸಹ ಪರಿಚಯಿಸಲಾಗಿದ್ದು, ಇದು ಹವಾಮಾನ ಅನಿಶ್ಚಿತತೆಗಳಿಗೆ ಸರ್ಕಾರಿ ಸಂಸ್ಥೆಗಳು ಮುಂಚಿತ ಕ್ರಮಗಳನ್ನು ಯೋಜಿಸಲು ನೆರವಾಗಲಿದೆ.
2026ರ ಹಿಂಗಾರು ಹಂಗಾಮಿಗೆ ಬಳಕೆ: ICAR ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಡಿಜಿಟಲ್ ಕೃಷಿ ತುರ್ತು ಪರಿಸ್ಥಿತಿ ಯೋಜನೆಗಳನ್ನು ‘ಸುಖರಕ್ಷಕ್ AI’ ತಂತ್ರಾಂಶದಲ್ಲಿ ಅಳವಡಿಸಿ, 2026ರ ಹಿಂಗಾರು ಹಂಗಾಮಿನಲ್ಲಿ ರೈತರಿಗೆ ನಿಖರ ಸಲಹೆ ತಲುಪಿಸಲು ನಿರ್ಧರಿಸಲಾಗಿದೆ.
ಈ ನವೀನ ತಂತ್ರಜ್ಞಾನವು ರಾಜ್ಯಾದ್ಯಂತ ವಿಸ್ತರಣೆಯಾಗಲಿದ್ದು, ವಿಶೇಷವಾಗಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಬರ ಎದುರಿಸಲು ಮತ್ತು ಸುಸ್ಥಿರ ಕೃಷಿ ಕೈಗೊಳ್ಳಲು ಬಹುದೊಡ್ಡ ನೆರವಾಗಲಿದೆ ಎಂದು ಹಿರಿಯ ವಾರ್ತಾತಜ್ಞರು ಮತ್ತು ಮುಖ್ಯಸ್ಥರಾದ ಡಾ. ಕೆ.ಪಿ. ರಘುಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

