ಡೆಂಘಿ ಹಾಗೂ ಚಿಕೂನ್ಗುನ್ಯ ತಡೆಗಟ್ಟಲು ಜಾಗೃತಿ ಅಭಿಯಾನ
ನಿಮ್ಮ ಮುನ್ನೆಚ್ಚರಿಕೆಯೇ ಸಮಾಜದ ಸುರಕ್ಷತೆ
– ನಮ್ಮ ಪರಿಸರ ಸ್ವಚ್ಛವಾಗಿದ್ದರೆ, ನಮ್ಮ ಆರೋಗ್ಯ ಸುಕ್ಷೇಮ. ನೀರು ನಿಲ್ಲದಂತೆ ಎಚ್ಚರವಹಿಸಿ – ಸೊಳ್ಳೆಗಳ ಸಂತಾನೋತ್ಪತ್ತಿಗೆ ಬ್ರೇಕ್ ಹಾಕಿ!
ಪ್ರಸ್ತುತ ದಿನಗಳಲ್ಲಿ ಡೆಂಘಿ ಹಾಗೂ ಚಿಕೂನ್ಗುನ್ಯ ಜ್ವರಗಳ( Dengue and Chikungunya Fevers)
ಭೀತಿ ಹೆಚ್ಚಾಗುತ್ತಿದ್ದು, ಇವುಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೆ ಪ್ರತಿಯೊಬ್ಬ ನಾಗರಿಕರ ಸಕ್ರಿಯ ಸಹಕಾರ ಅತ್ಯಗತ್ಯವಾಗಿದೆ.
ಭೀತಿ ಹೆಚ್ಚಾಗುತ್ತಿದ್ದು, ಇವುಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೆ ಪ್ರತಿಯೊಬ್ಬ ನಾಗರಿಕರ ಸಕ್ರಿಯ ಸಹಕಾರ ಅತ್ಯಗತ್ಯವಾಗಿದೆ.
ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆಗಳ ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿಗಳು ಹಾಗೂ ಆರೋಗ್ಯ ಇಲಾಖೆಯು ಈ ಸಾಂಕ್ರಾಮಿಕ ರೋಗಗಳನ್ನು ತಡೆಯಲು ವ್ಯಾಪಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ.
‘ಈಡೀಸ್ ಈಜಿಪ್ಟ್’ ಸೊಳ್ಳೆಗಳೇ ಈ ಮಾರಕ ರೋಗಗಳ ಮೂಲ:
ಡೆಂಘಿ ಹಾಗೂ ಚಿಕೂನ್ಗುನ್ಯ ಜ್ವರಗಳು ಸೋಂಕು ಹೊಂದಿದ ‘ಈಡೀಸ್ ಈಜಿಪ್ಟ್’ (Aedes aegypti) ಎಂಬ ವಿಶೇಷ ತಳಿಯ ಸೊಳ್ಳೆಯ ಕಡಿತದಿಂದ ಮನುಷ್ಯರಿಗೆ ಹರಡುತ್ತವೆ.
ಈ ಸೊಳ್ಳೆಗಳು ಕಲುಷಿತ ನೀರಿನಲ್ಲಿ ಹಾಗೂ ನಮ್ಮ ಸುತ್ತಮುತ್ತ ನಿಂತಿರುವ ಸ್ವಚ್ಛ ನೀರಿನಲ್ಲಿಯೂ ಸಹ ಹುಟ್ಟುತ್ತವೆ. ಈ ಸೊಳ್ಳೆಯು ಪ್ರಮುಖವಾಗಿ ಹಗಲಿನ ವೇಳೆಯಲ್ಲಿಯೇ ಕಚ್ಚುವ ಸ್ವಭಾವವನ್ನು ಹೊಂದಿದೆ.
ಈ ಸೊಳ್ಳೆಯು ತನ್ನ ಜೀವನ ಚಕ್ರವನ್ನು ಪೂರ್ಣಗೊಳಿಸಲು ಸುಮಾರು 8 ರಿಂದ 10 ದಿನಗಳನ್ನು ತೆಗೆದುಕೊಳ್ಳುತ್ತದೆ. ಸೊಳ್ಳೆಯಾಗುವ ಮುನ್ನ ನೀರೊಳಗೆ 7 ದಿನಗಳ ಕಾಲ ನಡೆಯುವ ಪ್ರಕ್ರಿಯೆಯಲ್ಲಿ ಮೊಟ್ಟೆಗಳು (Eggs), ಲಾರ್ವ (Larva) ಮತ್ತು ಪ್ಯೂಪಾ (Pupa) ಎಂಬ ಮೂರು ಪ್ರಮುಖ ಹಂತಗಳಿರುತ್ತವೆ. ಈ ಮೂರೂ ಹಂತಗಳು ನೀರಿನಲ್ಲೇ ನೆರವೇರುವುದರಿಂದ, ನೀರು ನಿಲ್ಲದಂತೆ ನೋಡಿಕೊಳ್ಳುವುದೇ ಸೊಳ್ಳೆ ತಡೆಗೆ ಮೊದಲ ಹೆಜ್ಜೆಯಾಗಿದೆ.
ರೋಗದ ಪ್ರಮುಖ ಲಕ್ಷಣಗಳು:
ಈ ಸೊಳ್ಳೆ ಕಡಿದಾಗ ಹಠಾತ್ತನೆ ಬರುವ ಅಧಿಕ ಜ್ವರ, ತೀವ್ರ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ತೀವ್ರತರ ನೋವು, ತೀವ್ರ ಮೈ ನೋವು ಹಾಗೂ ಕೀಲುಗಳಲ್ಲಿ ನೋವು, ವಾಕರಿಕೆ ಮತ್ತು ವಾಂತಿ ಬರುವುದು ಪ್ರಮುಖವಾಗಿ ಕಂಡು ಬರುತ್ತದೆ.
ಸೊಳ್ಳೆಗಳ ಪ್ರಮುಖ ಉತ್ಪತ್ತಿ ತಾಣಗಳು: ಎಲ್ಲಿ ಎಚ್ಚರ ವಹಿಸಬೇಕು:
ನಮ್ಮ ಮನೆಯ ಒಳಗೆ ಮತ್ತು ಅಂಗಳದಲ್ಲಿ ನೀರಿನ ಹನಿಗಳು ಸಂಗ್ರಹವಾಗುವ ಸಣ್ಣ ಸ್ಥಳವೂ ಸೊಳ್ಳೆಗಳ ಸಂತಾನೋತ್ಪತ್ತಿಗೆ ಆಶ್ರಯ ತಾಣವಾಗಬಹುದು.
ವಿಶೇಷವಾಗಿ ಸಿಮೆಂಟ್ ತೊಟ್ಟಿಗಳು ಹಾಗೂ ತೆರೆದ ಪ್ಲಾಸ್ಟಿಕ್ ತೊಟ್ಟಿಗಳು, ಬಕೆಟ್ಗಳು, ಡ್ರಂಗಳು ಮತ್ತು ಬ್ಯಾರಲ್ಗಳು, ನೀರು ಸಂಗ್ರಹಿಸುವ ಗಡಿಗೆಗಳು ಹಾಗೂ ಗಡಿಗೆ ತುಂಡುಗಳು, ಏರ್ಕೂಲರ್ಗಳು ಹಾಗೂ ಹೂವಿನ ಕುಂಡಗಳ ತಟ್ಟೆಗಳು, ಬಯಲಿನಲ್ಲಿ ಬಿದ್ದಿರುವ ತೆಂಗಿನ ಚಿಪ್ಪುಗಳು ಹಾಗೂ ಖಾಲಿ ಡಬ್ಬಗಳು, ಹಳೆಯ / ಒಡೆದ ಟೈರ್ಗಳು ಮತ್ತು ಒಡೆದ ಬಾಟಲಿಗಳಂತಹ ವಸ್ತುಗಳಲ್ಲಿ ಸ್ವಚ್ಛ ನೀರು ನಿಂತು ಸೊಳ್ಳೆಗಳು ಹೇರಳವಾಗಿ ಉತ್ಪತ್ತಿಯಾಗುತ್ತವೆ.
ನಿಯಂತ್ರಣ ಮತ್ತು ತಡೆಗಟ್ಟುವಿಕೆಗೆ ಮುನ್ನೆಚ್ಚರಿಕಾ ಕ್ರಮಗಳು:
ಮನೆಯಲ್ಲಿರುವ ಎಲ್ಲಾ ನೀರಿನ ತೊಟ್ಟಿಗಳು, ಡ್ರಂಗಳು, ಬ್ಯಾರಲ್ಗಳು, ಏರ್ ಕೂಲರ್ಗಳನ್ನು ವಾರಕ್ಕೊಮ್ಮೆ ಕಡ್ಡಾಯವಾಗಿ ಖಾಲಿ ಮಾಡಿ, ನೀರು ಒಣಗಿಸಿ ಸ್ವಚ್ಛಗೊಳಿಸಬೇಕು. ನಂತರ ಮತ್ತೆ ಭರ್ತಿ ಮಾಡುವಾಗ ಕಡ್ಡಾಯವಾಗಿ ಸೂಕ್ತ ಮುಚ್ಚಳದಿಂದ ಮುಚ್ಚಿಡಬೇಕು.
ಬಯಲಿನಲ್ಲಿ ಬಿದ್ದಿರುವ ಒಡೆದ ಬಾಟಲಿ, ತೆಂಗಿನ ಚಿಪ್ಪು, ಹಳೆಯ ಟೈರ್ ಮುಂತಾದ ತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು ಅಥವಾ ಅವುಗಳನ್ನು ತಕ್ಷಣವೇ ಸೂಕ್ತವಾಗಿ ವಿಲೇವಾರಿ ಮಾಡಬೇಕು.
ಹಗಲಿನಲ್ಲಿ ಸೊಳ್ಳೆಗಳ ಕಚ್ಚುವಿಕೆಯಿಂದ ದೂರವಿರಲು ಮೈತುಂಬಾ ಬಟ್ಟೆ ಧರಿಸುವುದು, ಸೊಳ್ಳೆ ನಿರೋಧಕಗಳನ್ನು (Mosquito Repellents) ಮತ್ತು ಸೊಳ್ಳೆ ಪರದೆಗಳನ್ನು ಬಳಸುವುದು ಅತ್ಯಗತ್ಯ.
ಸಾರ್ವಜನಿಕ ಸಹಕಾರ: ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆಗಳ ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಹಾಗೂ ಆರೋಗ್ಯ ಇಲಾಖೆಯಿಂದ ಹಮ್ಮಿಕೊಳ್ಳಲಾಗುವ ಸೊಳ್ಳೆ ನಿಯಂತ್ರಣ ಕ್ರಮಗಳಿಗೆ ಪ್ರತಿಯೊಬ್ಬ ನಾಗರಿಕರೂ ಸಂಪೂರ್ಣ ಸಹಕಾರ ನೀಡಬೇಕು ಹಾಗೂ ಕಾಲಕಾಲಕ್ಕೆ ಆರೋಗ್ಯ ಇಲಾಖೆಯಿಂದ ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಉಚಿತ ವೈದ್ಯಕೀಯ ಉಪಚಾರ ಹಾಗೂ ಸಂಪರ್ಕ ಮಾಹಿತಿ:
ಜ್ವರ ಅಥವಾ ರೋಗದ ಲಕ್ಷಣಗಳು ಕಂಡುಬಂದೊಡನೆ ನಿರ್ಲಕ್ಷಿಸದೇ, ಉಚಿತ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸಂಪರ್ಕಿಸಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಎಲ್ಲಾ ಪರೀಕ್ಷೆ ಮತ್ತು ಚಿಕಿತ್ಸೆಗಳು ಉಚಿತವಾಗಿ ದೊರೆಯುತ್ತವೆ.
ಹೆಚ್ಚಿನ ಮಾಹಿತಿಗಾಗಿ, ಸಹಾಯವಾಣಿ (ಕಂಟ್ರೋಲ್ ರೂಂ) ಸಂಖ್ಯೆಗಳು: 22660000, 22221188, 22100031 ನ್ನು ಸಂಪರ್ಕಿಸುವುದು.
ಎಲ್ಲಾ ಸಾರ್ವಜನಿಕ ತಮ್ಮ ಮನೆ ಹಾಗೂ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಂಡು ಅರೋಗ್ಯ ಇಲಾಖೆಯು ನೀಡುವ ಸೂಚನೆಗಳನ್ನು ಕಾಲಕಾಲಕ್ಕೆ ಪಾಲಿಸಿದಲ್ಲಿ ಡೆಂಘಿ ಹಾಗೂ ಚಿಕೂನ್ಗುನ್ಯ ಮುಕ್ತಿಹೊಂದಿ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ.
“ನೀರು ನಿಲ್ಲದಂತೆ ಸಹಕರಿಸಿ – ಸೊಳ್ಳೆ ಉತ್ಪತ್ತಿ ತಡೆಗಟ್ಟಿರಿ”

