ಬೆಂಗಳೂರು: ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (BMRDA) ವ್ಯಾಪ್ತಿಯ ಪ್ರದೇಶ ಅಭಿವೃದ್ಧಿಗೆ ಮುಂದಿನ 10-15 ವರ್ಷಗಳ ಸಮಗ್ರ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(CM.D.K.Shivakumar) ಅವರು ತಿಳಿಸಿದರು.
BMRDA
ಗೃಹ ಕಚೇರಿ ಕೃಷ್ಣದಲ್ಲಿ ಬೆಂಗಳೂರು ಮಹಾನಗರ ಪ್ರದೇಶದ ಆರ್ಥಿಕ ಅಭಿವೃದ್ಧಿ ಕುರಿತಾದ ಸಲಹಾ ಸಮಿತಿ ಸಭೆಯಲ್ಲಿ ಶಿವಕುಮಾರ್ ಅವರು ಸೋಮವಾರ ಮಾತನಾಡಿದರು.
2047ರ ಅವಧಿಗೆ ರಾಜ್ಯದ ಆರ್ಥಿಕತೆ 1 ಟ್ರಿಲಿಯನ್ ಡಾಲರ್ ತಲುಪುವ ಗುರಿಯನ್ನು ಹೊಂದಲಾಗಿದೆ. 2037ರ ಅವಧಿಗೆ ರಾಜ್ಯದ ಆರ್ಥಿಕತೆ 400-420 ಬಿಲಿಯನ್ ಡಾಲರ್ ತಲುಪುವ ಯೋಜನೆ ರೂಪಿಸಲಾಗಿದೆ. ಇದಕ್ಕೆ ಪೂರಕವಾಗಿ ಬೆಂಗಳೂರು ಮಹಾನಗರ ಪ್ರದೇಶ ವ್ಯಾಪ್ತಿ (ಬಿಎಂಆರ್)ಯಲ್ಲಿ ಸುಗಮ ಸಂಚಾರ ವ್ಯವಸ್ಥೆ, ವಸತಿ, ಕೈಗಾರಿಕಾ ಅಭಿವೃದ್ಧಿಗೆ ರೂಪುರೇಷೆಯನ್ನು ಸಿದ್ಧಪಡಿಸಲಾಗುತ್ತಿದೆ. ಬಿಎಂಆರ್ ವ್ಯಾಪ್ತಿಯಲ್ಲಿ 9 ಹೊಸ ಇಂಟಿಗ್ರೇಟೆಡ್ ಕೈಗಾರಿಕಾ ಟೌನ್ಶಿಪ್ ರೂಪಿಸಬೇಕಾಗಿದೆ ಎಂದು ವಿವರಿಸಿದರು.
7900 ಎಕರೆ ಜಾಗವನ್ನು ಈಗಾಗಲೇ ಸ್ವಾಧೀನಪಡಿಸಲಾಗಿದ್ದು, 5600 ಸ್ವಾಧೀನ ಪ್ರಕ್ರಿಯೆ ಚಾಲನೆಯಲ್ಲಿದೆ. ನಮ್ಮ ಸರ್ಕಾರ ಈಗಾಗಲೇ ಎಐ ಸಿಟಿಯನ್ನು ನಿರ್ಮಿಸುವ ಘೋಷಣೆ ಮಾಡಿದ್ದು, ಸಿಂಗಾಪುರದ ಪುಂಗಾಲ್ ಮಾದರಿಯಲ್ಲಿ ಎಐ ಸಿಟಿ ನಿರ್ಮಿಸಬೇಕಾಗಿದೆ. ಎಐ ವಿಶ್ವವಿದ್ಯಾಲಯ ಸ್ಥಾಪಿಸಲು ಜಾಗ ಅಗತ್ಯವಿದ್ದು, ಲಭ್ಯ ಸ್ಥಳಗಳನ್ನು ಗುರುತಿಸುವ ಕಾರ್ಯ ನಡೆಸಬೇಕು ಎಂದು ಸೂಚಿಸಿದರು.
ಸಂಪೂರ್ಣ ಬೆಂಗಳೂರು ನಗರ ಜಿಲ್ಲೆ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್
ಹಿಂದಿನ ಸಭೆಯಲ್ಲಿ ತೀರ್ಮಾನಿಸಿದಂತೆ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣ ಬೆಂಗಳೂರು ನಗರ ಜಿಲ್ಲೆಯ ಪ್ರದೇಶವನ್ನು BWSSB ಅಡಿ ಸೇರ್ಪಡೆಗೊಳಿಸಿ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಹಂತ ಹಂತವಾಗಿ ಅಭಿವೃದ್ಧಿ ಪಡಿಸಲು ಉದ್ದೇಶಿಸಿದೆ. ಆ ಮೂಲಕ ಜಿಲ್ಲೆಯಾದ್ಯಂತ ನೀರು ವಿತರಣಾ ಸಾಮಥ್ರ್ಯ ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ಅಭಿವೃದ್ಧಿ ಪಡಿಸಲು ಸಾಧ್ಯವಾಗುವುದು. ಇದರೊಂದಿಗೆ ಜಿಲ್ಲೆಯ ಸಂಪೂರ್ಣ ರಸ್ತೆ ಜಾಲವನ್ನು ಗುರುತಿಸಿ, ಅಭಿವೃದ್ಧಿಗೆ ಯೋಜನೆ ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ವಿವರಿಸಿದರು.
ಇದಕ್ಕೆ ಪೂರಕವಾಗಿ ಬೆಂಗಳೂರು ನಗರ ಜಿಲ್ಲೆಯ ಎಲ್ಲ ಪ್ರದೇಶಗಳನ್ನು ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಗೆ ತರಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಸಭೆಯಲ್ಲಿ ಚರ್ಚೆಯಾದ ಇತರೆ ಅಂಶಗಳು:
ಸುಗಮ ಸಂಚಾರ ವ್ಯವಸ್ಥೆ:
ಬೆಂಗಳೂರು ನಗರ ಹಾಗೂ ಬೆಂಗಳೂರು ಹೊರವಲಯದಲ್ಲಿ ಸುಗಮ ಸಂಚಾರವನ್ನು ಖಾತ್ರಿಪಡಿಸಲು ಸಂಚಾರ ವ್ಯವಸ್ಥೆಯ ವಿಸ್ತøತ ಯೋಜನೆ ಸಿದ್ಧಪಡಿಸಲಾಗಿದೆ. 2037ರ ವೇಳೆಗೆ ಹೆಚ್ಚುವರಿ 312 ಕಿ.ಮೀ. ಮೆಟ್ರೋ ಸಂಪರ್ಕ ವಿಸ್ತರಿಸಲು ಉದ್ದೇಶಿಸಿದೆ. 72 ಕಿ.ಮೀ. ಹೆಚ್ಚುವರಿ ಸಬ್ ಅರ್ಬನ್ ರೈಲು ಸಂಪರ್ಕ ಯೋಜನೆ, 210 ಕಿ.ಮೀ. ಹೆಚ್ಚುವರಿ 10 ಹಬ್ ಗಳನ್ನು ಸಂಪರ್ಕಿಸುವ ವರ್ತುಲ ರಸ್ತೆ ನಿರ್ಮಾಣ, ಪಿಆರ್ಆರ್ ಹಂತ 2ನ್ನು ನೈಸ್ ರಸ್ತೆಯೊಂದಿಗೆ ಜೋಡಿಸುವ ಪ್ರಸ್ತಾವನೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಬೆಂಗಳೂರು-ತುಮಕೂರು, ಬೆಂಗಳೂರು-ಮೈಸೂರು ಮತ್ತು ಬೆಂಗಳೂರು-ಕೆಜಿಎಫ್ ಮೂರು ಕಾರಿಡಾರ್ ಗಳನ್ನು ಸಂಪರ್ಕಿಸುವ 270 ಕಿ.ಮೀ. ವ್ಯಾಪ್ತಿಯ ಆರ್ ಆರ್ ಟಿಎಸ್ ರಸ್ತೆ ನಿರ್ಮಾಣ, ಪ್ರಸ್ತಾವಿತ ಮುಂಬೈ-ಬೆಂಗಳೂರು ಹೈಸ್ಪೀಡ್ ರೈಲನ್ನು ಮೈಸೂರುವರೆಗೆ ವಿಸ್ತರಿಸುವ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾದವು.
ನೀರಿನ ಸೌಲಭ್ಯ:
ಬಿಎಂಆರ್ ವ್ಯಾಪ್ತಿಯಲ್ಲಿ 2037 ರ ವೇಳೆಗೆ 3600 ಎಂಎಲ್ ಡಿ ನೀರಿನ ಅಗತ್ಯವಿದೆ. ಕುಡಿಯಲು ಹಾಗೂ ಕೈಗಾರಿಕೆಗೆ ಅಗತ್ಯವಾದ ನೀರನ್ನು ಒದಗಿಸುವ ಕುರಿತು ಯೋಜನೆ ರೂಪಿಸುವ ಕುರಿತು ಚರ್ಚಿಸಲಾಯಿತು.
ಮುಂದಿನ 10 ವರ್ಷಗಳಲ್ಲಿ ನಗರದ ಕುಡಿಯುವ ಹಾಗೂ ಕೈಗಾರಿಕಾ ಅಗತ್ಯತೆಗಳನ್ನು ಗಮನಿಸಿ, ಸಂಸ್ಕರಿಸಿದ ನೀರಿನ ಮರುಬಳಕೆ, ಕೆರೆಗಳನ್ನು ತುಂಬಿಸುವುದು ಸೇರಿದಂತೆ ಮುಂತಾದ ಯೋಜನೆಗಳಿಗೆ ಆದ್ಯತೆ ನೀಡುವಂತೆ ಸಿಎಂ ಸೂಚನೆ ನೀಡಿದರು.
ವಸತಿ ಮನೆ ಸೌಲಭ್ಯ:
ಪ್ರತಿಯೊಬ್ಬರಿಗೆ ಕೈಗೆಟಕುವ ದರದಲ್ಲಿ ವಸತಿ ಮನೆ ಸೌಲಭ್ಯವನ್ನು ಕಲ್ಪಿಸುವುದು ನಮ್ಮ ಬದ್ಧತೆಯಾಗಿದೆ. ಈ ನಿಟ್ಟಿನಲ್ಲಿ 6ರಿಂದ 6.5 ಲಕ್ಷ ಮನೆ ನಿರ್ಮಾಣ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಕೈಗಾರಿಕೆಗಳಲ್ಲಿ ಕೆಲಸ ಮಾಡುವ 40-50 ಸಾವಿರ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು.
ಈ ಸಂದರ್ಭದಲ್ಲಿ ಸಚಿವರಾದ ಎಂ.ಬಿ. ಪಾಟೀಲ್, ಕೃಷ್ಣ ಬೈರೇಗೌಡ ಪ್ರಿಯಾಂಕ್ ಖರ್ಗೆ, ಬೈರತಿ ಸುರೇಶ್, ಸಂಸದ ಹಾಗೂ ಸಿಎಂ ಪ್ರಧಾನ ಸಲಹೆಗಾರ ಡಾ. ಜಿ.ಸಿ. ಚಂದ್ರಶೇಖರ್, ಸಿಎಂ ಆರ್ಥಿಕ ಸಲಹೆಗಾರ ಎಲ್ ಕೆ ಅತೀಕ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ಗಿರಿನಾಥ್, ಜಿಬಿಎ ಮುಖ್ಯ ಆಯುಕ್ತ ಡಾ. ಎಂ. ಮಹೇಶ್ವರರಾವ್, ಸುಸ್ಥಿರತೆ, ಉದ್ಯೋಗ ಮತ್ತು ಬೆಳವಣಿಗೆ ಸಂಸ್ಥೆ (ISEO) ನಿರ್ದೇಶಕ ಡಾ. ಸಿರೀಶ್ ಸಂಖೆ, ಖ್ಯಾತ ಉದ್ಯಮಿಗಳಾದ ಟಿ.ಎ. ಮೋಹನದಾಸ್ ಪೈ, ಕ್ರಿಸ್ ಗೋಪಾಲಕೃಷ್ಣನ್ ಮತ್ತಿತರರು ಭಾಗವಹಿಸಿದ್ದರು.
ರಾಜ್ಯ ಅಬಕಾರಿ ರಾಜಸ್ವ ಮತ್ತು ಮದ್ಯ ಮಾರಾಟದಲ್ಲಿ ಭಾರಿ ಏರಿಕೆ: ಅರ್ಧವಾರ್ಷಿಕ ವರದಿ ಬಿಡುಗಡೆ

