ಹಿಂದೂ ಕುಟುಂಬದ ಸ್ನೇಹಿತೆಯೊಂದಿಗೆ ಪ್ರವಾಸಕ್ಕಾಗಿ ಉಡುಪಿಗೆ ಬಂದಿದ್ದ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ(Devadurga Taluk) ಯುವತಿಯೊಬ್ಬರಿಗೆ ಮುಸ್ಲಿಂ ಧರ್ಮಕ್ಕೆ ಸೇರಿದವರು ಎಂಬ ಏಕೈಕ ಕಾರಣಕ್ಕೆ ರಾತ್ರಿ ಉಳಿದುಕೊಳ್ಳಲು ಅನುಮತಿ ನಿರಾಕರಿಸಿದ ಮಠದ ವಸತಿ ಗೃಹದ ಅಧಿಕಾರಿಗಳ ಕೃತ್ಯವನ್ನು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ(Karnataka State Committee) ತೀವ್ರವಾಗಿ ಖಂಡಿಸುತ್ತದೆ.
ಘಟನೆಯ ವಿವರ: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮುಸ್ಲಿಂ ಯುವತಿ ತನ್ನ ಸ್ನೇಹಿತೆಯ ಕುಟುಂಬದೊಂದಿಗೆ ಪ್ರವಾಸಕ್ಕಾಗಿ ಉಡುಪಿ ಜಿಲ್ಲೆಗೆ ಆಗಮಿಸಿದ್ದು ಕೃಷ್ಣ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಅಕ್ಟೋಬರ್ 3ನೇ ತಾರೀಕಿನ ರಾತ್ರಿ ಉಳಿದುಕೊಳ್ಳಲು ಕೃಷ್ಣ ಮಠದ ವಸತಿ ಗೃಹಕ್ಕೆ ಆಗಮಿಸಿದ್ದರು. ಅಷ್ಟು ಹೊತ್ತಿಗೆ ರಾತ್ರಿ 8 ಗಂಟೆ ಕಳೆದಿತ್ತು. ಎಲ್ಲರ ಆಧಾರ್ ಕಾರ್ಡ್ ಪರಿಶೀಲಿಸಿದ ವಸತಿಗೃಹದ ಅಧಿಕಾರಿಗಳು ಮುಸ್ಲಿಂ ಯುವತಿಗೆ ರಾತ್ರಿ ಉಳಿದುಕೊಳ್ಳಲು ಅವಕಾಶ ನೀಡಲಿಲ್ಲ. ಸ್ನೇಹಿತೆಯ ತಾಯಿ ಶಕುಂತಲಾ ಮತ್ತು ಅವರ ಕುಟುಂಬದ ಹಿರಿಯರು, ಆಕೆ ನಮ್ಮ ಮೊಮ್ಮಗಳು ಇದ್ದಂತೆ, ಅಲ್ಲದೆ ರಾತ್ರಿ ಹೊತ್ತಿನಲ್ಲಿ ಅಪರಿಚಿತ ನಗರದಲ್ಲಿ ಒಬ್ಬಳೇ ಎಲ್ಲಿಗೆ ಹೋಗುವುದು ಎಂದು ಅಂಗಲಾಚಿದರೂ ಕೇಳಲಿಲ್ಲ.
ಹಿಂದೆ ಪೇಜಾವರ ಮಠದ ವಿಶ್ವೇಶ್ವರತೀರ್ಥ ಶ್ರೀಗಳು ತನ್ನ ಕಾರಿನ ಚಾಲಕ ಮುಸ್ಲಿಂ ಧರ್ಮವನ್ನು ಅನುಸರಿಸುವವನಾಗಿದ್ದರೂ, ಅವರನ್ನು ಆದರದಿಂದ ನೋಡುತ್ತಿದ್ದುದು ಮಾತ್ರವಲ್ಲದೆ ಇಫ್ತಾರ್ ಕೂಟವನ್ನೂ ಆಯೋಜಿಸಿದ್ದರು.
ಉಡುಪಿಯ ಕೊಡುಗೈ ದಾನಿಯೆಂದೇ ಹೆಸರು ಹೊಂದಿದ್ದ ದಿವಂಗತ ಹಾಜಿ ಅಬ್ದುಲ್ಲಾ ಸಾಹೇಬ್ ಅವರು ಮಠದ ಭಕ್ತರಾಗಿದ್ದು ಮಾತ್ರವಲ್ಲ ದೀಪೋತ್ಸವ ಸಂದರ್ಭದಲ್ಲಿ ತೊಂದರೆಗೆ ಒಳಗಾದ ಮಠಕ್ಕೆ ದೀಪದ ಎಣ್ಣೆ ಒದಗಿಸಿರುವುದನ್ನು ಉಡುಪಿಯ ಜನರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ಇಂತಹ ಸೌಹಾರ್ದ ಪರಂಪರೆ ಇರುವ ಉಡುಪಿಯಲ್ಲಿ ಮತ್ತು ಮಠದಲ್ಲಿ ರಾತ್ರಿ ಹೊತ್ತಿನಲ್ಲಿ ಮುಸ್ಲಿಂ ಯುವತಿಯೊಬ್ಬರಿಗೆ ಉಳಿದುಕೊಳ್ಳಲು ಅವಕಾಶ ನೀಡದೆ ಇರುವುದು ಅಕ್ಷಮ್ಯ ಅಪರಾಧ.
ಇಂತಹ ಘಟನೆಗಳು ಮರುಕಳಿಸಬಾರದೆಂದು ಮಠದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಬೇಕೆಂದು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ.

