ಈ ಹಿಂದೆ ಗಾಯಿತ್ರಿ, ಪ್ರೀತಿಯ ಹುಚ್ಚ ಚಿತ್ರಗಳನ್ನು ನಿರ್ದೇಶಿಸಿದ್ದ ವಿ.ಕುಮಾರ್ (ರಾಘವ ವಿನೋದ್ ಕುಮಾರ್) ಸದ್ದಿಲ್ಲದೆ ’18 ಎಕರೆ ಸಿನಿಮಾ ಲಕ್ಕಪ್ಪ’ ಸಿನಿಮಾವನ್ನು ಮುಗಿಸಿ ಸದ್ದಿಲ್ಲದೆ ತೆರೆಗೆ ತರುವ ಪ್ರಯತ್ನ ಮಾಡಿದ್ದಾರೆ. ಕುಮಾರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ದಯಾನಂದ್.ಕೆ, ಸುಬ್ರಮಣಿ ರಾಮಗೊಂಡನಹಳ್ಳಿ ಹಾಗೂ ಒಂದಷ್ಟು ಸ್ನೇಹಿತರೇ ಸೇರಿಕೊಂಡು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ವಿ.ಕುಮಾರ್ ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ರಚಿಸಿ ಆಕ್ಷನ್ ಕಟ್ ಹೇಳಿದ್ದಾರೆ.
ಚಿತ್ರರಂಗದಲ್ಲಿ ತೆರೆ ಹಿಂದೆ ನಡೆಯುವ ಒಂದಷ್ಟು ಸತ್ಯ ಘಟನೆಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಹೊಸದಾಗಿ ಬರೋ ನಾಯಕ, ನಾಯಕಿಯರ ಅನುಭವಗಳು, ಪ್ರೊಡಕ್ಷನ್ ಅನುಭವ ಇಲ್ಲದೆ ಬರುವ ನಿರ್ಮಾಪಕರನ್ನು ನಿರ್ಮಾಣ ನಿರ್ವಾಹಕರು ಹೇಗೆಲ್ಲಾ ಮೋಸಮಾಡುತ್ತಾರೆ. ಕಲಾವಿದರ ಜೀವನ ಕನ್ನಡಿ ಇದ್ದ ಹಾಗೆ ಎಂಬುದನ್ನು ಇದರಲ್ಲಿ ಹೇಳಲಾಗಿದೆ.
ತಾರಾಗಣದಲ್ಲಿ ಹರಿಚೇತು, ಸಂಜನಾ ನಾಯ್ಡು ಪ್ರಮುಖ ಪಾತ್ರ. ಉಳಿದಂತೆ ಸಂಗೀತ, ಸುಬ್ರಮಣಿ, ರಾಜಶೇಖರ, ದಯಾನಂದ, ಸತ್ಯಸಾಮ್ರಾಟ್, ಲಿಂಗೇಶ್, ನಯನಕೃಷ್ಣ, ಮೋಹನ್ ಜುನೇಜಾ, ದುಬೈ ರಫೀಕ್ ಮುಂತಾದವರು ನಟಿಸಿದ್ದಾರೆ. ಸಕಲೇಶಪುರ, ಬೆಂಗಳೂರು, ಮಂಡ್ಯ, ಕೋಲಾರ, ಶ್ರವಣಬೆಳಗೊಳ ಸುತ್ತಮುತ್ತ ೪೫ ದಿನಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಯುಎ ಪ್ರಮಾಣಪತ್ರ ದೊರಕಿದ್ದು, ಸದ್ಯದಲ್ಲೆ ಚಿತ್ರವು ಬಿಡುಗಡೆಯಾಗುವ ಸಾಧ್ಯತೆ ಇದೆ.

