“ಗಾಂಧೀಜಿ ರಿ-ವಿಸಿಟೆಡ್: ಸ್ವತಂತ್ರ ಭಾರತದಲ್ಲಿ ಮಹಿಳೆಯರ ಭದ್ರತೆ ಮತ್ತು ಸುರಕ್ಷತೆ – ಸಂವೇದನೆಗಳನ್ನು ಗೊಳಿಸುವುದು” ಎಂಬ ವಿಷಯದಡಿ ಈ ಸಮ್ಮೇಳನವು 2026ರ ಸೆಪ್ಟೆಂಬರ್ 24 ಮತ್ತು 25 ರಂದು ಬೆಂಗಳೂರಿನ ಹೆಬ್ಬಾಳದಲ್ಲಿರುವ ‘ಸ್ಪೂರ್ತಿ’ (SPORTI – ಹಿರಿಯ ಪೊಲೀಸ್ ಅಧಿಕಾರಿಗಳ ಸಂಶೋಧನೆ ಮತ್ತು ತರಬೇತಿ ಸಂಸ್ಥೆ) ಆವರಣದಲ್ಲಿ ನಡೆಯಲಿದೆ.
ಸಮ್ಮೇಳನದ ಮುಖ್ಯ ಉದ್ದೇಶ ಹಾಗೂ ಕಾರ್ಯಸೂಚಿ:
ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಮುನ್ನಡೆಯುತ್ತಿರುವ ಈ ಸಂದರ್ಭದಲ್ಲಿ ಮಹಿಳೆಯರ ಭದ್ರತೆ, ಗೌರವ ಹಾಗೂ ಸುರಕ್ಷತೆ ಅತ್ಯಂತ ಪ್ರಮುಖವಾಗಿದೆ. ಸೈಬರ್ ಅಪರಾಧ, ಕೆಲಸದ ಸ್ಥಳದಲ್ಲಿ ಕಿರುಕುಳ, ಮಾನವ ಸಾಗಾಣಿಕೆ ಮುಂತಾದ ಆಧುನಿಕ ಸವಾಲುಗಳನ್ನು ಎದುರಿಸಲು ಈ ಎರಡು ದಿನಗಳ ಸಮಾವೇಶದಲ್ಲಿ ಚರ್ಚೆ ನಡೆಸಲಾಗುವುದು.
ಮೊದಲನೇ ದಿನ (ಸೆಪ್ಟೆಂಬರ್ 24): ‘ನೀತಿ, ಸಹಭಾಗಿತ್ವ ಮತ್ತು ನಾವೀನ್ಯತೆ’ ಎಂಬ ವಿಷಯದ ಮೇಲೆ ಗಮನಹರಿಸಲಾಗುವುದು. ಇದರಲ್ಲಿ ಸುರಕ್ಷಿತ ನಗರ ಯೋಜನೆ, ಸೈಬರ್ ಭದ್ರತೆ, ಡಿಜಿಟಲ್ ಅಪರಾಧಗಳು ಮತ್ತು ಸಮುದಾಯ ಸಹಭಾಗಿತ್ವದ ಬಗ್ಗೆ ಚರ್ಚಿಸಲಾಗುತ್ತದೆ.
ಎರಡನೇ ದಿನ (ಸೆಪ್ಟೆಂಬರ್ 25): ‘ವೃತ್ತಿಪರ ಸ್ಪಂದನೆಯನ್ನು ಬಲಪಡಿಸುವುದು’ ಎಂಬ ವಿಷಯದಡಿ ತರಬೇತಿ ಕಾರ್ಯಾಗಾರ ನಡೆಯಲಿದೆ. ಬಿಎನ್‍ಎಸ್ (BNS) ಮತ್ತು ಬಿಎನ್‍ಎಸ್‍ಎಸ್ (BNSS) ಕಾನೂನುಗಳ ಅಡಿಯಲ್ಲಿ ತನಿಖೆ, ವಿಧಿವಿಜ್ಞಾನ (Forensics), ಡಿಜಿಟಲ್ ಸಾಕ್ಷ್ಯ ಸಂಗ್ರಹಣೆ ಹಾಗೂ ಲಿಂಗ ಸೂಕ್ಷ್ಮತೆಯ ಕುರಿತು ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ.
ಕರ್ನಾಟಕ ಸೈಬರ್ ಹ್ಯಾಕಥಾನ್ 2026 ಚಾಲನೆ:
ಈ ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿ, ಆಂಅ ಮತ್ತು ಕರ್ನಾಟಕ ರಾಜ್ಯ ಪೊಲೀಸರು ಜಂಟಿಯಾಗಿ “ಕರ್ನಾಟಕ ಸೈಬರ್ ಹ್ಯಾಕಥಾನ್ 2026” ಅನ್ನು ಘೋಷಿಸಿದ್ದಾರೆ. ಇದು ನವೋದ್ಯಮಗಳಿಗೆ (Startups) 15 ದಿನಗಳ ‘ಇನ್ನೋವೇಶನ್ ಸ್ಟ್ರಿಂಟ್’ ಆಗಿದ್ದು, ಸೈಬರ್ ಅಪರಾಧಗಳ ವಿರುದ್ಧ ಹೋರಾಡಲು ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ವೇದಿಕೆ ಒದಗಿಸುತ್ತದೆ.
ಪ್ರಮುಖ 5 ಸವಾಲುಗಳು:
•ಹಿರಿಯ ನಾಗರಿಕರಿಗೆ ಡಿಜಿಟಲ್ ಅರೆಸ್ಟ್ ತಡೆ: ವೀಡಿಯೊ ಕರೆ ದುರ್ಬಳಕೆ ಪತ್ತೆ ಮತ್ತು ರಕ್ಷಣೆ.
•ನಕಲಿ ಕರೆಗಳ ತಡೆ (Dynamic Call Verification): ಕಾಲರ್ ಐಡಿ ಸ್ಪೂಫಿಂಗ್ ಮತ್ತು ನಕಲಿ ಸಿಮ್ ಬಾಕ್ಸ್ ಪತ್ತೆ.
•ಡಿಪ್‍ಫೇಕ್ ಶೀಲ್ಡ್ (Deepfake & Morphing Shield): ಎಐ ಸೃಷ್ಟಿತ ನಕಲಿ ಚಿತ್ರ/ವಿಡಿಯೋಗಳನ್ನು ಪತ್ತೆ ಹಚ್ಚುವುದು.
•ಸೆಕ್ಸ್‍ಟಾರ್ಷನ್ (Sextortion)) ವಿರುದ್ಧ ಕ್ರಮ: ಬೆದರಿಕೆಗಳನ್ನು ಪತ್ತೆಹಚ್ಚುವುದು ಮತ್ತು ಹಣದ ವಹಿವಾಟು ಟ್ರ್ಯಾಕ್ ಮಾಡುವುದು.
•ಸೈಬರ್ ಸ್ಟಾಕಿಂಗ್ ಮತ್ತು ಡಾಕ್ಸಿಂಗ್: ವ್ಯಕ್ತಿಗತ ಮಾಹಿತಿ ಸೋರಿಕೆಯನ್ನು ತಡೆಯುವುದು.
ಆಯ್ಕೆಯಾದ ಅತ್ಯುತ್ತಮ ತಂತ್ರಜ್ಞಾನಗಳಿಗೆ ನಗದು ಬಹುಮಾನ ಹಾಗೂ ಕರ್ನಾಟಕ ಪೊಲೀಸರ ‘ಸಿಇಎನ್’ (CEN) ಪೊಲೀಸ್ ಠಾಣೆಗಳಲ್ಲಿ ನೇರವಾಗಿ ಅನುಷ್ಠಾನಗೊಳಿಸುವ (Pilots) ಅವಕಾಶ ಸಿಗಲಿದೆ.
ಸಮ್ಮೇಳನದಲ್ಲಿ ಪೊಲೀಸ್ ಇಲಾಖೆ, ನ್ಯಾಯಾಂಗ, ಗೃಹ ಸಚಿವಾಲಯ, ಐಟಿ ಕ್ಷೇತ್ರ, ಎನ್‍ಜಿಒ ಹಾಗೂ ಕಾರ್ಪೊರೇಟ್ ವಲಯದ ಸುಮಾರು 200 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಸಮ್ಮೇಳನದ ಮುಖ್ಯ ಫಲಶ್ರುತಿಯಾಗಿ “ಮಹಿಳೆಯರ ಸುರಕ್ಷತೆ ಮತ್ತು ಭದ್ರತೆ ಕುರಿತಾದ ಬೆಂಗಳೂರು ಘೋಷಣೆ” (The Bengaluru Declaration) ಯನ್ನು ಹೊರಡಿಸಲಾಗುವುದು.
“ಮಹಿಳೆಯರ ಸುರಕ್ಷತೆಯು ಕೇವಲ ಪೊಲೀಸರ ಜವಾಬ್ದಾರಿಯಲ್ಲ, ಅದು ರಾಷ್ಟ್ರೀಯ ಕಟಿಬದ್ಧತೆಯಾಗಿದೆ” ಎಂದು ಆಯೋಜಕರು ತಿಳಿಸಿದ್ದಾರೆ.
