ಬೆಂಗಳೂರು: ಡಾ. ಕಸ್ತೂರಿ ರಂಗನ್(Dr.Kasturi Rangan) ವರದಿಗೆ ಸಂಬಂಧಿಸಿದಂತೆ ಸರ್ಕಾರದ ಅಧಿಕೃತ ನಿರ್ಣಯವನ್ನು ಮಾನ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಶ್ರೀ ರಾಮಲಿಂಗಾರೆಡ್ಡಿ(Sri Ramalingareddy) ಅವರು ಇಂದು ವಿಧಾನ ಪರಿಷತ್ತಿನಲ್ಲಿ ಮಂಡಿಸಿದರು.
ಡಾ. ಕಸ್ತೂರಿ ರಂಗನ್ ವರದಿ ಹಾಗೂ ರಾಜ್ಯದ ಬರಪರಿಸ್ಥಿತಿ ಸಂಬಂಧವಾಗಿ ಕರೆಯಲಾದ ವಿಶೇಷ ಅಧಿವೇಶನದಲ್ಲಿ ಅರಣ್ಯ ಸಚಿವರು ಮಾತನಾಡುತ್ತಾ, ಪಶ್ಚಿಮ ಘಟ್ಟಗಳು ಕರ್ನಾಟಕದ ಪ್ರಮುಖ ನೈಸರ್ಗಿಕ ಸಂಪತ್ತು, ಜೀವವೈವಿಧ್ಯ ಮತ್ತು ಪರಿಸರ ಸಮತೋಲನದ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ ಪ್ರದೇಶವಾಗಿರುತ್ತದೆ. ದಿನಾಂಕ: 27ನೇ ಜುಲೈ 2026ರಂದು ಭಾರತ ಸರ್ಕಾರವು ಕಸ್ತೂರಿ ರಂಗನ್ ವರದಿಯ ಮೇಲೆ 7ನೇ ಕರಡು ESA ಅಧಿಸೂಚನೆಯನ್ನು ಪ್ರಕಟಿಸಿದ್ದು, ಕರ್ನಾಟಕದ ಹತ್ತು ಜಿಲ್ಲೆಗಳ, 1449 ಗ್ರಾಮಗಳನ್ನೊಳಗೊಂಡ ಸುಮಾರು 20,668 ಚ.ಕಿ.ಮೀ ವಿಸ್ತೀರ್ಣ ESA ಅಡಿ ಗುರುತಿಸಲಾಗಿರುತ್ತದೆ.
ಗ್ರಾಮದ ಅರಣ್ಯ ಪ್ರದೇಶದ ಜೊತೆ ಕೃಷಿ ಜಮೀನು, ತೋಟಗಳು, ಮನೆಗಳು ESA ಅಡಿಯಲ್ಲಿ ಸೇರಿರುವುದು, ಜಂಟಿ ಸಮೀಕ್ಷೆ ಮಾಡದೆ ಉಪಗ್ರಹ ದತ್ತಾಂಶ ಆಧಾರದ ಮೇಲೆ ಗಡಿ ನಿರ್ಧರಿಸಿರುವುದು, ಬಗರ್ ಹುಕುಂ, ಅರಣ್ಯ ಹಕ್ಕು, ಡೀಮ್ಡ್ ಫಾರೆಸ್ಟ್, ಭೂ ಮಂಜೂರಾತಿ, ಮೇಲ್ಮನವಿ ಮತ್ತು ನ್ಯಾಯಾಂಗ ಪ್ರಕರಣಗಳು ಬಾಕಿ ಇರುವುದು, ಗ್ರಾಮದ ಐದನೇ ಒಂದು ಭಾಗ (1/5) ಅರಣ್ಯ ವ್ಯಾಪ್ತಿಯಲ್ಲಿ ಬರುತ್ತದೆ ಎಂಬ ಆಧಾರದ ಮೇಲೆ ಇಡೀ ಗ್ರಾಮವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿರುತ್ತದೆ.
ಆದ್ದರಿಂದ, ಮಾನ್ಯ ಮುಖ್ಯಮಂತ್ರಿಯವರು, ಮಾನ್ಯ ಸಚಿವರು, ಶಾಸಕರೊಂದಿಗೆ ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಿಗೆ ಭೇಟಿ ನೀಡಿ, ಅಲ್ಲಿ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ಅಧಿಸೂಚನೆಗೆ ಸಂಬಂಧಿಸಿದಂತೆ ಸ್ಥಳೀಯ ಜನರು ವ್ಯಕ್ತಪಡಿಸಿರುವ ಅಹವಾಲುಗಳು, ಆತಂಕಗಳು ಹಾಗೂ ಅಭಿಪ್ರಾಯಗಳನ್ನು ಆಲಿಸಿ, ಈ ಕುರಿತಂತೆ ಇನ್ನೂ ಹೆಚ್ಚಿನ ಚರ್ಚೆಗೆ ಅನುವಾಗಲು ಮೂರು ದಿನಗಳ ವಿಶೇಷ ಅಧಿವೇಶನವನ್ನು ಕರೆದಿದ್ದು, ಎಲ್ಲಾ ಪಕ್ಷದ ಶಾಸಕರ ಅಭಿಪ್ರಾಯಗಳನ್ನು ಕ್ರೂಢೀಕರಿಸಿ, ಕರ್ನಾಟಕ ವಿಧಾನ ಸಭೆಯು ಸರ್ವಾನುಮತದಿಂದ ದಿನಾಂಕ: 27ನೇ ಜುಲೈ 2026ರಂದು ಭಾರತ ಸರ್ಕಾರವು ಹೊರಡಿಸಿದ 7ನೇ ಕರಡು ESA ಅಧಿಸೂಚನೆಯನ್ನು ಯಥಾವತ್ತಾಗಿ ಒಪ್ಪಿರುವುದಿಲ್ಲ ಹಾಗೂ ಈ ಕೆಳಕಂಡ ನ್ಯೂನತೆಗಳನ್ನು ಸರಿಪಡಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತದೆ.
ಅರಣ್ಯ ಪ್ರದೇಶದ ಜೊತೆ ಕೃಷಿ ಜಮೀನು, ತೋಟಗಳು, ಮನೆಗಳು ಮತ್ತು ಸಾರ್ವಜನಿಕ ಸೌಲಭ್ಯಗಳನ್ನು ESA ಅಡಿಯಲ್ಲಿ ಸೇರಿಸಲಾಗಿರುವುದರಿಂದ, ಮನೆ ನಿರ್ಮಾಣ, ಕುಟುಂಬದ ಆಸ್ತಿ ವಿಭಜನೆ ಮತ್ತು ವಾರಸುದಾರಿಕೆಗೆ ಸಂಬಂಧಪಟ್ಟಂತೆ ಸಮಸ್ಯೆಗಳು ಉದ್ಭವವಾಗುತ್ತವೆ.
ಕರಡು ಅಧಿಸೂಚನೆಯು ಉಪಗ್ರಹ ದತ್ತಾಂಶವನ್ನು (Satellite Data) ಆಧಾರಿತವಾಗಿದ್ದು, ನಿಖರ ಗಡಿ, ಸರ್ವೇ ನಂಬರ್ ಆಧಾರಿತವಾಗಿರುವುದಿಲ್ಲ.
ಜನರಿಗೆ ಪರ್ಯಾಯ ಜೀವನೋಪಾಯಕ್ಕೆ ವಿಶೇಷ ಆರ್ಥಿಕ ನೆರವು ನೀಡಲು ಯಾವುದೇ ಪ್ರಸ್ತಾಪ ಇರುವುದಿಲ್ಲ.
ಬಗರ್ ಹುಕುಂ, ಅರಣ್ಯ ಹಕ್ಕು, ಡೀಮ್ಡ್ ಫಾರೆಸ್ಟ್, ಭೂ ಮಂಜೂರಾತಿ, ಮೇಲ್ಮನವಿ ಮತ್ತು ನ್ಯಾಯಾಂಗ ಪ್ರಕರಣಗಳಂತಹ ವಿಷಯಗಳನ್ನು ಪರಿಗಣಿಸಿರುವುದಿಲ್ಲ.
ಒಂದು ಗ್ರಾಮದ ಐದನೇ ಒಂದು ಭಾಗ (1/5) ಅರಣ್ಯ ವ್ಯಾಪ್ತಿಯಲ್ಲಿ ಬರುತ್ತದೆ ಎಂಬ ಆಧಾರದ ಮೇಲೆ ಇಡೀ ಗ್ರಾಮವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸುವುದು ವೈಜ್ಞಾನಿಕ ಕ್ರಮವಲ್ಲ.
ಮುಂದುವರಿದು, ಕರ್ನಾಟಕ ವಿಧಾನ ಸಭೆಯು ಸರ್ವಾನುಮತದಿಂದ ಈ ಮುಂದಿನ ನಿರ್ಣಯಗಳನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತದೆ:
ESA ವ್ಯಾಪ್ತಿಯಲ್ಲಿ ಕೇವಲ ಅಧಿಸೂಚಿತ ಅರಣ್ಯ ಪ್ರದೇಶಗಳು, ಇತರೆ ಅರಣ್ಯ ಪ್ರದೇಶಗಳು ಮಾತ್ರ ಸೇರಿಸಬೇಕು. (ಈಗಾಗಲೇ ಮಂಜೂರಾದ ಪ್ರದೇಶ ಹೊರತುಪಡಿಸಿ) ಕೃಷಿ ಭೂಮಿ, ತೋಟಗಾರಿಕೆ/ಪ್ಲಾಂಟೇಷನ್ ಪ್ರದೇಶಗಳು, ಜನವಸತಿ ಮತ್ತು ಸಾರ್ವಜನಿಕ ಚಟುವಟಿಕೆ ಪ್ರದೇಶಗಳನ್ನು ಸೇರಿಸಬಾರದು.
ಬಗರ್ ಹುಕುಂ, ಅರಣ್ಯ ಹಕ್ಕು, ಡೀಮ್ಡ್ ಫಾರೆಸ್ಟ್, ಭೂ ಮಂಜೂರಾತಿ, ಮೇಲ್ಮನವಿ ಮತ್ತು ನ್ಯಾಯಾಂಗ ಪ್ರಕರಣಗಳನ್ನು ಪರಿಗಣಿಸಬೇಕು.
ತಜ್ಞ ಸಮಿತಿಯಿಂದ ಭೌತಿಕವಾಗಿ ಅರಣ್ಯಗಡಿ, ಜನವಸತಿ, ಪರಿಸರ ಸೂಕ್ಷ್ಮ ಪ್ರದೇಶಗಳನ್ನು, ಜನವಸತಿ ಕೃಷಿ ಚಟುವಟಿಕೆ ಪ್ರದೇಶಗಳನ್ನು ಸರ್ವೇ ನಂಬರ್‌ವಾರು ಅಳತೆ ಮಾಡಿ ಪ್ರತ್ಯೇಕವಾಗಿ ಗುರುತಿಸಬೇಕು.
ESA ನಿಂದಾಗಿ ರೈತರ ಹಾಗೂ ಕಾರ್ಮಿಕರ ಪರ್ಯಾಯ ಜೀವನೋಪಾಯ ಮತ್ತು ಆರ್ಥಿಕ ನೆರವನ್ನು ನೀಡಲು ಸೂಕ್ತ ಮಾರ್ಗಸೂಚಿ ರೂಪಿಸಬೇಕು.
ಮುಂದುವರಿದು, ರಾಜ್ಯ ಸರ್ಕಾರವು ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ, ಉನ್ನತ ಮಟ್ಟದ ಸಮಿತಿ ರಚಿಸಿ, ಸಮಿತಿಯಲ್ಲಿ ಕಂದಾಯ ಅಧಿಕಾರಿಗಳು, ಅರಣ್ಯಾಧಿಕಾರಿಗಳು, ರೈತ ಸಮುದಾಯದ ಪ್ರತಿನಿಧಿಗಳು, ಕೈಗಾರಿಕಾ ಉದ್ಯಮಗಳ ಪ್ರತಿನಿಧಿಗಳು, ಅರಣ್ಯ ಮತ್ತು ಪರಿಸರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪರಿಣತಿ ಹೊಂದಿರುವ ಶೈಕ್ಷಣಿಕ ಸಂಸ್ಥೆಗಳ ತಜ್ಞರು/ವಿಜ್ಞಾನಿಗಳನ್ನೊಳಗೊಂಡ ಸಮಿತಿ ರಚಿಸಿ, ಕಸ್ತೂರಿ ರಂಗನ್ ವರದಿಯ ನ್ಯೂನತೆಗಳನ್ನು ಸರಿಪಡಿಸಿ ಸೂಕ್ತ ಮಾರ್ಪಾಡುಗಳನ್ನು ಸೂಚಿಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ ಭೌತಿಕವಾಗಿ ಸರ್ವೇ ನಂಬರ್‌ವಾರು ಅಳತೆಯನ್ನು ರಾಜ್ಯ ಸರ್ಕಾರದಿಂದ ಮಾಡಲು ನಿರ್ಧರಿಸಿದ್ದು, ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಸಲುವಾಗಿ, ರಾಜ್ಯ ಸರ್ಕಾರವು ಭಾರತ ಸರ್ಕಾರಕ್ಕೆ ಒಂದು ವರ್ಷದ ಕಾಲಾವಕಾಶ ನೀಡುವಂತೆ ಮನವಿ ಮಾಡಲಿದೆ. ಸದರಿ ಅವಧಿಯವರೆಗೆ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಭಾರತ ಸರ್ಕಾರವು ಅಂತಿಮಗೊಳಿಸಬಾರದು. ರಾಜ್ಯ ಸರ್ಕಾರವು ತನ್ನ ವರದಿಯನ್ನು ಸಲ್ಲಿಸಿದ ನಂತರ, ಭಾರತ ಸರ್ಕಾರವು ರಾಜ್ಯ ಸರ್ಕಾರದೊಂದಿಗೆ ಈ ವಿಷಯದ ಕುರಿತು ವಿವರವಾದ ಚರ್ಚೆ ನಡೆಸಿ, ನಂತರವೇ ಈ ವಿಷಯದಲ್ಲಿ ಅಂತಿಮ ನಿರ್ಧಾರವನ್ನು ಕೈಗೊಳ್ಳಬೇಕು.
ಮುಂದುವರಿದು, ರಾಜ್ಯ ಮಟ್ಟದ ಸಮಿತಿಗೆ ಸಹಾಯ ಮಾಡಲು ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಜನಪ್ರತಿನಿಧಿಗಳನ್ನೊಳಗೊಂಡ ಸಮಿತಿಗಳನ್ನು ಸಹ ರಚಿಸಲು ನಿರ್ಧರಿಸಿದೆ ಎಂದು ಸರ್ಕಾರದ ಅಧಿಕೃತ ನಿರ್ಣಯವನ್ನು ಮಂಡಿಸಿದರು.
ಈ ವರದಿಯ ಬಗ್ಗೆ ಸುಮಾರು 25 ಜನ 9.30 ನಿಮಿಷಗಳಿಗೂ ಹೆಚ್ಚು ಕಾಲ ಮಾತನಾಡಿದ್ದು, ಅದರಲ್ಲಿ ವಿರೋಧ ಪಕ್ಷದಿಂದ 14 ಜನ ಮಾತನಾಡಿದ್ದಾರೆ. ಎಲ್ಲಾ ಸದಸ್ಯರು ತಮ್ಮ ಅಮೂಲ್ಯವಾದ ಸಲಹೆಗಳನ್ನು ನೀಡಿದ್ದಾರೆ ಎಲ್ಲರ ಸಲಹೆಯನ್ನು ಸಹ ಸಕಾರಾತ್ಮಕವಾಗಿ ಪರಿಗಣಿಸಿ ರೈತರಿಗೆ, ಪರಿಸರಕ್ಕೆ, ಪಶ್ಚಿಮ ಘಟ್ಟಗಳ ನಿವಾಸಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ತಜ್ಞರ ಸಮಿತಿ ರಚನೆ ಮಾಡಿ, ಭೌತಿಕ ಸರ್ವೆ ಮಾಡಿ, ನಿಗಧಿತ ಅವಧಿಯೊಳಗೆ ವರದಿಯನ್ನು ಕೇಂದ್ರಕ್ಕೆ, ಸರ್ವೋಚ್ಚ ನ್ಯಾಯಾಲಯಕ್ಕೆ ಹಾಗೂ ಎನ್.ಜಿ.ಟಿ ಗೆ ಸಲ್ಲುಸಲಾಗುವುದು ಎಂದು ಸಚಿವರು ತಿಳಿಸಿದರು.

