ಬೆಂಗಳೂರು: ವಿಶೇಷ ಅಧಿವೇಶನದ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕುತಂತ್ರ ಮುಖ್ಯಮಂತ್ರಿಯವರದು ಎಂಬ ಭಾವನೆ ಇವತ್ತು ಎಲ್ಲರಲ್ಲೂ ಬರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(B.Y.Vijayendra) ಅವರು ಆಕ್ಷೇಪಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬರಗಾಲ ಮತ್ತು ಕಸ್ತೂರಿರಂಗನ್ ವರದಿ ಎರಡಕ್ಕೂ ಪರಿಹಾರ(Solution) ಕಂಡುಕೊಳ್ಳಬೇಕು ಎಂಬ ದೃಷ್ಟಿಯಿಂದ ಮುತುವರ್ಜಿ ವಹಿಸಿ ಈ ವಿಶೇಷ ಅಧಿವೇಶನ ಕರೆದಿದ್ದು, ಇದರಲ್ಲಿ ಯಾವುದೇ ರಾಜಕಾರಣ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿಗಳೇ ಸದನದಲ್ಲೂ ಹಾಗೂ ಸದನದ ಹೊರಗಡೆನೂ ಹೇಳಿದ್ದಾರೆ. ಆದರೆ ಮತ್ತೊಂದು ಕಡೆ ಕಸ್ತೂರಿರಂಗನ್(Kasthuri Rangan) ವಿಚಾರದಲ್ಲಿ ಮುಖ್ಯಮಂತ್ರಿಗಳೇ ಹೇಳಿದ್ದರಿಂದ ನಾವು ಹೋರಾಟ ಮಾಡಿದ್ದೇವೆ; ಶಿವಮೊಗ್ಗ ಜಿಲ್ಲೆಯಲ್ಲಿ ಪಾದಯಾತ್ರೆ ಮಾಡಿದ್ದೇವೆ ಅಂತ ಆಡಳಿತ ಪಕ್ಷದ ಶಾಸಕರು ಹೇಳುತ್ತಿದ್ದಾರೆ ಎಂದು ಗಮನ ಸೆಳೆದರು. ರಾಜಕಾರಣ ಮಾಡುವುದಿಲ್ಲ ಎನ್ನುವ ಹಾಗೂ ಪರಿಹಾರ ಕೊಡ್ತೀನಿ ಎಂದು ತಿಳಿಸಿದ ಮುಖ್ಯಮಂತ್ರಿಗಳು ಕುತಂತ್ರ ಮಾಡುತ್ತಿರುವಂತಿದೆ ಎಂದು ಟೀಕಿಸಿದರು.
ಪಾದಯಾತ್ರೆಯಿಂದ ವಿಚಲಿತರಾದ ಸಿಎಂ
ಭಾರತೀಯ ಜನತಾ ಪಾರ್ಟಿ ನಾವು ಪಾದಯಾತ್ರೆ ನಡೆಸದೇ ಇದ್ದಲ್ಲಿ ಈ ಪುಣ್ಯಾತ್ಮ ವಿಶೇಷ ಅಧಿವೇಶನ ಕರೆಯುತ್ತಿರಲಿಲ್ಲ ಎಂದು ಆರೋಪಿಸಿದರು. ಬದಲಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಗಳೂರಿನಲ್ಲಿ ಮೀನು ಹಿಡ್ಕೊಂಡು ಅಲ್ಲೇ ಕೂರುತ್ತಿದ್ದರು ಎಂದು ದೂರಿದರು.
ನಮ್ಮ ಪಾದಯಾತ್ರೆಯಿಂದ ಪಾದಯಾತ್ರೆಯಿಂದ ವಿಚಲಿತರಾಗಿದ್ದಂತಹ ಮುಖ್ಯಮಂತ್ರಿಗಳು ವಿಶೇಷ ಅಧಿವೇಶನ ಕರೆದಿದ್ದಾರೆ. ಮತ್ತೊಂದು ಕಡೆ ಮಾಜಿ ಸಚಿವ ಮತ್ತು ಹಿರಿಯ ಶಾಸಕ ಎಚ್.ಕೆ.ಪಾಟೀಲ್ ರವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅವರ ತಾಲೂಕನ್ನ ಬರಪೀಡಿತ ಎಂದು ಘೋಷಿಸದೇ ಇದ್ದರೆ ರಾಜೀನಾಮೆ ಬಿಸಾಕುವೆ ಅಂತ ಹೇಳಿದ್ದಾರೆ. ಮುದ್ದೇಬಿಹಾಳದ ಶಾಸಕರು ಅಪ್ಪಾಜಿ ಗೌಡರು ಬರಪೀಡಿತ ತಾಲೂಕು ಘೋಷಣೆ ಮಾಡುವುದರ ಬಗ್ಗೆ ಕೀಳು ರಾಜಕಾರಣ ಮಾಡ್ತಾ ಇದ್ದಾರೆ ಅಂತ ಹೇಳಿ ನೇರವಾಗಿ ಆರೋಪ ಮಾಡಿದ್ದಾರೆ ಮತ್ತೊಂದು ಕಡೆ ಜೆಡಿಎಸ್ ನ ಶಾಸಕರು ಇಲ್ಲೇ ಧರಣಿ ಕೂತಿದ್ದರು ಎಂದು ವಿವರಿಸಿದರು.
ನಾಟಕ ಆಡುವುದನ್ನು ಬಿಟ್ಟು ಜನರಿಗೆ ನ್ಯಾಯ ಕೊಡಲಿ
ಬಿಜೆಪಿಯ ಬೆಂಗಳೂರು ಶಾಸಕರನ್ನ ಬಿಟ್ಟು ಉಳಿದ 44 ಕ್ಷೇತ್ರಗಳಲ್ಲಿ ಕೇವಲ 20 ತಾಲೂಕುಗಳನ್ನು ಮಾತ್ರ ಬರಪೀಡಿತ ತಾಲೂಕು ಅಂತ ಘೋಷಿಸಿದ್ದಾರೆ. ಇದು ರಾಜಕಾರಣ ಅಲ್ಲವೇ ಮುಖ್ಯಮಂತ್ರಿಗಳೇ ಎಂದು ಕೇಳಿದರು. ನಾವು ಸದನದಲ್ಲೂ ಕೂಡ ಮಾತನಾಡುತ್ತೇವೆ. ಮಾನ್ಯ ಮುಖ್ಯಮಂತ್ರಿಗಳು ಬರಗಾಲ ಮತ್ತು ಕಸ್ತೂರಿರಂಗನ್ ವಿಚಾರದಲ್ಲಿ ಕಪಟ ನಾಟಕ ಆಡುವುದನ್ನು ಬಿಟ್ಟು ಜನರಿಗೆ ನ್ಯಾಯ ಕೊಡಲಿ ಎಂದು ಆಗ್ರಹಿಸಿದರು.
ರೈತರನ್ನು ನಡು ಬೀದಿಗೆ ತಂದು ನಿಲ್ಲಿಸಿದ್ದಾರೆ..
ಕಸ್ತೂರಿರಂಗನ್ ವಿಷಯದಲ್ಲಿ ಕಾಡಂಚಿನ ಜನರಿಗೆ ನ್ಯಾಯ ಕೊಡಲು ಫಿಸಿಕಲ್ ಸರ್ವೆ ಆಗಬೇಕು ಎಂದು ಒತ್ತಾಯಿಸಿದರು. ಇವತ್ತು ಎಲ್ಲಾ ನನ್ನ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರವೂ ಸೇರಿದಂತೆ 190ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತ ತಾಲೂಕು ಅಂತ ಘೋಷಣೆ ಮಾಡಬೇಕಾಗುತ್ತದೆ. ರೈತರ ಕೃಷಿ ಸಾಲ ಮನ್ನ ಮಾಡಬೇಕು. ಇಡೀ ರಾಜ್ಯದಲ್ಲಿ ಎಲ್ಲಾ ಕಡೆ ಇವತ್ತು ನೀರಿನ ಹಾಹಾಕಾರ ಇದೆ. ವಿದ್ಯುತ್ ಕ್ಷಾಮ ಇದೆ. ಬಿಜೆಪಿ ಸರ್ಕಾರ ಇದ್ದಾಗ ಯಡಿಯೂರಪ್ಪನವರು ಮುಖ್ಯಮಂತ್ರಿ ಇದ್ದಾಗ ಛತ್ತೀಸ್ ಗಡದಿಂದ ವಿದ್ಯುತ್ ಖರೀದಿ ಮಾಡಿ ತಂದಿದ್ದರು. ಆದರೆ, ಈಗಿನ ಮುಖ್ಯಮಂತ್ರಿಗಳು ಒಂದು ತಿಂಗಳು ಮುಂಚೆ ಕಾವೇರಿ ಕೊಳ್ಳದ ರೈತರಿಗೆ ನೀವು ಯಾವುದೇ ಕಾರಣಕ್ಕೂ ಬಿತ್ತನೆ ಮಾಡಬೇಡಿ, ಭತ್ತ ನಾಟಿ ಮಾಡಬೇಡಿ ಅಂತ ಹೇಳಿದ್ದರು. ರಾಜ್ಯದ ಬಹುತೇಕ ಎಲ್ಲಾ ತಾಲೂಕುಗಳಲ್ಲಿ ವಿದ್ಯುತ್ ಅಭಾವ ಇದೆ. 7-8 ಗಂಟೆ ಮೂರು ಫೇಸ್ ವಿದ್ಯುತ್ ಕೊಡೋದಕ್ಕೆ ಸಾಧ್ಯ ಆಗದ ಕಾಂಗ್ರೆಸ್ ಸರ್ಕಾರ ರೈತರನ್ನು ನಡು ಬೀದಿಗೆ ತಂದು ನಿಲ್ಲಿಸಿದೆ. ಬರ ಇದೆ ಎಂದು ಗೊತ್ತಿರುವಾಗ ಆಗಲೇ ವಿದ್ಯುತ್ ಖರೀದಿಸಬೇಕಿತ್ತಲ್ಲವೇ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ 10 ರೂಪಾಯಿ 11 ರೂಪಾಯಿಗೆ ವಿದ್ಯುತ್ತನ್ನು ಖರೀದಿ ಮಾಡಬಹುದಾಗಿತ್ತು ಈಗ ಪ್ರತಿ ಯೂನಿಟ್ ಗೆ 14-15 ರೂಪಾಯಿ ಕೊಡಬೇಕಾಗುತ್ತದೆ ಎಂದು ತಿಳಿಸಿದರು. ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ರೈತರ ಬಗ್ಗೆ ಪ್ರಾಮಾಣಿಕವಾಗಿ ಕಳಕಳಿ ಹೊಂದಿದ್ದರೆ ವಿದ್ಯುತ್ ಖರೀದಿಸಿ ಕೊಡಲಿ ಎಂದು ಆಗ್ರಹಿಸಿದರು. ನೀವು ಎಷ್ಟು ರೇಟಿಗೆ ಖರೀದಿ ಮಾಡ್ತೀರೋ ನಮಗಂತೂ ಗೊತ್ತಿಲ್ಲ; ನಿಮ್ಮ ಸರ್ಕಾರದ ಹತ್ರ ಹಣ ಇದೆಯೋ ಇಲ್ವೋ ನಮಗೆ ಗೊತ್ತಿಲ್ಲ ಎಂದರು.
ಕರಾವಳಿ ಅಭಿವೃದ್ಧಿಗೆ ಹಣ ಎಲ್ಲಿಂದ?
ಯಾವುದೇ ಪುಕ್ಸಟ್ಟೆ ಘೋಷಣೆಗಳು ಮಾಡಬೇಡ ಮುಖ್ಯಮಂತ್ರಿಗಳೇ; ಮಂಗಳೂರಿಗೆ ಹೋಗಿ 32000 ಕೋಟಿ ಪ್ರಕಟಿಸಿದ್ದೀರಿ. ರೊಕ್ಕ ಎಲ್ಲಿಂದ ತರ್ತೀರಿ ಅಂತ ಹೇಳಿ ಎಂದು ಕೇಳಿದರು. ಮುಖ್ಯಮಂತ್ರಿಗಳು ಕೇವಲ ಜಾಹಿರಾತುಗಳ ಮೂಲಕ ಮತ್ತೆ ಮುಖ್ಯಮಂತ್ರಿ ಆಗಬಹುದು ಅಂತ ಕನಸು ಇಟ್ಟುಕೊಂಡಿದ್ದಾರೆ. ಆ ಕನಸು ಹಾಗೆ ಇರಲಿ; ಮುಂದೆ ಏನಾಗುತ್ತೆ ಅಂತ ನೋಡೋಣ ಜನ ತೀರ್ಮಾನ ಮಾಡುತ್ತಾರೆ ಎಂದು ಎಚ್ಚರಿಸಿದರು.
ಕರಾವಳಿಗೆ ಘೋಷಿಸಿದ 32 ಸಾವಿರ ಕೋಟಿಗೆ ಎಲ್ಲಿಂದ ದುಡ್ಡು ಬರಲಿದೆ? ಇವರು ರಿಯಲ್ ಎಸ್ಟೇಟ್ ಕಂಪನಿಯಿಂದ ತರುತ್ತಾರಾ ಎಂದು ಕೇಳಿದರು. ಕೇವಲ ಘೋಷಣೆ ಮಾಡುತ್ತಾರೆ. ಇನ್ನೊಂದೆಡೆ ಸರ್ಕಾರದಲ್ಲಿ ಹಣ ಇಲ್ಲ. 6000- 6500 ಕೋಟಿ ಬಾಕಿ ಇದೆ ನಮ್ಮ ನೌಕರಿ ಸಂಬಳ ಕೊಡೋದಕ್ಕೆ ಆಗುತ್ತಿಲ್ಲ ಎಂದು ಕೆ.ಎಸ್.ಆರ್.ಟಿ.ಸಿ. ಎಂಡಿ ಪತ್ರ ಬರೆದಿದ್ದಾರೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಬಸ್ಸು ನಿಲ್ಲಿಸಬೇಕಾದೀತು ಎಂದು ತಿಳಿಸಿದ್ದಾರೆ. ರಾಜ್ಯ ಸರ್ಕಾರ ಇನ್ನು ಕೂಡ ಉತ್ತರ ಕೊಟ್ಟಿಲ್ಲ ಎಂದರು.
ಮತ್ತೊಂದು ಕಡೆ ಭ್ರಷ್ಟಾಚಾರ ಮಿತಿ ಮೀರಿದೆ. ಒಂದು ವರ್ಷಕ್ಕೆ ಶೂ ಸಾಕ್ಸ್ ಬಾಳಿಕೆ ಬರಬೇಕು. ಆದರೆ, ಒಂದು ತಿಂಗಳು ಕೂಡ ಬರ್ತಾ ಇಲ್ಲ; ಮಧುಬಂಗಾರಪ್ಪ ಪುಕ್ಷಟ್ಟೆ ಮಾತನಾಡುತ್ತಾರೆ. ಅವರ ಇಲಾಖೆಯಲ್ಲಿ ಈ ರೀತಿ ಹಗರಣ ಆಗಿದೆ ಹಾಗೂ ಭ್ರಷ್ಟಾಚಾರ ಆಗಿದೆ ಎಂದು ಗಮನ ಸೆಳೆದರು. ಅನೇಕ ವಿಚಾರಗಳಿವೆ. ಸದನದಲ್ಲಿ ನಾವು ಮಾತನಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ವಿಶೇಷ ಅಧಿವೇಶನದ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕುತಂತ್ರ: ಬಿ.ವೈ.ವಿಜಯೇಂದ್ರ

