ಬೆಂಗಳೂರು: ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರವರೆಗೆ ಸೇವಾ ಸಂಕಲ್ಪ ಅಭಿಯಾನ (Seva Sankalpa Abhiyan) ವನ್ನು ಹಮ್ಮಿಕೊಂಡಿದ್ದೇವೆ ಎಂದು ಬಿಜೆಪಿ (BJP President) ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (*BY Vijayendra) ಅವರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು 25 ವರ್ಷಗಳ ಕಾಲ ಸಾರ್ವಜನಿಕ ಬದುಕಿನಲ್ಲಿ ಯಾವುದೋ ಒಂದು ಕಪ್ಪು ಚುಕ್ಕೆ ಇಲ್ಲದೇ ದೇಶವನ್ನು ಮುನ್ನಡೆಸುವಂತಹ ಕೆಲಸ ಮಾಡುತ್ತಿದ್ದಾರೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನವೀನ್ ಅವರ ಅಪೇಕ್ಷೆಯಂತೆ ಅಭಿಯಾನ ನಡೆಯಲಿದೆ. ಸೆ.17 ಸಂಜೆ 7 ಗಂಟೆಗೆ ರಾಜ್ಯ ಮತ್ತು ಇಡೀ ದೇಶದ ಐತಿಹಾಸಿಕ ಸ್ಥಳಗಳು, ಮನೆಮನೆಗಳಲ್ಲಿ ದೀಪ ಪ್ರಜ್ವಲನೆ ಮಾಡಲಿದ್ದೇವೆ. ಮೋದಿಜೀ ಅವರ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಪ್ರದೇಶದಲ್ಲ್ಲೂ (ಉದಾ- ಶಿವಮೊಗ್ಗ ವಿಮಾನನಿಲ್ದಾಣ) ದೀಪ ಪ್ರಜ್ವಲನೆ ಮಾಡಲಾಗುವುದು ಎಂದು ವಿವರಿಸಿದರು. ಸಂಸದ ಬಿ.ವೈ.ರಾಘವೇಂದ್ರ, ಸ್ಥಳೀಯ ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದರು.
ದೀಪ ಪ್ರಜ್ವಲನೆ ಮೂಲಕ ಮೋದಿಜೀ ಅವರಿಗೆ ಭಗವಂತನು ಇನ್ನೂ ಹೆಚ್ಚು ಆಯುಸ್ಸು, ಆರೋಗ್ಯವನ್ನು ಕೊಡಲೆಂದು ಪ್ರಾರ್ಥಿಸುತ್ತೇವೆ. ವಿಕಸಿತ ಭಾರತ ಸಂಕಲ್ಪ ಈಡೇರಬೇಕಿದೆ. ದೇಶವು ಜಾಗತಿಕ ಸವಾಲುಗಳ ನಡುವೆ ಅಗ್ರಗಣ್ಯ ರಾಷ್ಟ್ರಗಳ ಸಾಲಿನಲ್ಲಿ ಇರಬೇಕೆಂಬ ನಿಟ್ಟಿನಲ್ಲಿ ಸೇವಾ ಚಟುವಟಿಕೆಗಳು ನಡೆಯಲಿವೆ ಎಂದರು.
ಬಿಜೆಪಿ ಕಲೆ ಮತ್ತು ಸಾಂಸ್ಕøತಿಕ ಪ್ರಕೋಷ್ಠದ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರ 25 ವರ್ಷಗಳ ಸೇವೆಯ ಅಂಗವಾಗಿ ವಿವಿಧ ರಾಜ್ಯಗಳ ಕಲಾವಿದರು ಚಿತ್ರಕಲಾಕೃತಿಗಳನ್ನು ಬಿಡಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಮೋದಿಜೀ ಅವರ ಸಾಧನೆಯನ್ನು ದೇಶದ ಜನತೆಗೆ ನೆನಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದವರಿಗೆ ರಕ್ಷಣೆ :
ಪ್ರಶ್ನೆಗೆ ಉತ್ತರಿಸಿದ ಅವರು, ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆ ಗಮನಿಸಿದ್ದೇನೆ. ಅಧಿಕಾರ ನೆತ್ತಿಗೇರಿದರೆ ಹೇಗೆ ನಡೆದುಕೊಳ್ಳಬಹುದು ಎಂಬುದಕ್ಕೆ ಇದು ಉದಾಹರಣೆ ಎಂದು ತಿಳಿಸಿದರು. ಹಿಂದೆ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದವರಿಗೆ ಇದೇ ಕಾಂಗ್ರೆಸ್ಸಿನವರು ರಕ್ಷಣೆ ನೀಡಿದ್ದರು. ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆ ದೇಶದ್ರೋಹದ ಕೆಲಸ ಎಂದು ಟೀಕಿಸಿದರು. ಇಂಥ ಹೇಳಿಕೆ ನಮ್ಮ ರಾಜ್ಯದಲ್ಲಿ ಅಭದ್ರತೆಯನ್ನು ಸೃಷ್ಟಿಸುತ್ತಿದೆ ಎಂದು ತಿಳಿಸಿದರು. ಆಡಳಿತ ಪಕ್ಷದವರು ಕಾನೂನು- ಸುವ್ಯವಸ್ಥೆ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಪಕ್ಷದ ಪಾಪದ ಕೊಡ ತುಂಬಿದೆ :
ಕಾಂಗ್ರೆಸ್ ಪಕ್ಷದ ಪಾಪದ ಕೊಡ ತುಂಬಿದೆ. ಅವರಿಗೆ ತಿಂದದ್ದು ಅರಗುತ್ತಿಲ್ಲ; ಅಧಿಕಾರದ ಅಮಲಿನಿಂದ ಈ ರೀತಿ ಮಾಡುತ್ತಿದ್ದಾರೆ. ಇವರ ಸೊಕ್ಕನ್ನು ಅಡಗಿಸುವ ಶಕ್ತಿ ಬಿಜೆಪಿ ಕಾರ್ಯಕರ್ತರಿಗೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ಸಿನ ಒಂದು ಮನೆಗೆ 3 ಬಾಗಿಲು..
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಗಳಾಗಿ 3 ತಿಂಗಳಾಗಿದೆ. ಅವರು ಕಡಿದು ಕಟ್ಟೆ ಹಾಕಿದ್ದಾದರೂ ಏನು ಎಂದು ಕೇಳಿದರು. ಕಾಂಗ್ರೆಸ್ ಪರಿಸ್ಥಿತಿ ಒಂದು ಮನೆ, 3 ಬಾಗಿಲು ಎಂಬಂತಾಗಿದೆ. ಬಿ.ಕೆ.ಹರಿಪ್ರಸಾದ್ ಹಣೆಬರಹ ಡಿ.ಕೆ.ಶಿವಕುಮಾರ್ ಅವರಿಗೂ ಗೊತ್ತಾಗಿದೆ. 100 ದಿನಗಳ ಸಮಾರಂಭದಲ್ಲಿ ಬಿ.ಕೆ.ಹರಿಪ್ರಸಾದ್ ಅವರನ್ನು ವೇದಿಕೆಗೂ ಹತ್ತಿಸಿಲ್ಲವೆಂದರೆ ಅವರನ್ನೂ ದೂರವಿಡುವ ಕೆಲಸ ಕಾಂಗ್ರೆಸ್ಸಿನಿಂದ ಆಗುತ್ತಿದೆ ಎಂದು ವಿಶ್ಲೇಷಿಸಿದರು. ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ಒಂದೊಂದು ದಿಕ್ಕಿನಲ್ಲಿ ನಡೆದರೆ ಮುಖ್ಯಮಂತ್ರಿಗಳು ಏಕಾಂಗಿಯಾಗುತ್ತಿದ್ದಾರೆ ಎಂದರು.
ಕೃಷಿ ಸಾಲ ಮನ್ನಾ ಮಾಡಬೇಕು :
ರೈತರ ಸಂಕಷ್ಟಕ್ಕೆ ರಾಜ್ಯ ಸರಕಾರ ಸ್ಪಂದಿಸಬೇಕು. ಸರಕಾರವು ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ಬರ ಪ್ರದೇಶಕ್ಕೆ ಸಚಿವರು ಪ್ರವಾಸ ಮಾಡಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಇವನ್ನು ಸದನದಲ್ಲಿ ಮಾತನಾಡುತ್ತೇವೆ. ಕಸ್ತೂರಿರಂಗನ್ ವರದಿ ಬಗ್ಗೆ ಸದನದಲ್ಲಿ ಸಮಗ್ರ ಚರ್ಚೆ ಮಾಡಿ ಅರಣ್ಯದಂಚಿನ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕಿದೆ ಎಂದರು.
ಹಿಂದೂಗಳ ಅಪಮಾನ, ಅಲ್ಪಸಂಖ್ಯಾತರ ತುಷ್ಟೀಕರಣ :
ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಅಲ್ಪಸಂಖ್ಯಾತರಿಂದಲೇ ಕಾಂಗ್ರೆಸ್ ಸರಕಾರಕ್ಕೆ ಅಧಿಕಾರಕ್ಕೆ ಬಂದಿದೆ ಎಂಬ ಭ್ರಮೆಯಲ್ಲಿ ಮುಖ್ಯಮಂತ್ರಿಗಳು ಇದ್ದಂತಿದೆ. ಉಮರ್ ಖಾಲಿದ್‍ಗೆ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಡುತ್ತಾರೆ ಎಂದರೆ, ಅದು ದೇಶದ್ರೋಹದ ಕೆಲಸ. ಕಾರ್ಯಕ್ರಮಕ್ಕೆ ಅವಕಾಶ ನೀಡದೇ ಇದ್ದ ವಿದ್ಯಾರ್ಥಿ ಪರಿಷತ್ತನ್ನು ಅಭಿನಂದಿಸುವುದಾಗಿ ಹೇಳಿದರು. ಗಣೇಶ ಹಬ್ಬ ಆಚರಣೆಗೆ ತೊಂದರೆ ನೀಡಿ ಹಿಂದೂಗಳ ಅಪಮಾನ, ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುವ ಕಾಂಗ್ರೆಸ್ ಸರಕಾರದ ಹೆದರಿಸಿ, ಬೆದರಿಸಿ ಮತ್ತೆ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಂತಿದೆ. ಅದನ್ನು ತೊಡೆದು ಹಾಕುವ ಕೆಲಸವನ್ನು ಬಿಜೆಪಿ ಮಾಡಲಿದೆ ಎಂದು ನುಡಿದರು.
ಉಚಿತ ಯುಪಿಐ ವಹಿವಾಟಿನಲ್ಲಿ ವ್ಯಾಪಾರಿಗಳಿಗೆ ಶುಲ್ಕದ ಬಲೆ, ಅಂತಿಮವಾಗಿ ಗ್ರಾಹಕನಿಗೆ ಬರೆ: ಡಾ. ಆನಂದ ಕುಮಾರ್

