ಬೆಂಗಳೂರು: ಶ್ರೀ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ 2025-26ನೇ ಸಾಲಿನಲ್ಲಿ Rs.1.10 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಹಾಗೂ ಸಹಕಾರಿ ರತ್ನ ಡಿ.ಆರ್.ವಿಜಯ(D.R.Vijay) ಸಾರಥಿ ಘೋಷಿಸಿದರು. ಸೌತ್ ಎಂಡ್ ಸರ್ಕಲ್ನ(South End Circle) ಚಾಮರಾಜನ ಕಲ್ಯಾಣ ಮಂಟಪದಲ್ಲಿ ನಡೆದ ಬ್ಯಾಂಕಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, “ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡುವ ಉದ್ದೇಶದಿಂದ, ಬ್ಯಾಂಕಿನ ಮಹಿಳಾ ಖಾತೆದಾರರು ಸಾಲ ಪಡೆದಾಗ ಸಾಮಾನ್ಯ ಬಡ್ಡಿದರಕ್ಕಿಂತ ಶೇ.1ರಷ್ಟು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗುವುದು.
ಮಹಿಳೆಯರಿಗೆ ವಿಶೇಷ ಬಡ್ಡಿದರ ರಿಯಾಯಿತಿ ನೀಡುವ ಮೂಲಕ ಅವರ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ನಮ್ಮ ಉದ್ದೇಶ” ಎಂದು ತಿಳಿಸಿದರು. ಬ್ಯಾಂಕ್ ಪ್ರಸ್ತುತ 33,755 ಸದಸ್ಯರನ್ನು ಹೊಂದಿದ್ದು, ಕಳೆದ ಏಳು ವರ್ಷಗಳಿಂದ ಸದಸ್ಯರಿಗೆ ಶೇ.25ರಷ್ಟು ಡಿವಿಡೆಂಡ್ ಘೋಷಿಸಲಾಗುತ್ತಿದೆ. ಆರ್ಬಿಐ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿ ಮುನ್ನಡೆಯುತ್ತಿದೆ. ಪ್ರಸಕ್ತ ಸಾಲಿನ ಅಂತ್ಯಕ್ಕೆ ಒಟ್ಟು ಎನ್ಪಿಎ ಶೇ.10.22, ನಿವ್ವಳ ಎನ್ಪಿಎ ಶೇ.2.03 ಹಾಗೂ ಸಿಆರ್ಎಆರ್ ಶೇ.17.90ರಷ್ಟಿದೆ ಎಂದು ವಿಜಯ ಸಾರಥಿ ವಿವರಿಸಿದರು.
ಡಿಜಿಟಲ್ ಪಾವತಿಗೆ ಹೆಚ್ಚಿನ ಸೌಲಭ್ಯ ಸದಸ್ಯರು ಮತ್ತು ಗ್ರಾಹಕರಿಗೆ ಸುಲಭ ಹಾಗೂ ವೇಗದ ಡಿಜಿಟಲ್ ಪಾವತಿ ವ್ಯವಸ್ಥೆ ಒದಗಿಸುವ ನಿಟ್ಟಿನಲ್ಲಿ ಬ್ಯಾಂಕ್ ಫೋನ್ಪೇ, ಗೂಗಲ್ಪೇ ಹಾಗೂ ಮರ್ಚೆಂಟ್ ಪೇಮೆಂಟ್ ಸ್ಕ್ಯಾನ್ ರ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಈ ಮೂಲಕ ಗ್ರಾಹಕರು ಹಣ ವರ್ಗಾವಣೆ ಹಾಗೂ ವಿವಿಧ ಪಾವತಿಗಳನ್ನು ಸುಲಭವಾಗಿ ಡಿಜಿಟಲ್ ಮಾಧ್ಯಮದ ಮೂಲಕ ನಿರ್ವಹಿಸಬಹುದಾಗಿದೆ. ಜೊತೆಗೆ ಖಾತೆ ವ್ಯವಹಾರಗಳ ಮಾಹಿತಿಯನ್ನು ಸುಲಭವಾಗಿ ಪಡೆಯಲು ‘ಎಸ್.ಎಸ್.ಸಿ.ಬಿ.ಎಲ್- ಎಂ-ಪಾಸ್ಬುಕ್ ಆ್ಯಪ್’ ಪರಿಚಯಿಸಲಾಗಿದೆ ಎಂದು ಅವರು ತಿಳಿಸಿದರು.
ಸದಸ್ಯರ ಕಲ್ಯಾಣಕ್ಕೂ ಬ್ಯಾಂಕ್ ವಿಶೇಷ ಆದ್ಯತೆ ನೀಡಿದೆ. ಸಾಲ ಸೌಲಭ್ಯ ಪಡೆದ ಸದಸ್ಯರಿಗೆ Rs.1 ಲಕ್ಷದ ಉಚಿತ ವೈಯಕ್ತಿಕ ಅಪಘಾತ ವಿಮೆ ಒದಗಿಸಲಾಗುತ್ತಿದೆ. ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯ ಸೌಲಭ್ಯ ಕಲ್ಪಿಸುವುದರ ಜೊತೆಗೆ ಆರೋಗ್ಯ ಸಮಸ್ಯೆಗಳಿಗೆ Rs.10 ಸಾವಿರದವರೆಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಪೀಡಿತ ಸದಸ್ಯರಿಗೆ Rs.50 ಸಾವಿರದವರೆಗೆ ಆರ್ಥಿಕ ನೆರವು ನೀಡಲು ಉದ್ದೇಶಿಸಲಾಗಿದೆ. ಅಲ್ಲದೆ, ಸದಸ್ಯರು ಹಾಗೂ ಅವರ ಮಕ್ಕಳಿಗೆ ಉದ್ಯೋಗಾವಕಾಶ ಕಲ್ಪಿಸಲು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಉದ್ಯೋಗ ಮೇಳ ಆಯೋಜಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯ ಸಾರಥಿ ತಿಳಿಸಿದರು. 

ಕಾರ್ಯಕ್ರಮದಲ್ಲಿ ಬ್ಯಾಂಕಿನ ಸಂಸ್ಥಾಪಕರು ಹಾಗೂ ಉಪಾಧ್ಯಕ್ಷರಾದ ಡಾ. ಕೆ.ಎಂ. ರಂಗಧಾಮಶೆಟ್ಟಿ, ನಿರ್ದೇಶಕರು, ಪ್ರಭಾರ ಪ್ರಧಾನ ವ್ಯವಸ್ಥಾಪಕರಾದ ಹರೀಶ್ ಬಿ.ಜೆ., ಪೂರ್ಣಾವಧಿ ಸಲಹೆಗಾರರಾದ ಬಿ.ಆರ್. ನಾಗರಾಜ್ ಸೇರಿದಂತೆ ಬ್ಯಾಂಕಿನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

