ಭಾರತ ವಿಶ್ವದ ಶ್ರೇಷ್ಠ ಆಧ್ಯಾತ್ಮಿಕ ರಾಷ್ಟ್ರ. ಭಾರತವೆಂದರೆ ಶ್ರೀರಾಮ(SreeRama) ಮತ್ತು ಶ್ರೀ ಕೃಷ್ಣ(Sree Krishna) ಅವತಾರದ ದಿವ್ಯ ಸಂದೇಶಗಳ ಅಮೂಲ್ಯ ರತ್ನಗಳ ವ್ಯಕ್ತಿತ್ವದ ಪುನರ್ ನಿರ್ಮಾಣದ ಭಂಡಾರವೇ ಆಗಿದೆ. ಭಾರತೀಯ ಆಧ್ಯಾತ್ಮಿಕ ಜಗತ್ತಿನಲ್ಲಿ ಶ್ರೀಕೃಷ್ಣನ ವ್ಯಕ್ತಿತ್ವವೇ ಲೋಕೋತ್ತರ(Lokotthara) ಹಾಗೂ ಜೀವನ ಮೌಲ್ಯಗಳನ್ನು ಮಾನವ ಕಲ್ಯಾಣವನ್ನು ಉಜ್ವಲ ಗೊಳಿಸಿ ಪೂರ್ಣತ್ವಕ್ಕೆ ತೆಗೆದುಕೊಂಡು ಹೋಗುವ ದಿವ್ಯ ವ್ಯಕ್ತಿತ್ವ.
ವಿಶ್ವವನ್ನು ಸೃಷ್ಟಿಸಿದ ಭಗವಂತನು ಅದರ ರಕ್ಷಣೆಯ ಭಾರವನ್ನು ತಾನೇ ರೂಪಿಸಿ ಕಾಲ ಕಾಲಕ್ಕೆ ತಮ್ಮದೇ ಆದ ವಿವಿಧ ರೂಪಗಳನ್ನು ಪಡೆದು ವಿವಿಧ ಲೀಲೆಗಳ ಮೂಲಕ ಜಗತ್ತನ್ನು ಸುಂದರಗೊಳಿಸುವ ಶ್ರೀ ಕೃಷ್ಣ ಪರಮಾತ್ಮನ ಅವತಾರವೇ ಒಂದು ವಿಶೇಷ.
ಶ್ರೀ ಕೃಷ್ಣ ನಾರಾಯಣನ ಅವತಾರ ಎಂಬುದು ಹಿಂದುಗಳ ನಂಬಿಕೆ. ದ್ವಾಪರ ಯುಗದ ಕೊನೆಯಲ್ಲಿ ಶ್ರೀ ಕೃಷ್ಣನ ಅವತಾರವಾಯಿತು ಎಂದು ಪುರಾಣಗಳು ಹೇಳುತ್ತವೆ. ಮಹಾಭಾರತ, ಹರಿವಂಶ, ಭಾಗವತ, ಕೃಷ್ಣ ಪುರಾಣಗಳು ಪೂರ್ಣ ಮಾಹಿತಿಯನ್ನು ತಿಳಿಸುತ್ತದೆ. ಶ್ರೀ ಕೃಷ್ಣ ಹುಟ್ಟಿದ್ದು ಮಥುರಾ ನಗರದಲ್ಲಿ. ವಸುದೇವ ಹಾಗೂ ದೇವಕಿ ಇವರ ತಂದೆ ತಾಯಿ. ದೇವಕಿ ಉಗ್ರಸೇನನ ಮಗಳು. ರಾಕ್ಷಸ ಸ್ವಭಾವದ ಕಂಸ ಆಕೆಯ ಅಣ್ಣ. ದೇವಕಿಯ ಎಂಟನೆಯ ಮಗುವಿನಿಂದ ತನಗೆ ಮರಣ ಎಂದು ತಿಳಿದ ಕಂಸ ದೇವಕಿ ಹಾಗು ವಾಸುದೇವನನ್ನು ಕಾರಾಗೃಹದಲ್ಲಿ ಬಂಧಿಸಿಡುತ್ತಾನೆ. ಕಾ ರಾಗೃಹದಲ್ಲಿ ಕೃಷ್ಣನ ಜನನ ನಂತರ ವಾಸುದೇವ ಕೃಷ್ಣನನ್ನು ಗುಟ್ಟಾಗಿ ಗೋಕುಲದ ನಂದ ಮತ್ತು ಯಶೋದ ದಂಪತಿಯ ಬಳಿ ಸಾಗಿಸುತ್ತಾರೆ. ಹಿಂದುಸ್ಥಾನದಲ್ಲಿ ಅಲ್ಲದೆ ಸಂಪೂರ್ಣ ವಿಶ್ವದ ಎಲ್ಲೆಡೆ ಶ್ರೀ ಕೃಷ್ಣನ ಜನ್ಮಾಷ್ಟಮಿಯನ್ನು ವಿವಿಧ ರೂಪದಲ್ಲಿ ಆಚರಿಸುತ್ತಾರೆ. ಶ್ರೀಕೃಷ್ಣ ಜನ್ಮಾಷ್ಟಮಿ ಒಂದು ವ್ರತ, ಹಬ್ಬ ಮತ್ತು ಉತ್ಸವವಾಗಿದೆ.ಗೋಕುಲ, ಮಥುರಾ ಬೃಂದಾವನ, ಪುರಿ ಇತ್ತೀಚೆಗೆ ದಕ್ಷಿಣ ಭಾರತ ಮತ್ತು ಉತ್ತರ ಭಾರತದ ಎಲ್ಲಾ ಕಡೆ ವಿಶೇಷವಾಗಿ ಉಪಾಸನೆಗೆ ಮಾನವ ಸಂಪೂರ್ಣ ತೊಡಗಿಸಿಕೊಂಡಿದ್ದಾನೆ.
ಪ್ರಾಚೀನ ಪುರಾಣಗಳ ಪ್ರಕಾರ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ಮಧ್ಯರಾತ್ರಿ ಶ್ರೀ ಕೃಷ್ಣನ ಜನನವಾಯಿತು. ರೋಹಿಣಿ ನಕ್ಷತ್ರ ಪ್ರತಿ ವರ್ಷ ಶ್ರಾವಣ ಕೃಷ್ಣ ಅಷ್ಟಮಿ ಎಂದು ಜನ್ಮಾಷ್ಟಮಿ ಯನ್ನಾಗಿ ಆಚರಿಸಲಾಗುತ್ತದೆ. ವಿವಿಧ ಪ್ರದೇಶಗಳಲ್ಲಿ ವಿವಿಧ ಹೆಸರುಗಳಿಂದ ಕೃಷ್ಣನ ಹಬ್ಬವನ್ನು ಆಚರಿಸುತ್ತಾರೆ. ಕೃಷ್ಣ ಎಂದರೆ ಕಪ್ಪು ಎಂದರ್ಥ. ಕೃಷ್ಣನಿಗೆ ಶಾಮ ಸುಂದರಾ, ಘನಶಾಮ ಎಂದು ಕರೆಯುತ್ತಾರೆ. ಕೃಷ್ಣ ಅವತಾರದ ಉದ್ದೇಶವೇ ದುಷ್ಟರ ಧಮನ ಮತ್ತು ಧರ್ಮರಕ್ಷಣೆ ಎನ್ನುವುದು ಲೋಕ ಪ್ರಸಿದ್ಧವಾದದ್ದು. ವಿಶ್ವರೂಪ ದರ್ಶನದ ಮೂಲಕ ಭಗವದ್ಗೀತೆಯ ವಿಶಿಷ್ಟ ಬೋಧನೆ ಬೃಹತ್ ಉಪನಿಷತ್ತುಗಳ ವೇದಗಳ ಒಳ ತಿರುಳುಗಳನ್ನು ತಿಳಿಸುವ ಹಿನ್ನೆಲೆಯಲ್ಲಿ ಸಕಲ ವೇದಾಂತ ಸಾರಗಳ ಅಂಶವೇ ಶ್ರೀ ಭಗವದ್ಗೀತೆಯಾಗಿದೆ.
ಕೃಷ್ಣನ ವಿವಿಧ ಲೀಲೆಗಳು ಅವನ ಅವತಾರದ ಮತ್ತೊಂದು ವಿಶೇಷ. ಮೊಸರು ಬೆಣ್ಣೆ ವಿಶೇಷವಾದ ಅಂಶವೇ ಆಗಿದೆ. ಶ್ರೀ ಕೃಷ್ಣನು ದಾಮೋದರನಾಗಿ ವಿವಿಧ ರೀತಿಯ ಬಾಲ್ಯದ ಆಟಗಳನ್ನು ಆಡುತ್ತಿದ್ದ ಶ್ರೀ ಕೃಷ್ಣನು ಅನೇಕ ಜನರ ಮನೆಗಳಲ್ಲಿ ಬೆಣ್ಣೆ ಮತ್ತು ಮೊಸರನ್ನು ವಿವಿಧ ರೀತಿಯಲ್ಲಿ ಪಡೆಯುವ ಮೂಲಕ ಮಜ್ಜಿಗೆ ಕಡೆಯುತ್ತಿದ್ದ. ಗಡಿಗೆಯನ್ನು ಒಡೆದು ತೆಗೆದುಕೊಂಡು ಹೋಗುತ್ತಿದ್ದ ಅವನ ಬಾಲ್ಯದ ಆಟಗಳು ವಿಶೇಷ ಪ್ರಸಿದ್ಧಿ. ತನ್ನ ಮನೆಯಲ್ಲಿ ತಾಯಿ ಯಶೋದೆ ಮಜ್ಜಿಗೆ ಕಡೆಯುತ್ತಿದ್ದ ಗಡಿಗೆಯನ್ನು ಒಡೆದು ಬೆಣ್ಣೆಯನ್ನೇ ತೆಗೆದುಕೊಂಡು ಹೋಗುತ್ತಿದ್ದ ದೃಶ್ಯ ನಮ್ಮೆಲ್ಲರಿಗೂ ತಿಳಿದಿದೆ.
ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಡೆಯುವ ಶ್ರೀ ಕೃಷ್ಣ ಪೂಜಾ ವಿಧಿ, ಉಪವಾಸ, ಡೋಲೋತ್ಸವ, ದೀಪಾರಾಧನೆ, ಶೋಭಾ ಯಾತ್ರೆ, ಕೃಷ್ಣ ಲೀಲೆಗಳ ಚಿಂತನೆ, ಭಾಗವತ ಪಾರಾಯಣ, ಕೀರ್ತನೆ, ಭಜನೋತ್ಸವ, ನೃತ್ಯೋತ್ಸವ, ಗಾಯನೋತ್ಸವ, ಶ್ರೀ ಕೃಷ್ಣ, ರಾಧಾ ವೇಷಧಾರಿ ಮಕ್ಕಳಿಗೆ ಪೂಜೆ ಹಾಗೂ ಮೊಸರು ಮಡಿಕೆ ಹೊಡೆಯುವ ಉತ್ಸವಗಳ ಮೂಲಕ ಶ್ರೀ ಕೃಷ್ಣನನ್ನು ನೆನೆದು ಭಕ್ತಿಯ ಮೂಲಕ ಆತ್ಮ ಸಂತೋಷವನ್ನು ಪಡೆಯುವ ಭಾರತೀಯರು ದೇಶದ ಮತ್ತು ವಿಶ್ವದ ಎಲ್ಲೆಡೆ ಇದ್ದಾರೆ.
ಮೊಸರು ಮಡಿಕೆ ಹೊಡೆಯುವ ಉತ್ಸವ ಯುವಕರಲ್ಲಿ ಆಧ್ಯಾತ್ಮ, ಭಾರತೀಯ ಮೌಲ್ಯ, ಸಂಸ್ಕೃತಿ, ಪರಂಪರೆ, ಏಕತೆ, ಸಂಘಟನೆ, ಸಮಾನತೆ, ಗುರಿ, ಸ್ಪೂರ್ತಿ, ಶಕ್ತಿ, ಚೈತನ್ಯ, ಪರಸ್ಪರ ಸಹಕಾರ, ಆತ್ಮೀಯತೆ, ಧೈರ್ಯ, ಸಾಹಸ ಚಿಂತನೆಯ ಗುಣಗಳನ್ನು ಸ್ಪೂರ್ತಿಯುತವಾಗಿ ತುಂಬುವ ಉದ್ದೇಶವನ್ನು ಹೊಂದಿದೆ.
ಮೊಸರು ಮಡಿಕೆ ಹೊಡೆಯುವ ಉತ್ಸವ ಚಾಮರಾಜನಗರದ ಶ್ರೀ ಕೃಷ್ಣ ಪ್ರತಿಷ್ಠಾನದ ವತಿಯಿಂದ ಕಳೆದ 16 ವರ್ಷಗಳಿಂದ ರಥದ ಬೀದಿಯಲ್ಲಿ ಜರುಗುತ್ತಿದೆ.
ಮೊಸರು ಮಡಿಕೆ ಹೊಡೆಯುವ ತಂಡಗಳು ವಿವಿಧ ಪ್ರದೇಶಗಳಿಂದ ಆಗಮಿಸಿ, ಎಲ್ಲಡೆ ಹರೇ ಕೃಷ್ಣ ಮಂತ್ರ ಜಪದೊಂದಿಗೆ, ಹಣೆಗೆ ತಿಲಕ, ಬಲೆಗೈಗೆ ರಕ್ಷೆ, ಕತ್ತಿಗೆ ಹಾರ, ತಲೆಗೆ ಪೇಟ ತೊಟ್ಟು ಭಕ್ತಿ ಭಾವಗಳೊಂದಿಗೆ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಸುತ್ತಲೂ ಪ್ರದಕ್ಷಣೆ ಹಾಕಿ ಭಜನೆ ನೃತ್ಯದ ಮೂಲಕ ನೂರಾರು ಯುವಕರು ಮಕ್ಕಳು ಆಗಮಿಸಿ ಭವ್ಯವೇದಿಕೆಯಲ್ಲಿ ಸಂಕೀರ್ತನೆಯಲ್ಲಿ ಪಾಲ್ಗೊಂಡು ಮೊಸರು ಮಡಿಕೆ ಹೊಡೆಯುವ ಆ ದೃಶ್ಯ ರೋಮಾಂಚನ. ಭಗವಂತನ ನಾಮ ಸ್ಮರಣೆಯ ಜೈಂಕಾರ ಇಡೀ ಪ್ರದೇಶದಲ್ಲಿ ಹೊಸ ವಾತಾವರಣವನ್ನು ಸೃಷ್ಟಿಮಾಡುತ್ತದೆ. 20 ಅಡಿ ಎತ್ತರದ ಮೊಸರು ಬೆಣ್ಣೆ ಮಡಿಕೆಯ ಒಡೆಯುವ ದೃಶ್ಯ, ಒಬ್ಬರ ಮೇಲೆ ಒಬ್ಬರು ಹತ್ತಿ ಸುತ್ತಲೂ ಆ ಅವರ ಗುರಿಯನ್ನು ತಪ್ಪಿಸಲು ನೀರಿನ ಸಂರಕ್ಷಣೆ, ಗಂಧದ ಪನ್ನೀರಿನ ಪ್ರೋಕ್ಷಣೆಯ ಮಧ್ಯೆಯು ಯುವಕರು ತಮ್ಮ ಗುರಿಯನ್ನು ಧೈರ್ಯ ಮತ್ತು ಸಾಹಸದಿಂದ ಒಬ್ಬರ ಮೇಲೆ ಒಬ್ಬರು ಹತ್ತಿ ಕೆಲ ಒಮ್ಮೆ ಕುಸಿದು ಮತ್ತೆ ಹತ್ತಿ ಮೊಸರು ಗಡಿಕೆಯ ಬೆಣ್ಣೆಯನ್ನು ತೆಗೆಯುವ ಆ ಕ್ಷಣಗಳು ಭಗವಂತ ನಾಮಸ್ಮರಣೆಯ ಮೂಲಕ ಕೃಷ್ಣ ಮಂತ್ರ ಜಪದೊಂದಿಗೆ ನಡೆಯುವ ಸ್ಮರಣೀಯ ಕಾರ್ಯಕ್ರಮ ಆನಂದದ ಅದ್ಭುತ ಕ್ಷಣವಾಗಿರುತ್ತದೆ.
ಮೃತ್ತಿಕಾ ಪೂಜೆ, ಮಣ್ಣಿನ ಪೂಜೆ ,ಮಡಿಕೆ ತಯಾರಿಕೆ ವಿಶೇಷ:
ಮೊಸರು ಮಡಿಕೆ ಹೊಡೆಯುವ ಉತ್ಸವದಲ್ಲಿ ತಯಾರಿಸುವ ಮಡಿಕೆಯ ನಿರ್ಮಾಣವೇ ಮತ್ತೊಂದು ವಿಶೇಷ ಇತಿಹಾಸ ಪ್ರಸಿದ್ಧ ಹೆಗ್ಗೋಟ್ಟಾರ ಗ್ರಾಮದಲ್ಲಿ ಮಡಿಕೆ ನಂಜಪ್ಪನವರ ಗುಡಿ ಕೈಗಾರಿಕೆಯಲ್ಲಿ ಉತ್ಸವದ ಪೂರ್ವ ಶ್ರೇಷ್ಠ ದಿನದಂದು ಮಣ್ಣನ್ನು ಕೆರೆಯಿಂದ ತಂದು, ವಿಶೇಷವಾಗಿ ಅಲಂಕರಿಸಿ, ಪೂಜೆ ನೆರವೇರಿಸಿ ಆ ಮಣ್ಣಿನಲ್ಲಿ ಮೃತ್ತಿಕಾ ಪೂಜೆಯನ್ನು ನಡೆಸಿ ಮಡಿಕೆಯನ್ನು ತಯಾರಿಸಿ ಅದನ್ನು ಚಾಮರಾಜನಗರಕ್ಕೆ ತಂದು ವಿಶೇಷ ಅಲಂಕಾರವನ್ನು ಮಾಡಿ ರಥದ ಬೀದಿ ಯ ಶ್ರೀ ಚಾಮರಾಜೇಶ್ವರ ದೇವಸ್ಥಾನ ಸುತ್ತಲು ಮೆರವಣಿಗೆಯ ಮೂಲಕ ಬೆಣ್ಣೆ ಮತ್ತು ಮೊಸರಿನ ಗಡಿಕೆಯನ್ನು ತಂದು ವಿಶೇಷವಾದ ಪೂಜೆಯನ್ನು ನೆರವೇರಿಸಿ ಮೊಸರು ಮಡಿಕೆ ಹೊಡೆಯುವ ಪದ್ಧತಿ ನಡೆದು ಬಂದಿದೆ.
ಶ್ರೀ ಕೃಷ್ಣ ರಾಧಾ ವೇಷಧಾರಿಗಳ ಸಂಭ್ರಮ :
ಸೆಪ್ಟೆಂಬರ್ 6 ಭಾನುವಾರ ಮಧ್ಯಾನ 3 ಗಂಟೆಗೆ ನಡೆಯುವ ಶ್ರೀ ಕೃಷ್ಣ ಮೆರವಣಿಗೆಯಲ್ಲಿ ನೂರಾರು ಮಕ್ಕಳು ಕೃಷ್ಣ ಮತ್ತು ರಾಧೆ ವೇಷಧಾರಿಗಳಾಗಿ ಇಡೀ ಚಾಮರಾಜನಗರದ ಎಲ್ಲೆಡೆ ಸಂಭ್ರಮಿಸಿ, ಮಕ್ಕಳು ಬೆಣ್ಣೆ ತೆಗೆಯುವ ಆ ದೃಶ್ಯ ಕಣ್ಣಲ್ಲಿ ನೋಡಿ ಆನಂದ ಪಡಬೇಕು. ಮಡಿಕೆಯಲ್ಲಿ ಬೆಣ್ಣೆಯನ್ನು ತೂಗಿ 20 ಎತ್ತರದಿಂದ ಕೆಳಗೆ ಇಳಿಸಿ ಆ ಮಡಿಕೆಯಲ್ಲಿರುವ ಬೆಣ್ಣೆಯನ್ನು ನೆಗೆದು ಬೆಣ್ಣೆ ತೆಗೆಯುವ ಆ ಕೃಷ್ಣ ವೇಶಧಾರಿಗಳ ಮುಗ್ಧ ನಗು, ಸಂಭ್ರಮ, ಸಂತೋಷ, ಆಚ್ಚರಿ, ಗಾಬರಿ, ಸಂಕೋಚ,ಆನಂದಕ್ಕೆ ಮರೆಲಾಗದು. ಬೆಣ್ಣೆ ತೆಗೆದು ಆ ತಿನ್ನುವ ಸಂದರ್ಭದಲ್ಲಿ ಮುಖ ಮತ್ತು ಕೆನ್ನೆಗೆ ಸವರಿಕೊಂಡು ಸಾಕ್ಷಾತ್ ಶ್ರೀ ಕೃಷ್ಣನೇ ಕಂಡಂತೆ ಭಾಸವಾಗುತ್ತದೆ.
ಮಕ್ಕಳೆ ದೇವರು ಎಂಬಂತೆ ಆ ಮಕ್ಕಳಿಗೆ ಆ ಬೆಣ್ಣೆಯ ಸ್ಪರ್ಶ ಮತ್ತಷ್ಟು ಕುತೂಹಲ, ಸಂತೋಷ,ಆಸಕ್ತಿ ಹೊಸತನ, ಚೈತನ್ಯ ಮೂಡಿ ಮಗು ದೈವಿಕ ಶಕ್ತಿಯನ್ನು ಪಡೆದು ಆ ಮೂಲಕ ನೋಡುಗರಿಗೆ ಭಗವಂತನ ದರ್ಶನವೇ ಆದಷ್ಟು ಸಂತೋಷವಾಗುತ್ತದೆ.
ಶ್ರೀಕೃಷ್ಣ ಉತ್ಸವದಲ್ಲಿ ಗಾಯನೋತ್ಸವ, ನೃತ್ಯೋತ್ಸವ, ಹೂ ಕಟ್ಟುವ ವಿಶೇಷ ತಂಡಗಳು, ರಂಗೋಲಿ ಇಡುವ ತಂಡಗಳು,ನಾದಸ್ವರ, ಭಜನೆ ಮೈಸೂರು ಇಸ್ಕಾನ್ ಸಂಸ್ಥೆಯ ವಿಶೇಷ ಭಜನೆ ನೃತ್ಯ ಮೆರವಣಿಗೆ ಮೂಲಕ ಯುವಶಕ್ತಿಯಲ್ಲಿ ಆಧ್ಯಾತ್ಮದ ಭಾವವನ್ನು ಶಕ್ತಿಯನ್ನು ತುಂಬುವ ಮೂಲಕ ಮಾನವ ಕಲ್ಯಾಣ ಹಾಗೂ ಸಂಸ್ಕೃತಿ ಪರಂಪರೆಯನ್ನು ಗಟ್ಟಿಗೊಳಿಸುವ ಮೂಲಕ ಯುವ ಪೀಳಿಗೆಗೆ ಸಂದೇಶವನ್ನು ನೀಡುವ ಮೊಸರು ಮಡಿಕೆ ಹೊಡೆಯುವ ಉತ್ಸವ ಜನಸಾಗರದ ಮಧ್ಯೆ ನಡೆಯುತ್ತದೆ.
ಶ್ರೀ ಕೃಷ್ಣ ಸ್ಮರಣೆ, ಹರೇ ಕೃಷ್ಣ ಭಜನೆ ಯೊಂದಿಗೆ ಕುಣಿದು ಕುಪ್ಪಳಿಸಿ ಚಾಮರಾಜನಗರದ ಪ್ರಮುಖ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಪ್ರದಕ್ಷಿಣ ಪಥದಲ್ಲಿ ಸಾಗಿ, ಅಗ್ರಹಾರ ಭುವನೇಶ್ವರಿವೃತ್ತ ಮತ್ತು ವೇದಿಕೆಗೆ ಬರುವ ಹರೇ ಕೃಷ್ಣ ಮಂತ್ರದ ಜಪದೊಂದಿಗೆ ಆಗಮಿಸುವ ನೂರಾರು ಯುವಕರು ಮತ್ತು ಮಕ್ಕಳು ಮಹಿಳೆಯರು, ಪ್ರತಿನಿಧಿಗಳು ಶ್ರೀ ಕೃಷ್ಣನ ಮೆರವಣಿಗೆಯೊಂದಿಗೆ ಆಗಮಿಸುವ ಆ ಮೊಸರು ಮಡಿಕೆ ಹೊಡೆಯುವ ಆ ದೃಶ್ಯಗಳನ್ನು ತಾವೆಲ್ಲರೂ ಆಗಮಿಸಿ ಸೆಪ್ಟಂಬರ್ 6 ಭಾನುವಾರ ಮಧ್ಯಾಹ್ನ 3 ಗಂಟೆಗೆ ಆಗಮಿಸಿ ಧನ್ಯರಾಗಿ. ಯಶಸ್ವಿಗೊಳಿಸಿಕೊಡಿ.
ಸ್ವಾಮೀಜಿಗಳು, ಮಂತ್ರಿಗಳು, ಶಾಸಕರು, ಗಣ್ಯರು ಆಧ್ಯಾತ್ಮ ಚಿಂತಕರು ಸಾವಿರಾರು ಜನರ ಸಮ್ಮುಖದಲ್ಲಿ ನಡೆಯುವ ಮೊಸರು ಮಡಿಕೆ ಒಡೆಯುವ ಉತ್ಸವದಲ್ಲಿ ತಾವೆಲ್ಲರೂ ಸಾಕ್ಷಿಗಳಾಗಿ ಭಗವಂತನ ಆನಂದದ ಸಮಯದಲ್ಲಿ ಪಾಲ್ಗೊಂಡು ಜೀವನವನ್ನು ಸಾರ್ಥಕ ಪಡಿಸಿ ಕೊಳ್ಳೋಣ.

