ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ವಿತರಣೆಯಿಂದ ಶಿಕ್ಷಕರಿಗೆ ಆರ್ಥಿಕ ಹೊರೆಯಾಗುವುದಿಲ್ಲ.
ಮೊಟ್ಟೆ ದರ ನಿಗಧಿ ಬಗ್ಗೆ ಅರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ – ಸಚಿವ ಎಸ್ ಮಧು ಬಂಗಾರಪ್ಪ
ರಾಜ್ಯದ ಸರ್ಕಾರಿ (Govt. Schools) ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲಾಗುವ ಮೊಟ್ಟೆ (Egg) ಖರೀದಿಗೆ ನಿಗದಿಪಡಿಸಿರುವ ದರದಿಂದ ಶಿಕ್ಷಕರಿಗೆ ಯಾವುದೇ ರೀತಿಯ ಆರ್ಥಿಕ ಹೊರೆಯಾಗುವುದಿಲ್ಲ. ಮೊಟ್ಟೆ ದರ ನಿಗಧಿ ಬಗ್ಗೆ ಅರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್. ಮಧು ಬಂಗಾರಪ್ಪ (S.Madhu Bangarappa) ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ, ವಿಧಾನ ಪರಿಷತ್ತಿತ್ ಸದಸ್ಯರಾದ ರಾಮೋಜಿಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಪ್ರತಿ ದಿನ ಪ್ರತಿ ವಿದ್ಯಾರ್ಥಿಗೆ ಒಂದು ಮೊಟ್ಟೆ ವಿತರಿಸಲು ಸರ್ಕಾರವು ರೂ. 6.00 ಗಳ ಘಟಕ ವೆಚ್ಚವನ್ನು ನಿಗದಿಪಡಿಸಿದೆ.
ಮಾರುಕಟ್ಟೆಯಲ್ಲಿ ಮೊಟ್ಟೆಯ ದರವು ಏಕರೂಪವಾಗಿರುವುದಿಲ್ಲ. ಸ್ಥಳೀಯವಾಗಿ ಮೊಟ್ಟೆಯ ಲಭ್ಯತೆಗೆ ಅನುಗುಣವಾಗಿ ದರದಲ್ಲಿ ಏರಿಳಿತಗಳು ಉಂಟಾಗುತ್ತವೆ. ಆದರೆ, ವಾರ್ಷಿಕ ಸರಾಸರಿ ದರಗಳನ್ನು ಪರಿಶೀಲಿಸಿದಾಗ ಸರ್ಕಾರ ನಿಗದಿಪಡಿಸಿರುವ ರೂ. 6.00 ದರವು ಸರಿಯಾಗಿ ಸರಿಹೊಂದುತ್ತದೆ.
ಪೋಷಕರ ಅಭಿಪ್ರಾಯವನ್ನು ಪಡೆದುಕೊಂಡು, ಮೊಟ್ಟೆ ಸೇವಿಸುವ ಮಕ್ಕಳಿಗೆ ಮೊಟ್ಟೆಯನ್ನು ಹಾಗೂ ಸೇವಿಸದ ಮಕ್ಕಳಿಗೆ ಬಾಳೆಹಣ್ಣನ್ನು ನೀಡಲಾಗುತ್ತಿದೆ. ವೈಯಕ್ತಿಕ ಅಥವಾ ಧಾರ್ಮಿಕ ಆಚರಣೆಗಳ ಕಾರಣದಿಂದಾಗಿ ವಾರದ ಕೆಲವು ದಿನಗಳಲ್ಲಿ ವಿದ್ಯಾರ್ಥಿಗಳು ಮೊಟ್ಟೆ ಸೇವಿಸುವುದಿಲ್ಲ; ಅಂತಹ ದಿನಗಳಲ್ಲಿ ಅವರಿಗೂ ಬಾಳೆಹಣ್ಣನ್ನೇ ನೀಡಲಾಗುತ್ತದೆ.
ಶಾಲೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ವಾರದ ಪ್ರತಿದಿನವೂ ಮೊಟ್ಟೆ ಸೇವಿಸುವುದಿಲ್ಲ ಹಾಗೂ ಶಾಲೆಗಳ ಹಂತದಲ್ಲಿ ಮೊಟ್ಟೆಗಳನ್ನು ಸಗಟು (ಹೋಲ್ಸೇಲ್) ದರದಲ್ಲಿ ಖರೀದಿಸಲಾಗುತ್ತದೆ. ಇದರಿಂದಾಗಿ ಮೊಟ್ಟೆ ವಿತರಣೆಯ ವೆಚ್ಚವು ನಿಗದಿತ ಬಜೆಟ್ಗೆ ಸರಿಹೊಂದುವುದರಿಂದ ಶಿಕ್ಷಕರ ಮೇಲೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆ ಬೀಳುವುದಿಲ್ಲ. ದರ ನಿಗಧಿ ಬಗ್ಗೆ ಮತ್ತು ಶಿಕ್ಷಕರನ್ನು ಎಸ್.ಐ.ಆರ್., ಜನಗಣತಿ ಮುಂತಾದ ಸೇವೆಗಳಿಗೆ ನಿಯೋಜಿಸುವ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಚಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.

