ಅವರು ಇಂದು ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸದಸ್ಯರಿಂದ ಅಭಿನಂದನೆಗಳನ್ನು ಸ್ವೀಕರಿಸಿದ ನಂತರ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು ಶಾಸಕರಿಗೆ ಉತ್ತಮ ತರಬೇತಿ ನೀಡುವ ಪದ್ಧತಿಯನ್ನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದರು.
ಸಭಾಧ್ಯಕ್ಷರ ಹುದ್ದೆ ಕೇವಲ ಉನ್ನತ ಸ್ಥಾನವಲ್ಲ, ಇದು ಕೋಟ್ಯಾಂತರ ಕನ್ನಡಿಗರ ಆಸೆಗಳ ಪ್ರತಿಬಿಂಬವಾದ ಈ ಪ್ರಜಾಪ್ರಭುತ್ವದ ದೇಗುಲ. ಸಭಾಧ್ಯಕ್ಷರ ಹುದ್ದೆಯ ಘನತೆಯನ್ನು ಕಾಪಾಡುವ ಒಂದು ದೊಡ್ಡ ಜವಾಬ್ದಾರಿ ಮತ್ತು ಹೊಣಿಗಾರಿಕೆ ನಮ್ಮೆಲ್ಲರ ಮೇಲಿದೆ. ಈ ಜವಾಬ್ದಾರಿ ಮತ್ತು ಹೊಣಿಗಾರಿಕೆ ಮೂಲಕ ಈ ಸದನವನ್ನು ನಾವೆಲ್ಲರೂ ಒಟ್ಟಾಗಿ ಮುನ್ನೆಡೆಸೋಣ ಎಂದರು.
ನಾಲ್ಕು ದಶಕಗಳ ನಂತರ ರಾಜಕೀಯ ಜೀವನಲ್ಲಿ ನನಗೆ ಇಂದು ಅತ್ಯುನ್ನತ ಸ್ಥಾನದೊರಕಿರುವುದು ನನಗೆ ಅವಿಸ್ಮರಣೀಯ ದಿನ. ಇದೇ ಪ್ರಜಾಪ್ರಭುತ್ವದ ಸೌಂದರ್ಯದ ಲಕ್ಷಣಗಳು. ನಾನು ನನ್ನ ಸುದೀರ್ಘ ರಾಜಕೀಯ ಪಯಣದಲ್ಲಿ ಸೋಲು ಗೆಲವು ಕಂಡಿರುವೆ. ಆದರೆ ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ರೋಣ ಮತಕ್ಷೇತ್ರದ ಜನತೆಯ ಸೇವೆಯನ್ನು ಗುರಿಯಾಗಿ ಇಟ್ಟುಕೊಂಡು ಸಾಗಿದ ಪಯಣವೇ ಇಂದು ನನ್ನನ್ನು ಈ ಗೌರವಾನ್ವಿತ ಸ್ಥಾನಕ್ಕೆ ತಂದು ನಿಲ್ಲಿಸಿದೆ.
ಜನರ ದನಿಯನ್ನು ಕೇಳುವ ಮತ್ತು ಗೌರವಿಸುವ ಪರಂಪರೆ ನಮ್ಮದು. ಹಿಂದೆ ಈ ಪೀಠವನ್ನು ಅಲಕಂರಿಸಿದ ಎಸ್.ಆರ್.ಕಂಠಿ, ವೈಕುಂಟಬಾಳಿಗ, ಕೆ.ಎಸ್.ನಾಗರತ್ನಮ್ಮ, ಕೆ.ಹೆಚ್.ರಂಗನಾಥ್, ಬಿ.ಜಿ.ಬಣಕಾರ್, ಟಿ.ಬಿ.ಚಂದ್ರೇಗೌಡ, ಜಗದೀಶ್ ಶೆಟ್ಟರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಎಸ್.ಎಂ.ಕೃಷ್ಣ, ಕೆ.ವಿ.ಕೋಳಿವಾಡ, ರಮೇಶ್ ಕುಮಾರ್, ಯು.ಟಿ.ಖಾದರ್ ಸೇರಿದಂತೆ ಅನೇಕ ಅಧ್ಯಕ್ಷರುಗಳು ಹಾಕಿಕೊಟ್ಟ ಸಂಪ್ರದಾಯಗಳ ಮಾರ್ಗಗಳಲ್ಲಿ ನಡೆಯೋಣ. ವಿಧಾನಸೌಧದ ಮೇಲೆ ಬರೆಯಲಾಗಿರುವ ‘ಸರ್ಕಾರದ ಕೆಲಸ ದೇವರ ಕೆಲಸʼ ಎಂಬ ಮಹಾ ವಾಕ್ಯವೇ ನಮ್ಮೆಲ್ಲರಿಗೂ ಮಾರ್ಗದರ್ಶವಾಗಬೇಕು ಎಂದರು.
ಸಭಾಧ್ಯಕ್ಷ ಪೀಠಕ್ಕೆ ಆಡಳಿತ ಪಕ್ಷವಿಲ್ಲ, ವಿದೋಧ ಪಕ್ಷವೂ ಇಲ್ಲ. ಇರುವುದು ಒಂದೇ ಪಕ್ಷ, ಅದುವೇ ನಮ್ಮ ಸಂವಿಧಾನ. ಡಾ.ಬಿ.ಆರ್.ಅಂಬೇಡ್ಕರ್ ಅವರು ನಾವು ಸಂವಿಧಾನಿಕ ಗುರಿಗಳನ್ನು ಸಾಧಿಸಲು ಸಂವಿಧಾನಿಕ ಮಾರ್ಗಗಳನ್ನೇ ಬಳಸಬೇಕು, ಬೇರೆ ಮಾರ್ಗಗಳು ಸಮಾಜಕ್ಕೆ ಮಾರಕವೆಂದು ಹೇಳಿದ್ದಾರೆ. ನಮ್ಮ ವಿಧಾನಸಭೆ ಕಲಾಪ ನಡೆಸುವ ನಿಯಮಾವಳಿಗಳು ಅತ್ಯುತ್ತಮ ಚೌಕಟ್ಟನ್ನು ಎಲ್ಲ ಕಾಲಕ್ಕೆ ಅನ್ವಯವಾಗುವಂತಿವೆ. ಸಂವಿಧಾನದ ಮತ್ತು ನಿಯಮಾವಳಿಗಳು ಈ ಸದನದ ದಿಕ್ಸೂಚಿ ಮತ್ತು ಘನತೆವಾಗಿದ್ದು, ಸಂವಿಧಾನದ ಮೌಲ್ಯಗಳು ಮತ್ತು ಆಶೆಗಳನ್ನು ಎತ್ತಿ ಹಿಡಿಹೋಣವೆಂದರು.
ವಿಧಾನಸಭೆಯು ಕೇವಲ 224 ಶಾಸಕರು ಸೇರುವ ಒಂದು ಭವ್ಯ ಕಟ್ಟಡವμÉ್ಟೀ ಅಲ್ಲ. ಇದು ಕೋಟ್ಯಾಂತರ ಕನ್ನಡಿಗರ ಬದುಕಿನ ಪ್ರತಿಬಿಂಬ. ಅದು ಒಂದು ಹಳ್ಳಿಯ ರೈತನ, ಕಾರ್ಮಿಕನ ಒಬ್ಬ ತಾಯಿ ದನಿ, ಸರ್ಕಾರವನ್ನು ಪ್ರಶ್ನಿಸುವ, ಎಚ್ಚರಿಸುವ ಹೊಣಿಗಾರಿಕೆ ಕೇಳುವ ಜನಸಾಮಾನ್ಯರ ಅಸ್ತ್ರ. ಅಂಬೇಡ್ಕರ್ ಅವರು ಹೇಳಿರುವಂತೆ ಪ್ರಜಾಪ್ರಭುತ್ವದ ಯಶಸ್ಸು ಎಂಬುದು ಕೇವಲ ಬಹುಮತದಲ್ಲಿಲ್ಲ, ವಿರೋದಪಕ್ಷದ ದನಿಗೆ ಸಿಗುವ ಗೌರವದಲ್ಲಿದೆ ಎಂಬುದನ್ನು ನಾನು ಅರಿತಿರುವುದಾಗಿ ಅವರು ಹೇಳಿದರು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಎರಡೂ ಬೇರೆ ಬೇರೆ ದೋಣಿಗಳಲ್ಲ. ಅದು ಒಂದೇ ದೋಣಿಯ ಎರಡು ಹುಟ್ಟುಗಳಾಗಿರಬೇಕು ಎಂಬುದನ್ನು ನಾವೆಲ್ಲರೂ ಅರಿಯಬೇಕು ಎಂದರು.
ನೂತನ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದುದಕ್ಕೆ ಅಭಿನಂದಿಸಿದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಪ್ರತಿಪಕ್ಷದ ನಾಯಕರು, ಮತ್ತು ಸದನದ ಸದಸ್ಯರಿಗೆ ಅವರು ಧನ್ಯವಾದಗಳನ್ನು ತಿಳಿಸಿದರು.
