ಮೈಸೂರು : MYSURU : ಆರೋಗ್ಯ ಪಾಲನೆಗೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದು ಜಿಲ್ಲಾ ಬ್ರಾಹ್ಮಣ (Brahmin) ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ (DB Prakash) ಹೇಳಿದರು.
ನಗರದ ಟಿ.ಕೆ. ಬಡಾವಣೆಯ ರಾಯರ ಮಠದ ಸಾಮಾಜಿಕ ಸೇವಾ ಕಾರ್ಯಕ್ರಮದ ಅಡಿಯಲ್ಲಿ ಭಾನುವಾರ ಕಲ್ಪವೃಕ್ಷ ಪ್ರಾರ್ಥನಾ ಮಂದಿರದಲ್ಲಿ ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್, ಜಿಲ್ಲಾ ಬ್ರಾಹ್ಮಣ ಸಂಘ ಮತ್ತು ಕರ್ನಾಟಕ ವಿಪ್ರ ವಕೀಲರ ಸಂಘದ ಸಂಯಕ್ತ ಆಶ್ರಯದಲ್ಲಿ ಸಾರ್ವಜನಿಕರಿಗಾಗಿ ಹಮ್ಮಿಕೊಂಡಿದ್ದ ಹೃದಯ ತಪಾಸಣೆ, ಕೀಲು ಮತ್ತು ಮಂಡಿ ನೋವಿನ ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ರಾಘವೇಂದ್ರ ಸ್ವಾಮಿಗಳು ಸಕಲ ಸಮುದಾಯಗಳಿಂದಲೂ ಪೂಜಿತರು. ಅವರ ಮಹಾ ಕೃಪೆಯಿಂದಲೇ ಅನೇಕರಿಗೆ ಅನುಗ್ರಹವಾಗಿದೆ. ಅವರ ಸನ್ನಿಧಾನದಲ್ಲಿ ಆರೋಗ್ಯ ಭಾಗ್ಯ ದೊರಕಿಸಿಕೊಡುವ ಉಚಿತ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ರಾಘವೇಂದ್ರ ಸೇವಾ ಟ್ರಸ್ಟ್ ಕಾರ್ಯಾಧ್ಯಕ್ಷ ಮತ್ತು ಹಿರಿಯ ವಕೀಲ ಕೆ.ಆರ್. ಶಿವಶಂಕರ್ ಮಾತನಾಡಿ, ಸೇವಾ ಮನೋಭಾವದಿಂದ ಆಯೋಜನೆ ಮಾಡುವ ಕಾರ್ಯಗಳು ಸಮಾಜಕ್ಕೆ ಸದುಪಯೋಗವಾಗಲಿವೆ ಎಂದರು. ಪ್ರತಿವರ್ಷವೂ ರಾಯರ ಮಠದಲ್ಲಿ ಆರೋಗ್ಯ ಸಂಬಂಧಿ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ನೂರಾರು ಜನರ ಸ್ವಾಸ್ಥೃ ಸುಧಾರಣೆಗೆ ಇದು ಪೂರಕವಾಗಿದೆ ಎಂದರು.
ಡಿ.ಆರ್.ಎಂ. ಆಸ್ಪತ್ರೆ ತಜ್ಞರಾದ ಡಾ. ಜೆ.ಎನ್. ಮಂಜುನಾಥ್, ಡಾ. ಸಹನಾ, ಮಠದ ಸೇವಾ ಟ್ರಸ್ಟ್ ಅಧ್ಯಕ್ಷ ಜಯರಾಂ, ಟ್ರಸ್ಟಿಗಳಾದ ವೇಣುಗೋಪಾಲ್, ರಾಜಾರಾಂ, ಎಚ್.ಎನ್. ಚಂದ್ರಶೇಖರ್, ನಾಗರಾಜ್, ಮುಕುಂದ ಇತರರು ಇದ್ದರು. 12 ಜನ ತಜ್ಞ ವೈದ್ಯರು ಅತ್ಯಾಧುನಿಕ ಸಾಧನಗಳ ಮೂಲಕ ನೂರಾರು ಜನರಿಗೆ ತಪಾಸಣೆ ನಡೆಸಿ, ಸಲಹೆ, ಸೂಚನೆ ನೀಡಿದರು.

