ಬೆಂಗಳೂರು: ತರ್ಪಣ ವಿಧಿಯ ಶಾಸ್ತ್ರೀಯ ಮಹತ್ವ, ಆಚರಣಾ ಕ್ರಮ ಹಾಗೂ ಪಿತೃಕಾರ್ಯಗಳ ಕುರಿತು ಸರಳವಾಗಿ ಮಾರ್ಗದರ್ಶನ ನೀಡುವ ‘ತರ್ಪಣ ವಿಧಿ ವಿವೇಕ’ ಗ್ರಂಥದ ಲೋಕಾರ್ಪಣಾ (Book Release) ಸಮಾರಂಭವು ಅಕ್ಟೋಬರ್ 4ರಂದು ಭಾನುವಾರ ಸಂಜೆ 6.30ಕ್ಕೆ ಬೆಂಗಳೂರಿನ ಮಲ್ಲೇಶ್ವರಂ (Malleswaram) 6ನೇ ಮುಖ್ಯ ರಸ್ತೆಯ ಶ್ರೀ ಶೃಂಗೇರಿ ಶಂಕರ ಮಠ(Shankar Mutt) ದಲ್ಲಿ ನಡೆಯಲಿದೆ.
ರಾಮಕೃಷ್ಣ–ವಿವೇಕಾನಂದ ಆಶ್ರಮ, ತುಮಕೂರಿನ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಎಸ್. ಅಹಲ್ಯಾ ಶರ್ಮ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಶಿಕ್ಷಣ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿ ವೇ.ಬ್ರ. ಶ್ರೀ ವೆಂಕಟರಾಮ ಶಾಸ್ತ್ರಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವೇದಾಂತ ವಿಭಾಗದ ಮುಖ್ಯಸ್ಥರಾದ ಡಾ. ವಿನಯಾಚಾರ್ಯ ಪಿ. ಹಾಗೂ ಜ್ಯೋತಿಷಿ ವೇ.ಬ್ರ. ಶ್ರೀ ತುಮಕೂರು ಕರಣೀಕ ನರಹರಿ ಶರ್ಮ ಉಪಸ್ಥಿತರಿರುವರು.

ಅನಂತರಾಮ ಪ್ರಕಾಶನ ವತಿಯಿಂದ ಪ್ರಕಟವಾಗಿರುವ ಈ ಗ್ರಂಥವು ತರ್ಪಣ ವಿಧಿಯ ಉದ್ದೇಶ, ಅದರ ಹಿಂದಿರುವ ಧಾರ್ಮಿಕ–ತಾತ್ತ್ವಿಕ ಆಶಯ, ಪಿತೃಕಾರ್ಯದ ಮಹತ್ವ ಹಾಗೂ ಶಾಸ್ತ್ರೋಕ್ತ ಆಚರಣಾ ವಿಧಾನಗಳನ್ನು ಸರಳವಾಗಿ ಪರಿಚಯಿಸುವ ಉದ್ದೇಶದಿಂದ ರೂಪಿಸಲಾಗಿದೆ ಎಂದು ಗ್ರಂಥಕರ್ತ ಡಾ. ಅಜಿತ್ ನಿರಂಜನ್ ವೈ.ಎ. ತಿಳಿಸಿದ್ದಾರೆ.
ಪಿತೃಕಾರ್ಯಗಳ ಆಚರಣೆಯಲ್ಲಿ ಕಂಡುಬರುವ ಹಲವು ಸಂದೇಹಗಳಿಗೆ ಶಾಸ್ತ್ರೀಯ ನೆಲೆಯಲ್ಲಿ ಸ್ಪಷ್ಟತೆ ನೀಡುವ ಹಾಗೂ ಪರಂಪರೆಯ ಆಚರಣೆಗಳನ್ನು ಅರ್ಥಪೂರ್ಣವಾಗಿ ಅನುಸರಿಸಲು ಸಹಕಾರಿಯಾಗುವ ಉದ್ದೇಶವನ್ನು ಗ್ರಂಥ ಹೊಂದಿದೆ.
ಕಾರ್ಯಕ್ರಮಕ್ಕೆ ಎಸ್.ಎಲ್.ಎನ್. ಟ್ರಸ್ಟ್, ರಾಜಾಜಿನಗರ, ಬೆಂಗಳೂರು ಸಹಕಾರ ನೀಡುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಡಾ. ಅಮೃತ್ ಯಾದಾಟಿ – 8971421376 ಅವರನ್ನು ಸಂಪರ್ಕಿಸಬಹುದು.

