ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಮಾದಕ ವಸ್ತುಗಳ ನಿಯಂತ್ರಣದಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಅತ್ಯುತ್ತಮ ಕಾರ್ಯನಿರ್ವಹಣೆ ಮಾಡುತ್ತಿದ್ದು, ದೇಶಕ್ಕೇ ಮಾದರಿಯಾಗಿ ಹೊರಹೊಮ್ಮಿದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (CM.D.K.Shivakumar) ಅವರು ಹೇಳಿದರು.
ಇಂದು ನಗರದ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯದ ಜಿಲ್ಲಾ ಪೊಲೀಸ್ ಘಟಕಗಳಿಗೆ 32 ಅತ್ಯಾಧುನಿಕ ಮೊಬೈಲ್ ಫೊರೆನಿಕ್ಸ್ ವ್ಯಾನ್ ಗಳು, 75 ಬೊಲೆರೋ ವಾಹನಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಹಸಿರು ನಿಶಾನೆ ತೋರುವ ಮೂಲಕ ನೂತನ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗಡಿಯಲ್ಲಿ ಸೈನಿಕರು ದೇಶದ ರಕ್ಷಣೆಯ ಹೊಣೆ ಹೊತ್ತಿದ್ದರೆ, ಗಡಿಯೊಳಗೆ ಆಡಳಿತ ಮತ್ತು ಪೊಲೀಸ್ ವ್ಯವಸ್ಥೆ ನಾಗರಿಕರ ನೆಮ್ಮದಿ ಹಾಗೂ ಕಾನೂನು ಪಾಲನೆಗೆ ಭದ್ರತೆ ಒದಗಿಸುತ್ತಿದೆ ಎಂದು ತಿಳಿಸಿದರು.
ಕಳೆದ ಒಂದು ವರ್ಷದಲ್ಲಿ ರಾಜ್ಯ ಪೊಲೀಸ್ ಇಲಾಖೆ 375 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಇತ್ತೀಚೆಗೆ ದಾಖಲೆ ಪ್ರಮಾಣದ ಮಾದಕ ವಸ್ತುಗಳನ್ನು ಜಪ್ತಿ ಮಾಡುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ಈ ಕಾರ್ಯದಲ್ಲಿ ತೊಡಗಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ರಾಜ್ಯದ ಜನತೆ ಹಾಗೂ ಸರ್ಕಾರದ ಪರವಾಗಿ ಅಭಿನಂಧಿಸುವುದಾಗಿ ಅವರು ಹೇಳಿದರು.
ಇದುವರೆಗೆ ಸುಮಾರು 1,500 ಡ್ರಗ್ ಪೆಡ್ಲರ್ಗಳನ್ನು ಬಂಧಿಸಿರುವುದು ಇಲಾಖೆಯ ಮತ್ತೊಂದು ಮಹತ್ವದ ಸಾಧನೆಯಾಗಿದೆ. ಗೋವಾ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯದ ಗಡಿಗಳನ್ನು ಹೊಂದಿರುವ ಕರ್ನಾಟಕದಲ್ಲಿ ಮಾದಕ ವಸ್ತುಗಳ ಅಕ್ರಮ ಸಾಗಣೆಯನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ದಕ್ಷತೆ, ನಿಷ್ಠೆ ಮತ್ತು ಜಾಗರೂಕತೆಯಿಂದ ಕರ್ನಾಟಕ ಪೊಲೀಸ್ ಇಲಾಖೆಗೆ ರಾಷ್ಟ್ರ ಮಟ್ಟದಲ್ಲಿ ಉತ್ತಮ ಹೆಸರು ಬಂದಿದೆ. ಹಗಲು-ಇರುಳೆನ್ನದೆ ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿಯ ಮನೋಬಲ ಕುಗ್ಗಿಸುವ ಯಾವುದೇ ಕ್ರಮಕ್ಕೆ ಸರ್ಕಾರ ಅವಕಾಶ ನೀಡುವುದಿಲ್ಲ. ಕಾನೂನು ಚೌಕಟ್ಟಿನೊಳಗೆ ರಾಜ್ಯದ ಹಿತಾಸಕ್ತಿ ಕಾಪಾಡಲು ಕೈಗೊಳ್ಳುವ ನ್ಯಾಯಸಮ್ಮತ ಕ್ರಮಗಳಿಗೆ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಅವರು ಭರವಸೆ ನೀಡಿದರು.
ಕೃತಕ ಬುದ್ಧಿಮತ್ತೆ ಸೇರಿದಂತೆ ಹೊಸ ತಂತ್ರಜ್ಞಾನಗಳ ದುರುಪಯೋಗದಿಂದ ಹೊಸ ಮಾದರಿಯ ಅಪರಾಧಗಳು ಹೆಚ್ಚುತ್ತಿದ್ದು, ಇಂತಹ ಸವಾಲುಗಳನ್ನು ಎದುರಿಸಲು ಪೊಲೀಸ್ ಇಲಾಖೆ ಇನ್ನಷ್ಟು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದು ಅವರು ಹೇಳಿದರು.
ಪ್ರತಿ ಪೊಲೀಸ್ ಠಾಣೆಯಲ್ಲೂ ವಿಶೇಷ ತಂಡಗಳನ್ನು ರಚಿಸಿ, ಕಳ್ಳತನ, ಗೂಂಡಾಗಿರಿ ಮತ್ತು ಸಂಘಟಿತ ಅಪರಾಧಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ತಡೆಗಟ್ಟುವ ವ್ಯವಸ್ಥೆ ರೂಪಿಸಬೇಕು ಎಂದು ಪೊಲೀಸ್ ಇಲಾಖೆಗೆ ಅವರು ಸೂಚಿಸಿದರು.
ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಕಾಣಿಕೆ ಹುಂಡಿಗಳ ನಿರ್ವಹಣೆಯಿಂದ ಬ್ಯಾಂಕ್ಗೆ ಹಣ ಜಮಾ ಮಾಡುವವರೆಗೆ ಎಲ್ಲ ಪ್ರಕ್ರಿಯೆಗಳು ಸಿಸಿಟಿವಿ ಮತ್ತು ವಿಡಿಯೊ ದಾಖಲಾತಿಯ ವ್ಯಾಪ್ತಿಯಲ್ಲಿ ಇರಬೇಕು. ದೇವಸ್ಥಾನಗಳ ಭದ್ರತಾ ವ್ಯವಸ್ಥೆಯನ್ನು ಸ್ಥಳೀಯ ಪೊಲೀಸ್ ಠಾಣೆಗಳೊಂದಿಗೆ ನೇರ ಸಂಪರ್ಕಕ್ಕೆ ತರಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಅಪರಾಧ ನಡೆದ ಬಳಿಕ ತನಿಖೆ ನಡೆಸುವುದಕ್ಕಿಂತ ಅಪರಾಧ ನಡೆಯುವ ಮುನ್ನವೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಮುಖ್ಯ. ಜನರ ನಂಬಿಕೆಯನ್ನು ಉಳಿಸಿಕೊಳ್ಳುವ ಹೊಣೆ ಸರ್ಕಾರ ಮತ್ತು ಆಡಳಿತದ ಮೇಲಿದೆ ಆದ್ದರಿಂದ ಸರ್ಕಾರಿ ದೇವಸ್ಥಾನಗಳ ಜೊತೆಗೆ ಖಾಸಗಿ ದೇವಸ್ಥಾನಗಳು ಮತ್ತು ಮಠ-ಮಾನ್ಯಗಳೂ ಭದ್ರತೆ ಕುರಿತು ಹೆಚ್ಚಿನ ಜಾಗೃತಿ ಮತ್ತು ಎಚ್ಚರಿಕೆ ವಹಿಸಬೇಕು ಎಂದು ಅವರು ಕರೆ ನೀಡಿದರು.
ಪೊಲೀಸ್ ಇಲಾಖೆಯಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ಜನವಿಶ್ವಾಸಕ್ಕೆ ಆದ್ಯತೆ ನೀಡಿ :
ಪೊಲೀಸ್ ಇಲಾಖೆಯಲ್ಲಿ ನೇಮಕಾತಿಯಿಂದ ಹಿಡಿದು ಕರ್ತವ್ಯ ನಿರ್ವಹಣೆವರೆಗೆ ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ಜನವಿಶ್ವಾಸಕ್ಕೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.
ಪಿಎಸ್ಐ ನೇಮಕಾತಿ ಪ್ರಕರಣದ ಬಳಿಕ ಪೊಲೀಸ್ ನೇಮಕಾತಿ ಪ್ರಕ್ರಿಯೆಯಲ್ಲಿ ಮೆರಿಟ್ ಮತ್ತು ಪಾರದರ್ಶಕತೆಗೆ ಹೆಚ್ಚಿನ ಮಹತ್ವ ದೊರೆತಿದೆ. ಅರ್ಹ ಹಾಗೂ ಪ್ರಾಮಾಣಿಕ ಯುವಕರು ಪೊಲೀಸ್ ಇಲಾಖೆಗೆ ಆಯ್ಕೆಯಾಗಬೇಕು. ಯಾವುದೇ ಕಾರಣಕ್ಕೂ ಲಂಚ ನೀಡಿ ಉದ್ಯೋಗ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಅವರು ಸಲಹೆ ನೀಡಿದರು.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಆಸ್ತಿ ಮೌಲ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಪೊಲೀಸ್ ಅಧಿಕಾರಿಗಳು ಹೆಚ್ಚಿನ ಜಾಗರೂಕತೆ ವಹಿಸಬೇಕು. ಕರ್ತವ್ಯ ನಿರ್ವಹಣೆಯಲ್ಲಿ ಯಾವುದೇ ನಿರ್ಲಕ್ಷ್ಯಕ್ಕೆ ಅವಕಾಶ ನೀಡದೆ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದರು.
ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡ ಪೊಲೀಸ್ ತಂಡದ ಕಾರ್ಯವನ್ನು ಶ್ಲಾಘಿಸಿದ ಮುಖ್ಯಮಂತ್ರಿಯವರು, ಆ ತಂಡಕ್ಕೆ ರಾಜ್ಯ ಸರ್ಕಾರದ ವತಿಯಿಂದ ರೂ.10 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಘೋಷಿಸಿದರು.
ಪೊಲೀಸ್ ಇಲಾಖೆಯ ದಕ್ಷತೆ, ಪ್ರಾಮಾಣಿಕತೆ ಮತ್ತು ಬದ್ಧತೆಯನ್ನು ಶ್ಲಾಘಿಸಿದ ಅವರು, ಪ್ರತಿಯೊಬ್ಬ ನಾಗರಿಕರಲ್ಲೂ ಪೊಲೀಸ್ ಇಲಾಖೆಯ ಬಗ್ಗೆ ಗೌರವ ಮತ್ತು ವಿಶ್ವಾಸ ಮೂಡಿಸುವ ರೀತಿಯಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಪೊಲೀಸ್ ಇಲಾಖೆಯ ಯಶಸ್ಸೇ ಸರ್ಕಾರದ ಯಶಸ್ಸಾಗಿದ್ದು, ರಾಜ್ಯದ ಏಳು ಕೋಟಿ ಜನರಲ್ಲಿ ಸರ್ಕಾರದ ಬಗ್ಗೆ ವಿಶ್ವಾಸ ಹೆಚ್ಚಿಸುವ ಜವಾಬ್ದಾರಿ ಪೊಲೀಸ್ ಅಧಿಕಾರಿಗಳ ಮೇಲಿದೆ ಎಂದು ಮುಖ್ಯಮಂತ್ರಿ ಅವರು ಹೇಳಿದರು.
ರಾಜ್ಯ ಪೊಲೀಸ್ ವಿಜ್ಞಾನ ಪ್ರಯೋಗಾಲಯದ ಮೂಲಕ ಜಿಲ್ಲಾ ಮಟ್ಟದಲ್ಲಿ 32 ಅತ್ಯಾಧುನಿಕ ಮೊಬೈಲ್ ಫೋರೆನ್ಸಿಕ್ ವಾಹನಗಳಲ್ಲದೆ, ಹೊಸದಾಗಿ ಖರೀದಿಸಲಾದ 75 ಬೊಲೆರೋ ವಾಹನಗಳ ಸೇರ್ಪಡೆಯಿಂದ ರಾಜ್ಯ ಪೊಲೀಸ್ ಇಲಾಖೆಯ ಕಾರ್ಯಕ್ಷಮತೆ ಮತ್ತಷ್ಟು ವೃದ್ಧಿಯಾಗಲಿದ್ದು, ತುರ್ತು ಪರಿಸ್ಥಿತಿಗಳಿಗೆ ತಕ್ಷಣ ಸ್ಪಂದಿಸುವ ಸಾಮರ್ಥ್ಯ ಹೆಚ್ಚುವುದರೊಂದಿಗೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಸಾರ್ವಜನಿಕರಿಗೆ ಸಮಯೋಚಿತ, ದಕ್ಷ ಮತ್ತು ಜನಸ್ನೇಹಿ ಪೊಲೀಸ್ ಸೇವೆ ಒದಗಿಸುವಲ್ಲಿ ಮಹತ್ತರ ನೆರವಾಗಲಿದೆ ಎಂದು ಅವರು ಹೇಳಿದರು.
ಗೃಹ, ಮಾಹಿತಿ ಮತ್ತು ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ಇ- ಆಡಳಿತ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ವಿಶೇಷವಾಗಿ ವಿನ್ಯಾಸಗೊಳಿಸಲಾದ 32 ಅತ್ಯಾಧುನಿಕ ಮೊಬೈಲ್ ಫೋರೆನ್ಸಿಕ್ ವಾಹನಗಳು ಅತ್ಯಾಧುನಿಕ ನ್ಯಾಯ ವಿಜ್ಞಾನ ಪರೀಕ್ಷಾ ಉಪಕರಣಗಳು ಹಾಗೂ ಡಿಜಿಟಲ್ ಟ್ರಿಯಾಜ್ ಸೌಲಭ್ಯಗಳನ್ನು ಹೊಂದಿದ್ದು, ಅಪರಾಧ ನಡೆದ ಸ್ಥಳದಲ್ಲಿಯೇ ವೈಜ್ಞಾನಿಕ ಪರಿಶೀಲನೆ ನಡೆಸಲು ಹಾಗೂ ಅಪರಾಧ ಗುಣಮಟ್ಟದ ಸಾಕ್ಷö್ಯಗಳನ್ನು ತ್ವರಿತವಾಗಿ ಸಂಗ್ರಹಿಸಲು ನೆರವಾಗಲಿವೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ್ ಎಸ್.ಹೊರಟ್ಟಿ, ಶಿವಾಜಿನಗರದ ವಿಧಾನಸಭಾ ಕ್ಷೇತ್ರದ ಶಾಸಕರಾದ ರಿಜ್ವಾನ್ ಅರ್ಷದ್, ಒಳಾಡಳಿತ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಜೇಂದರ್ ಕುಮಾರ್ ಕಟಾರಿಯಾ, ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರು, ಪೊಲೀಸ್ ಪಡೆಯ ಮುಖ್ಯಸ್ಥರಾದ ಡಾ.ಎಂ.ಎ.ಸಲೀಂ,
ಅಪರಾಧ ಮತ್ತು ತಾಂತ್ರಿಕ ಸೇವೆಗಳು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಪಿ. ಹರಿಶೇಖರನ್, ಸಂಪರ್ಕ, ಲಾಜಿಸ್ಟಿಕ್ ಮತ್ತು ಆಧುನೀಕರಣದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಎಸ್. ಮುರುಗನ್ ಮತ್ತು ನ್ಯಾಯ ವಿಜ್ಞಾನ ಪ್ರಯೋಗಾಲಯದ ಡಿಐಜಿಪಿ ಮತ್ತು ನಿರ್ದೇಶಕರಾದ ಡಾ. ದಿವ್ಯ ವಿ. ಗೋಪಿನಾಥ್, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಾಂತ್ ಕುಮಾರ ಸಿಂಗ್ ರವರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಷಣ್ಮುಖ ಶ್ರೀ ಸುಬ್ರಹ್ಮಣ್ಯ ದೇವಾಲಯದ ಭೂಮಿಪೂಜೆ ನೆರವೇರಿಸಿದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್

