ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ 2025-26ನೇ ಸಾಲಿನ ರಾಜ್ಯ ಮಟ್ಟದ ಮಲ್ಲಕಂಭ ಸ್ಪರ್ಧೆಯನ್ನು(State Level Mallkhamb sports) ಬೆಂಗಳೂರಿನ ಜೆ.ಪಿ. ನಗರದ ಶ್ರೀ ದುರ್ಗಾಪರಮೇಶ್ವರಿ ಆಟದ ಮೈದಾನದಲ್ಲಿ(Play Ground) ಆಯೋಜಿಸಲಾಗಿದೆ.
ಜುಲೈ 11 ರಿಂದ ಜುಲೈ 12, 2026 ರವರೆಗೆ ಈ ಕ್ರೀಡಾ ಹಬ್ಬ ನಡೆಯಲಿದ್ದು, ಜುಲೈ 11 ರಂದು ಬೆಳಿಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(CM.D.K.Shivakumar), ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್(Dr.G.Parameshwar) ಅವರು ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ.
ಈ ಕ್ರೀಡೋತ್ಸವದಲ್ಲಿ 14 ವರ್ಷದೊಳಗಿನ ಮತ್ತು 14 ವರ್ಷ ಮೇಲ್ಪಟ್ಟ ಬಾಲಕ ಹಾಗೂ ಬಾಲಕಿಯರಿಗಾಗಿ ವೈಯಕ್ತಿಕ ಮತ್ತು ಗುಂಪು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ವೈಯಕ್ತಿಕ ವಿಭಾಗ (Individual Apparatus): ಪೋಲ್ ಮತ್ತು ರೋಪ್ ಮಲ್ಲಕಂಭ ಸ್ಪರ್ಧೆಗಳು.
ಗುಂಪು ವಿಭಾಗ (Group Apparatus): 8 ಕ್ರೀಡಾಪಟುಗಳನ್ನೊಳಗೊಂಡ ಪಿರಮಿಡ್ ಸ್ಪರ್ಧೆ.
ಪ್ರತಿ ತಂಡವು ಒಟ್ಟು 18 ಸದಸ್ಯರನ್ನು ಒಳಗೊಂಡಿರಲಿದ್ದು, ಇದರಲ್ಲಿ 8 ಹೆಣ್ಣು ಮಕ್ಕಳು, 8 ಗಂಡು ಮಕ್ಕಳು, ಒಬ್ಬರು ಮಹಿಳಾ ತರಬೇತುದಾರರು ಹಾಗೂ ಒಬ್ಬರು ಪುರುಷ ತರಬೇತುದಾರರು ಇರುತ್ತಾರೆ.
ಸ್ಪರ್ಧೆಗಳನ್ನು ‘ಮಲ್ಲಕಂಭ ಫೆಡರೇಷನ್ ಆಫ್ ಇಂಡಿಯಾ’ ನಿಯಮಾವಳಿಗಳ ಪ್ರಕಾರ ನಡೆಸಲಾಗುತ್ತದೆ ಹಾಗೂ ಎರಡು ಮಾದರಿಯಲ್ಲಿ ಡೆಮೋ ಪ್ರದರ್ಶನ ನಡೆಯಲಿದೆ.
ಕ್ರೀಡಾಪಟುಗಳ ವಯಸ್ಸನ್ನು ಡಿಸೆಂಬರ್ 2025ರ ಅಂತ್ಯಕ್ಕೆ ಗಣನೆಗೆ ತೆಗೆದುಕೊಳ್ಳಲಾಗುವುದು. ಜನ್ಮ ಪ್ರಮಾಣ ಪತ್ರ/ ಎಸ್.ಎಸ್.ಎಲ್.ಸಿ. ಅಂಕಪಟ್ಟಿ/ಆಧಾರ್ ಕಾರ್ಡ್ ಕಡ್ಡಾಯ.
ವಿಜೇತ ಕ್ರೀಡಾಪಟುಗಳಿಗೆ ನಗದು ಪುರಸ್ಕಾರ, ಪ್ರಮಾಣ ಪತ್ರ ಹಾಗೂ ಪದಕಗಳನ್ನು ನೀಡಿ ಗೌರವಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

