ಎಸ್‌ಐಆರ್ ಅರ್ಜಿಗಳು ಬೀದಿಯಲ್ಲಿ ವಿತರಣೆ, ಬಾಂಗ್ಲಾ ನಿವಾಸಿಗಳನ್ನು ಮತದಾರರ ಪಟ್ಟಿಗೆ ಸೇರಿಸುವ ಷಡ್ಯಂತ್ರ ಮಾಡಿದ ಕಾಂಗ್ರೆಸ್: ಪ್ರತಿಪಕ್ಷ ನಾಯಕ ಆರ್.ಅಶೋಕ
ಬರಗಾಲದ ಲಕ್ಷಣ ಕಂಡರೂ ಸಚಿವರು ಭೇಟಿ ನೀಡುತ್ತಿಲ್ಲ, ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ
ಬೆಂಗಳೂರು, ಜುಲೈ 3 :ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದಾಗಿ(instigation) ಬಿಎಲ್‌ಒಗಳು ಬೀದಿಗಳಲ್ಲಿ ಎಸ್‌ಐಆರ್(SIR) ಅರ್ಜಿಗಳನ್ನು ಹಂಚುತ್ತಿದ್ದಾರೆ. ಈ ಮೂಲಕ ಬಾಂಗ್ಲಾ ಜನರನ್ನು ಮತದಾರರ ಪಟ್ಟಿಗೆ ಸೇರಿಸುವ ಷಡ್ಯಂತ್ರ(Conspiracy) ನಡೆದಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ(R.Ashok) ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಭದ್ರತೆಯ ದೃಷ್ಟಿಯಿಂದ ಚುನಾವಣಾ ಆಯೋಗ ಎಸ್‌ಐಆರ್ ಮಾಡುತ್ತಿದೆ. ಇದು ಕೇಂದ್ರ ಸರ್ಕಾರದ ಉದ್ದೇಶ ಕೂಡ ಹೌದು. ಆದರೆ ಕಾಂಗ್ರೆಸ್ ಸರ್ಕಾರ ಬಾಂಗ್ಲಾ ಜನರ ಪಾಲಿಗೆ ಸ್ವರ್ಗವಾಗಿದೆ. ಈ ಮೊದಲು ಕೋಗಿಲು ಕ್ರಾಸ್‌ನಲ್ಲಿ ಬಾಂಗ್ಲಾ ಜನರಿಗೆ ಮನೆ ನಿರ್ಮಿಸಿಕೊಡಲು ಮುಂದಾಗಿದ್ದು, ಅದರ ವಿರುದ್ಧ ಬಿಜೆಪಿ ಹೋರಾಟ ನಡೆಸಿದ್ದಕ್ಕೆ ಅದನ್ನು ಕೈ ಬಿಟ್ಟಿದ್ದರು. ಬೆಂಗಳೂರು, ಕೊಡಗು, ಚಿಕ್ಕಮಗಳೂರು ಸೇರಿದಂತೆ ಸುಮಾರು 20 ಲಕ್ಷ ಬಾಂಗ್ಲಾ ಜನರು ರಾಜ್ಯದಲ್ಲಿದ್ದಾರೆ. 2002 ರ ಮತದಾರರ ಪಟ್ಟಿಯಲ್ಲಿ ಈ ಬಾಂಗ್ಲಾ ಜನರ ಹೆಸರಿಲ್ಲ. ಆದ್ದರಿಂದ ಬಾಂಗ್ಲಾ ನಿವಾಸಿಗಳಿಗೆ ಹೆದ್ದಾರಿ ನಿರ್ಮಿಸಿಕೊಟ್ಟಿದ್ದು, ಹಜ್ ಭವನ, ಮಸೀದಿಗಳ ಮುಂದೆ ರಾಜಾರೋಷವಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲಾಗುತ್ತಿದೆ. ಬಿಎಲ್‌ಒಗಳು ಪ್ರತಿ ಮನೆಗೆ ಹೋಗಿ ಸಮೀಕ್ಷೆ ಮಾಡಬೇಕಿದ್ದರೂ ಪ್ರಸಾದ ಹಂಚಿದಂತೆ ಬೀದಿಯಲ್ಲಿ ಕುಳಿತು ಅರ್ಜಿಗಳನ್ನು ಹಂಚುತ್ತಿದ್ದಾರೆ. ಅಧಿಕಾರಿಗಳು ಮನೆ ಗುರುತು ಮಾಡಿ ಅರ್ಜಿ ತುಂಬಿಸಿ, ಮರಳಿ ಅರ್ಜಿಯನ್ನು ಪಡೆಯಬೇಕು. ಆದರೆ ಕಾಂಗ್ರೆಸ್ ಮತಕ್ಕಾಗಿ ಬಾಂಗ್ಲಾ ಜನರನ್ನು ಪಟ್ಟಿಗೆ ಸೇರಿಸುವ ಷಡ್ಯಂತ್ರ ಮಾಡುತ್ತಿದೆ ಎಂದು ದೂರಿದರು.
ಮಹದೇವಪುರ, ಬ್ಯಾಟರಾಯನಪುರದಲ್ಲಿ ಮಸೀದಿಗಳ ಮುಂದೆ ಗುಂಪುಗುಂಪಾಗಿ ಕುಳಿತು ಎಸ್‌ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಕುರಿತು ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಗಳಿಗೆ ಪತ್ರ ಬರೆದು ಅಕ್ರಮ ಮಾಡಲಾಗುತ್ತಿದೆ ಎಂದು ತಿಳಿಸುತ್ತೇನೆ. ಇದಕ್ಕೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಆಗ್ರಹಿಸುತ್ತೇನೆ. ಒಂದು ಬಾರಿ ಬಾಂಗ್ಲಾ ನಿವಾಸಿಗಳು ಇಲ್ಲಿ ನೆಲೆಸಿದರೆ ಉಚಿತ ಸೌಲಭ್ಯ ನೀಡಬೇಕಾಗುತ್ತದೆ. ಇದರಿಂದಾಗಿ ನಮ್ಮ ದೇಶಕ್ಕೆ ಹೊರೆಯಾಗುತ್ತದೆ ಎಂದರು.
ಯಲಹಂಕದ ಒಂದು ಕಡೆ 2002 ರ ಮತದಾರರ ಪಟ್ಟಿಯ ದಾಖಲೆಗಳೇ ಸಿಗದಂತೆ ಮಾಡಲಾಗಿದೆ. ವೆಬ್‌ಸೈಟ್‌ನಲ್ಲಿ ಅದನ್ನು ಅಪ್‌ಲೋಡ್ ಮಾಡಿಲ್ಲ. ನಿರ್ದಿಷ್ಟ ಸಮುದಾಯಗಳನ್ನು ಗುರಿ ಮಾಡಿ ಇಂತಹ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಆದೇಶ ನೀಡಿ ಹಿರಿಯ ನಾಯಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕಿದೆ. ಎಸ್‌ಐಆರ್ ವಿರೋಧಿಸುವ ಕಾಂಗ್ರೆಸ್, ಗ್ಯಾರಂಟಿ ಪಡೆಯಲು ಎಸ್‌ಐಆರ್‌ನಲ್ಲಿ ಹೆಸರು ನೋಂದಾಯಿಸಿ ಎಂದು ಕರೆ ನೀಡುತ್ತಿದೆ. ಈ ಮೂಲಕ ಬಾಂಗ್ಲಾ ನಿವಾಸಿಗಳನ್ನು ಇಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಭಾರತೀಯರಿಗೆ ಮಾತ್ರ ಎಸ್‌ಐಆರ್ ಅನ್ವಯವಾಗುತ್ತಿದೆ. ಅನ್ನ ಹಾಕುವವರಿಗೆ ಮತ ಇದೆಯೇ ಹೊರತು ಕನ್ನ ಹಾಕುವವರಿಗೆ ಅಲ್ಲ ಎಂಬುದನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿದುಕೊಳ್ಳಬೇಕು ಎಂದರು.
ಹೊಸತನವಿಲ್ಲದ ಆಡಳಿತ
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಒಂದು ತಿಂಗಳಾದರೂ ರಾಜ್ಯದಲ್ಲಿ ಹೊಸತನ ಬಂದಿಲ್ಲ. ಹಳೆ ಬಾಟಲ್ ಹೊಸ ಹೆಂಡ ಎನ್ನುವಂತಹ ಆಡಳಿತ ನೀಡುತ್ತಿದ್ದಾರೆ. ನೀರಿಲ್ಲವೆಂಬ ಕಾರಣಕ್ಕೆ ಬೆಳೆ ಬೆಳೆಯಬೇಡಿ ಎಂದು ಸಿಎಂ ರೈತರಿಗೆ ಕರೆ ನೀಡಿದ್ದಾರೆ. ಯಾವಾಗ ಬೆಳೆ ಬೆಳೆಯಬೇಕೆಂಬ ಜ್ಞಾನ ರೈತರಿಗೆ ಮೊದಲಿಂದಲೂ ಇದೆ. ಪ್ರಧಾನಿ ನರೇಂದ್ರ ಮೋದಿ ಚಿನ್ನದ ಬಳಕೆ ಕಡಿಮೆ ಮಾಡಿ ಎಂದಿದ್ದಕ್ಕೆ, ಕಾಂಗ್ರೆಸ್ ನಾಯಕರು ಟೀಕಿಸಿದ್ದರು. ಈಗ ಅದೇ ರೀತಿ ಮುಖ್ಯಮಂತ್ರಿಗಳು ಮಾತಾಡುತ್ತಿದ್ದಾರೆ. ಇವರಿಗೆ ಧೈರ್ಯವಿದ್ದರೆ ತಮಿಳುನಾಡಿಗೆ ಬೆಳೆ ಬೆಳೆಯಬೇಡಿ ಎನ್ನಬೇಕಿತ್ತು ಎಂದರು.
ಮೇಕೆದಾಟು ವಿರುದ್ಧ ತಮಿಳುನಾಡು ಸರ್ಕಾರ ನಿರ್ಣಯ ಕೈಗೊಂಡರೂ ಅದರ ವಿರುದ್ಧ ಸಿಎಂ ಮಾತಾಡಿಲ್ಲ. ಅದರ ಬದಲು ಕದ್ದು ಮುಚ್ಚಿ ನೀರು ಬಿಡಲಾಗುತ್ತಿದೆ. ಮೇಕೆದಾಟು ಯೋಜನೆಗೆ 10 ರೂ. ಕೂಡ ನೀಡಿಲ್ಲ. ಸಿಎಂ ಡಿ.ಕೆ.ಶಿವಕುಮಾರ್ ತಮಿಳುನಾಡಿನ ಪರ ಇದ್ದಾರೆ ಎಂದರು. 4
ಬರಗಾಲದ ಲಕ್ಷಣ ಕಂಡುಬಂದರೂ ಜಲಸಂಪನ್ಮೂಲ ಸಚಿವರು ಬೆಂಗಳೂರಿಗೆ ಬಿಟ್ಟು ಹೊರಗೆ ಹೋಗಿಲ್ಲ. ತುಂಗಭದ್ರಾ ಕ್ರಸ್ಟ್ ಗೇಟ್ ಚಾಲನೆ ಕಾರ್ಯಕ್ರಮಕ್ಕೂ ಅವರು ಹೋಗಿಲ್ಲ. ಕೃಷಿ ಇಲಾಖೆಗೆ ಸಚಿವರೇ ಇಲ್ಲ. ಬರಗಾಲಕ್ಕೆ ಎಷ್ಟು ಪರಿಹಾರ ನಿಗದಿ ಮಾಡಿದ್ದಾರೆ, ಎಷ್ಟು ಕಡೆ ಭೇಟಿ ನೀಡಿದ್ದಾರೆ, ಕೇಂದ್ರ ಸರ್ಕಾರಕ್ಕೆ ಯಾವಾಗ ನಿಯೋಗ ಕಳುಹಿಸುತ್ತಾರೆ ಎಂದು ತಿಳಿಸಲಿ ಎಂದರು.
ಇದೇ ಅವಧಿಯಲ್ಲಿ ಕಳೆದ ವರ್ಷ 22 ಜಲಾಶಯಗಳಲ್ಲಿ 335.292 ಟಿಎಂಸಿ ನೀರು ಇತ್ತು. ಈಗ 66.099 ಟಿಎಂಸಿ ನೀರು ಇದೆ. ಹೀಗಿರುವಾಗ ಬೆಳೆ ಬೆಳೆಯಬಾರದು ಎಂದರೆ ರೈತರು ಏನು ಮಾಡಬೇಕು ಎಂದು ಸರ್ಕಾರವೇ ತಿಳಿಸಬೇಕು. ಆಲಮಟ್ಟಿ, ತುಂಗಭದ್ರ, ಹಿಡಕಲ್, ಭೀಮಾ ಎಲ್ಲ ಜಲಾಶಯಗಳಲ್ಲೂ ನೀರಿನ ಕೊರತೆ ಇದೆ. ಆಲಮಟ್ಟಿಯಲ್ಲಿ 20 ಟಿಎಂಸಿ, ತುಂಗಭದ್ರಾದಲ್ಲಿ 9 ಟಿಎಂಸಿ ಸೇರಿದಂತೆ ಪ್ರತಿ ಡ್ಯಾಮ್‌ಗಳಲ್ಲೂ ನೀರಿನ ಕೊರತೆ ಇದೆ. ಆದರೆ ಸರ್ಕಾರಕ್ಕೆ ಮಾತ್ರ ಲಂಚದ ಕೊರತೆ ಇಲ್ಲ. ಮುಖ್ಯಮಂತ್ರಿಗಳು ಇಷ್ಟೊತ್ತಿಗೆ ಅಧ್ಯಯನ ನಡೆಸಿ, ರೈತರಿಗೆ ಪರಿಹಾರ ಸೂಚಿಸಬೇಕಿತ್ತು. ರೈತರನ್ನು ಕರೆಸಿ ಮಾತಾಡುವುದರ ಜೊತೆಗೆ, ಬೆಳೆ ಹಾನಿ ಪರಿಹಾರಕ್ಕೆ(Compensation) ಕೂಡಲೇ 10,000 ಕೋಟಿ ರೂ. ಮೀಸಲಿಡಬೇಕು. ಟಾಸ್ಕ್ ಫೋರ್ಸ್ ರಚಿಸಿ, ಗೋ ಶಾಲೆಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರು ಅಧಿಕಾರಿಗಳನ್ನು ಬೈದು ರೀಲ್ಸ್ ಮಾಡುತ್ತಿದ್ದಾರೆ. ಹಿಂದಿನ ಸಚಿವರು ಹಾಳು ಮಾಡಿಟ್ಟಿದ್ದಾರೆ ಎಂದು ಅವರೇ ಹೇಳುತ್ತಿದ್ದಾರೆ. ರಸ್ತೆ ಗುಂಡಿ ಮುಚ್ಚುವುದು ರಾಕೆಟ್ ಸೈನ್ಸಾ ಎಂದು ಪ್ರಶ್ನಿಸುವುದಾದರೆ, ಆ ಸೈನ್ಸ್‌ನ್ನು ಡಿ.ಕೆ.ಶಿವಕುಮಾರ್ ಅವರೇ ಮಾಡಿದ್ದಾರೆ ಎಂದರ್ಥ. ನಗರದಲ್ಲಿ ಹಣಕಾಸಿನ ಸಮಸ್ಯೆ ಇಲ್ಲ, ಆದರೆ ಆಡಳಿತ ವೈಫಲ್ಯವಿದೆ ಎಂದು ಅವರು ಹೇಳಿದ್ದಾರೆ. ಅಂದರೆ ಮೂರು ವರ್ಷದಲ್ಲಿ ಇವರದ್ದೇ ಆಡಳಿತ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ ಎಂದರು.
ಹೆಚ್ಚು ಹಣ ಬರುವ ಬಿಡಿಎ, ಬಿಎಂಆರ್‌ಡಿಎ ಮೊದಲಾದ ಸಂಸ್ಥೆಗಳನ್ನು ಸಿಎಂ ಇಟ್ಟುಕೊಂಡಿದ್ದು, ಉಳಿದವನ್ನು ಸಚಿವರಿಗೆ ನೀಡಿದ್ದಾರೆ. ಇದರ ನಡುವೆ ಇವರಿಬ್ಬರ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಸರ್ಕಾರ ಇನ್ನಾದರೂ ನಿದ್ರೆಯಿಂದ ಎಚ್ಚೆತ್ತುಕೊಳ್ಳಲಿ ಎಂದರು.
