ಇಸ್ರೋ ಕೇಂದ್ರ ಕಛೇರಿಗೆ ಬಂದಿರುವ ಹುಸಿ ಬಾಂಬ್ ಬೆದರಿಕೆ(|Threat) ಸಂದೇಶದ ಪರಿಶೀಲನೆ
ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ಬಿಇಎಲ್ ರಸ್ತೆಯಲ್ಲಿ ಅಂತರಿಕ್ಷಾ ಭವನದ ಇಸ್ರೋ ಕೇಂದ್ರ ಕಛೇರಿಗೆ ದಿನಾಂಕ:02/07/2026 ರಂದು ಒಂದು ಇ-ಮೇಲ್ ಐಡಿಯಿಂದ ಇಸ್ರೋ ಕೇಂದ್ರ ಕಛೇರಿಯ ಇ-ಮೇಲ್ ಐಡಿಗಳಿಗೆ(e-mail ID) ಇಸ್ರೋ ಕಛೇರಿಯಲ್ಲಿ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಸಂದೇಶ ಬಂದಿದ್ದು, ಸದರಿ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೂಡಲೆ ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ಮಾಡಲಾಗಿ, ಇ-ಮೇಲ್ ಸಂದೇಶದಲ್ಲಿ ತಿಳಿಸಿರುವಂತೆ ಯಾವುದೇ ರೀತಿಯ ವಿಶೇಷತೆ ಇರುವುದಿಲ್ಲ. ಇದೊಂದು ಹುಸಿ ಬಾಂಬ್ ಬ್ಲಾಸ್ಟ್ ಬೆದರಿಕೆ ಸಂದೇಶವಾಗಿದ್ದು, ಈ ಸಂಬಂಧ ಇಸ್ರೋ ಕೇಂದ್ರ ಕಛೇರಿಯ ಆಡಳಿತಾಧಿಕಾರಿಯವರು ನೀಡಿದ ದೂರಿನ ಮೇರೆಗೆ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ. ಪ್ರಕರಣದ ಆರೋಪಿಯ ಪತ್ತೆಗಾಗಿ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಈ ತಂಡವು ತಾಂತ್ರಿಕ ಸಹಾಯದಿಂದ ಮಾಹಿತಿ ಸಂಗ್ರಹಿಹಿಸಿ, ಉತ್ತರ ಪ್ರದೇಶದ ಗಾಜಿಯಾಬಾದ್ಗೆ ತೆರಳಿ, ಇಸ್ರೋ ಕಛೇರಿಗೆ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಇ-ಮೇಲ್ ಸಂದೇಶ ಕಳುಹಿಸಿದ್ದ ವ್ಯಕ್ತಿಯನ್ನು ಪತ್ತೆ ಮಾಡಿ, ವಶಕ್ಕೆ ಪಡೆದು ಆತನ ಬಳಿಯಿದ್ದ ಎಲೆಕ್ಟ್ರಾನಿಕ್ ಸಾಧನವನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆ ಮಾಡಿ ನೋಡಲಾಗಿ, ಈತನೇ ಬೆಂಗಳೂರಿನ ಇಸ್ರೋ ಕೇಂದ್ರ ಕಛೇರಿಗೆ ಇ-ಮೇಲ್ ಮೂಲಕ ಬಾಂಬ್ ಬ್ಲಾಸ್ಟ್ ಸಂದೇಶವನ್ನು ರವಾನಿಸಿರುವುದು ಕಂಡುಬರುತ್ತದೆ. ಆ ವ್ಯಕ್ತಿಯ ಬಗ್ಗೆ ಹೆಚ್ಚಿನ ವಿಚಾರಣೆ ಮಾಡಲಾಗಿ ಆತನು ಮಾನಸಿಕ ಅಸ್ವಸ್ಥನೆಂದು ತಿಳಿದು ಬಂದಿರುತ್ತದೆ. ಈ ಕೃತ್ಯವೆಸಗಲು ಉಪಯೋಗಿಸಿದ್ದ ಎಲೆಕ್ಟ್ರಾನಿಕ್ ಸಾಧನವನ್ನು ವಶಪಡಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.
