ಮನೆಗೊಂದು ಗ್ರಂಥಾಲಯ ಅನುಷ್ಠಾನ ಅರ್ಥಪೂರ್ಣ(Meaningful) ಕಾರ್ಯಕ್ರಮ: ಡಾ. ಮಾನಸ
ಒಳಿತನ್ನು ನಾವು ಎಲ್ಲಾ ಕಡೆಗಳಿಂದಲೂ ಸ್ವೀಕರಿಸಬೇಕು. ಮನೆಗೊಂದು ಗ್ರಂಥಾಲಯ ಅನುಷ್ಠಾನವು(Implementation) ಬಹು ಆಯಾಮದ ಕಾರ್ಯಕ್ರಮವಾಗಿದೆ. ಪುಸ್ತಕ ಪ್ರಾಧಿಕಾರದ ಕಟ್ಟಡದ ಹೊರಗೆ ರಾಜ್ಯದ ವಿವಿಧ ಭಾಗಗಳಲ್ಲಿ ಗ್ರಂಥಾಲಯದ ಮೂಲಕ ಜ್ಞಾನದ ಹಣತೆಯನ್ನು(Knowledge Lamp) ಹಚ್ಚಲು ಹೊರಟಿದ್ದೇವೆ ಎಂದು ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ ಹೇಳಿದರು.
ನಗರದ ಉದಯಗಿರಿಯ ಕೆಂಪೇಗೌಡ ರಸ್ತೆಯಲ್ಲಿರುವ ನಿವೃತ್ತ ಪ್ರಾಂಶುಪಾಲರಾದ ಎಹೆಚ್.ಗಣೇಶ್ ಅಂಕಪುರರವರ ನಿವಾಸದಲ್ಲಿ ಓದಲು ಖರೀದಿಸಿ ಕಪಾಟಿನಲ್ಲಿ ಸಂಗ್ರಹಣೆ ಮಾಡಿರುವ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಾಸನ ಜಿಲ್ಲೆಯಲ್ಲಿ ಕಾರ್ಯಕ್ರಮ ಚಾಲನೆಗೊಂಡಿದ್ದು ಬಹಳ ಶಿಸ್ತುಬದ್ಧವಾಗಿ ಮತ್ತು ಅಚ್ಚುಕಟ್ಟಾಗಿ ಏರ್ಪಾಟಾಗಿರುವುದು ಕಾರ್ಯಕ್ರಮ ಅನುಷ್ಠಾನಕ್ಕೆ ಸಿಕ್ಕ ಯಶಸ್ಸು. ನಾವು ಮನೆ ಕಟ್ಟುವಾಗ, ವಾಸಿಸುವಾಗ ಅಲ್ಲೊಂದು ಪೂಜಾ ಮನೆಯಿರಬೇಕು, ಮಲಗುವ ಕೂರುವ ನಿಲ್ಲುವ ಜಾಗಗಳಿರಬೇಕು. ಅವುಗಳ ತುಂಬಾ ವಿವಿಧ ಪೀಠೋಪಕರಣಗಳಿರಬೇಕು. ಅದಕ್ಕೆ ಭೂಷಣವಾಗಿ ಲಕ್ಷಾಂತರ ರೂಗಳ ಟಿ.ವಿ., ಹೋಂ ಥಿಯೇಟರ್ ಮತ್ತಿತರ ಐಷಾರಮಿ ಅಲಂಕಾರಿಕ ವಸ್ತುಗಳಿರಬೇಕು. ಅದರಿಂದ ನಮ್ಮ ಮನೆಯ ಪ್ರತಿಷ್ಠೆ ಹೆಚ್ಚಾಗುತ್ತದೆ ಎಂದು ಹಂಬಲಿಸುತ್ತೇವೆ. ನಿಜ, ಅದು ತಪ್ಪಲ್ಲ. ಆದರೆ ಅದಷ್ಟೇ ನಮ್ಮ ಸಂಸ್ಕೃತಿಯಲ್ಲ. ಅದರಿಂದ ನಮಗೆ ನೆಮ್ಮದಿ ಸಿಗುವುದಿಲ್ಲ. ಅದೆಲ್ಲಾ ಸಿಗಬೇಕೆಂದರೆ ಅಲ್ಲೊಂದು ಪುಟ್ಟ ಗ್ರಂಥಾಲಯವಿರಬೇಕು. ಗ್ರಂಥಾಲಯವೆಂದರೆ ಅದೊಂದು ಕೇವಲ ಪುಸ್ತಕಗಳ ಸರಕಲ್ಲ. ನಮ್ಮ ದೇಹದೊಳಗಣ ಆತ್ಮದಂತೆ ನಮ್ಮ ಮನೆಯೆಂಬ ದೇವಾಲಯದ ಜ್ಞಾನ ಸಂಸ್ಕೃತಿಯ ಕಳಶ ಎಂದರು. ಉತ್ತಮ ಓದುಗರನ್ನು ಗುರ್ತಿಸಿ, ವರ್ಷದಲ್ಲಿ ನಾಲ್ಕು ರೀತಿಯ ಪ್ರಶಸ್ತಿಗಳನ್ನು ಪ್ರಾಧಿಕಾರದ ವತಿಯಿಂದ ನೀಡುವ ಮೂಲಕ ಓದುಗರನ್ನು ಪ್ರೋತ್ಸಾಹಿಸಲಾಗುವುದು ಎಂದರು.
ಶಿಕ್ಷಕರು, ಸಾಹಿತಿ ಕೆ.ಎನ್. ಚಿದಾನಂದ ಅವರು ನಾ ಮೆಚ್ಚಿದ ಪುಸ್ತಕ ಎಂಬ ಪರಿಕಲ್ಪನೆಯಲ್ಲಿ ಎಸ್.ಲಲಿತರವರ ಮನದ ಕಣಿವೆಯಿಂದ ಪುಸ್ತಕ ಪರಿಚಯಿಸಿ ಈ ಪುಸ್ತಕದಲ್ಲಿ ಒಟ್ಟು 64 ಲೇಖನಗಳು ಓದುಗರಿಗೆ ಆಸಕ್ತಿ ಬೆಳೆಸುತ್ತವೆ. ಸಕಲೇಶಪುರದ ಲೇಖಕಿ ಮಲೆನಾಡಿನ ಹಸಿರು, ಮಳೆ, ಮರಗಿಡ ಹಕ್ಕಿ-ಪಕ್ಷಿ ಬೆಳಗು ಸಂಜೆ ಮೊದಲಾಗಿ ಸ್ಪೂರ್ತಿ ನೀಡಿವೆ. ವರ್ಷವೊಂದರಲ್ಲಿ ಬರುವ ವಸಂತ, ಗ್ರೀಷ್ಮ ವರ್ಷ, ಶರತ್, ಹೇಮಂತ, ಶಿಶಿರ ಋತುಗಳಲ್ಲಿ ಬರುವ ದ್ವಾದಶ(12) ಮಾಸಗಳಲ್ಲಿ(Month) ಬೀಳುವ ಮಳೆಯ ಹನಿಗಳು ಲೇಖಕಿಗೆ ಪ್ರೇರಣೆ ನೀಡಿವೆ. ಆಯಾ ಮಾಸಗಳಲ್ಲಿ ಬರುವ ಸಾಂದರ್ಭಿಕ ಹಬ್ಬ ಹರಿದಿನಗಳ ಆಚರಣೆಗಳನ್ನು ಅರ್ಥವತ್ತಾಗಿ ಓದುಗರಿಗೆ ಕಟ್ಟಿ ಕೊಟ್ಟಿದ್ದಾರೆ ಎಂದರು.
ಕಾರ್ಯಕ್ರಮ ಅತಿಥೇಯರಾದ ಎ.ಹೆಚ್.ಗಣೇಶ್ ಅಂಕಪುರ ದಂಪತಿಗಳನ್ನು ಪ್ರಾಧಿಕಾರವು ಸನ್ಮಾನಿಸಿ ಗೌರವಿಸಿತು. ಜ್ಞಾನದ ಸಂಕೇತವೆನಿಸಿದ ಮನೆಗೊಂದು ಗ್ರಂಥಾಲಯದ ಅನುಷ್ಠಾನವು ತಮ್ಮ ಮನೆಯಿಂದ ಪ್ರಾರಂಭವಾಗುತ್ತಿರುವುದಕ್ಕೆ ಗಣೇಶ್ ರವರು ಸಂತಸ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲೂ ಕಾರ್ಯಕ್ರಮವು ನಿರ್ವಿಘ್ನವಾಗಿ ನೆರವೇರಲಿ ಎಂದು ಶುಭ ಹಾರೈಸಿದರು. ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿ ಹಾಸನ ಜಿಲ್ಲೆ ಸಂಚಾಲಕರು, ಸಾಹಿತಿ ಗೊರೂರು ಅನಂತರಾಜು ಪುಸ್ತಕಗಳು ಜ್ಞಾನವಾಹಿನಿಯಾಗಿ ಕಾರ್ಯ ನಿರ್ವಹಿಸುತ್ತವೆ. ಪುಸ್ತಕ ಓದುಗರ ಸಂಖ್ಯೆ ಹೆಚ್ಚಾಗುವಂತೆ ಮಾಡುವುದೇ ಪುಸ್ತಕ ಓದು ಜಾಗೃತಿಯ ಆಶಯ ಎಂದರು. ಗಾಯಕ ಗೊರೂರು ಶ್ರೀಕಾಂತ್ ಪ್ರಾರ್ಥಿಸಿದರು. ಶಶಿಕಲಾ ಜಗದೀಶ್ ನಿರೂಪಿಸಿದರು. ಸೀಮಾ ಮುರಳೀಧರ್ ಸ್ವಾಗತಿಸಿದರು. ಪುಸ್ತಕ ಪ್ರಾಧಿಕಾರದ ಸದಸ್ಯರು ಡಾ.ಕುಶಾಲ ಬರಗೂರು, ಸತ್ಯವತಿ, ಅಧ್ಯಕ್ಷರು ಮಾನವ ಹಕ್ಕುಗಳ ಒಕ್ಕೂಟ, ಹಾಸನ, ಯದುರಾಜ್, ರಾಜಕುಮಾರ್ ಅಂಕಪುರ, ಡಾ. ಸೀಮಾ ಮುರಳೀಧರ, ಶೋಭಾಗಣೇಶ್ ಉಪಸ್ಥಿತರಿದ್ದರು.

