ಹುಳಿಯಾರು ವಿದ್ಯಾವಾರಿಧಿ ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ
ಹುಳಿಯಾರು: ಹುಳಿಯಾರಿನ ಬಳ್ಳೆಕಟ್ಟೆಯಲ್ಲಿರುವ ವಿದ್ಯಾವಾರಿಧಿ ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಯಿತು. ಶಾಲೆಯ ಕಾರ್ಯದರ್ಶಿ ಕವಿತಾ ಕಿರಣ್ ಮಾತನಾಡಿ, ವೈದ್ಯರನ್ನು ದೇವರಿಗೆ ಸಮಾನರೆಂದು ಕಾಣಲಾಗುತ್ತದೆ. ಅವರ ಬದುಕು, ಸೇವೆ, ತ್ಯಾಗ ಮತ್ತು ಹೋರಾಟಗಳಿಂದ ಕೂಡಿದ್ದು, ಅವರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ವೈದ್ಯರ ದಿನವನ್ನು ದೇಶದ ಹೆಸರಾಂತ ವೈದ್ಯ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಡಾ. ಬಿಧಾನ್ ಚಂದ್ರ ರಾಯ್ (ಬಿ.ಸಿ. ರಾಯ್) ಅವರ ಸ್ಮರಣಾರ್ಥ ಆಚರಿಸಲಾಗುತ್ತದೆ. ವೈದ್ಯಕೀಯ ಕ್ಷೇತ್ರಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಿದ ಅವರು, ಮಹಾತ್ಮ ಗಾಂಧೀಜಿಯವರ ಚಿಕಿತ್ಸೆಯಲ್ಲಿಯೂ ಡಾ.ರಾಯ್ ಅವರ ಸೇವೆ ಮಹತ್ವದ್ದಾಗಿತ್ತು ಎಂದು ವಿವರಿಸಿದರು.
ವಿದ್ಯಾರ್ಥಿಗಳು ಉತ್ತಮ ವೈದ್ಯರಾಗುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಸೇವೆಗೆ ಮುಂದಾಗಬೇಕು ಎಂದು ಕರೆ ನೀಡಿದರು. ಹುಳಿಯಾರಿನ ಸಿದ್ಧಶ್ರೀ ಕ್ಲಿನಿಕ್ನ ಸಂಸ್ಥಾಪಕರಾದ ಡಾ.ಸಿದ್ದರಾಮಯ್ಯ ಅವರು, ವೈದ್ಯರೂ ಮನುಷ್ಯರೇ. ಅವರಿಗೂ ನೋವು-ನಲಿವುಗಳಿರುತ್ತವೆ. ಆದ್ದರಿಂದ ವೈದ್ಯರ ಸೇವೆಯನ್ನು ಗೌರವಿಸಿ, ಅವರಿಗೆ ಸಹಕಾರ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಡಾ.ಉಮಾ ಅವರು ಮಾತನಾಡಿ, ವಿದ್ಯಾರ್ಥಿಗಳು ಕಷ್ಟಸಹಿಷ್ಣುತೆ, ಕರುಣೆ ಮತ್ತು ಪರೋಪಕಾರದ ಮನೋಭಾವವನ್ನು ಬೆಳೆಸಿಕೊಂಡು ಎಲ್ಲರ ನೋವಿಗೆ ಸ್ಪಂದಿಸುವ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ವೈದ್ಯರ ದಿನವು ವೈದ್ಯ ಸಮುದಾಯದ ಸೇವೆಯನ್ನು ಸ್ಮರಿಸಿ ಗೌರವಿಸುವ ವಿಶೇಷ ದಿನವಾಗಿದೆ ಎಂದು ತಿಳಿಸಿದರು.
ಶಾಲೆಯ ಪ್ರಾಂಶುಪಾಲರಾದ ಡಾ.ಸ್ವಾಮಿ ಕೆ.ಎನ್ ಅವರು ಮಾತನಾಡಿ, ಇಂದಿನ ಒತ್ತಡದ ಜೀವನಶೈಲಿಯಲ್ಲಿ ಆರೋಗ್ಯಕರ ಬದುಕು ನಡೆಸಲು ವೈದ್ಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರ ನಿಸ್ವಾರ್ಥ ಸೇವೆಯನ್ನು ಸದಾ ಗೌರವಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾವಾರಿಧಿ ಶಾಲೆಯ ಆಡಳಿತ ಮಂಡಳಿಯ ವತಿಯಿಂದ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ವೈದ್ಯರ ದಿನದ ಮಹತ್ವ ಕುರಿತು ಭಾಷಣ, ನೃತ್ಯ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

