ಬೆಂಗಳೂರು, ಜೂನ್ 29 (ಕರ್ನಾಟಕ ವಾರ್ತೆ) :
ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ 2026ರ ಜುಲೈ 1 ರಂದು ಪತ್ರಿಕಾ ದಿನಾಚರಣೆ-2026 ಅನ್ನು ಹಮ್ಮಿಕೊಳ್ಳಲಾಗಿದೆ.
ಪತ್ರಿಕೋದ್ಯಮಕ್ಕೆ ನಾಂದಿ ಹಾಡಿದ ಬಾಸೆಲ್ ಮಿಷನ್‍ನ ರೆವರೆಂಡ್ ಹರ್ಮನ್ ಮೊಗ್ಲಿಂಗ್ ಅವರು 1843 ರ ಜುಲೈ 1 ರಂದು ಪ್ರಕಟಿಸಿದ “ಮಂಗಳೂರ ಸಮಾಚಾರ” ಪತ್ರಿಕೆಯ ಸವಿನೆನಪಿಗಾಗಿ ಪ್ರತಿ ವರ್ಷ ಜುಲೈ 1 ಅನ್ನು ಕನ್ನಡ ಪತ್ರಿಕಾ ದಿನವನ್ನಾಗಿ ಆಚರಿಸಲಾಗುತ್ತದೆ. 1996 ರಲ್ಲಿ ಅಂದಿನ ಪತ್ರಿಕಾ ಅಕಾಡೆಮಿ ಅಧ್ಯಕ್ಷರಾಗಿದ್ದ ದಿ. ಕೆ. ಶ್ರೀಧರ ಆಚಾರ್ ಅವರು ಈ ಪರಂಪರೆಯನ್ನು ಪ್ರಾರಂಭಿಸಿದ್ದು, ಅಂದಿನಿಂದ ನಾಡಿನಾದ್ಯಂತ ಇದನ್ನು ನಿರಂತರವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಬೆಂಗಳೂರಿನ ಗಾಂಧಿ ಭವನದ ಮಹಾದೇವ ದೇಸಾಯಿ ಸಭಾಂಗಣದಲ್ಲಿ 2026 ನೇ ಜುಲೈ 01 ರಂದು ಬೆಳಗ್ಗೆ 11:00 ಗಂಟೆಗೆ ಈ ಕಾರ್ಯಕ್ರಮದ ಉದ್ಘಾಟನೆ ಹಾಗೂ ಅಕಾಡೆಮಿಯ ವಾರ್ಷಿಕ ವರದಿ ಬಿಡುಗಡೆಯನ್ನು ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ ಅವರು ನೆರವೇರಿಸಲಿದ್ದಾರೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದರಾದ ಪಿ. ಸಿ. ಮೋಹನ್ ಹಾಗೂ ತೆಲಂಗಾಣ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಕೆ. ಶ್ರೀನಿವಾಸ ರೆಡ್ಡಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಗಾಂಧಿ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನೇಶ್ ಗುಂಡೂ ರಾವ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಚಾರ ಸಂಕಿರಣ ಮತ್ತು ಪ್ರಧಾನ ಭಾಷಣ:
ಪತ್ರಿಕಾ ದಿನಾಚರಣೆಯ ಅಂಗವಾಗಿ ಡಿಜಿಟಲ್ ಯುಗದಲ್ಲಿ ನಿಜ ಪತ್ರಕರ್ತರು ಯಾರು? ಎಂಬ ವಿಷಯದ ಕುರಿತು ವಿಶೇಷ ವಿಚಾರ ಸಂಕಿರಣ ಆಯೋಜಿಸಲಾಗಿದೆ. ‘ವಾರ್ತಾ ಭಾರತಿ’ಯ ಹಿರಿಯ ಪತ್ರಕರ್ತರಾದ ಅಬ್ದುಸ್ಸಲಾಂ ಪುತ್ತಿಗೆ ಅವರು ಪ್ರಧಾನ ಭಾಷಣ ಮಾಡಲಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಆಯೇಶಾ ಖಾನಂ ಅವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಎಂ.ಎನ್. ಅನುಚೇತ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷರಾದ ಡಾ. ಆರ್. ಪೂರ್ಣಿಮಾ ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಜಿ. ಸಿ. ಲೋಕೇಶ ಅವರು ಗೌರವ ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸುಸ್ವಾಗತವನ್ನು ಕೋರಲಾಗಿದೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) – 2026
ಬೆಂಗಳೂರು, ಜೂನ್ 29 (ಕರ್ನಾಟಕ ವಾರ್ತೆ) :
ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ, 2026 ನೇ ಅಕ್ಟೋಬರ್ 1ರ ಅರ್ಹತಾ ದಿನಾಂಕದ ಆಧಾರದ ಮೇಲೆ ಕರ್ನಾಟಕ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಷಯ ಸಮಗ್ರ ಪರಿಷ್ಕರಣೆ (SIಖ) ಪ್ರಕ್ರಿಯೆಯನ್ನು ಹಂತ ಹಂತವಾಗಿ ಕೈಗೊಳ್ಳಲಾಗುತ್ತಿದೆ.
2026 ನೇ ಜೂನ್ 16 ರ ಅಂಕಿ-ಅಂಶಗಳ ಪ್ರಕಾರ, ಪ್ರಸ್ತುತ ಕರ್ನಾಟಕದಲ್ಲಿ ಒಟ್ಟು 5,54,32,314 ಮತದಾರರಿದ್ದು, ಇವರೆಲ್ಲರೂ ಈ ಪರಿಷ್ಕರಣೆಯ ವ್ಯಾಪ್ತಿಗೆ ಒಳಪಡಲಿದ್ದಾರೆ.
ಕರ್ನಾಟಕದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆಯ ಮನೆ-ಮನೆಗೆ ಭೇಟಿ ನೀಡುವ ಗಣತಿ ಪ್ರಕ್ರಿಯೆಯು 2026 ರ ಜೂನ್ 30 ರಿಂದ ಪ್ರಾರಂಭವಾಗಿ, 2026 ರ ಜುಲೈ 29 ರವರೆಗೆ ಮುಂದುವರಿಯಲಿದೆ.
2026ನೇ ಜೂನ್ 30ರಿಂದ ಜುಲೈ 29 ರ ವರೆಗೆ ಬಿ.ಎಲ್.ಒ ಗಳಿಂದ ಮನೆ-ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿ ಪಡೆಯಲಿದ್ದಾರೆ.
2026ನೇ ಜುಲೈ 29 ಒಳಗೆ ಮತಗಟ್ಟೆಗಳ ತಾರ್ಕಿಕ ಮರುಹೊಂದಾಣಿಕೆ, 2026ನೇ ಆಗಸ್ಟ್ 05 ರಂದು ಕರಡು ಮತದಾರರ ಪಟ್ಟಿಯ ಪ್ರಕಟಣೆ ಮಾಡಲಾಗುವುದು. 2026ನೇ ಆಗಸ್ಟ್ 05 ರಿಂದ ಸೆಪ್ಟೆಂಬರ್ 04 ವರೆಗೆ ಮತದಾರರಿಗೆ ತಮ್ಮ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, 2026 ನೇ ಅಕ್ಟೋಬರ್ 07 ರಂದು ಅಂತಿಮ ಮತದಾರರ ಪಟ್ಟಿಯ ಪ್ರಕಟಣೆ ಮಾಡಲಾಗುವುದು.
ಪೂರ್ವ ಸಿದ್ಧತೆ ಹಾಗೂ ಸಿಬ್ಬಂದಿ ನಿಯೋಜನೆ:
ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಲು ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ಎಲ್ಲಾ ಪೂರ್ವ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.
ರಾಜ್ಯದಾದ್ಯಂತ ಒಟ್ಟು 59,050 ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್‍ಒ) ಮತ್ತು 7,556 ಬಿ.ಎಲ್.ಒ ಮೇಲ್ವಿಚಾರಕರಿಗೆ ತರಬೇತಿ ನೀಡಿ ನಿಯೋಜಿಸಲಾಗಿದೆ.
ರಾಜಕೀಯ ಪಕ್ಷಗಳಿಂದ 1,15,112 ಬೂತ್ ಮಟ್ಟದ ಏಜೆಂಟರನ್ನು (ಬಿಎಲ್‍ಎ) ನೇಮಿಸಲಾಗಿದ್ದು, ಅವರಿಗೆ ಜಿಲ್ಲಾ ಚುನಾವಣಾಧಿಕಾರಿಗಳು ತರಬೇತಿ ನೀಡಿದ್ದಾರೆ.
ಗಣತಿ ನಮೂನೆಗಳನ್ನು (Enumeration Forms) ಈಗಾಗಲೇ ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳ ಮೂಲಕ ಕ್ಷೇತ್ರ ಮಟ್ಟದ ಅಧಿಕಾರಿಗಳಿಗೆ ವಿತರಿಸಲಾಗಿದೆ.
ಗಣತಿ ಪ್ರಕ್ರಿಯೆ ಮತ್ತು ಸ್ಟಿಕ್ಕರ್‍ಗಳ ಬಳಕೆ:
ಮನೆ-ಮನೆ ಭೇಟಿಯ ಸಮಯದಲ್ಲಿ ಬಿ.ಎಲ್.ಒ ಗಳು ಪ್ರತಿಯೊಂದು ಮನೆಗೂ ಖುದ್ದಾಗಿ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಲಿದ್ದಾರೆ. ಈ ಸಂದರ್ಭದಲ್ಲಿ ಎರಡು ಬಣ್ಣದ ಸ್ಟಿಕ್ಕರ್‍ಗಳನ್ನು ಬಳಸಲಾಗುತ್ತದೆ. 1. ನೇರಳೆ ಬಣ್ಣದ ಚೌಕಾಕಾರದ ಸ್ಟಿಕ್ಕರ್ ಗಣತಿ ನಮೂನೆಯನ್ನು ಮನೆಗೆ ವಿತರಿಸಿರುವುದನ್ನು ಸೂಚಿಸುತ್ತದೆ. 2 ಕೆಂಪು ಬಣ್ಣದ ವೃತ್ತಾಕಾರದ ಸ್ಟಿಕ್ಕರ್: ಬಿ.ಎಲ್.ಒ ಭೇಟಿಯ ಸಮಯದಲ್ಲಿ ಮನೆಗೆ ಬೀಗ ಹಾಕಿರುವುದನ್ನು ಸೂಚಿಸುತ್ತದೆ.
ಪ್ರತಿಯೊಬ್ಬ ಮತದಾರರಿಗೂ ಅವಕಾಶ ಸಿಗುವುದನ್ನು ಖಚಿತಪಡಿಸಿಕೊಳ್ಳಲು ಬಿ.ಎಲ್.ಒ ಗಳು ಅಗತ್ಯವಿದ್ದಲ್ಲಿ ಕನಿಷ್ಠ ಮೂರು ಬಾರಿ ಮನೆಗಳಿಗೆ ಭೇಟಿ ನೀಡುತ್ತಾರೆ. ಭರ್ತಿ ಮಾಡಿದ ಗಣತಿ ನಮೂನೆಯನ್ನು ಸಲ್ಲಿಸದಿದ್ದಲ್ಲಿ, ಮತದಾರರ ಹೆಸರನ್ನು ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುವುದಿಲ್ಲ. ಗಣತಿಯ ಹಂತದಲ್ಲಿ ಯಾವುದೇ ದಾಖಲೆಗಳನ್ನು ಸಂಗ್ರಹಿಸಲಾಗುವುದಿಲ್ಲ.
ಹೊಸ ಮತದಾರರ ನೋಂದಣಿ:
ಇತ್ತೀಚೆಗೆ ಮತದಾರರಾಗಿ ನೋಂದಾಯಿಸಿಕೊಳ್ಳಲು ಅರ್ಹತೆ ಪಡೆದ ನಾಗರಿಕರು ಆಯೋಗದ ಸೂಚನೆಗಳ ಪ್ರಕಾರ, ನಿಗದಿತ ಘೋಷಣಾ ನಮೂನೆಯೊಂದಿಗೆ ನಮೂನೆ 6 (ಫಾರಂ 6) ನ್ನು ಸಲ್ಲಿಸುವ ಮೂಲಕ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಅರ್ಜಿ ಸಲ್ಲಿಸಬಹುದು. ಈ ಪ್ರಕ್ರಿಯೆಯು https://voters.eci.gov.in/ ಮತ್ತು ಮೊಬೈಲ್ ಅಪ್ಲಿಕೇಶನ್‍ನಲ್ಲಿ 30.06.2026 ರಿಂದ ಲಭ್ಯವಿರುತ್ತದೆ.
ಸಾರ್ವಜನಿಕರಿಗೆ ಪ್ರಮುಖ ಲಿಂಕ್‍ಗಳು:
ತರಬೇತಿ ಸಾಮಗ್ರಿಗಳು, ವೀಡಿಯೊಗಳು ಮತ್ತು ಮಾರ್ಗಸೂಚಿಗಳ ಭಂಡಾರ (Repository): Google Drive Link : https://drive.google.com/
?q=owner:consveep%40gmail.com%
ಮತದಾರರ ಸೌಲಭ್ಯ ಕೇಂದ್ರಗಳು ಮತ್ತು ಅಧಿಕಾರಿಗಳ ಸಂಪರ್ಕ ವಿವರಗಳು: CEO Karnataka VFC Details ನ್ನು https://ceo.karnataka.gov.in/
ನಿಖರವಾದ ಮತ್ತು ದೋಷರಹಿತ ಮತದಾರರ ಪಟ್ಟಿಯನ್ನು ತಯಾರಿಸಲು ಪ್ರತಿಯೊಬ್ಬ ನಾಗರಿಕರು, ರಾಜಕೀಯ ಪಕ್ಷಗಳು ಮತ್ತು ಮಾಧ್ಯಮದವರು ಸಕ್ರಿಯವಾಗಿ ಭಾಗವಹಿಸಿ, ಬೂತ್ ಮಟ್ಟದ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಬೇಕಾಗಿ ಮುಖ್ಯ ಚುನಾವಣಾಧಿಕಾರಿಗಳು ವಿನಂತಿಸಿದ್ದಾರೆ.
ಜೂನ್ 30ರಿಂದ ಪ್ರತಿದಿನವೂ ಈ ಪ್ರಕ್ರಿಯೆಯ ಪ್ರಗತಿಯ ಕುರಿತು ಪತ್ರಿಕಾ ಪ್ರಕಟಣೆಗಳನ್ನು ಹೊರಡಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿಗಳ ಕಛೇರಿ, ಕರ್ನಾಟಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆನೇಕಲ್: ರೂ.9.74 ಲಕ್ಷ ದಂಡ ಪಾವತಿಸದ ರಿಯಲ್ ಎಸ್ಟೇಟ್ ಸಂಸ್ಥೆಯ ಜಮೀನು ಬಹಿರಂಗ ಹರಾಜು
ಬೆಂಗಳೂರು, ಜೂನ್ 29 (ಕರ್ನಾಟಕ ವಾರ್ತೆ) :
ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ (RERA) ಅಡಿಯಲ್ಲಿ ವಿಧಿಸಲಾಗಿದ್ದ ದಂಡದ ಮೊತ್ತವನ್ನು ಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ, ರಿಯಲ್ ಎಸ್ಟೇಟ್ ಸಂಸ್ಥೆಯೊಂದಕ್ಕೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನನ್ನು ಬಹಿರಂಗವಾಗಿ ಹರಾಜು ಮಾಡಲು ಆನೇಕಲ್ ತಾಲೂಕಿನ ತಹಶೀಲ್ದಾರ್ ಕಾರ್ಯಾಲಯ ಆದೇಶ ಹೊರಡಿಸಿದೆ.
ಬೆಂಗಳೂರಿನ ಆರ್.ಟಿ. ನಗರದ ಹೆಚ್.ಎಂ.ಟಿ ಲೇಔಟ್‍ನಲ್ಲಿರುವ ಮೆ: ಸಂಚಯ ಲ್ಯಾಂಡ್ & ಎಸ್ಟೇಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ 2016ರ ಕಾಲಂ 40(1)ರ ಅಡಿಯಲ್ಲಿ ವಿಧಿಸಲಾಗಿದ್ದ ಒಟ್ಟು ರೂ. 9,74,435/- (ಒಂಬತ್ತು ಲಕ್ಷದ ಎಪ್ಪತ್ತನಾಲ್ಕು ಸಾವಿರದ ನಾಲ್ಕುನೂರ ಮೂವತ್ತೈದು ರೂಪಾಯಿಗಳು) ದಂಡ ಮತ್ತು ಪರಿಹಾರದ ಮೊತ್ತವನ್ನು ಪಾವತಿಸುವಲ್ಲಿ ವಿಫಲವಾಗಿದೆ.
ಸಂಸ್ಥೆಯ ಒಡೆತನ ಮತ್ತು ಸ್ವಾಧೀನಕ್ಕೆ ಒಳಪಟ್ಟಿರುವ ಬೆಂಗಳೂರು ನಗರ ಜಿಲ್ಲೆಯ, ಆನೇಕಲ್ ತಾಲೂಕಿನ, ಕಸಬಾ ಹೋಬಳಿಯ ಬೆಸ್ತಮಾನಹಳ್ಳಿ ಗ್ರಾಮಾಂತರ ಪ್ರದೇಶದಲ್ಲಿರುವ ಸರ್ವೆ ನಂ. 132/3 ರಲ್ಲಿ 0-04 ಗುಂಟೆ, ಸರ್ವೆ ನಂ. 132/4 ರಲ್ಲಿ 0-05 ಗುಂಟೆ ಮತ್ತು ಸರ್ವೆ ನಂ. 129/3 ರಲ್ಲಿ 0-08 ಗುಂಟೆ, ಒಟ್ಟು ಜಮೀನು 0-17 ಗುಂಟೆ ಜಮೀನನ್ನು 2026 ರ ಜುಲೈ 02 ರಂದು ಬೆಳಿಗ್ಗೆ 11.00 ಗಂಟೆಗೆ ಜಮೀನು ಇರುವ ಸ್ವತ್ತಿನ ಸ್ಥಳದಲ್ಲೇ ಬಹಿರಂಗ ಹರಾಜು ಪ್ರಕ್ರಿಯೆ ಮಾಡಲಾಗುತ್ತಿದೆ
ಈ ಬಹಿರಂಗ ಹರಾಜಿನಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತ ಸಾರ್ವಜನಿಕರು ಹೆಚ್ಚಿನ ವಿವರಗಳಿಗಾಗಿ ಕಸಬಾ-2 ರ ವ್ಯಾಪ್ತಿಯ ಸಂಬಂಧಪಟ್ಟ ರಾಜಸ್ವ ನಿರೀಕ್ಷಕರನ್ನು ಅಥವಾ ಆನೇಕಲ್ ತಾಲೂಕು ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ವಿಶೇಷ ತಹಶೀಲ್ದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನ IIPMB ಯಲ್ಲಿ ‘ಅಗ್ರಿ-ಟೆಕ್ ಮತ್ತು ಪ್ಲಾಂಟೇಶನ್ 5.0’ ಅಂತರರಾಷ್ಟ್ರೀಯ ಸಮ್ಮೇಳನ ಆಯೋಜನೆ
ಬೆಂಗಳೂರು, ಜೂನ್ 29, (ಕರ್ನಾಟಕ ವಾರ್ತೆ) :
ಬೆಂಗಳೂರಿನ ಭಾರತೀಯ ಬಾಗಾಯ್ತು ನಿರ್ವಹಣಾ ಸಂಸ್ಥೆಯು (IIPMB), ICAR-ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ (CPCRI), ICAR-ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR), ಮತ್ತು ICAR-ಭಾರತೀಯ ಸಾಂಬಾರ ಪದಾರ್ಥಗಳ ಸಂಶೋಧನಾ ಸಂಸ್ಥೆ (IISR) ಗಳ ಸಹಯೋಗದೊಂದಿಗೆ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸುತ್ತಿದೆ.
“ಅಗ್ರಿ-ಟೆಕ್ ಮತ್ತು ಪ್ಲಾಂಟೇಶನ್ 5.0: ಕೃಷಿ ವ್ಯವಹಾರದ ಭವಿಷ್ಯವನ್ನು ರೂಪಿಸುವ ಆವಿμÁ್ಕರಗಳು, ಸುಸ್ಥಿರತೆ ಮತ್ತು ಮೌಲ್ಯ ಸರಪಳಿ ಆಧಾರಿತ ವ್ಯಾಪಾರ ಕಾರ್ಯತಂತ್ರಗಳು” ಎಂಬ ವಿಷಯದ ಮೇಲಿನ ಈ ಸಮ್ಮೇಳನವು ಜುಲೈ 3-4, 2026 ರಂದು ಬೆಂಗಳೂರಿನ IIPMB ಆವರಣದಲ್ಲಿ ನಡೆಯಲಿದೆ.
ಸಮ್ಮೇಳನದ ಪ್ರಮುಖ ಮುಖ್ಯಾಂಶಗಳು:
ಸಂಶೋಧನಾ ಪ್ರಬಂಧಗಳ ಮಂಡನೆ: ದೇಶದಾದ್ಯಂತದ ವಿದ್ವಾಂಸರು, ಸಂಶೋಧಕರು, ಶಿಕ್ಷಣ ತಜ್ಞರು ಮತ್ತು ಉದ್ಯಮದ ವೃತ್ತಿಪರರು ಸುಮಾರು 100 ಸಂಶೋಧನಾ ಪ್ರಬಂಧಗಳನ್ನು ಈ ಸಮ್ಮೇಳನದಲ್ಲಿ ಮಂಡಿಸಲಿದ್ದಾರೆ.
ಜಾಗತಿಕ ಭಾಗಿತ್ವ: ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಅಮೆರಿಕಾ (USA), ಶ್ರೀಲಂಕಾ ಮತ್ತು ನೆದಲ್ಯಾರ್ಂಡ್ಸ್ ದೇಶಗಳ ಅಂತರರಾಷ್ಟ್ರೀಯ ತಜ್ಞರು ಹಾಗೂ ಭಾರತದ ಸರ್ಕಾರಿ, ಉದ್ಯಮ ಮತ್ತು ಶೈಕ್ಷಣಿಕ ವಲಯದ ಪ್ರಮುಖರು ಭಾಗವಹಿಸಲಿದ್ದಾರೆ.
ಮುಖ್ಯ ಉದ್ದೇಶ: ಕೃಷಿ ಮತ್ತು ತೋಟಗಾರಿಕಾ ವಲಯದಲ್ಲಿ ಉದಯೋನ್ಮುಖ ತಂತ್ರಜ್ಞಾನಗಳು, ಸುಸ್ಥಿರತೆಯ ಸವಾಲುಗಳು, ಡಿಜಿಟಲ್ ರೂಪಾಂತರ ಮತ್ತು ನವೀನ ಉದ್ಯಮ ಮಾದರಿಗಳ ಬಗ್ಗೆ ಚರ್ಚಿಸಲು ಸಂಶೋಧಕರು, ನೀತಿ ನಿರೂಪಕರು, ಉದ್ಯಮಿಗಳು ಮತ್ತು ವಿದ್ಯಾರ್ಥಿಗಳಿಗೆ ಜಾಗತಿಕ ವೇದಿಕೆಯನ್ನು ಕಲ್ಪಿಸುವುದು ಇದರ ಉದ್ದೇಶವಾಗಿದೆ.
ಕಾರ್ಯಕ್ರಮದಲ್ಲಿ ತಾಂತ್ರಿಕ ಅವಧಿಗಳು, ಪ್ಯಾನೆಲ್ ಚರ್ಚೆಗಳು, ಪೋಸ್ಟರ್ ಪ್ರಸ್ತುತಿಗಳು ಮತ್ತು ‘ಅಗ್ರಿಬಿಸಿನೆಸ್ ಕೊಲಾಬರೇಷನ್ ಫೋರಮ್’ ಮೂಲಕ ಪಾಲುದಾರರ ನಡುವೆ ಜ್ಞಾನ ವಿನಿಮಯ ಮತ್ತು ಸಹಭಾಗಿತ್ವವನ್ನು ವೃದ್ಧಿಸಲಾಗುತ್ತದೆ.
ಭಾರತ ಸರ್ಕಾರದ ಎಂಎಸ್‍ಎಂಇ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಐಟಿಸಿ ಲಿಮಿಟೆಡ್ ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಸೋಮನಾಥ್ ಚಟರ್ಜಿ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ, ಸಿ. ಮುರುಗನ್, IAS (ಡೆಪ್ಯುಟಿ ಚೇರ್‍ಪರ್ಸನ್, ಟೀ ಬೋರ್ಡ್ ಆಫ್ ಇಂಡಿಯಾ) ಎಂ. ಎಸ್. ಮಣಿವಣ್ಣನ್, IAS (ಕಾರ್ಯದರ್ಶಿ, ಸ್ಪೈಸಸ್ ಬೋರ್ಡ್), ಕೂರ್ಮಾ ರಾವ್ ಎಂ., IAS (ಸಿಇಒ ಮತ್ತು ಕಾರ್ಯದರ್ಶಿ, ಕಾಫಿ ಬೋರ್ಡ್ ಆಫ್ ಇಂಡಿಯಾ), ಶ್ರೀಮತಿ ಎನ್. ಭವಾನಿ ಶ್ರೀ, IAS (ರಾಷ್ಟ್ರೀಯ ಅರಿಶಿನ ಮಂಡಳಿ), ಡಾ. ಕೆ. ಬಾಲಚಂದ್ರ ಹೆಬ್ಬಾರ್ (ನಿರ್ದೇಶಕರು, ICAR-CPCRI), ಡಾ. ತುಸಾರ್ ಕಾಂತಿ ಬೆಹೆರಾ (ನಿರ್ದೇಶಕರು, ICAR-IIHR) ಅವರು ಉಪಸ್ಥಿತರಿರುವರು.
ಈ ಸಮ್ಮೇಳನವು ಕೃಷಿ ಮತ್ತು ತೋಟಗಾರಿಕೆ ಉದ್ಯಮದಲ್ಲಿ ನಾವೀನ್ಯತೆ, ಸುಸ್ಥಿರತೆ ಮತ್ತು ಸ್ಪರ್ಧಾತ್ಮಕತೆಯನ್ನು ಉತ್ತೇಜಿಸಲು ಅಗತ್ಯವಿರುವ ಕಾರ್ಯಸಾಧ್ಯವಾದ ಒಳನೋಟಗಳು ಮತ್ತು ನೀತಿ ಶಿಫಾರಸುಗಳನ್ನು ರೂಪಿಸುವ ನಿರೀಕ್ಷೆಯಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ
ಬೆಂಗಳೂರು, ಜೂನ್ 29, (ಕರ್ನಾಟಕ ವಾರ್ತೆ):
ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ 2026 ನೇ ಜುಲೈ 16 ರಿಂದ 18 ರ ವರೆಗೆ ಬೆಂಗಳೂರು, ವಿದ್ಯಾರಣ್ಯಪುರದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ, ಪ್ರೊ ಯು. ಆರ್. ರಾವ್ ವಿಜ್ಞಾನ ಭವನದ ಅಕಾಡೆಮಿಯ ಕಛೇರಿಯಲ್ಲಿ “Exploring Nature’s Pharmacy: Potentials of Medicinal and Aromatic Plants for Health, Livelihoods, Bio-economy and Conservation” ವಿಷಯದ ಕುರಿತು ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಸ್ನಾತಕೋತ್ತರ ವಿಜ್ಞಾನ ಆಯುರ್ವೇದ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಯುವ ವಿಜ್ಞಾನಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಬಹುದಾಗಿದೆ.
ಯುವ ವಿಜ್ಞಾನಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ತಮ್ಮ ಸಂಶೋಧನಾ ಪ್ರಬಂಧವನ್ನು (Research Paper) ಮಂಡಿಸಲು ಅವಕಾಶವಿದ್ದು, ಆಯ್ಕೆಯಾಗುವ ಅತ್ಯುತ್ತಮ ಪ್ರಬಂಧಕ್ಕೆ ನಗದು ಬಹುಮಾನ ನೀಡಲಾಗುವುದು.
ಆಸಕ್ತರು 10 ಜುಲೈ 2026 ರ ಒಳಗಾಗಿ Google Form Link: https://forms.gle/
ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ಅಧಿಕೃತ ವೆಬ್‍ಸೈಟ್: https://kstacademy.in ಅಥವಾ ದೂರವಾಣಿ ಸಂಖ್ಯೆ: 9620767819 / 9743084194 ಹಾಗೂ 080-29721550 ಹಾಗೂ ಇಮೇಲ್: ksta.gok@gmail.com ಮೂಲಕ ಪಡೆಯಬಹುದು ಎಂದು ಅಕಾಡೆಮಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
