ಬೆಂಗಳೂರು, ಕಾಂಗ್ರೆಸ್ ಭವನದಲ್ಲಿ ಶ್ರೀಮತಿ ಸೋನಿಯಾ ಗಾಂಧಿ ರವರ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ, ಕುಮಾರಸ್ವಾಮಿ ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್. ಮನೋಹರ್ ಅವರು, “ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ರಾಜಕೀಯವಾಗಿಯೇ ಟೀಕಿಸಬೇಕು. ಆದರೆ ಒಬ್ಬ ಗೌರವಾನ್ವಿತ ಮಹಿಳೆಯ ವೈಯಕ್ತಿಕ ಹಿನ್ನೆಲೆ, ಕುಟುಂಬ ಮತ್ತು ಮೂಲವನ್ನು ಪ್ರಶ್ನಿಸುವ ರೀತಿಯಲ್ಲಿ ಮಾತನಾಡುವುದು ಅತ್ಯಂತ ಕೀಳುಮಟ್ಟದ ರಾಜಕೀಯ. ಇಂತಹ ಹೇಳಿಕೆಗಳನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ” ಎಂದು ಹೇಳಿದರು.
“ಶ್ರೀಮತಿ ಸೋನಿಯಾ ಗಾಂಧಿ ರವರು ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಪತ್ನಿಯಾಗಿ ಮಾತ್ರವಲ್ಲದೆ, ದಶಕಗಳ ಕಾಲ ದೇಶದ ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸಿರುವ ಹಿರಿಯ ನಾಯಕಿ. ಅವರ ವಿರುದ್ಧ ವೈಯಕ್ತಿಕ ದಾಳಿ ನಡೆಸುವ ಮೂಲಕ ಕುಮಾರಸ್ವಾಮಿ ಅವರು ತಮ್ಮ ರಾಜಕೀಯ ಮಟ್ಟವನ್ನು ತಾವೇ ತೋರಿಸಿಕೊಂಡಿದ್ದಾರೆ” ಎಂದು ಅವರು ಹೇಳಿದರು.
ಕುಮಾರಸ್ವಾಮಿ ಅವರ ಹಿಂದಿನ ರಾಜಕೀಯ ಹೇಳಿಕೆಗಳು ಹಾಗೂ ಇಂದಿನ ರಾಜಕೀಯ ನಿಲುವುಗಳನ್ನು ಉಲ್ಲೇಖಿಸಿದ ಎಸ್. ಮನೋಹರ್ ಅವರು, “ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಈ ಹಿಂದೆ ತೀವ್ರವಾಗಿ ಟೀಕಿಸಿದ್ದ ಕುಮಾರಸ್ವಾಮಿ ಅವರು ಇಂದು ಅದೇ ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ. ತಮ್ಮ ರಾಜಕೀಯ ನಿಲುವುಗಳ ಬದಲಾವಣೆಗೆ ಮೊದಲು ಜನರಿಗೆ ಸ್ಪಷ್ಟನೆ ನೀಡಲಿ. ನಂತರ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡಲಿ” ಎಂದು ತಿರುಗೇಟು ನೀಡಿದರು.
ಪ್ರತಿಭಟನಾಕಾರರು “ಸೋನಿಯಾ ಗಾಂಧಿ ರವರ ವಿರುದ್ಧದ ಅವಹೇಳನಕಾರಿ ಹೇಳಿಕೆಯನ್ನು ಹಿಂಪಡೆಯಿರಿ”, “ಕುಮಾರಸ್ವಾಮಿ ಕ್ಷಮೆಯಾಚಿಸಬೇಕು”, “ಮಹಿಳೆಯರ ಗೌರವವನ್ನು ಕಾಪಾಡಿ” ಎಂಬ ಘೋಷಣೆಗಳನ್ನು ಕೂಗಿದರು.
“ಕುಮಾರಸ್ವಾಮಿ ಅವರು ತಮ್ಮ ಹೇಳಿಕೆಯನ್ನು ಕೂಡಲೇ ಹಿಂಪಡೆದು, ಶ್ರೀಮತಿ ಸೋನಿಯಾ ಗಾಂಧಿ ರವರಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರ ಇಂತಹ ಕೀಳುಮಟ್ಟದ ರಾಜಕೀಯದ ವಿರುದ್ಧ ಕಾಂಗ್ರೆಸ್ ಪಕ್ಷದ ಹೋರಾಟ ಮುಂದುವರಿಯಲಿದೆ” ಎಂದು ಎಸ್. ಮನೋಹರ್ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಎ.ಆನಂದ್, ಪ್ರಕಾಶ್, ಆದಿತ್ಯ,ರಾಮಕೃಷ್ಣ,ಹೇಮರಾಜ್,ಮುರಳಿ,ಪುಟ್ಟರಾಜು, ಲಕ್ಷ್ಮಿ ನಾರಾಯಣ್, ಉಮೇಶ್,ರಂಜಿತ್, ಪ್ರವೀಣ್ ರಾವ್, ಕಿಶೋರ್,ಓಬಳೇಸ್, ನವೀನ್ ಸಾಯಿ,ಪವನ್, ಹಾಗೂ ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿ ಪ್ರತಿಭಟನೆ ನಡೆಸಿದರು.
ಮೇಲಿನ ಪ್ರತಿಭಟನೆ ವರದಿಯನ್ನು ತಮ್ಮ ಘನ ಮಾಧ್ಯಮಗಳಲ್ಲಿ ಪ್ರಕಟಿಸಬೇಕೆಂದು ವಿನಂತಿ. ಇಂತಿ.ಕುಶಾಲ್ ಹರವೇಗೌಡ ಉಪಾಧ್ಯಕ್ಷ ಬೆಂಗಳೂರು ಪಶ್ಚಿಮ ಕಾಂಗ್ರೆಸ್ ಸಮಿತಿ

