ಕರ್ನಾಟಕ ಮಹರ್ಷಿ ವಾಲ್ಮೀಕಿ (Maharshi) Valmiki) ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ (Money Transfer) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ (B.Nagendra) ಅವರ ವಿರುದ್ಧ ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪಗಳು ಆಧಾರರಹಿತವಾಗಿದ್ದು, ಪ್ರಕರಣದಲ್ಲಿ ಅವರ ಪಾತ್ರವಿಲ್ಲದಿರುವುದು ರಾಜ್ಯ ಸಿಐಡಿ (ಎಸ್ಐಟಿ) (SIT) ತನಿಖೆಯಿಂದ ಹಾಗೂ ನ್ಯಾಯಾಲಯದ ಆದೇಶಗಳಿಂದ ಸ್ಪಷ್ಟವಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ (Dr. G.Parameshwar) ಅವರು ವಿಧಾನಪರಿಷತ್ತಿನಲ್ಲಿ ಸರ್ಕಾರದ ಪರವಾಗಿ ಸ್ಪಷ್ಟನೆ ನೀಡಿದರು.
ಜನರ ತೆರಿಗೆ ಹಣದಲ್ಲಿ ನಡೆಯುತ್ತಿರುವ ಶಾಸನಸಭಾ ಅಧಿವೇಶನವನ್ನು ಸುಗಮವಾಗಿ ನಡೆಯಲು ಬಿಡದೆ ವಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಕಲಾಪಕ್ಕೆ ಅಡ್ಡಿಪಡಿಸುತ್ತಿರುವುದು ಸಂವಿಧಾನ ಮತ್ತು ಪ್ರಜಾತಂತ್ರ ವ್ಯವಸ್ಥೆಗೆ ಎಸಗುತ್ತಿರುವ ಅಪಚಾರವಾಗಿದೆ. ವಿರೋಧ ಪಕ್ಷಗಳು ಪ್ರತಿಭಟನೆ ಕೈಬಿಟ್ಟು ಸಾಂವಿಧಾನಿಕ ಚರ್ಚೆಯಲ್ಲಿ ಪಾಲ್ಗೊಳ್ಳಬೇಕೆಂದು ಸರ್ಕಾರ ವಿನಂತಿಸುತ್ತಿದೆ ಎಂದು ಹೇಳಿದರು.
ಪ್ರಕರಣದ ಹಿನ್ನೆಲೆ ಮತ್ತು ಅಕ್ರಮ ವರ್ಗಾವಣೆ ವಿವರ:
ದಿನಾಂಕ 19.02.2024 ರಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಎಂ.ಜಿ. ರಸ್ತೆಯ ಯೂನಿಯನ್ ಬ್ಯಾಂಕ್ ಶಾಖೆಯಲ್ಲಿ ಹೊಸ ಖಾತೆ ತೆರೆದು, ದಿನಾಂಕ 04.03.2024 ರಂದು ವಿವಿಧ ಖಾತೆಗಳಲ್ಲಿದ್ದ ಒಟ್ಟು ರೂ. 187.33 ಕೋಟಿ ಹಣವನ್ನು ವರ್ಗಾಯಿಸಿದ್ದರು. ಈ ವರ್ಗಾವಣೆಗೆ ಎಂ.ಡಿ.ಗೆ ಅಧಿಕಾರವಿದ್ದು, ಸಚಿವರ ಅಥವಾ ಸರ್ಕಾರದ ಅನುಮತಿಯ ಅಗತ್ಯವಿರುವುದಿಲ್ಲ.
ಬ್ಯಾಂಕ್ ಸಿಬ್ಬಂದಿ ಹಾಗೂ ನಿಗಮದ ಅಧಿಕಾರಿಗಳು ದುಷ್ಟಕೂಟ ರಚಿಸಿಕೊಂಡು ನಕಲಿ ದಾಖಲೆಗಳ ಮೂಲಕ ರೂ. 89.63 ಕೋಟಿ ಹಣವನ್ನು 18 ಅನಾಮಧೇಯ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ದಿನಾಂಕ 25.05.2024 ರಂದು ನಿಗಮದ ಅಧೀಕ್ಷಕ ಪಿ. ಚಂದ್ರಶೇಖರ್ ಅವರ ಆತ್ಮಹತ್ಯೆಯ ನಂತರ ಪ್ರಕರಣ ಬೆಳಕಿಗೆ ಬಂದಿದ್ದು, ಎಫ್ಐಆರ್ ದಾಖಲಿಸಿ ಸರ್ಕಾರವು 31.05.2024 ರಂದು ಸಿಐಡಿ ಮೂಲಕ ವಿಶೇಷ ತನಿಖಾ ತಂಡವನ್ನು (SIT) ರಚಿಸಿತು.
ರಾಜ್ಯ ಎಸ್ಐಟಿ ತನಿಖೆಯ ಯಶಸ್ಸು ಹಾಗೂ ಅಕ್ರಮ ಹಣ ಮರುಪಡೆಯುವಿಕೆ:
ಆರೋಪಿಗಳ ಬಂಧನ: ಎಸ್ಐಟಿ ತನಿಖೆ ನಡೆಸಿ ಮುಖ್ಯ ಸಂಚು ಕೋರರಾದ ಎ1-ಸತ್ಯನಾರಾಯಣ ವರ್ಮಾ, ಎ2-ಶ್ರೀನಿವಾಸ್ ರಾವ್ ಕಾಕಿ, ಎ3-ಸತ್ಯನಾರಾಯಣ ಇಟಕಾರಿ, ಮಾಜಿ ಎಂ.ಡಿ. ಜೆ.ಜಿ. ಪದ್ಮನಾಭ ಹಾಗೂ ಅಕೌಂಟೆಂಟ್ ಪರಶುರಾಮ ಸೇರಿದಂತೆ ಒಟ್ಟು 14 ಆರೋಪಿಗಳನ್ನು ಬಂಧಿಸಿದೆ.
ಆಸ್ತಿ ಮತ್ತು ಹಣ ಜಪ್ತಿ: ಆರೋಪಿಗಳಿಂದ ರೂ. 16.83 ಕೋಟಿ ನಗದು, 16.25 ಕೆಜಿ ಚಿನ್ನದ ಒಡವೆಗಳು ಹಾಗೂ ಲ್ಯಾಂಬೋರ್ಗಿನಿ, ಬೆಂಜ್, ಕ್ರೇಟಾ, ಇನ್ನೋವಾ ಹೈಕ್ರಾಸ್ ಐಷಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಒಟ್ಟು ಮರುಪಡೆಯುವಿಕೆ: ಇದುವರೆಗೆ ಒಟ್ಟು ರೂ. 79,68,09,151 ಮೌಲ್ಯದ ಹಣ ಮತ್ತು ಚಿನ್ನವನ್ನು ವಸೂಲಿ ಮಾಡಲಾಗಿದ್ದು, ಉಳಿದ ಬಾಕಿ ಮೊತ್ತದ ವಶಕ್ಕೆ ತನಿಖೆ ಪ್ರಗತಿಯಲ್ಲಿದೆ.
ಕೇಂದ್ರ ತನಿಖಾ ಸಂಸ್ಥೆಗಳಿಗಿಂತ ಸಿಐಡಿ ಶ್ರೇಷ್ಠತೆ: ಪ್ರಮುಖ ಆರೋಪಿ ಸತ್ಯನಾರಾಯಣ ವರ್ಮಾನಿಗೆ ಇದುವರೆಗೆ ಯಾವುದೇ ನ್ಯಾಯಾಲಯ ಜಾಮೀನು ನೀಡಿಲ್ಲ. ಎಸ್ಐಟಿ ನೀಡಿದ ಬಲವಾದ ಸಾಕ್ಷ್ಯಾಧಾರಗಳಿಂದಾಗಿ ಆತ ನ್ಯಾಯಾಂಗ ಬಂಧನದಲ್ಲೇ ಇದ್ದು, ರಾಜ್ಯದ ತನಿಖಾ ಸಂಸ್ಥೆಯ ತನಿಖಾ ಗುಣಮಟ್ಟ ಕೇಂದ್ರ ಸಂಸ್ಥೆಗಳಿಗಿಂತ ಅತ್ಯುತ್ತಮವಾಗಿದೆ ಎಂಬುದು ಸಾಬೀತಾಗಿದೆ.
ಮಾಜಿ ಸಚಿವ ಬಿ. ನಾಗೇಂದ್ರ ವಿಚಾರದಲ್ಲಿ ಕಾನೂನಾತ್ಮಕ ವಾಸ್ತವಾಂಶಗಳು:
ಪ್ರಕರಣದ ಹಿನ್ನೆಲೆಯಲ್ಲಿ ಬಿ. ನಾಗೇಂದ್ರ ಅವರು ದಿನಾಂಕ 06.06.2024 ರಂದು ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ರಾಜ್ಯ ಎಸ್ಐಟಿ ದಿನಾಂಕ 05.08.2024 ರಂದು ಸಲ್ಲಿಸಿದ ಪ್ರಾಥಮಿಕ ದೋಷಾರೋಪಣಾ ಪಟ್ಟಿಯಲ್ಲಾಗಲಿ ಅಥವಾ ದಿನಾಂಕ 10.11.2025 ರಂದು ಸಲ್ಲಿಸಿದ ಹೆಚ್ಚುವರಿ ದೋಷಾರೋಪಣಾ ಪಟ್ಟಿಯಲ್ಲಾಗಲಿ ಬಿ. ನಾಗೇಂದ್ರ ಅವರ ಹೆಸರನ್ನು ಆರೋಪಿಯನ್ನಾಗಿ ಸೇರಿಸಿಲ್ಲ.
ಇ.ಡಿ ಮತ್ತು ಸಿಬಿಐ ಸಲ್ಲಿಸಿದ ಚಾರ್ಜ್ಶೀಟ್ಗಳಲ್ಲಿ ಅವರ ಹೆಸರು ಉಲ್ಲೇಖವಾಗಿದ್ದರೂ, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅವರಿಗೆ ಜಾಮೀನು ಹಾಗೂ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ಮುಂದಿನ ಕಾನೂನು ಕ್ರಮಗಳಿಗೆ ತಡೆ ನೀಡಿದೆ. ಯಾವುದೇ ನ್ಯಾಯಾಲಯವೂ ಅವರನ್ನು ದೋಷಿ ಎಂದು ತೀರ್ಪು ನೀಡಿರುವುದಿಲ್ಲ.
ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಮತ್ತು ಕಾರ್ಯವೈಖರಿ ಕುರಿತು ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯವೇ ಹಲವು ಬಾರಿ ತೀಕ್ಷ್ಣ ಟೀಕೆ ಮಾಡಿದೆ. ಸತ್ಯಾಂಶಗಳು ಹೀಗಿರುವಾಗ, ವಿರೋಧ ಪಕ್ಷಗಳು ಹಠ ಹಿಡಿದು ಕಲಾಪಕ್ಕೆ ಅಡ್ಡಿಪಡಿಸುತ್ತಿರುವುದು ಸಂಸದೀಯ ವ್ಯವಸ್ಥೆಗೆ ಮಾಡುವ ಅಪಮಾನವಾಗಿದೆ. ಆದ್ದರಿಂದ ವಿಪಕ್ಷಗಳು ತಕ್ಷಣ ಪ್ರತಿಭಟನೆ ಕೈಬಿಟ್ಟು, ರಾಜ್ಯದ ಜನರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸದನದ ಚರ್ಚೆಗಳಲ್ಲಿ ಭಾಗವಹಿಸಬೇಕಾಗಿ ಸರ್ಕಾರ ವಿನಂತಿಸುತ್ತದೆ ಎಂದು ಸದನದಲ್ಲಿ ತಿಳಿಸಿದರು.

