ನರಕಾಂತಕ ಶ್ರೀಕೃಷ್ಣದೇವರು ಎಲ್ಲರನ್ನೂ ಸಲಹಲಿ. ಅಜ್ಞಾನವೆಂಬ ಕತ್ತಲೆ ಕಳೆದು ಸುಜ್ಞಾನವೆಂಬ ಬೆಳಕು ನೀಡಲಿ. ನಮ್ಮ ನಿಮ್ಮ ಬಾಳು ಬೆಳಕಾಗಲಿ, ಮನೆಯಲ್ಲಿ ಸಂತಸ, ನೆಮ್ಮದಿ ನೆಲೆಸಲಿ.
ಈ ವರ್ಷವೂ ದೀಪಾವಳಿ ಹಬ್ಬದ ಆಚರಣೆ ಬಗ್ಗೆ ಸಾಕಷ್ಟು ಜನರಲ್ಲಿ ಗೊಂದಲವಿದೆ. ದೀಪಾವಳಿ ಆಚರಣೆ ನವೆಂಬರ್ 08 ರಂದು ಆಚರಿಸಬೇಕೇ ಅಥವಾ 09 ರಂದು ಆಚರಿಸಬೇಕೆ ಎಂಬ ತುಮುಲ ಜನರನ್ನು ಕಾಡುತ್ತಿದೆ. ಸಂಶಯವೇ ಬೇಡ ನವೆಂಬರ್ 08ರಂದು ಭಾನುವಾರವೇ ದೀಪಾವಳಿ ಆಚರಣೆ ಮಾಡಿ.
ಕೆಲವರು ನಾವು ಬಿಸಿ ಕಜ್ಹಾಯ ಮಾಡುತ್ತೇವೆ ಹಾಗಾಗಿ ಸೋಮವಾರ ಬೆಳಗ್ಗೆ ಅಮಾವಾಸ್ಯೆಯಿದೆ ಅಂದು ಹಬ್ಬ ಆಚರಿಸಬಹುದಲ್ಲವೇ ಎಂದು ಕೇಳಿದ್ದಾರೆ. ಈ ದಿನ ಬೆಳಗ್ಗೆ ಅಮಾವಾಸ್ಯೆ ಇದೆ, ಆದರೆ ರಾತ್ರಿ ವ್ಯಾಪಿನಿಯಿಲ್ಲ. ಹಬ್ಬದ ಆಚರಣೆ ಸೇರಿದಂತೆ ಉಳಿದ ಶುಭ ಕಾರ್ಯಗಳಲ್ಲಿ ಅಪರಾಹ್ನ ವ್ಯಾಪಿನಿ ಅಮಾವಾಸ್ಯೆ, ಪೂರ್ವಾಹ್ನ ವ್ಯಾಪಿನಿ ಹುಣ್ಣಿಮೆಯನ್ನು ಪರಿಗಣಿಸಬೇಕು.
ಈ ವರ್ಷ ನವೆಂಬರ್ 08 ರಂದು ಭಾನುವಾರ ಬೆಳಗ್ಗೆ 10-16 ಕ್ಕೆ ಚತುರ್ದಶಿ ಮುಗಿದು, ನಂತರ ಅಮಾವಾಸ್ಯೆ ಬರುತ್ತದೆ. ಸೋಮವಾರ ಬೆಳಗ್ಗೆ 10-51 ರವರೆಗೆ ಮಾತ್ರ ಅಮಾವಾಸ್ಯೆ ಇರುತ್ತದೆ. ಆದರೆ ಇದು ರಾತ್ರಿ ವ್ಯಾಪಿನಿಯಿರಲಿ, ಮಧ್ಯಾಹ್ನ ವ್ಯಾಪಿನಿಯೇ ಇಲ್ಲ. ಹಾಗಾಗಿ ಭಾನುವಾರ ರಾತ್ರಿ ಪೂರಾ ಅಮಾವಾಸ್ಯೆ ಇರುತ್ತದೆ. ಆದುದರಿಂದ ಈ ದಿನವೇ ನರಕಚತುರ್ದಶಿಯ ಜತೆ ದೀಪಾವಳಿ ಹಬ್ಬದ ಆಚರಣೆ ಮಾಡಬೇಕು. ಧನಲಕ್ಷ್ಮಿ ಪೂಜೆ ಹಾಗೂ ಕೇದಾರೇಶ್ವರ ವ್ರತವನ್ನು ಇದೇ ದಿನ ನಡೆಸಬೇಕು. ಯಾವುದೇ ಗೊಂದಲವಿಲ್ಲದೇ ಭಾನುವಾರ ಸಡಗರದಿಂದ ದೀಪಾವಳಿ ಆಚರಿಸಿ…
ಬೆಳಕಿನ ಹಬ್ಬವಾದ ದೀಪಾವಳಿ ಸಡಗರ ಸಂಭ್ರಮದ ಹಬ್ಬ. ಈ ಹಬ್ಬವನ್ನು
ಸಾಧ್ಯವಾದಷ್ಟು ಸಾಂಪ್ರದಾಯಿಕವಾಗಿ ಆಚರಿಸುವ ವಿಧಾನವನ್ನು ತಿಳಿದುಕೊಳ್ಳೋಣ.
ಶನಿವಾರ(ನ.07) ಜಲಪೂರಣ ತ್ರಯೋದಶಿ (ನೀರು ತುಂಬುವ ಹಬ್ಬ).
ಈ ದಿನ ಸ್ನಾನಕ್ಕೆಂದು ನೀರು ಕಾಯಿಸುವ ಹಂಡೆಯನ್ನು ತೊಳೆದು ಸುಣ್ಣ ಹಾಗೂ ಕೆಮ್ಮಣ್ಣಿನಿಂದ ಅಲಂಕರಿಸಿ. ಸಂಜೆ ಒಂದು ಕಲಶದಲ್ಲಿ ನೀರು ತುಂಬಿ ಅದರಲ್ಲಿ ಗಂಗಾಜನಕನಾದ ಶ್ರೀಹರಿ ಯನ್ನು ಅನುಸಂಧಾನ ಮಾಡಿ.
ಗಂಗೇ ಚ ಯಮುನೇ ಕೃಷ್ಣೇ, ಗೋದಾವರಿ ಸರಸ್ವತಿ | ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು || ಎಂಬ ಮಂತ್ರದಿಂದ ಪೂಜಿಸಿ. ನಂತರ ಗಂಗಾದೇವಿ ಯನ್ನು ಪ್ರಾರ್ಥಿಸಿ, ಈ ಕಲಶದ ನೀರನ್ನು ಬಿಸಿನೀರು ಕಾಯಿಸುವ ಹಂಡೆಗೆ ಸುರಿದು, ನಂತರ ನೀರು ತುಂಬಿ.
ಮನೆಯಲ್ಲಿ ಹಂಡೆ ಮತ್ತಿತರ ಸಾಂಪ್ರದಾಯಿಕ ನೀರು ಕಾಯಿಸುವ ವ್ಯವಸ್ಥೆ ಇಲ್ಲವಾದಲ್ಲಿ ಗಂಗಾಪೂಜೆ ನಡೆಸಿ, ಆ ನೀರನ್ನು ಮರುದಿನ ಸ್ನಾನಕ್ಕೆ ಬಳಸಬಹುದು.
ಈ ದಿನ ಸೂರ್ಯಾಸ್ತದ ನಂತರ ಯಜ್ಣೀಯ ಕಾಷ್ಠ ಅಥವಾ ಬಿದಿರುಕೋಲ ನ್ನು ಮನೆಯ ಮುಂದೆ ನೆಟ್ಟು ಇದರ ತುದಿಯಲ್ಲಿ ಅಷ್ಟದಳಾಕೃತಿಯ ಆಕಾಶದೀಪ ವನ್ನು ಹಚ್ಚಿ. ಈ ದೀಪವನ್ನು ತಿಂಗಳು ಪೂರ್ತಿ ಹಚ್ಚಬಹುದು.
ಭಾನುವಾರ (ನ.08) ನರಕ ಚತುರ್ದಶಿ ಹಾಗೂ ದೀಪಾವಳಿ.
ಆಚರಣೆಗೆ ಮೊದಲು ನರಕಚತುರ್ದಶಿಯ ಬಗ್ಗೆ ತಿಳಿಯೋಣ.
ಮಹಾವಿಷ್ಣು ಶ್ರೀಕೃಷ್ಣಾವತಾರ ತಾಳಿದ ಸಮಯದಲ್ಲಿ ಜರಾಸಂಧ ಮತ್ತು ನರಕಾಸುರ ಎಂಬ ಇಬ್ಬರು ಬಲಿಷ್ಠ ರಕ್ಕಸ ರಾಜರಿದ್ದರು. ಇವರು ಅತ್ಯಧಿಕ ಸೈನ್ಯವನ್ನು ಕೂಡಿಹಾಕಿಕೊಂಡು ದಾಂಧಲೆ ನಡೆಸಿ ಪುಂಡಾಟ ನಡೆಸುತ್ತಿದ್ದರು. ಜರಾಸಂಧ ಎಲ್ಲ ರಾಜರನ್ನು ಸೋಲಿಸಿ ಅವರ ಗಂಡು ಮಕ್ಕಳನ್ನು ಸೆರೆ ಹಿಡಿಯುತ್ತಿದ್ದ. ಈತ ಹೆಣ್ಣು ಮಕ್ಕಳ ತಂಟೆಗೆ ಹೋಗುತ್ತಿರಲಿಲ್ಲ. ಆದರೆ ಈತನ ಸಂಗಡಿಗನಾದ ನರಕಾಸುರ ಈಗಿನ ಅಸ್ಸಾಂ ಪ್ರಾಂತ್ಯಕ್ಕೆ ಸೇರಿದ ಪ್ರಾಗ್ಜ್ಯೋತಿಶ್ ಪುರದ ರಾಜನಾಗಿದ್ದ. ಈತ ಮಾತ್ರ ಎಲ್ಲ ರಾಜರನ್ನು ಸೋಲಿಸಿ ಅವರ ಹೆಣ್ಣು ಮಕ್ಕಳನ್ನೆಲ್ಲಾ ಹಿಡಿದು ತಂದು ತನ್ನ ಸೆರೆಮನೆಯಲ್ಲಿ ಕೂಡಿಹಾಕುತ್ತಿದ್ದ.
ಹೀಗೆ ಆತ ಕೂಡಿ ಹಾಕಿದ್ದ ರಾಜಕುಮಾರಿಯರ ಸಂಖ್ಯೆ ಹದಿನಾರು ಸಾವಿರ ದಾಟಿತ್ತು. ಈತ ಮಾನವರಿಗಷ್ಟೇ ಉಪಟಳ ನೀಡದೆ, ದೇವತೆಗಳಿಗೂ ಕಾಟ ಕೊಡಲಾರಂಭಿಸಿದ. ದುರಹಂಕಾರಿಯಾದ ನರಕಾಸುರ ಒಮ್ಮೆ, ವೇದಮಾತೆಯಾದ ಅದಿತಿದೇವಿಯ ಆಭರಣಗಳನ್ನೂ ಲೂಟಿ ಮಾಡಿಕೊಂಡು ಬಂದಿದ್ದ. ಇದು ದೇವತೆಗಳನ್ನು ಕಂಗೆಡಿಸಿತ್ತು. ದೇವತೆಗಳೆಲ್ಲ ಸೇರಿ ಇಂದ್ರನ ಮೂಲಕ ಸತ್ಯಭಾಮಾ ದೇವಿಯ ಜತೆಯಲ್ಲಿದ್ದ ಶ್ರೀಕೃಷ್ಣನಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಸುದ್ದಿ ಕೇಳಿ, ಅದಿತಿ ದೇವಿಗಾದ ಅಪಮಾನವನ್ನು ಸಹಿಸದ ಶ್ರೀಕೃಷ್ಣದೇವರ ಪತ್ನಿ ಸತ್ಯಭಾಮೆಯು ನರಕಾಸುರನನ್ನು ಸಂಹರಿಸುವಂತೆ ಪ್ರಾರ್ಥಿಸಿದಳು.
ಕೂಡಲೇ ಶ್ರೀಕೃಷ್ಣ ದೇವರು ಸತ್ಯಭಾಮೆಯೊಡನೆ ಪ್ರಾಗ್ಜ್ಯೋತಿಶ್ ಪುರದ ಮೇಲೆ ದಾಳಿ ನಡೆಸಿ ಯುದ್ಧ ಸಾರಿದ. ಯುದ್ಧದಲ್ಲಿ ಸುದರ್ಶನ ಚಕ್ರದಿಂದ ನರಕಾಸುರನನ್ನು ತೀವ್ರವಾಗಿ ಗಾಯಗೊಳಿಸಿದ. ಈ ವೇಳೆ ತಾನು ಸಾಯುವ ಸಮಯ ಸನ್ನಿಹಿತವಾಯಿತೆಂದು ನರಕಾಸುರ ಅರಿತ. ಇದರ ಮಧ್ಯೆಯೂ ತಾನು ಶ್ರೀಮನ್ನಾರಾಯಣ ಅವತಾರಿಯಾದ ಶ್ರೀಕೃಷ್ಣನಿಂದ ಮೋಕ್ಷ ಪಡೆಯುತ್ತಿರುವುದನ್ನು ತಿಳಿದು ಖುಷಿಗೊಂಡ. ಆಗ ಶ್ರೀಹರಿಯಲ್ಲಿ ಒಂದು ಬೇಡಿಕೆಯಿಟ್ಟ. ಸ್ವಾಮಿ ನನ್ನ ಅವಸಾನ(ಸಾವು)ವನ್ನು ಲೋಕದ ಜನರು ಸಂತಸದಿಂದ ಆಚರಿಸಲಿ, ಬಾಣ ಬಿರುಸು ಗಳನ್ನು ಸುಡುವುದರ ಜತೆ ಸಾಲು ದೀಪಗಳನ್ನು ಹಚ್ಚಿ ಸಂಭ್ರಮಿಸಲಿ ಎಂಬ ವರಬೇಡಿದ. ಶ್ರೀಕೃಷ್ಣದೇವರು ಅಸ್ತು ಎಂದದ್ದಲ್ಲದೇ, ಸತ್ಯಭಾಮೆಯ ಮೂಲಕ ಬಾಣ ಬಿಟ್ಟು ಸಂಹರಿಸಿದ.
ನಂತರ ರಾಜ್ಯದ ಅಧಿಕಾರವನ್ನು ನರಕಾಸುರನ ಮಗ ಭಗದತ್ತನಿಗೆ ವಹಿಸಿಕೊಟ್ಟ. ನರಕಾಸುರ ಸೆರೆಮನೆಯಲ್ಲಿ ಬಂಧಿಸಿದ್ದ ಸ್ತ್ರೀಯರನ್ನೆಲ್ಲಾ ಬಿಡುಗಡೆ ಮಾಡಿಸಿದ.
ಬಿಡುಗಡೆಯಾದ ನಾರಿಯರು ಸಂತಸಗೊಂಡು ಶ್ರೀಕೃಷ್ಣನಿಗೆ ಆರತಿ ಎತ್ತಿ ಕೃತಜ್ಞತೆ ಸಲ್ಲಿಸಿದರು. ಇದು ಚಂದ್ರೋದಯ ಸಮಯವಾದ್ದರಿಂದ, ಈಗಲೂ ಮುಂಜಾನೆ ನರಕ ಚತುರ್ದಶಿಯಂದು ನಾರಿಯರು ದೇವರಿಗೆ ನೀರಾಜನ ಮಾಡುವ ಪದ್ಧತಿ ನಡೆದು ಬಂದಿದೆ. ಅಂದಿನಿಂದ ನರಕಚತುರ್ದಶಿಯಂದು ಬಾಣ, ಬಿರುಸು ಹಾರಿಸುವುದು, ಪಟಾಕಿ ಸಿಡಿಸುವುದು ಜತೆಗೆ ಸಾಲು ಸಾಲು ದೀಪಗಳನ್ನು ಹಚ್ಚಿ ಸಡಗರ ಸಂಭ್ರಮದಿಂದ ಹಬ್ಬ ಆಚರಿಸಲಾಗುತ್ತಿದೆ.
ಈ ನರಕಚತುರ್ದಶಿಯ ದಿನ(ಭಾನುವಾರ) ಮುಂಜಾನೆ ಚಂದ್ರೋದಯ ಕಾಲಕ್ಕೆ (ಬೆಳಗ್ಗೆ 04- 27 ರಿಂದ 05 -07 ಕ್ಕೆ ಚಂದ್ರೋದಯ) ನರಕಚತುರ್ದಶಿ ಆಚರಿಸಬೇಕು. ಹಿಂದಿನ ದಿನ ಪೂಜಿಸಿ ಕಾಯಿಸಿಟ್ಟ ಬಿಸಿ ನೀರನ್ನು ಒಂದು ತಂಬಿಗೆಯಲ್ಲಿ ಹಾಗೂ ತಣ್ಣೀರನ್ನು ಮತ್ತೊಂದು ತಂಬಿಗೆಯಲ್ಲಿ ತುಂಬಿಸಬೇಕು. ಇದರ ಜತೆ ಶ್ರೀಗಂಧದೆಣ್ಣೆ ಯಂತಹ ಸುಗಂಧ ತೈಲ, ಇಲ್ಲವಾದಲ್ಲಿ ಶುದ್ಧ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ*ಯನ್ನು ಒಂದು ಬಟ್ಟಲಿನಲ್ಲಿ ತುಂಬಿ *ದೇವರ ಮುಂದೆ ಚೌಕಾಕಾರ ಮಂಡಲ ಮಾಡಿ ಇಡಬೇಕು. ಇದರ ಜತೆ ಎಳೆಗರಿಕೆ ಯನ್ನು ಒಟ್ಟು ಮಾಡಿದ ಗುಚ್ಛ ವನ್ನು ಇಟ್ಟು ಎಣ್ಣೆಯಲ್ಲಿ ಶ್ರೀಲಕ್ಷ್ಮೀದೇವಿ* ಯನ್ನು, ನೀರಿನಲ್ಲಿ ಗಂಗೆ ಯ ಜತೆ ಗಂಗಾಜನಕ ಶ್ರೀಕೃಷ್ಣ ನನ್ನು ಸ್ಮರಿಸಿ,
ಓಂ ಕನಿಕ್ರದಜ್ಜನುಷಂ ಪ್ರಬ್ರುವಾಣ ಇಯರ್ತಿನಾವ ಮರಿತೇವ ನಾವಂ |ಸುಮಂಗಲಶ್ಚ ಶಕುನೇ ಭವಾಸಿ ಮಾ ತ್ವಾ ಕಾಚಿದಭಿಭಾವಿಶ್ವ್ಯಾ ವಿದತ್ || ಎಂದು ಪ್ರಾರ್ಥಿಸಬೇಕು.
ಇದಾದ ಮೇಲೆ, ಸುಮಂಗಲಿ ಯರು ದೇವರು, ತುಳಸಿ ಹಾಗೂ ಗೋವು ಗಳಿದ್ದರೆ ಗೋವುಗಳಿಗೆ, ಗುರು ಗಳಿಗೆ ಆರತಿ ಮಾಡಿ ನಂತರ ಮನೆಯಲ್ಲಿನ ಪುರುಷರಿಗೆ ಆರತಿ ಬೆಳಗಬೇಕು.
ಬಳಿಕ:
*ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣಃ | ಕೃಪಃ ಪರಶುರಾಮಶ್ಷ ಸಪ್ತೈತೇ ಚಿರಂಜೀವಿನಃ ||
ಮಾರ್ಕಂಡೇಯ ಮಹಾಭಾಗ ಸಪ್ತಕಲ್ಪಾಂತಜೀವನ | ಆಯುರಾರೋಗ್ಯಮೈಶ್ವರ್ಯಂ ದೇಹಿ ಮೇ ಮುನಿಪುಂಗವ || ನಮಃ ಚಿರಜೀವಿಭ್ಯಃ | ಆಯುರಾರೋಗ್ಯೈಶ್ವರ್ಯಾಭಿವೃದ್ಧಿ ಕುರ್ವಂತು ||* ಎಂದು ಪ್ರಾರ್ಥಿಸಿ ದೇವರಿಗೆ ಸಮರ್ಪಿಸಿದ ಎಣ್ಣೆ*ಯನ್ನು ಗರಿಕೆ ಕಂತೆಯಿಂದ ನೆಲಕ್ಕೆ *7 ಬಾರಿ ತಾಗಿಸಬೇಕು. ನಂತರ ಮೊದಲು ಭೂಮಿಗೆ ಆಮೇಲೆ ತಲೆಗೆ, ಹೀಗೆ ಮೂರು ಬಾರಿ ಎಣ್ಣೆಯನ್ನು ತಲೆಗೆ ಹಚ್ಚಬೇಕು. ನಂತರ ಪ್ರತಿಯೊಬ್ಬರೂ ದೇಹದ ಎಲ್ಲ*ಅಂಗ* ಗಳಿಗೂ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಬೇಕು. ಮನೆಯ ಹಿರಿಯರು, ಕಿರಿಯರಿಗೆ ಎಣ್ಣೆ ಶಾಸ್ತ್ರ ಮಾಡುವುದು ಶ್ರೇಯಸ್ಕರ.
ಸ್ನಾನಾನಂತರ ಅಧಿಕಾರ ಉಳ್ಳವರು ಪೂರ್ವ ಕ್ಕೆ ಮುಖ ಮಾಡಿ. ಯಮಂ ತರ್ಪಯಾಮಿ | ಧರ್ಮರಾಜಂ ತರ್ಪಯಾಮಿ | ಮೃತ್ಯುಂ ತರ್ಪಯಾಮಿ | ಅಂತಕಂ ತರ್ಪಯಾಮಿ | ವೈವಸ್ವತಂ ತರ್ಪಯಾಮಿ | ಕಾಲಂ ತರ್ಪಯಾಮಿ | ಸರ್ವಭೂತಕ್ಷಯಂ ತರ್ಪಯಾಮಿ | ಔದುಂಬರಂ ತರ್ಪಯಾಮಿ | ದಧ್ನಂ ತರ್ಪಯಾಮಿ | ನೀಲಂ ತರ್ಪಯಾಮಿ | ಪರಮೇಷ್ಠಿನಂ ತರ್ಪಯಾಮಿ | ವೃಕೋದರಂ ತರ್ಪಯಾಮಿ | ಚಿತ್ರಂ ತರ್ಪಯಾಮಿ | ಚಿತ್ರಗುಪ್ತಂ ತರ್ಪಯಾಮಿ || ಎಂದು ದೇವತೀರ್ಥ ದಿಂದ ಯಮ ತರ್ಪಣ ನೀಡಬೇಕು.
ನಂತರ :
ಯಮೋ ನಿಹಂತಾ ಪಿತೃಧರ್ಮರಾಜೋ ವೈವಸ್ವತೋ ದಂಡಧರಶ್ಚ ಕಾಲಃ | ಭೂತಾಧಿಪೋ ದತ್ತಕೃತಾನುಸಾರೀ ಕೃತಾಂತಕಶ್ಚೇತಿ ಸಕೃಜ್ಜಪಂತಿ || ಎಂದು ಪ್ರಾರ್ಥಿಸ ಬೇಕು.
ಇದಾದ ಮೇಲೆ ಹೊಸಬಟ್ಟೆ ತೊಟ್ಟು ದೇವರಿಗೂ, ಗುರು ಹಿರಿಯರಿಗೂ ನಮಸ್ಕರಿಸಬೇಕು. ಶಕ್ತಿಯಿರುವವರು ಹೊಸಬಟ್ಟೆ ಗಳನ್ನು ಅಶಕ್ತ ರಿಗೆ ದಾನ ನೀಡಬಹುದು.
ಸಂಜೆ ಬಟ್ಟೆಯನ್ನು ಸುತ್ತಿದ ಬಿದಿರು ಕೋಲನ್ನು ಎಳ್ಳೆಣ್ಣೆಯಲ್ಲಿ ಅದ್ದಿ ಬೆಂಕಿ ಹಚ್ಚಿ ಉಲ್ಕಾ ದೀಪ ಪ್ರಜ್ವಲಿಸಬೇಕು.
ಇದು ಮಹಾಲಯ(ಪಿತೃಪಕ್ಷ)ದಲ್ಲಿ ಆಗಮಿಸಿದ್ದ ಪಿತೃಗಳಿಗೆ ಪುನರ್ ಮಾರ್ಗ ತೋರಿಸುವ ಪ್ರಕ್ರಿಯೆಯಾಗಿದೆ. ಮನೆಯ ಅಂಗಳದಲ್ಲಿ ಈ ಉಲ್ಕಾದೀಪ ನೆಟ್ಟು ಅಗ್ನಿದಗ್ಧಾಶ್ಚ ಯೇ ಜೀವಾ ಯೇಪ್ಯದಗ್ಧಾಃ ಕುಲೇ ಮಮ | ಉಜ್ವಲ ಜ್ಯೋತಿಷಾವರ್ತ್ಯ ಪ್ರಪಶ್ಯಂತು ವ್ರಜಂತು ತೇ || ಯಮಲೋಕಂ ಪರಿತ್ಯಜ್ಯ ಆಗತಾ ಯೇ ಮಹಾಲಯೇ | ಉಜ್ವಲ ಜ್ಯೋತಿಷಾ ದಗ್ಧಾಃ ತೇ ಯಾಂತು ಪರಮಾಂ ಗತಿಮ್ || ಎಂದು ಹೇಳಬೇಕು.
ಇದೇ ದಿನ ಲಕ್ಷ್ಮೀಪೂಜೆ (ದೀಪಾವಳಿ ನೋಮುವುದು) ಯನ್ನು ಆಚರಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಈ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ತಂಗಳು ನೋಮುವ ವಾಡಿಕೆಯ ಕೆಲವರು ಹಿಂದಿನ ದಿನ ರಾತ್ರಿ ಕಜ್ಜಾಯ(ಅಪೂಪ) ಮಾಡುತ್ತಾರೆ, ಬಿಸಿ ನೋಮುವ ಮಂದಿ ಈ ದಿನ ಕಜ್ಜಾಯ ಮಾಡುತ್ತಾರೆ. ಪೂಜಾ ಸಾಮಗ್ರಿಗಳೊಂದಿಗೆ ತೋಟಗಳಿಗೆ ತೆರಳುವ ಮಹಿಳೆಯರು, ಮಹಾಲಕ್ಷ್ಮಿ ಸ್ವರೂಪ ಎಂದು ಪರಿಗಣಿಸುವ ಬಾಳೆಮರ, ವೀಳ್ಯದೆಲೆ ಬಳ್ಳಿ ಹಾಗೂ ಅಡಿಕೆ ಮರಗಳಿಗೆ ಪೂಜೆ ಸಲ್ಲಿಸಿ ಕಜ್ಜಾಯ ಸಮರ್ಪಣೆ ಮಾಡುತ್ತಾರೆ. ಪಟ್ಟಣ ಪ್ರದೇಶಗಳಲ್ಲಿ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಾರೆ.
ಈ ದಿನ ರಾತ್ರಿ ಕಡ್ಡಾಯವಾಗಿ ಲಕ್ಷ್ಮೀಪೂಜೆ ಮಾಡಬೇಕು. ದೇವಿಯನ್ನು ಪೂಜಿಸಿ ನಮಸ್ತೇ ಸರ್ವದೇವಾನಾಂ ವರದಾಸಿ ಹರಿಪ್ರಿಯೇ | ಯಾ ಗತಿಃ ತ್ವತ್ಪ್ರಪನ್ನಾನಾಂ ಸಾ ಮೇ ಭೂಯಾತ್ ತ್ವದರ್ಚನಾತ್ || ಎಂದು ಲಕ್ಷ್ಮಿಯನ್ನು,
ಧನದಾಯ ನಮಸ್ತುಭ್ಯಂ ನಿಧಿಪದ್ಮಾಧಿಪಾಯ ಚ | ಭವಂತು ತ್ವತ್ಪ್ರಸಾದಾನ್ಮೇ ಧನಧಾನ್ಯಾದಿ ಸಂಪದಃ || ಎಂದು ಕುಬೇರ ನನ್ನು ಪ್ರಾರ್ಥಿಸಬೇಕು.
ತರುವಾಯ:
ಭೋ ದೀಪ ಬ್ರಹ್ಮರೂಪಸ್ತ್ವಂ ಅಂಧಕಾರನಿವಾರಕ | ಇಮಾಂ ಮಯಾ ಕೃತ್ವಾ ಗೃಹ್ಣಾನ್ ತೇಜಃಮಯಿ ಪ್ರವರ್ತಯ || ದೀಪಾವಲೀಂ ಮಯಾ ದತ್ತಾಂ ಗೃಹಾಣ ಜಗದೀಶ್ವರ | ಆರಾರ್ತಿಕ್ಯ ಪ್ರದಾನೇನ ಜ್ಞಾನದೃಷ್ಟಿ ಪ್ರದೋಭವ || ಅಗಿರ್ಜ್ಯೋತಿರ್ರವಿರ್ಜ್ಯೋತಿಃ ಚಂದ್ರಜ್ಯೋತಿಃ ತಥೈವ ಚ| ಉತ್ತಮಃ ಸರ್ವತೇಜಸ್ಸು ದೀಪೋಓಯಂ ಪ್ರತಿಗೃಹ್ಯತಾಮ್|| ಎಂದು ಹೇಳಿ ದೀಪಗಳನ್ನು ಹಚ್ಚಿ ಪೂಜಿಸಬೇಕು. ಮಧ್ಯರಾತ್ರಿಯ ನಂತರ ಮನೆಯ ಮುಂದಿನ ಅಂಗಳವನ್ನು ಸಾರಿಸಿ ಗುಡಿಸಬೇಕು. ಇಲ್ಲಿಗೆ ದೀಪಾವಳಿ ಹಬ್ಬದ ಒಂದು ಹಂತ ಮುಗಿದಂತೆ.
ಶ್ರೀಮದ್ರಾಘವೇಂದ್ರತೀರ್ಥ ಗುರುಗಳ ಹೃತ್ಕಮಲದಲ್ಲಿ ಸದಾ ನೆಲೆಸಿ ಶ್ರೀಮುಖ್ಯಪ್ರಾಣದೇವರ ಅಂತರ್ಯಾಮಿಯಾಗಿರುವ ಶ್ರೀರುಕ್ಮಿಣಿ ಸತ್ಯಭಾಮ ಸಮೇತ ಶ್ರೀಕೃಷ್ಣದೇವರ ಸ್ವರೂಪಿ ಶ್ರೀಮನ್ ಮೂಲರಾಮದೇವರು ನಮ್ಮನ್ನು ಸಲಹಲಿ.
ಪ್ರೀತೋಸ್ತು ಕೃಷ್ಣಪ್ರಭುಃ….🙏🙏🙏
ಶ್ರೀಶ ಚರಣಾರಾಧಕ:
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,
ಆನೇಕಲ್.
ಅಭ್ಯಂಗಸ್ನಾನದ ಮಹತ್ವ ಹಾಗೂ ಲಾಭಗಳು – ದೀಪಾವಳಿ ನಿಮಿತ್ತ ಸನಾತನ ಸಂಸ್ಥೆಯ ವಿಶೇಷ ಲೇಖನ

