ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಕೃಷಿ ನಾವಿನ್ಯತೆಗಳು ಹಾಗೂ ಬರ ನಿರ್ವಹಣಾ ತಂತ್ರಜ್ಞಾನಗಳನ್ನು ಪರಿಚಯಿಸುವ ಸಲುವಾಗಿ 2026ರ ನವೆಂಬರ್ 16, 17 ಮತ್ತು 18ರಂದು ಮೂರು ದಿನಗಳ ‘ಕೃಷಿಮೇಳ’ವನ್ನು ಜಿ.ಕೆ.ವಿ.ಕೆ. ಆವರಣದಲ್ಲಿ ಆಯೋಜಿಸಲಾಗಿದೆ
ಈ ಕೃಷಿ ಮೇಳದಲ್ಲಿ ಪ್ರಸ್ತುತ ಸನ್ನಿವೇಶಕ್ಕೆ ಸೂಕ್ತವಾದ ಬರ ನಿರ್ವಹಣಾ ತಂತ್ರಜ್ಞಾನಗಳು, ಬರ ಪರಿಸ್ಥಿತಿಗೆ ತಡೆಯೊಡ್ಡುವ ಬೆಳೆಗಳು, ತಳಿಗಳು ಹಾಗೂ ಸೂಕ್ತ ಬೆಳೆ ಪ್ರತ್ಯಕ್ಷಿಕೆಗಳ ಪ್ರದರ್ಶನ ಇರಲಿದೆ. ವಿಶ್ವವಿದ್ಯಾನಿಲಯದ ಸಂಶೋಧನಾ ವಿಭಾಗಗಳು, ರಾಜ್ಯದ ವಿವಿಧ ಕೃಷಿ ವಿ.ವಿ.ಗಳು, ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು ಮತ್ತು ಅಭಿವೃದ್ಧಿ ಇಲಾಖೆಗಳ ವತಿಯಿಂದ ತಂತ್ರಜ್ಞಾನ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ.
ಅಲ್ಲದೆ, ಎಲ್ ನಿನೋ ಪರಿಣಾಮ ಮತ್ತು ಭವಿಷ್ಯದ ಸಿದ್ಧತೆಗಳು, ಹವಾಮಾನ ವೈಪರೀತ್ಯ ಚತುರ ಕೃಷಿ ಹಾಗೂ ಮಣ್ಣು ಮತ್ತು ನೀರು ಸಂರಕ್ಷಣೆ ಕುರಿತು ನುರಿತ ತಜ್ಞರಿಂದ ಉಪನ್ಯಾಸ ಹಾಗೂ ವಿಚಾರ ಸಂಕಿರಣಗಳು ನಡೆಯಲಿವೆ. ರೈತರ ಕೃಷಿ ಸಂಬಂಧಿತ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲು ಸಲಹಾ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಹಾಗೂ ಕೃಷಿಮೇಳದ ಅಂಗವಾಗಿ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅತ್ಯುತ್ತಮ ಪ್ರಗತಿಪರ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿಗಳನ್ನು ವಿತರಿಸಲಾಗುವುದು.
ನವೆಂಬರ್ 16ರಂದು ನಡೆಯಲಿರುವ ಉದ್ಘಾಟನಾ ಸಮಾರಂಭವನ್ನು ಕರ್ನಾಟಕ ಸರ್ಕಾರದ ಮಾನ್ಯ ಕೃಷಿ ಸಚಿವರು ಹಾಗೂ ಕೃಷಿ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿಗಳಾದ ಶ್ರೀ ಪಿ.ಎಂ. ನರೇಂದ್ರಸ್ವಾಮಿ ನೆರವೇರಿಸಲಿದ್ದಾರೆ. ಬೃಹತ್ ಬೆಂಗಳೂರು ಅಭಿವೃದ್ಧಿ ಹಾಗೂ ಸಂಸದೀಯ ವ್ಯವಹಾರಗಳ ಇಲಾಖೆ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಕೃಷಿ ವಿ.ವಿ. ಕುಲಪತಿಗಳಾದ ಡಾ. ಪಿ. ವೆಂಕಟರವಣ ಸೇರಿದಂತೆ ಹಲವು ಗಣ್ಯರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿರಲಿದ್ದಾರೆ.
ಈ ಕೃಷಿಮೇಳದಲ್ಲಿ ರೈತರು, ರೈತ ಮಹಿಳೆಯರು, ಕೃಷಿ ಆಸಕ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೃಷಿ ಮಾಹಿತಿ ಘಟಕದ ಹಿರಿಯ ವಾರ್ತಾತಜ್ಞರು ಹಾಗೂ ಮುಖ್ಯಸ್ಥರಾದ ಡಾ. ಕೆ.ಪಿ. ರಘುಪ್ರಸಾದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

