ಬೆಂಗಳೂರು: ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಷ್ಠಿತ ‘ಆಲ್ ಇಂಡಿಯಾ ಪೊಲೀಸ್ ಲಾನ್ ಟೆನ್ನಿಸ್ ಚಾಂಪಿಯನ್‍ಶಿಪ್'(All India Police Lan Tennis) ಪಂದ್ಯಾವಳಿಯಲ್ಲಿ ಭಾಗವಹಿಸುವ ವಿವಿಧ ರಾಜ್ಯಗಳ ಸ್ಪರ್ಧಿಗಳು ಮತ್ತು ಅಧಿಕಾರಿಗಳಿಗೆ ಕರ್ನಾಟಕದ ಶ್ರೇಷ್ಠ ಆತಿಥ್ಯ ಮತ್ತು ಗೌರವ ಸಿಗುವಂತೆ ನೋಡಿಕೊಳ್ಳಬೇಕು ಎಂದು ಮಾನ್ಯ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ(Priyanka Karge) ಪೊಲೀಸ್ ಇಲಾಖೆ ಹಾಗೂ ಆಯೋಜಕರಿಗೆ ಕರೆ ನೀಡಿದರು.
ಇಂದು ಪೊಲೀಸ್ ಪ್ರಧಾನ ಕಚೇರಿಯಲ್ಲಿ ಹಮ್ಮಿಕೊಳ್ಳಲಾದ 27ನೇ ಅಖಿಲ ಭಾರತ ಪೊಲೀಸ್ ಲಾನ್ ಟೆನ್ನಿಸ್ ಚಾಂಪಿಯನ್‍ಶಿಪ್-2026 ರ ಅಧಿಕೃತ ಲೋಗೋ, ಟಿ-ಶರ್ಟ್ ಹಾಗೂ ಕ್ಯಾಪ್ ನ್ನು ಬಿಡುಗಡೆ ಮಾಡಿ ಮಾತನಾಡಿದ ಸಚಿವರು, ಕ್ರೀಡೆ ಮತ್ತು ಪೊಲೀಸ್ ಸೇವೆಗಳ ನಡುವಿನ ಸಮಾನತೆಯನ್ನು ಎತ್ತಿ ತೋರಿಸಿದರು.
“ಪೋಲಿಸ್ ವೃತ್ತಿಗೆ ಶಾರೀರಿಕ ದೃಢತೆ (Physical Fitness), ಮಾನಸಿಕ ದೃಢತೆ (Mental Fitness), ಶಿಸ್ತು (Discipline) ಹಾಗೂ ತ್ವರಿತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಅತ್ಯಗತ್ಯ. ಈ ಎಲ್ಲಾ ಅಂಶಗಳು ಟೆನ್ನಿಸ್ ಕ್ರೀಡೆಗೂ ಅನ್ವಯಿಸುತ್ತವೆ” ಎಂದು ಹೇಳಿದರು.
ದೇಶದ ವಿವಿಧ ರಾಜ್ಯಗಳಿಂದ ಆಗಮಿಸುವ ಪೊಲೀಸ್ ಕ್ರೀಡಾಪಟುಗಳಿಗೆ ಯಾವುದೇ ರೀತಿಯ ಕೊರತೆಯಾಗದಂತೆ, ಕರ್ನಾಟಕದ ಸಾಂಪ್ರದಾಯಿಕ ಆತಿಥ್ಯವನ್ನು ಅತ್ಯುತ್ತಮವಾಗಿ ನೀಡಬೇಕು. ಬೆಂಗಳೂರು ಸತತವಾಗಿ ಟೆನ್ನಿಸ್ ಟೂರ್ನಿಗಳನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬಂದ ಅನುಭವ ಹೊಂದಿದ್ದು, ಈ ‘ಆಲ್ ಇಂಡಿಯಾ ಪೊಲೀಸ್ ಲಾನ್ ಟೆನ್ನಿಸ್ ಚಾಂಪಿಯನ್‌ಶಿಪ್’ ಅನ್ನು ಪ್ರತಿವರ್ಷ ಕರ್ನಾಟಕದಲ್ಲೇ ಶಾಶ್ವತವಾಗಿ ಆಯೋಜಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಚಿವರು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಲಾನ್ ಟೆನ್ನಿಸ್ ಸಂಸ್ಥೆ (KSLTA) ಹಾಗೂ ಗೃಹ ಇಲಾಖೆಯಿಂದ ಈ ಕೂಟದ ಯಶಸ್ಸಿಗೆ ಅಗತ್ಯವಿರುವ ಎಲ್ಲಾ ರೀತಿಯ ಪೂರ್ಣ ಬೆಂಬಲ ಮತ್ತು ಸಹಕಾರವನ್ನು ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರಾದ ಡಾ.ಎಂ. ಎ. ಸಲೀಂ ಮಾತನಾಡುತ್ತಾ, ಪೊಲೀಸ್ ಇಲಾಖೆಯಲ್ಲಿ ಕ್ರೀಡೆಗೆ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆಯಿದ್ದು, “ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸು” (Sound Mind in a Sound Body) ಎಂಬ ಸಿದ್ಧಾಂತದೊಂದಿಗೆ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿಸಿದರು.
ಆಲ್ ಇಂಡಿಯಾ ಪೊಲೀಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ (ಇಂಟೆಲಿಜೆನ್ಸ್ ಬ್ಯೂರೋ ಅಡಿಯಲ್ಲಿ) ಮಾರ್ಗದರ್ಶನದಲ್ಲಿ ಪ್ರತಿವರ್ಷ ವಿವಿಧ ರಾಜ್ಯಗಳಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತದೆ. ಈ ಬಾರಿ ಪ್ರತಿಷ್ಠಿತ ಲಾನ್ ಟೆನ್ನಿಸ್ ಚಾಂಪಿಯನ್‌ಷಿಪ್ ನಡೆಸುವ ಗೌರವ ಕರ್ನಾಟಕಕ್ಕೆ ಲಭಿಸಿದೆ.
ನವೆಂಬರ್ 17 ರಿಂದ ಕೆಎಸ್‌ಎಲ್‌ಟಿಎ (KSLTA) ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ಪಂದ್ಯಾವಳಿಗಳು ನಡೆಯಲಿವೆ ಎಂದು ತಿಳಿಸಿದರು.
ಈ ಕ್ರೀಡಾಕೂಟದಲ್ಲಿ ಡಿವೈಎಸ್ಪಿ ಮತ್ತು ಮೇಲ್ಪಟ್ಟ ದರ್ಜೆಯ ಸುಮಾರು 180 ಗೆಜೆಟೆಡ್ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಇದರಲ್ಲಿ 6 ಡಿಜಿಪಿ, 10 ಎಡಿಜಿಪಿ, 8 ಐಜಿಪಿ, 21 ಡಿಐಜಿ ದರ್ಜೆಯ ಹಿರಿಯ ಅಧಿಕಾರಿಗಳು ಹಾಗೂ ಎಸ್‌ಪಿ/ಡಿವೈಎಸ್‌ಪಿ ಶ್ರೇಣಿಯ ಅಧಿಕಾರಿಗಳು ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.
ಕೆ.ಎಸ್. ಆರ್.ಪಿ. ಯ ಎ.ಡಿ.ಜಿ.ಪಿ ಅಮಿತ್ ಸಿಂಗ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರನ್ನೂ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಐ.ಪಿ.ಎಸ್ ಅಧಿಕಾರಿಗಳಾದ ಡಾ. ಪ್ರಣಬ್ ಮೊಹಂತಿ, ಜೆ. ಅರುಣ್, ಸಿ.ಕೆ. ಬಾವ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

