ನಿರಾಯುಧ ರಾವಣ ಸಾವಿರಾರು ಮಂದಿಯ ವಿರುದ್ಧ ಹೋರಾಡುತ್ತಾನೆ; ಶಸ್ತ್ರಧಾರಿ ಶ್ರೀರಾಮ-ಲಕ್ಷ್ಮಣರು ರಾಕ್ಷಸರನ್ನು ಕಂಡು ಓಡಿಹೋಗುತ್ತಾರೆಯೇ? ರಾಮಾಯಣದ ಇಂತಹ ವಿರೂಪವನ್ನು ಹಿಂದುಸ್ಥಾನ ಸಹಿಸುವುದಿಲ್ಲ !
ಮುಂಬೈ – ಇತ್ತೀಚೆಗೆ ಬಿಡುಗಡೆಯಾದ ‘ರಾಮಾಯಣ’(Ramayana) ಚಲನಚಿತ್ರದಲ್ಲಿ ಮೂಲ ರಾಮಾಯಣದ ಪ್ರಸಂಗಗಳನ್ನು ತಿರುಚಿ ರಾವಣನನ್ನು ಉದಾತ್ತೀಕರಿಸಲಾಗಿದೆ, ಹಾಗೂ ಪ್ರಭು ಶ್ರೀರಾಮ, ಮಾತಾ ಸೀತಾ ಮತ್ತು ಲಕ್ಷ್ಮಣರ ಆದರ್ಶ ಪಾತ್ರಗಳನ್ನು ಕೀಳಾಗಿ(In a demeaning manner) ಚಿತ್ರಿಸಲಾಗಿದೆ. ಕೋಟ್ಯಂತರ ಹಿಂದೂಗಳ ಶ್ರದ್ಧಾಕೇಂದ್ರವಾಗಿರುವ ರಾಮಾಯಣವನ್ನು ಈ ರೀತಿ ವಿರೂಪಗೊಳಿಸಿ ಅದರ ಮೂಲಕ ನಿರ್ದಿಷ್ಟ ಸೈದ್ಧಾಂತಿಕ ಅಜೆಂಡಾವನ್ನು ಮುಂದೂಡುವ ಪ್ರಯತ್ನವನ್ನು ಹಿಂದೂ ಸಮಾಜ ಎಂದಿಗೂ ಸಹಿಸುವುದಿಲ್ಲ. ಈ ಚಲನಚಿತ್ರದ ಆಕ್ಷೇಪಾರ್ಹ ದೃಶ್ಯಗಳು ಮತ್ತು ಸಂಭಾಷಣೆಗಳನ್ನು ತಕ್ಷಣವೇ ತೆಗೆದುಹಾಕಬೇಕು, ಹಾಗೆಯೇ ಮುಂಬರುವ ಭಾಗಗಳನ್ನು ಬಿಡುಗಡೆ ಮಾಡುವ ಮೊದಲು ಸಂತರು, ರಾಮಾಯಣದ ವಿದ್ವಾಂಸರು ಮತ್ತು ಧರ್ಮಶಾಸ್ತ್ರಗಳ ತಜ್ಞರ ಮುಂದೆ ಅವುಗಳನ್ನು ಪರಿಶೀಲಿಸಬೇಕು ಎಂಬ ಆಗ್ರಹಗಳೊಂದಿಗೆ ನವೆಂಬರ್ 20 ರಂದು ದಾದರ್ ರೈಲ್ವೆ ನಿಲ್ದಾಣದ ಹೊರಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ರಾಷ್ಟ್ರ-ಜಾಗೃತಿ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ ಹಿಂದುತ್ವನಿಷ್ಠ ಸಂಘಟನೆಗಳು, ಧರ್ಮಪ್ರೇಮಿ ನಾಗರಿಕರು ಮತ್ತು ರಾಮಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ ಸಲ್ಲಿಸಲಾಗುತ್ತಿರುವ ಮನವಿಗೆ ಹೆಚ್ಚಿನ ಸಂಖ್ಯೆಯ ನಾಗರಿಕರು ಸಹಿ ಹಾಕುವ ಮೂಲಕ ಮನವಿಯ ಬೇಡಿಕೆಗಳಿಗೆ ಬೆಂಬಲ ವ್ಯಕ್ತಪಡಿಸಿದರು. ಇದೇ ರೀತಿ ಕೊಲ್ಹಾಪುರದ ಛತ್ರಪತಿ ಶಿವಾಜಿ ಮಹಾರಾಜ್ ಚೌಕ್ನಲ್ಲಿಯೂ ಪ್ರತಿಭಟನೆ ನಡೆಸಲಾಯಿತು.
ಚಲನಚಿತ್ರದ ಕೆಲವು ದೃಶ್ಯಗಳನ್ನು ನೋಡಿದಾಗ ಇದು ರಾಮಾಯಣದ ಚಲನಚಿತ್ರವೇ
ಅಥವಾ ರಾವಣನನ್ನು ಉದಾತ್ತೀಕರಿಸುವ ಕಥೆಯೇ ಎಂಬ ಪ್ರಶ್ನೆ ಮೂಡುತ್ತದೆ !
ಚಲನಚಿತ್ರದಲ್ಲಿ ಅಸ್ತ್ರಶಸ್ತ್ರಗಳಿಂದ ಸಜ್ಜಾಗಿರುವ ಪ್ರಭು ಶ್ರೀರಾಮ, ಲಕ್ಷ್ಮಣ ಮತ್ತು ಮಾತಾ ಸೀತಾ ರಾಕ್ಷಸರನ್ನು ಕಂಡು ಓಡಿಹೋಗುತ್ತಿರುವುದಾಗಿ ತೋರಿಸಲಾಗಿದೆ; ಮತ್ತೊಂದೆಡೆ ನಿರಾಯುಧ ರಾವಣ ಸಾವಿರಾರು ಸೈನಿಕರ ವಿರುದ್ಧ ಏಕಾಂಗಿಯಾಗಿ ಹೋರಾಡಿ ಅವರನ್ನು ಸಂಹರಿಸುವುದಾಗಿ ಚಿತ್ರಿಸಲಾಗಿದೆ. ಬಡವರಿಗೆ ಚಿನ್ನದ ಮನೆಗಳನ್ನು ನೀಡುವ ಮತ್ತು ಶೋಷಿತರ ರಕ್ಷಕನಾಗಿ ರಾವಣನ ಬಿಂಬವನ್ನು ನಿಲ್ಲಿಸಲಾಗಿದೆ. ಶೂರ್ಪನಖಿಯ ಪತಿ ವಿದ್ಯುತ್ಜಿಹ್ವನು ಒಬ್ಬ ದಾಸಿಗೆ ಕಿರುಕುಳ ನೀಡಿದ್ದಕ್ಕಾಗಿ ಅವನನ್ನು ಕೊಂದ ರಾವಣ ಮಹಿಳೆಯರ ರಕ್ಷಕನಂತೆ ತೋರಿಸಲಾಗಿದೆ; ಆದರೆ ಅವನೇ ಮಾತಾ ಸೀತೆಯನ್ನು ಅಪಹರಿಸಿದ ವಾಸ್ತವವನ್ನು ಕಡೆಗಣಿಸಲಾಗಿದೆ.
ಶೂರ್ಪನಖಿಯ ಪ್ರಸಂಗದಲ್ಲಿ ಲಕ್ಷ್ಮಣನು ಅವಳ ಮೂಗು ಕತ್ತರಿಸಿದಾಗ ಮಾತಾ ಸೀತಾ ಲಕ್ಷ್ಮಣನಿಗೆ ‘ಒಬ್ಬ ಸ್ತ್ರೀಯ ರೂಪವನ್ನು ಭಂಗಗೊಳಿಸುವ ಅಧಿಕಾರ ನಿಮಗಿಲ್ಲ’ ಎಂಬ ಅರ್ಥದ ಮಾತುಗಳನ್ನು ಹೇಳುವುದಾಗಿ ತೋರಿಸಲಾಗಿದೆ. ಪ್ರಭು ಶ್ರೀರಾಮ ಖರ-ದೂಷಣರ ಬಳಿ ಲಕ್ಷ್ಮಣನ ಕೃತ್ಯಕ್ಕಾಗಿ ಕ್ಷಮೆಯಾಚಿಸುವುದಾಗಿಯೂ ಚಿತ್ರಿಸಲಾಗಿದೆ. ಲಕ್ಷ್ಮಣನನ್ನು ಉದ್ಧಟ, ವ್ಯಂಗ್ಯಭರಿತ ಮತ್ತು ಹಿರಿಯರಿಗೆ ಅಗೌರವ ತೋರಿಸುವವನಾಗಿ ತೋರಿಸಲಾಗಿದೆ. ಮಾತಾ ಸೀತಾ ರಾಕ್ಷಸರೊಂದಿಗೆ ಯುದ್ಧ ಮಾಡುವುದಾಗಿ ತೋರಿಸಲಾಗಿದೆ; ಆದರೆ ರಾವಣ ಅಪಹರಿಸುವಾಗ ಅವರು ಪ್ರತಿರೋಧಿಸುವುದಿಲ್ಲ. ಇಂತಹ ಅನೇಕ ಪ್ರಸಂಗಗಳ ಮೂಲಕ ಮೂಲ ರಾಮಾಯಣದ ಕಥನ ಮತ್ತು ಪಾತ್ರಗಳಿಗೆ ವಿರುದ್ಧವಾದ ಚಿತ್ರಣವನ್ನು ಕಟ್ಟಿಕೊಡಲಾಗಿದೆ. ಇದು ಕೇವಲ ಕಲ್ಪನಾ ವಿಲಾಸವಲ್ಲ, ಬದಲಿಗೆ ರಾಮಾಯಣದ ಆದರ್ಶಗಳ ವಿಕೃತೀಕರಣವಾಗಿದೆ.
ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಈ ಗಂಭೀರ ವಿಷಯಗಳನ್ನು ಹೇಗೆ ಕಡೆಗಣಿಸಿತು?
ಭಾರತೀಯ ಸಿನಿಮ್ಯಾಟೋಗ್ರಾಫ್ ಕಾಯ್ದೆ, 1952 ಮತ್ತು ಕೇಂದ್ರ ಸರ್ಕಾರದ ಚಲನಚಿತ್ರ ಪ್ರಮಾಣೀಕರಣ ಮಾರ್ಗಸೂಚಿಗಳಲ್ಲಿ ಧಾರ್ಮಿಕ ಸಮುದಾಯಗಳಿಗೆ ಅವಮಾನ ಮಾಡುವ ಹಾಗೂ ಮಹಿಳೆಯರನ್ನು ಕೀಳಾಗಿ ಕಾಣುವ ದೃಶ್ಯಗಳ ಕುರಿತು ಸ್ಪಷ್ಟ ಮಾನದಂಡಗಳಿವೆ. ಹೀಗಿದ್ದರೂ ಈ ಚಲನಚಿತ್ರಕ್ಕೆ ಪ್ರಮಾಣಪತ್ರ ನೀಡುವಾಗ ಸಂಬಂಧಿತ ಮಾನದಂಡಗಳನ್ನು ಪರಿಗಣಿಸಲಾಗಿದೆಯೇ ಎಂಬುದಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಉತ್ತರ ನೀಡಬೇಕು. ಇತರ ಧರ್ಮಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಚಲನಚಿತ್ರಗಳ ವಿರೋಧವನ್ನು ಗಮನಿಸಲಾಗುತ್ತದೆ; ಹಾಗಾದರೆ ಹಿಂದೂಗಳ ಶ್ರದ್ಧೆಯ ವಿಷಯ ಬಂದಾಗ ಮಾತ್ರ ಪ್ರಮಾಣೀಕರಣ ಮಂಡಳಿಯ ನಿಲುವು ಏಕೆ ಉದಾಸೀನವಾಗಿರುತ್ತದೆ? ಈ ಪ್ರಕರಣದಲ್ಲಿ ಮಂಡಳಿಯು ಚಲನಚಿತ್ರವನ್ನು ಮರುಪರಿಶೀಲಿಸಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು.
ರಾಮಾಯಣವು ಮನರಂಜನೆಗಾಗಿ ಮನಬಂದಂತೆ ಬದಲಾವಣೆ ಮಾಡುವ ವಿಷಯವಲ್ಲ. ಪ್ರಭು ಶ್ರೀರಾಮರ ಪರಾಕ್ರಮವನ್ನು ಕಡಿಮೆ ಮಾಡಿ ರಾವಣನನ್ನು ಶ್ರೇಷ್ಠನೆಂದು ತೋರಿಸುವ ಮತ್ತು ಹಿಂದೂಗಳ ಶ್ರದ್ಧಾಕೇಂದ್ರಗಳನ್ನು ಕೀಳಾಗಿ ಕಾಣುವ ಪ್ರಯತ್ನವನ್ನು ಹಿಂದೂ ಸಮಾಜ ಸಹಿಸುವುದಿಲ್ಲ. ಚಲನಚಿತ್ರ ನಿರ್ಮಾಪಕರು ಮತ್ತು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಈ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ದೃಢವಾಗಿ ಆಗ್ರಹಿಸಿದ್ದಾರೆ.
ಮಹಿಳಾ ಉದ್ಯಮಶೀಲತೆ ವಿಕಸಿತ ಭಾರತ 2047ರ ನಿರ್ಮಾಣಕ್ಕೆ ಮಹತ್ವದ ಶಕ್ತಿ: ರಾಜ್ಯಪಾಲರಾದ ಡಾ. ಸುಧಾ ಯಾದವ್

