ಕಾನ್ಪುರ: ನಕಲಿ ಇ-ಮೇಲ್ ಖಾತೆಗಳನ್ನು(Duplicate email a/c) ಸೃಷ್ಟಿಸಿ ವಿದೇಶಗಳಿಗೆ ಮಾರಾಟ ಮಾಡುತ್ತಿದ್ದ ಬೃಹತ್ ಅಂತರರಾಷ್ಟ್ರೀಯ ಸೈಬರ್ ಅಪರಾಧ ಜಾಲವನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (UP ATS) ಪತ್ತೆಹಚ್ಚಿದೆ. ಕಾನ್ಪುರದ ಮನೆಯೊಂದರಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು 20 ಲಕ್ಷಕ್ಕೂ ಅಧಿಕ ಇ-ಮೇಲ್ ಖಾತೆಗಳ ವಿವರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಖಾತೆಗಳನ್ನು ಪಾಕಿಸ್ತಾನ, ಬಾಂಗ್ಲಾದೇಶ, ಟರ್ಕಿ, ಈಜಿಪ್ಟ್ ಸೇರಿದಂತೆ ಹಲವು ದೇಶಗಳ ವ್ಯಕ್ತಿಗಳು ಮತ್ತು ಗುಂಪುಗಳಿಗೆ ಕ್ರಿಪ್ಟೋಕರೆನ್ಸಿ ಮೂಲಕ ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.
ಈ ಪ್ರಕರಣದಲ್ಲಿ ಕಾನ್ಪುರದ ಘಾಟ್ಂಪುರ ಪ್ರದೇಶದ 24 ವರ್ಷದ ಅಂಕಿತ್ ಶಂಖವಾರ್ ಎಂಬಾತನನ್ನು ಉತ್ತರ ಪ್ರದೇಶದ ಎಟಿಎಸ್ ಬಂಧಿಸಿದೆ. ಆತನ ಲ್ಯಾಪ್ಟಾಪ್ ಮತ್ತು ಮೊಬೈಲ್ ಫೋನ್ ಪರಿಶೀಲಿಸಿದಾಗ ಬೃಹತ್ ಪ್ರಮಾಣದ ನಕಲಿ ಇ-ಮೇಲ್ ಖಾತೆಗಳ ಮಾಹಿತಿ, ಪಾಸ್ವರ್ಡ್ಗಳು ಹಾಗೂ ಕ್ರಿಪ್ಟೋಕರೆನ್ಸಿ ವಹಿವಾಟಿನ ವಿವರಗಳು ಪತ್ತೆಯಾಗಿವೆ.
ಬಾಂಬ್ ಬೆದರಿಕೆ ಇ-ಮೇಲ್ನಿಂದ ಬಯಲಾದ ಜಾಲ
ದೆಹಲಿ-ಎನ್ಸಿಆರ್ ಪ್ರದೇಶದ ಶಾಲೆಗಳಿಗೆ ಸರಣಿ ಬಾಂಬ್ ಬೆದರಿಕೆ ಇ-ಮೇಲ್ಗಳು ಬಂದಿದ್ದ ಪ್ರಕರಣದ ತನಿಖೆ ನಡೆಸುತ್ತಿದ್ದ ಅಧಿಕಾರಿಗಳಿಗೆ ಈ ಅಕ್ರಮ ಜಾಲದ ಸುಳಿವು ಸಿಕ್ಕಿದೆ.
ಅಕ್ಟೋಬರ್ 12ರಂದು ಕೆಲವು ಶಾಲೆಗಳಿಗೆ ಬಂದಿದ್ದ ಬೆದರಿಕೆ ಸಂದೇಶಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಅಲ್ಲದೆ, ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಅವರ ಕಾರ್ಯಕ್ರಮ ಹಾಗೂ ಬಾಲಿವುಡ್ನ ಪ್ರಮುಖ ನಟರೊಬ್ಬರ ನಿವಾಸಕ್ಕೂ ಬೆದರಿಕೆ ಹಾಕಲಾಗಿತ್ತು.
ಈ ಇ-ಮೇಲ್ಗಳ ತಾಂತ್ರಿಕ ಪರಿಶೀಲನೆ ನಡೆಸಿದಾಗ ಅವುಗಳ ಡಿಜಿಟಲ್ ಸಂಪರ್ಕ ಕಾನ್ಪುರದ ಘಾಟ್ಂಪುರ ಪ್ರದೇಶಕ್ಕೆ ತಲುಪಿರುವುದು ಪತ್ತೆಯಾಯಿತು. ಇದರ ಆಧಾರದ ಮೇಲೆ ಎಟಿಎಸ್ ಅಧಿಕಾರಿಗಳು ಅಕ್ಟೋಬರ್ 28ರಂದು ಅಂಕಿತ್ನ ಮನೆ ಮೇಲೆ ದಾಳಿ ನಡೆಸಿ ಆತನನ್ನು ಬಂಧಿಸಿದರು.
ಅಕ್ಟೋಬರ್ 23ರಂದು ಮುಂಬೈ ಮೇಯರ್ ಕಚೇರಿಗೂ ಮತ್ತೊಂದು ಇ-ಮೇಲ್ ಖಾತೆಯಿಂದ ಬಾಂಬ್ ಬೆದರಿಕೆ ಬಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
2021ರಿಂದಲೇ ನಕಲಿ ಖಾತೆಗಳ ಸೃಷ್ಟಿ
ಎಟಿಎಸ್ ವಿಚಾರಣೆಯ ಪ್ರಕಾರ, ಅಂಕಿತ್ ಶಂಖವಾರ್ 2021ರಿಂದಲೇ ನಕಲಿ ಇ-ಮೇಲ್ ಖಾತೆಗಳನ್ನು ಸೃಷ್ಟಿಸುವ ದಂಧೆಯಲ್ಲಿ ತೊಡಗಿದ್ದ ಎನ್ನಲಾಗಿದೆ.
ನಕಲಿ ಗುರುತುಗಳನ್ನು ಬಳಸಿಕೊಂಡು ಸಾವಿರಾರು ಇ-ಮೇಲ್ ಖಾತೆಗಳನ್ನು ಸೃಷ್ಟಿಸಲು ವೈ-ಫೈ ಸಂಪರ್ಕ ಹಾಗೂ ಪ್ರಾಕ್ಸಿ ನೆಟ್ವರ್ಕ್ಗಳನ್ನು ಬಳಸುತ್ತಿದ್ದ. ಇದರಿಂದ ಖಾತೆಗಳನ್ನು ಸೃಷ್ಟಿಸಿದ ನೈಜ ವ್ಯಕ್ತಿಯನ್ನು ಪತ್ತೆಹಚ್ಚುವುದು ಕಷ್ಟವಾಗುತ್ತಿತ್ತು.
ಕೆಲವು ಸಂದರ್ಭಗಳಲ್ಲಿ ಈಗಾಗಲೇ ಅಸ್ತಿತ್ವದಲ್ಲಿದ್ದ ಇ-ಮೇಲ್ ಖಾತೆಗಳನ್ನು ಖರೀದಿಸಿ, ಅವುಗಳ ಪಾಸ್ವರ್ಡ್ ಬದಲಾಯಿಸಿ ಮರುಮಾರಾಟ ಮಾಡುತ್ತಿದ್ದ ಎಂಬ ಆರೋಪವೂ ಇದೆ.
ಫೇಸ್ಬುಕ್ ಮೂಲಕ ವಿದೇಶಗಳಿಗೆ ಮಾರಾಟ
ನಕಲಿ ಇ-ಮೇಲ್ ಖಾತೆಗಳನ್ನು ಮಾರಾಟ ಮಾಡಲು ಫೇಸ್ಬುಕ್ನಲ್ಲಿದ್ದ ಕೆಲವು ಗುಂಪುಗಳನ್ನು ಬಳಸುತ್ತಿದ್ದ ಎನ್ನಲಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ, ಟರ್ಕಿ ಮತ್ತು ಈಜಿಪ್ಟ್ ಸೇರಿದಂತೆ ಹಲವು ದೇಶಗಳ ಗ್ರಾಹಕರೊಂದಿಗೆ ಸಂಪರ್ಕ ಹೊಂದಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಖಾತೆಗಳ ವಿವರಗಳನ್ನು ಎಕ್ಸೆಲ್ ಫೈಲ್ಗಳಲ್ಲಿ ಸಿದ್ಧಪಡಿಸಿ ಖರೀದಿದಾರರಿಗೆ ಕಳುಹಿಸಲಾಗುತ್ತಿತ್ತು. ಇದರಲ್ಲಿ ಇ-ಮೇಲ್ ವಿಳಾಸ, ಪಾಸ್ವರ್ಡ್, ರಿಕವರಿ ವಿವರಗಳು ಮತ್ತು ಟು-ಫ್ಯಾಕ್ಟರ್ ಅಥೆಂಟಿಕೇಶನ್ಗೆ ಸಂಬಂಧಿಸಿದ ಕೋಡ್ಗಳು ಕೂಡ ಇದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಗ್ಲಾದೇಶದ ವ್ಯಕ್ತಿಯ ಸಂಪರ್ಕ
ಈ ಪ್ರಕರಣದಲ್ಲಿ ಅಲಾಮಿನ್ ಇಸ್ಲಾಂ ಅಲಿಯಾಸ್ ಅಲಾಮಿನ್ ಎಂಬ ಬಾಂಗ್ಲಾದೇಶದ ಪ್ರಜೆಯ ಪಾತ್ರದ ಬಗ್ಗೆಯೂ ಎಟಿಎಸ್ ತನಿಖೆ ನಡೆಸುತ್ತಿದೆ.
ಫೇಸ್ಬುಕ್ ಮತ್ತು ವಾಟ್ಸ್ಆ್ಯಪ್ ಮೂಲಕ ಅಂಕಿತ್ ಆತನ ಸಂಪರ್ಕಕ್ಕೆ ಬಂದಿದ್ದ ಎನ್ನಲಾಗಿದೆ. ನಕಲಿ ಇ-ಮೇಲ್ ಖಾತೆಗಳನ್ನು ಒದಗಿಸಿದ್ದಕ್ಕಾಗಿ ಅಲಾಮಿನ್ ಸುಮಾರು 6,000 USDT (ಕ್ರಿಪ್ಟೋಕರೆನ್ಸಿ) ಪಾವತಿಸಿದ್ದಾನೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.
ಈ ವಹಿವಾಟಿಗೆ ಸಂಬಂಧಿಸಿದ ದಾಖಲೆಗಳು ಅಂಕಿತ್ನ ಮೊಬೈಲ್ ಫೋನ್ನಲ್ಲಿ ಪತ್ತೆಯಾಗಿವೆ ಎಂದು ವರದಿಯಾಗಿದೆ.
ಗೂಗಲ್ಗೆ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಮನವಿ
ವಶಪಡಿಸಿಕೊಂಡ ಲ್ಯಾಪ್ಟಾಪ್ ಮತ್ತು ಮೊಬೈಲ್ ಫೋನ್ಗಳ ಪರಿಶೀಲನೆಯಲ್ಲಿ 20 ಲಕ್ಷಕ್ಕೂ ಅಧಿಕ ಇ-ಮೇಲ್ ಖಾತೆಗಳ ವಿವರಗಳು ಪತ್ತೆಯಾಗಿವೆ. ಈ ಖಾತೆಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಅವುಗಳನ್ನು ಸ್ಥಗಿತಗೊಳಿಸುವಂತೆ ಉತ್ತರ ಪ್ರದೇಶದ ಎಟಿಎಸ್ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಗೂಗಲ್ ಕಚೇರಿಗೆ ಮನವಿ ಸಲ್ಲಿಸಿದೆ.
ಇದಲ್ಲದೆ, ಈ ಖಾತೆಗಳನ್ನು ಬಳಸಿಕೊಂಡು ದೇಶದ ವಿವಿಧೆಡೆ ನಡೆದಿರುವ ಇತರ ಸೈಬರ್ ಅಪರಾಧಗಳಿಗೂ ಸಂಬಂಧವಿದೆಯೇ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.
ತನಿಖೆ ಮುಂದುವರಿಕೆ
ಅಂಕಿತ್ನ ಮೊಬೈಲ್ ಮತ್ತು ಲ್ಯಾಪ್ಟಾಪ್ನಿಂದ ದೊರೆತ ಹೊಸ ಮಾಹಿತಿಯ ಆಧಾರದ ಮೇಲೆ ವಿದೇಶಿ ಸಂಪರ್ಕಗಳು, ಕ್ರಿಪ್ಟೋಕರೆನ್ಸಿ ವಹಿವಾಟು ಹಾಗೂ ಈ ಜಾಲದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳ ಬಗ್ಗೆ ಎಟಿಎಸ್ ಹೆಚ್ಚಿನ ತನಿಖೆ ನಡೆಸುತ್ತಿದೆ.

