ಆಧುನಿಕ ಸ್ಪರ್ಶದೊಂದಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಯಶಸ್ವಿ ರಂಗಪ್ರಯೋಗ
ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ‘ಸಂಪತ್ತಿಗೆ ಸವಾಲ್’(Sampattige Saval) ಸಿನಿಮಾ ತೆರೆಕಂಡು 52 ವರ್ಷಗಳು ಕಳೆದರೂ, ಅದರ ಕಥೆಯ ಮೋಡಿ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ, ಪಿ ಬಿ ಧುತ್ತರಗಿ ಅವರು ರಚಿಸಿರುವ ‘ಸಂಪತ್ತಿಗೆ ಸವಾಲ್’ ನಾಟಕವು ಆಧುನಿಕ ಸ್ಪರ್ಶದೊಂದಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಿಕ್ಕಿರಿದ ಪ್ರೇಕ್ಷಕರ ಸಮ್ಮುಖದಲ್ಲಿ ಯಶಸ್ವಿ ಪ್ರದರ್ಶನ ಕಂಡಿತು.
ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣದ ಆಶ್ರಯದಲ್ಲಿ, ಹವ್ಯಾಸಿ ರಂಗಭೂಮಿ ನಿರ್ದೇಶಕ ಕೆ. ಎಸ್.ಡಿ.ಎಲ್. ಚಂದ್ರು ಅವರ ನಿರ್ದೇಶನದಲ್ಲಿ, ಹೊಳೆಹುಚ್ಚೇಶ್ವರ ನಾಟ್ಯ ಸಂಘ ಕಮತಗಿ ನಾಟಕ ಕಂಪನಿ ಕಲಾವಿದರಿಗೆ ತರಬೇತಿ ನೀಡಿ ಈ ನಾಟಕವನ್ನು ಹೊಸ ರೂಪದಲ್ಲಿ ಪ್ರಸ್ತುತಪಡಿಸಲಾಗಿದೆ. ದಾವಣಗೆರೆಯಲ್ಲಿ ಇಪ್ಪತ್ತು ಪ್ರದರ್ಶನಗಳು ಪೂರೈಸಿ ಇದೀಗ ರಾಜಧಾನಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.
ಮೂಲ ಕಥಾವಸ್ತುವಿನಲ್ಲಿ ಯಾವುದೇ ಬದಲಾವಣೆ ಮಾಡದೆ, ಅದಕ್ಕೆ ಆಧುನಿಕ ಸ್ಪರ್ಶ ನೀಡಿರುವುದು ಈ ರಂಗಪ್ರಯೋಗದ ವಿಶೇಷತೆ. ಬರೋಬ್ಬರಿ 180 ನಿಮಿಷಗಳ ಕಾಲ ನಡೆದ ನಾಟಕದಲ್ಲಿ ಸಮಯ ಸರಿದಿದ್ದೇ ಪ್ರೇಕ್ಷಕರಿಗೆ ತಿಳಿಯಲಿಲ್ಲ. ಆರಂಭದಿಂದ ಅಂತ್ಯದವರೆಗೂ ಮೊಳಗಿದ ಕರತಾಡನ, ಕಲಾವಿದರ ಅಭಿನಯಕ್ಕೆ ದೊರೆತ ಮೆಚ್ಚುಗೆಗೆ ಸಾಕ್ಷಿಯಾಗಿತ್ತು. ಪ್ರದರ್ಶನದ ಮಧ್ಯೆ ಒಬ್ಬ ಪ್ರೇಕ್ಷಕರೂ ಎದ್ದು ಹೋಗದೆ ನಾಟಕವನ್ನು ಆಸಕ್ತಿಯಿಂದ ವೀಕ್ಷಿಸಿದ್ದು ವಿಶೇಷ.
ಕೆಲವು ದೃಶ್ಯಗಳಲ್ಲಿ ಸಿನಿಮಾವನ್ನೂ ಮೀರಿಸುವಷ್ಟು ಪರಿಣಾಮಕಾರಿಯಾಗಿ ನಾಟಕ ಮೂಡಿಬಂದಿತು. ಸಾಹುಕಾರನ ಮಗಳು ದುರ್ಗಿಯ ಪಾತ್ರದಲ್ಲಿ ಅಭಿನಯಿಸಿದ ಕಲಾವಿದೆ ಕನಕಲಕ್ಷ್ಮಿ ಶಿರಸಿ ಅವರ ಅಭಿನಯ ಮನೋಜ್ಞವಾಗಿತ್ತು. ಮೂಲ ಸಿನಿಮಾದಲ್ಲಿ ಈ ಪಾತ್ರಕ್ಕೆ ಜೀವ ತುಂಬಿದ್ದ ನಟಿ ಮಂಜುಳಾ ಅವರ ಅಭಿನಯವನ್ನೇ ಮೀರಿಸುವ ರೀತಿಯಲ್ಲಿ, ಅವರ ಪ್ರಭಾವವನ್ನು ರಂಗದ ಮೇಲೆ ಮೂಡಿಸಿದರು.
ಸಾಹುಕಾರ ಮರಿಯಪ್ಪನಾಗಿ ಸಂಕೇತ್ ಮಂಗಳೂರು ಮತ್ತು ವೆಂಕಪ್ಪ ಕುಲಕರ್ಣಿಯಾಗಿ ಆನಂದ ಪತ್ತಾರ ಪಾತ್ರಗಳ ಒಳಹೊಕ್ಕು ನವಿರು ಹಾಸ್ಯ ಹಾಗೂ ವಿಡಂಬನೆಯ ಮೂಲಕ ಪ್ರೇಕ್ಷಕರ ಮನಗೆದ್ದರು. ಉಳಿದ ಎಲ್ಲ ಕಲಾವಿದರೂ ಸಹ ಲೀಲಾ ಜಾಲವಾಗಿ ಅಭಿನಯಿಸಿದ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದರು. ಬರೋಬ್ಬರಿ ಮೂರು ಗಂಟೆಗಳ ಪ್ರದರ್ಶನದಲ್ಲಿ ಸಂಭಾಷಣೆಗಳ ನಿರ್ವಹಣೆ, ಪಾತ್ರಗಳ ನಡುವಿನ ಹೊಂದಾಣಿಕೆ ಹಾಗೂ ಕಲಾವಿದರ ಸಮಯಪ್ರಜ್ಞೆ ಗಮನ ಸೆಳೆಯಿತು. ಯಾರೊಬ್ಬರೂ ಸಂಭಾಷಣೆ ತಪ್ಪದೆ ಅಭಿನಯಿಸಿದ್ದು ತಂಡದ ಸಿದ್ಧತೆ ಮತ್ತು ಪರಿಶ್ರಮಕ್ಕೆ ಸಾಕ್ಷಿಯಾಯಿತು.
ಕಂಪನಿ ನಾಟಕಗಳಲ್ಲಿ ಪ್ರೇಕ್ಷಕರನ್ನ ಆಕರ್ಷಣೆ ಮಾಡಲು ದ್ವಂದಾರ್ಥ ಸಂಭಾಷಣೆ ಸರ್ವೇಸಾಮಾನ್ಯ. ಅದರ ಅಗತ್ಯವೇ ಇಲ್ಲಿರಲಿಲ್ಲ. ಮೈಕ್ ಮುಂದೆಯೇ ನಿಂತು ಸಂಭಾಷಣೆ ಹೇಳುವ ಅಪಸವ್ಯದ ಪದ್ಧತಿಗೆ ಭಿನ್ನವಾಗಿ, ಇಲ್ಲಿ ಆಧುನಿಕ ಧ್ವನಿ ವ್ಯವಸ್ಥೆಯ ಮೈಕ್ಗಳ ನೆರವಿನಿಂದ ವೇದಿಕೆಯಾದ್ಯಂತ ಓಡಾಡುತ್ತಾ ಸಹಜವಾಗಿ ಸಂಭಾಷಣೆಗಳನ್ನು ಪ್ರಸ್ತುತಪಡಿಸಿದ್ದು ನಾಟಕಕ್ಕೆ ಹೊಸತನ ನೀಡಿತು. ಅದೇಕೋ ಧ್ವನಿ ಮತ್ತು ಬೆಳಕಿನ ಸಂಯೋಜನೆ ತೃಪ್ತಿಕರ ಆಗಿರಲಿಲ್ಲ. ದೃಶ್ಯಗಳ ವಿನ್ಯಾಸ ಮತ್ತು ರಂಗಚಲನೆಗಳು ಪ್ರದರ್ಶನದ ಮೆರುಗನ್ನು ಹೆಚ್ಚಿಸಿದವು.
ಸಿನಿಮಾ ಬಿಡುಗಡೆಯಾಗಿ 52 ವರ್ಷಗಳು ಕಳೆದರೂ ‘ಸಂಪತ್ತಿಗೆ ಸವಾಲ್’ ಕಥೆಯ ಗುಂಗಿನಿಂದ ಜನರು ಹೊರಬಂದಿಲ್ಲ ಎಂಬುದನ್ನು ಈ ಪ್ರದರ್ಶನ ಮತ್ತೊಮ್ಮೆ ಸಾಬೀತುಪಡಿಸಿದೆ. ಕಾಲ ಬದಲಾದರೂ ಸಮಾಜದಲ್ಲಿ ಬೇರೂರಿರುವ ಅಹಂ, ಹಣದ ಪ್ರಭಾವ, ಮಾನವ ಸಂಬಂಧಗಳು ಮತ್ತು ಸ್ವಾಭಿಮಾನದಂತಹ ವಿಷಯಗಳು ಎಂದಿಗೂ ಪ್ರಸ್ತುತ. ಕಥಾವಸ್ತು ಶಾಶ್ವತವಾದರೂ, ಅದನ್ನು ಕಾಲಕ್ಕೆ ತಕ್ಕಂತೆ ಹೊಸ ರೂಪದಲ್ಲಿ ಜನರಿಗೆ ಅರ್ಪಿಸುವುದೇ ನಿಜವಾದ ಸವಾಲು. ಈ ಸವಾಲಿನಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.
*ವೃತ್ತಿ ರಂಗಭೂಮಿಗೆ ಹೊಸ ಕನಸುಗಳ ನಿರ್ದೇಶಕ*
*ಮಲ್ಲಿಕಾರ್ಜುನ ಕಡಕೋಳ* ಅವರ ವಿನೂತನ ಕನಸು ವೃತ್ತಿ ರಂಗಭೂಮಿಯ ಕಲಾವಿದರ ಅಭಿನಯಕ್ಕೆ ಹೊಸತನ ನೀಡುವುದು, ಕಂಪನಿ ನಾಟಕಗಳ ಪ್ರದರ್ಶನ ವಿಧಾನದಲ್ಲಿ ಬದಲಾವಣೆ ತರುವುದು ಮತ್ತು ಕಲಾವಿದರನ್ನು ಆಧುನಿಕತೆಯತ್ತ ಕೊಂಡೊಯ್ಯುವುದಾಗಿದೆ. ಆ ನಿಟ್ಟಿನಲ್ಲಿ ಅವರ ಪ್ರಯತ್ನಕ್ಕೆ ಖಚಿತ ಫಲ ದೊರಕಿರುವುದು ಈ ಪ್ರದರ್ಶನದಿಂದ ಸ್ಪಷ್ಟವಾಗಿದೆ.
ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಮಲ್ಲಿಕಾರ್ಜುನ ಕಡಕೋಳ ಅವರು ಪಾದರಸದಂತೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಂಡಜ್ಜಿ ಬೆಟ್ಟದಲ್ಲಿ ಹತ್ತು ಎಕರೆ ಜಾಗದಲ್ಲಿ ಅವರು ರಂಗಮಂದಿರ ಮತ್ತೆ ಬೃಹತ್ ಮ್ಯುಜಿಯಮ್ ನಿರ್ಮಾಣದ ಕೆಲಸ ಆರಂಭಿಸಿದ್ದಾರೆ.
ಸರ್ಕಾರದಿಂದ ದೊರೆಯುವ ಅಲ್ಪ ಅನುದಾನದಲ್ಲಿಯೇ ವೃತ್ತಿ ರಂಗಭೂಮಿಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ . ಹೊಸ ಪ್ರಯೋಗಗಳಿಗೆ ಪ್ರೋತ್ಸಾಹ ನೀಡುತ್ತಾ, ಕಲಾವಿದರ ಸಾಮರ್ಥ್ಯವನ್ನು ಗುರುತಿಸಿ, ಅವರಿಗೆ ಹೊಸ ಅವಕಾಶಗಳನ್ನು ಕಲ್ಪಿಸುತ್ತಿರುವುದು ಶ್ಲಾಘನೀಯ.
ಆಧುನಿಕ ಯುಗದಲ್ಲಿ ಸಿನಿಮಾ ಪ್ರಪಂಚದ ಆಕರ್ಷಣೆ ಮತ್ತು ಮೊಬೈಲ್ಗಳ ಗೀಳಿನ ನಡುವೆಯೂ ವೃತ್ತಿ ರಂಗಭೂಮಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳದೆ ಉಳಿಯಬೇಕಾದರೆ ಇಂತಹ ಹೊಸ ಪ್ರಯೋಗಗಳು ಅತ್ಯಗತ್ಯ. ಹಳೆಯ ನಾಟಕಗಳಿಗೆ ಆಧುನಿಕ ಸ್ಪರ್ಶ ನೀಡಿ, ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಹೊಸ ತಲೆಮಾರಿನ ಪ್ರೇಕ್ಷಕರ ಮುಂದೆ ತರುವ ಪ್ರಯತ್ನಗಳು ರಂಗಭೂಮಿಗೆ ಹೊಸ ಜೀವ ತುಂಬಬಲ್ಲವು.
‘ *ಸಂಪತ್ತಿಗೆ ಸವಾಲ್* ’ ನಾಟಕದ ಈ ಯಶಸ್ವಿ ಪ್ರದರ್ಶನವು ಒಂದು ಸವಾಲಾಗಿ ವೃತ್ತಿ ರಂಗಭೂಮಿಯ ಭವಿಷ್ಯದ ಬಗ್ಗೆ ಹೊಸ ಭರವಸೆ ಮೂಡಿಸಿದೆ. ಸೂಕ್ತ ತರಬೇತಿ, ಸಮರ್ಥ ನಿರ್ದೇಶನ ಮತ್ತು ಕಲಾವಿದರ ಸಮರ್ಪಣೆ ಒಂದಾದರೆ ರಂಗಭೂಮಿ ಇಂದಿಗೂ ಜನಮನವನ್ನು ಗೆಲ್ಲಬಲ್ಲದು ಎಂಬುದಕ್ಕೆ ಈ ಪ್ರಯೋಗವೇ ಸಾಕ್ಷಿ.

