ಕಳೆದ ಐದು ವರ್ಷಗಳಿಂದ ಮೈಸೂರು ಕೇಂದ್ರವಾಗಿರಿಸಿಕೊಂಡು ಸಿನಿಮಾ ಕ್ಷೇತ್ರದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವ ’ಮೈಸೂರು ಸಿನಿಮಾ ಸೊಸೈಟಿ’(Mysore Film Society) ಇದೀಗ ತನ್ನ ಕಾರ್ಯ ಚಟುವಟಿಕೆಗಳನ್ನು ಬೆಂಗಳೂರಿಗೂ ವಿಸ್ತರಿಸಿ ಕೊಂಡಿದೆ. ಈಗಾಗಲೇ ಮೈಸೂರಿನಲ್ಲಿ ’ಪರಿದೃಶ್ಯ'(Paridrushya)’ ಎಂಬ ಹೆಸರಿನಲ್ಲಿ ಕಿರುಚಿತ್ರೋತ್ಸವಗಳನ್ನು ಆಯೋಜಿಸುತ್ತ ಬಂದಿದ್ದು, ಈ ಬಾರಿ ಬೆಂಗಳೂರಿನಲ್ಲಿ ’ಗಂಧದಗುಡಿ ಸಿನಿಹಬ್ಬ’(Gandhada Gudi Sinihabba) ಹೆಸರಿನಲ್ಲಿ ಕಿರುಚಿತ್ರೋತ್ಸವಗಳನ್ನು ಆಯೋಜಿಸಲು ಮುಂದಾಗಿದೆ.
ಮೊನ್ನೆ ನಡೆದ ಪೂರ್ವಭಾವಿ ಕಾರ್ಯಕ್ರಮದಲ್ಲಿ ’ಗಂಧದಗುಡಿ ಸಿನಿಹಬ್ಬ’ ಲಾಂಛನ ಬಿಡುಗಡೆ ಮಾಡಲಾಯಿತು. ನಟಿ ತೇಜಸ್ವಿನಿಶರ್ಮ, ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್ಕೆ ವಿಶ್ವನಾಥ್ ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಅಧ್ಯಕ್ಷ ಚೇತನ್.ಎಂ, ಕಾರ್ಯದರ್ಶಿ ಜಯಶೇಖರ್,ವಿ.ಆರ್, ಖಜಾಂಚಿ ಸುರೇಶ್ಚಂದ್ರ, ಸದಸ್ಯರಾದ ಸೋಮಶೇಖರ್.ಪಿ.ಎಲ್. ಅಲ್ವಿನ್ ಮತ್ತಿತರು ಉಪಸ್ತಿತರಿದ್ದು ಮಾಹಿತಿ ನೀಡಿದರು.
2026, ನವೆಂಬರ್ 21 ಮತ್ತು 22ರಂದು ಎರಡು ದಿನಗಳ ಕಾಲ ಬೆಂಗಳೂರಿನ ಗಾಂಧಿನಗರದ ಕೆ.ಜೆ.ರಸ್ತೆಯಲ್ಲಿ ಇರುವ ಎಫ್.ಕೆ.ಸಿ.ಸಿ.ಐ ಭವನದ ಸರ್.ಎಂ.ವಿ.ಆಡಿಟೋರಿಯಂನಲ್ಲಿ ’ಗಂಧದಗುಡಿ ಸಿನಿಹಬ್ಬ’ ನಡೆಯಲಿದೆ. ಸುಮಾರು ೩೦ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನವಾಗಲಿದ್ದು, ೧೨ ಗಂಟೆ ೩೫ ನಿಮಿಷಗಳ ಕಾಲ ಸುದೀರ್ಘ ಅವಧಿಯಲ್ಲಿ ಚಿತ್ರಗಳು ಪ್ರದರ್ಶನವಾಗಲಿದೆ.

